ಪತ್ರಕರ್ತರು ಗಣೇಶ್ ಕಾಸರಗೋಡು ಮೊನ್ನೆ ಹಾಸನಕ್ಕೆ ಬಂದು ಎರಡು ದಿನ ಇಲ್ಲಿದ್ದರು. ಬೇಲೂರು ಹಳೇಬೀಡು ಗೊರೂರು ಕಡೆ ಹೋಗಿ ಬಂದಿದ್ದರು. ಚಿತ್ರಕಲಾವಿದ ಯಾಕೂಬ ಇವರು ಹಾಸನಕ್ಕೆ ಬರುತ್ತಿರುವ ವಿಚಾರ ನನಗೆ ಮೊದಲೇ ತಿಳಿಸಿ ಇವರನ್ನು ಭೇಟಿ ಆಗಿ ಒಂದಿಷ್ಟು ಮಾತುಕತೆ ನಡೆಸಿದವು. ಅವರು ಹೋಗುವಾಗ ತಮ್ಮ ಶುಭಂ, ಚದುರಿದ ಚಿತ್ರಗಳು ಚಿಗುರಿದ ಕನಸುಗಳು ಮತ್ತು ಅಂತರಂಗ ಬಹಿರಂಗ ದರ್ಶನ್ ಎಂಬ ಪುಸ್ತಕಗಳನ್ನು ಕೊಟ್ಟರು. ಶುಭಂ ಇದು ಹಳೆಯ ಸಿನಿಮಾದ ಕೊನೆಯ ಪ್ರೇಮು. ನಾವು ವಿದ್ಯಾರ್ಥಿ ದಿನಗಳಲ್ಲಿ ಗೊರೂರಿನ ಟೂರಿಂಗ್ ಟಾಕೀಸ್‍ನಲ್ಲಿ ಸಿನಿಮಾ ನೋಡಿ ಮನೆಗೆ ಮರಳುವಾಗ ಕಡೆಯಲ್ಲಿ ತೋರಿಸುತ್ತಿದ್ದ ಪದ ಶುಭಂ. ಇದು ಸುಮಾರು 820 ಪುಟದ ಪುಸ್ತಕ. ಗಣೇಶ್ ಕಾಸರಗೋಡು ಅವರ ಬಯಾಗ್ರಫಿಯೂ ಹೌದು ಹಾಗೂ ಇವರ ಬರಹದಲ್ಲಿ ತೆರೆದುಕೊಳ್ಳುವ ಸಿನಿಮಾ ಜಗತ್ತು ಸರಿಯೇ?
ಉಪ್ಪಿಬಾತ್‍ನಲ್ಲಿ ಉಪೇಂದ್ರರು ಬರೆದಿದ್ದು. ‘ದಿ ಗ್ರೇಟ್ ಎಪಿಕ್‍ಗಳಲ್ಲಿ ರಾಮಾಯಣಕ್ಕಿಂತಲೂ ಮಹಾಭಾರತ ನನಗಿಷ್ಟ. ಇದರಲ್ಲಿರುವಷ್ಟು ಮಸಾಲೆ ಅಂಶ ಅದರಲ್ಲಿಲ್ಲ ಎಂಬುದು ಮುಖ್ಯ ಕಾರಣ. ಎಂದೋ ಯಾರೋ ಹೇಳಿದ ಮಹಾಭಾರತದ ಒಂದು ಪಾತ್ರ ಮಾತ್ರ ಸದಾ ನನ್ನ ತಲೆ ತಿನ್ನುತ್ತಿರುತ್ತಿದೆ. ಆ ಪಾತ್ರಕ್ಕೆ ಕುರುಕ್ಷೇತ್ರ ಯುದ್ಧ ನೋಡುವ ಆಸೆಯಾಗುತ್ತದೆ. ಗೋಡೆಯಾಚೆ ನಿಂತು ನೋಡುವುದು ಕಷ್ಟವಾಗಿ ತನ್ನ ತಲೆಯನ್ನು ಕತ್ತರಿಸಿ ಮರದ ಮೇಲಿಟ್ಟಾದರೂ ಯುದ್ಧ ನೋಡುವ ಆಸೆಗೆ ತಥಾಸ್ತು.! ಮಹಾಭಾರತದ ಆ ತಲೆಯ ನೆನಪಾದಗಲ್ಲೆಲ್ಲಾ ನನ್ನ ಕಣ್ಣಿಗೆ ಕಟ್ಟುವುದು ಗಣೇಶ್ ಕಾಸರಗೋಡು. ಹೌದು ಚಿತ್ರರಂಗದ ಎಲ್ಲಾ ಅವಾಂತರಗಳನ್ನು ಕಂಡೂ ಕಾಣದಂತೆ ಇದ್ದು ಮೀಸೆಯಡಿ ನಗುವ ಗಣೇಶ್ ನಾನು ಕಂಡು ಅದ್ಭುತ! ಯಶಸ್ಸಿನ ತುತ್ತ ತುದಿಯಲ್ಲಿ ನಿಂತಿರುವ ನನ್ನ ಬಗ್ಗೆ ಈಗ ಯಾರು ಏನೇ ಬರೆಯಬಹುದು. ಆದರೆ ನಾನು ಯಾರೆಂದೇ ಗೊತ್ತಿಲ್ಲದಿರುವಾಗ ನನ್ನ ಪರಿಚಯವೇ ಇಲ್ಲದಿರುವಾಗ ಒಂದು ಪುಟ್ಟ ಚೇತೋಹಾರಿ ಬರಹ ಬರೆದು ಜೀವಜಲ ಎರೆದಿದ್ದನ್ನು ನಾನೆಂದೂ ಮರೆಯಲಾರೆ.. ಶುಭಂನಲ್ಲಿಯೂ ಮಸಾಲೆ ಅಂಶ ಒಳಗೊಂಡು ಕಮರ್ಷಿಯಲ್ ಸಿನಿಮಾ. ಅವಾರ್ಡ್ ಕೊಡುವುದಾದರೇ ಆರ್ಟ್ ಫಿಲಂ ಕೂಡ ಹೌದು.
ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ. ಓದಿದ್ದೂ ಅಲ್ಲೇ. ಎಂ.ಎಂ.(ಕನ್ನಡ) ಪದವಿಯಲ್ಲಿ ರ್ಯಾಂಕ್ ವಿಜೇತ. ಕೆಲಕಾಲ ಪೌಢಶಾಲಾ ಶಿಕ್ಷಕರಾಗಿ ಕುಂಡಮ್‍ಕುಳಿಯಲ್ಲಿ ಕೆಲಸ ಮಾಡಿ ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು ಚಿತ್ರದೀಪದಲ್ಲಿ ನಂತರ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುದ್ಧಿ ಟಿವಿಯಲ್ಲಿ ಕಾರ್ಯ ನಿರ್ವಹಣೆ. ಈಟಿವಿ, ಸುವರ್ಣ ಟಿವಿ, ಉದಯಟಿವಿ, ಪಬ್ಲಿಕ್ ಟಿವಿ ಸುದ್ಧಿ ಟಿವಿಗಳಿಗಾಗಿ ಕಾರ್ಯಕ್ರಮ ಸಂಯೋಜನೆ. ಹೀಗೆ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ ಅವಧಿಯ ಸಿನಿಮಾ ಬರಹಗಳು ಮತ್ತು ಇವರ ಬದುಕಿನ ಪ್ರಮುಖ ಘಟ್ಟ, ಘಟನೆಗಳನ್ನು ಒಳಗೊಂಡು ಶುಭಂ ಸಹಜ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಶುಭಂ ನನ್ನ ವೃತ್ತಿ ಬದುಕಿನ ಸ್ವಾರಸ್ಯಕರ ವಿಷಾದಕರ ಸಂತೋಷಕರ ಘಟನೆಗಳನ್ನು ಪ್ರಾಮಾಣಿಕವಾಗಿ ದಾಖಲಿಸುವ ವಿನಮ್ರ ಪ್ರಯತ್ನ ಎನ್ನುವ ಲೇಖಕರು ಬಣ್ಣದ ಮಂದಿಯ ಜತೆಗಿನ 40 ವರ್ಷಗಳ ಬಡನಾಟದ ಹೃದ್ಯ ಇನ್ಸಿಡೆಂಟ್‍ಗಳ ಅನಾವರಣಗೊಳಿಸಿದ್ದಾರೆ.
ಆಗ 1986ರಲ್ಲಿ ಗಾಯತ್ರಿ ಜೊತೆ ಮದುವೆಯಾಗಿ ಬೆಂಗಳೂರಿಗೆ ಬಂದಾಗ ನನಗೆ ಮನೆ ಇರಲಿಲ್ಲ. ನೂತನ ದಂಪತಿಗಳಿಗೆ ಮಲಗಲು ಜಾಗ ಮಾಡಿಕೊಟ್ಟಿದ್ದು ದೊಡ್ಡಕ್ಕ ರಮಾ ಮತ್ತು ದೊಡ್ಡ ಭಾವ ಭವಾನಿಶಂಕರ್. ಈಗ ಎರಡು ಮನೆ ಎರಡು ಮಕ್ಕಳು ಒಬ್ಬ ಸೊಸೆ ಒಂದು ಕಾರು ಮೂರು ಬೈಕು.. ಇವರ ಅಂದು ಇಂದಿನ ಬದುಕಿನ ನಡುವೆ ಬಂದು ಹೋದವರು ಹಲವರು. ಅವರಲ್ಲಿ ಪ್ರಸಿದ್ಧ ಸಿನಿಮಾ ನಟರು, ಲೇಖಕರು ಇದ್ದಾರೆ. ಇವರಲ್ಲಿ ಕೆಲವರು ಇವರ ಬಗ್ಗೆಯೂ ಬರೆದಿದ್ದಾರೆ. ಇವರು ಅವರ ಕುರಿತಾಗಿಯೂ ನೇರ ದಿಟ್ಟ ನುಡಿಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಹಿರಿಯ ನಟ ಕೆ.ಎಸ್.ಅಶ್ವಥ್ ಬಗ್ಗೆ ಬರೆದಿದ್ದೇನೆ. ಕಾಯಿಲೆಯ ನಂತರ ಅವರೇನಾದರೂ ಎಂಟು ವರ್ಷಗಳ ಕಾಲ ಬದುಕಿದ್ದಿದ್ದರೆ ಅದಕ್ಕೆ ಕಾರಣವಾದದ್ದು ಅಂದು ನೀವು ಬರೆದ ಒಂದು ಹೃದಯಸ್ಫರ್ಶಿ ಲೇಖನ ಎಂದು ಸಾಕ್ಷತ್ ಶಂಕರ ಅಶ್ವಥ್ ಅವರೇ ಹೇಳಿದ್ದಾರೆ. ಇವರ ಮೌನ ಮಾತಾದಾಗ ಪುಸ್ತಕ ಓದಿ ಸುಧಾಮೂರ್ತಿಯವರು ಹತ್ತು ಮಂದಿ ಅಸಹಾಯಿಕರಿಗೆ ಇಪ್ಪತ್ತೈದು ಸಾವಿರ ರೂ. ನೀಡಿದ್ದಾರೆ. ಈ ಟಿವಿಯಲ್ಲಿ ಪ್ರಸಾರವಾದ ಹತ್ತು ಕಂತುಗಳ ಬಣ್ಣ ಮಾಸಿದ ಬದುಕು ಕಾರ್ಯಕ್ರಮದ ಮೂಲಕ 10 ಮಂದಿ ಅಸಹಾಯಕ ಕಲಾವಿದರಿಗೆ ಸಹಾಯವಾಗಿದೆ. ಮುಂಬೈಯಲ್ಲಿ ದುರ್ಭರ ಬದುಕು ನಡೆಸುತ್ತಿದ್ದ ಹಿರಿಯ ನಟ ಸದಾಶಿವ ಸಾಲಿಯಾನ್ ಅವರಿಗೆ ಒಂದು ಲಕ್ಷ, ಅಂಬರೀಷ್ ಚಿತ್ರಗಳ ನಿರ್ದೇಶಕ ಎ.ಟಿ.ರಘು ಅವರು ಕಾಯಿಲೆಯಿಂದ ಬಳಲುತ್ತಿದ್ದಾಗ 5 ಲಕ್ಷ ರೂ. ಮುಖ್ಯಮಂತ್ರಿ ನಿಧಿಯಿಂದ ದೊರಕುವಲ್ಲಿ ಇವರ ಬರವಣಿಗೆ ಕೆಲಸ ಮಾಡಿದೆ. ಹಾಗೂ ತಮ್ಮ ಸ್ವಪ್ರಯತ್ನವನ್ನು ದಾಖಲಿಸಿದ್ದಾರೆ.
ಇವರ ಚದುರಿದ ಚಿತ್ರಗಳು ಪುಸ್ತಕದ ಮುನ್ನುಡಿಯಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಬರೆದಂತೆ ಸಿನಿಮಾ ಒಂದು ವಿಶಿಷ್ಟ ಕಲಾ ಪ್ರಕಾರ. ನನ್ನ ದೃಷ್ಟಿಯಲ್ಲಿ ಸಿನಿಮಾ ಒಂದು ಒಕ್ಕೂಟ ಕಲೆ. ಇಲ್ಲಿ ವಿವಿಧ ಪ್ರಕಾರಗಳಿವೆ. ಅವುಗಳು ತಂತಮ್ಮ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಲೇ ಕೇಂದ್ರ ಪ್ರಜ್ಞೆಗಾಗಿ ಒಟ್ಟಾಗಿ ದುಡಿಯುತ್ತವೆ. ಅಭಿನಯ, ಛಾಯಾಗ್ರಹಣ, ಸಂಕಲನ, ನೃತ್ಯ, ಸಂಗೀತ ಹೀಗೆ ಅನೇಕ ಕಲೆಗಳು ಒಂದು ಸಾವಯವ ಒಕ್ಕೂಟವಾಗಿ ಸಿನಿಮಾದಲ್ಲಿ ಸೇರುತ್ತವೆ. ಸಿನಿಮಾ ಕಲೆಗೆ ಬಂಡವಾಳ ಹೂಡಿಕೆಯು ಸಿನಿಮಾಕ್ಕೆ ತಂತಾನೇ ಉದ್ಯಮದ ನೆಲೆಯನ್ನು ಒದಗಿಸುತ್ತದೆ. ಕಲೆ ಮತ್ತು ಉದ್ಯಮ ಒಟ್ಟಿಗೇ ಸೇರಿದಾಗ ಅದರಲ್ಲಿ ದುಡಿಯುವ ಜನರ ಮನೋವೃತ್ತಿ ಮತ್ತು ಬದುಕಿನ ಸ್ವರೂಪದಲ್ಲಿ ಏರಿಳಿತಗಳು ಸಹಜ. ಇಂತಹ ಏರಿಳಿತಗಳಲ್ಲಿ ಅನೇಕರು ಉಸುಕಿನಲ್ಲಿ ಬಿದ್ದ ಜೀವವಾಗಿದ್ದಾರೆ. ಈ ಉಸುಕಿನ ಜೀವಗಳ ಜಾಡು ಹಿಡಿದು ಅಂತರಂಗಕ್ಕೆ ಹಗ್ಗದ ಬಿಂದಿಗೆ ಬಿಟ್ಟು ಭಾವನೆಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳುವ ಪ್ರಯತ್ನ ಗಣೇಶ್ ಕಾಸರಗೋಡು ಬರೆದಿರುವ ಚದುರಿದ ಚಿತ್ರಗಳು. ಈ ಚಿತ್ರಗಳು ಸಂಭ್ರಮದಲ್ಲಿ ಎಳೆದ ಗೆರೆಗಳಲ್ಲ ಸಂಕಟದ ಬಲೆಯಲ್ಲಿ ಬರೆದ ಭಾವ ರೂಪಗಳು.
ಸಾಹಸ ಸಿಂಹ ವಿಷ್ಣುವರ್ಧನ ಬರೆಯುತ್ತಾ ಪ್ರತಿ ಶುಕ್ರವಾರ ನನ್ನ ದಿನಚರಿ ಆರಂಭವಾಗುವುದೇ ಚದುರಿದ ಚಿತ್ರಗಳು ಅಂಕಣ ಓದುವುದರಿಂದ. ಕೆಲವೊಂದು ಚಿತ್ರಗಳು ಹೃದಯ ಕಲಕುವಂಥವು. ಸವೆದು ಹೋದ ತಾರೆಯರ ವೈಯಕ್ತಿಕ ಬದುಕಿನ ದುರಂತದ ನಿರೂಪಣೆ. ಪಾಲಿಶ್ ಮಾಡದೇ ಹೇಳುವ ಘಟನೆಗಳ ನಿಜಸ್ಥಿತಿ ಮೊನ್ನೆ ನಮ್ಮ ಲೀಲಮ್ಮನ (ಹಿರಿಯ ನಟಿ ಲೀಲಾವತಿ) ಬಗ್ಗೆ ಬರೆದಿದ್ದನ್ನು ಓದಿದ್ದೇನೆ. ಎಂಥಾ ಬದುಕು ಆಯಮ್ಮನದ್ದು? ಅಮ್ಮ ಅಂದರೆ ಅಮ್ಮ. ಗಿಡ ಮರಗಳನ್ನು ಕೂಡಾ ಆಕೆ ಅಮ್ಮನಾಗಿಯೇ ಮಾತಾಡಿಸುವ ಕೌಶಲ್ಯವನ್ನೊಮ್ಮೆ ನೀವು ನೋಡಬೇಕು. ಭಾರತೀಯವರಿಗೆ ಗಿಡ ಬೆಳೆಸುವ ಸ್ಫೂರ್ತಿ ನೀಡಿದ್ದೇ ಲೀಲಮ್ಮ. ಆಕೆ ಛಲವಂತೆ. ಬದುಕು ಹೇಗಿದೆಯೋ ಹಾಗೆ ಅದನ್ನು ಆಕೆ ಸ್ವೀಕರಿಸಲಿಲ್ಲ. ತಮಗೆ ಬೇಕಾದಂತೆ ಬಗ್ಗು ಬಡಿದು ಅದಕ್ಕೊಂದು ಶೇಪ್ ಕೊಟ್ಟ ದಿಟ್ಟೆ.
ಶುಭಂನಲ್ಲಿ ತ್ಯಾಗರಾಜ (ಹೀರೋ ರಮೇಶ್ ಅರವಿಂದ್) ಕಂಡಂತೆ ಒಬ್ಬ ಚಿತ್ರನಟ ಮತ್ತು ಪತ್ರಕರ್ತ ಗೆಳೆತನದಿಂದಿರುವುದು ಸಾಧ್ಯವೇ ವಿನ: ಅವರಿಬ್ಬರೂ ಬಹು ಕಾಲಾವಧಿಯವರೆಗೆ ಗೆಳೆಯರಾಗಿರುವುದು ಸಾಧ್ಯವೇ ಇಲ್ಲ. ಆದರೂ ಬಹುವರ್ಷಗಳಿಂದಲೂ ಪ್ರಿಯ ಗೆಳೆಯರಾಗಿಯೇ ಉಳಿದಿರುವ ಪತ್ರಕರ್ತ ಗೆಳೆಯರ ಪೈಕಿ ಪ್ರಮುಖರು ಗಣೇಶ್ ಕಾಸರಗೋಡು. ನಾನು ಮೊದಲಿನಿಂದಲೂ ಗಮನಿಸಿದ ಹಾಗೆ ಗಣೇಶ್ ಕಡಿಮೆ ಮಾತಾಡ್ತಾರೆ. ಆದ್ರೆ ಹೆಚ್ಚು ಗ್ರಹಿಸುತ್ತಾರೆ. ಮೊದಲಿನಿಂದಲೂ ತಮಗನ್ನಿಸಿದ್ದನ್ನು ನಿಷ್ಠುರವಾಗಿ ಹೇಳುತ್ತಲೇ ಬಂದಿದ್ದಾರೆ. ತಕ್ಷಣಕ್ಕೆ ನೋಡಿದರೆ ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ಕಾಣುವ, ನಾನು ನನ್ನಿಷ್ಟ ಎಂಬಂತೆ ಬೈಕ್‍ನಲ್ಲಿ ಸಾಗಿಹೊಗುವ ಗಣೇಶ್‍ರನ್ನು ಕಂಡಾಗ ಅರೆ, ಹಲವಾರು ಮಂದಿಯ ಬದುಕನ್ನೇ ಬದಲಿಸಿದಾತ, ಹತ್ತಾರು ಯುವ ಪ್ರತಿಭೆಗಳಿಗೆ ದೊಡ್ಡ ಅವಕಾಶ ಕೊಟ್ಟಾತ ಹಲವಾರು ದಿನ-ವಾರಪತ್ರಿಕೆಗಳಿಗೆ ಸುವರ್ಣ ಚೌಕಟ್ಟು ಹಾಕಿದಾತ ಇವರೇನಾ ಎನಿಸಿ ಅಚ್ಚರಿಯಾಗುತ್ತದೆ.
ನನ್ನ ಮತ್ತು ಗಣೇಶ್ ಅವರ ಭೇಟಿಯ ಸಂದರ್ಭದ ಮಾತಿನ ಮದ್ಯೆ ಪತ್ರಕರ್ತ ರವಿ ಬೆಳೆಗರೆ ವಿಚಾರ ಅವರು ಬಳ್ಳಾರಿಯಿಂದ ಮೊದಲು ಪ್ರಕಟಿಸುತ್ತಿದ್ದ ಕ್ರೈಮ್ ಸಮಾಚಾರ್ ಪತ್ರಿಕೆಗೆ ಒಂದೆರೆಡು ವರದಿ ಬರೆದಿದ್ದನ್ನು, ಅವರ ಕಥೆಗಳನ್ನು ಓದಿ ಪ್ರಭಾವಿತನಾಗಿ ಅವರ ಶೈಲಿಯಲ್ಲೇ ಅಂದೊಮ್ಮೆ ಕಥೆ ಬರೆದಿದ್ದನ್ನು ಪ್ರಸ್ತಾಪಿಸಿದೆ. ಶುಭಂನಲ್ಲಿ ನನಗಿನ್ನೂ ಉತ್ತರ ಸಿಗದ ಪ್ರಶ್ನೆಯಲ್ಲಿ ಹುಬ್ಬಳ್ಳಿಯ ಶ್ರೀಕೃಷ್ಣ ಭವನದಲ್ಲಿ ಕೂತು ಗೆಳೆಯ ರವಿ ಬೆಳೆಗೆರೆ ಹೇಳಿದರು. ಗಣೇಶ್ ನಾನು ದಿನಸಿ ತಂದು ಹಾಕುತ್ತೇನೆ. ನೀವು ಅಡುಗೆ ರೆಡಿ ಮಾಡಿಕೊಡಿ. ನಾನು ಒಪ್ಪಿಕೊಂಡೆ. ಮಾರನೇ ದಿನದಿಂದಲೇ ಕರ್ಮವೀರ ಪತ್ರಿಕೆಯ ಪುಟ ವಿನ್ಯಾಸ, ಮುಖಪುಟ ವಿನ್ಯಾಸ, ಕಂಪೋಜಿಂಗ್‍ನಿಂದ ಹಿಡಿದು ಆಸ್ಟ್ರಾನ್ ಶೀಟಿಗೆ ಬಟ್ಟರ್ ಪೇಪರನ್ನು ಉಲ್ಟಾ ಪೇಸ್ಟ್ ಮಾಡುವ ತನಕ ಕೆಲಸ ಮಾಡಿದೆ. ಬೆಂಗಳೂರಿನ ಶ್ರೀನಿವಾಸನಗರದ ಬಾರೊಂದರಲ್ಲಿ ಕೂತು ಗೆಳೆಯ ಅಜ್ಜಿಮನೆ ನಾಗೇಂದ್ರ ಹೇಳಿದರು. ಗಣೇಶ್ ಬರೀ ಅಂಟಿಸೋದು ಸಾಕು. ನಿಮ್ಮೊಳಗೊಬ್ಬ ಅದ್ಭುತ ಬರಹಗಾರನಿದ್ದಾನೆ. ಅವನಿಗೆ ಕೆಲಸ ಕೊಡಿ. ಬರೆಯಲು ಶುರು ಮಾಡಿ.
ಸುಮಾರು 20 ವರ್ಷಗಳ ಹಿಂದೆ ಕನ್ನಡ ಪ್ರಭ ಪತ್ರಿಕೆಯ ನೌಕರಿಗಾಗಿ ಅರ್ಜಿ ಹಾಕಿದ್ದೆ. ಸಂದರ್ಶನದಲ್ಲಿ ಆಗಿನ ಸಂಪಾದಕರಾಗಿದ್ದ ವೈಎನ್ಕೆ ನನ್ನ ಮುಸುಡಿಗೆ ಹೊಡೆದಂತೆ ನಿನ್ಗೆ ಕೆಲ್ಸ ಇಲ್ಲ. ನಮ್ಮ ಸಂಪ್ರದಾಯದಂತೆ ನಿನ್ಗೆ ಬರೆಯೋಕೆ ಬರಲ್ಲ. ಮತ್ಯಾಕೆ ಬಂದೆ. ಅಂದಿದ್ದರು. ವಿಪರ್ಯಾಸವೆಂದರೆ ಯಾವ ವೈಎನ್ಕೆ ನಿನ್ಗೆ ಕೆಲ್ಸ ಸಿಗಲ್ಲ ಬರೆಯೋಕೆ ಬರಲ್ಲ ಅಂದಿದ್ರೋ ಅದೇ ವೈಎನ್ಕೆ ಹೆಸರಿನ ಸಾಹಿತ್ಯ ಪ್ರಶಸ್ತಿಯೊಂದು ನನ್ನನ್ನು ಹುಡುಕಿ ಕೊಂಡು ಬಂತು. ಅದು ಅವರ ಹುಟ್ಟೂರಾದ ಯಳಂದೂರಿನ ಪ್ರತಿಷ್ಠಿತ ಸಂಸ್ಥೆಯೊಂದು ವಿತರಿಸಿದ ಪ್ರಶಸ್ತಿ.
ನಮ್ಮ ಭೇಟಿಯ ಮಾತಿನ ಮಧ್ಯೆ ಪತ್ರಕರ್ತ ಜೋಗಿ ಬಗ್ಗೆ ಪ್ರಸ್ತಾಪಿಸಿ ಡಾ.ಜಿ.ಎಸ್.ಶಿವರುದ್ರಪ್ಪರವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾನು ಅವರು 1988ರಲ್ಲಿ ಬಳ್ಳಾರಿಯಲ್ಲಿ ನಡೆದ ಸಣ್ಣ ಕಥೆಗಳ ಕಮ್ಮಟದಲ್ಲಿ 10 ದಿನಗಳು ಒಟ್ಟಿಗೆ ಇದ್ದುದ್ದನ್ನು ಪ್ರಸ್ತಾಪಿಸಿದೆ. ಶುಭಂನಲ್ಲಿ ಜೋಗಿ ಬರೆದಿದ್ದು ಕಳೆದ 20 ವರ್ಷಗಳ ಒಡನಾಟದ ಮಿತ್ರ ಸಹೋದ್ಯೋಗಿ ಪ್ರತಿಸ್ಫರ್ಧಿ, ಆಂಗ್ರಿ ಬರ್ಡ್ ಗಣೇಶ್ ಕಾಸರಗೋಡು ನನಗಿಂತ ಕೊಂಚ ಹಿರಿಯರು. ನನಗಿಂತ ಕಡಿಮೆ ವಯಸ್ಸಾದಂತೆ ಕಾಣಿಸುವವರು. ಹೆಚ್ಚು ಕಡಿಮೆ ನನ್ನಷ್ಟೇ ಬರೆದವರು. ಚಲನಚಿತ್ರ ಪತ್ರಿಕೋದ್ಯಮದಲ್ಲಿ ಗ್ಯಾಂಗ್‍ಸ್ಟರ್‍ಗಳಂತೆ ಇದ್ದವರು. ಉದಯ ಮರಕಿಣಿ, ಸದಾಶಿವ ಶಣೈ, ಗಣೇಶ್ ಮತ್ತು ನಾನು. ಗಣೇಶ್ ಟಿವಿ ಮಾಧ್ಯಮಕ್ಕೆ ಹೋದರು. ಪುಸ್ತಕ ಬರೆದರು. ಸಿನಿಮಾ ತೆಗೆದರು. ಅವರ ಮಗ ಅಭಿಷೇಕ್ ಅತ್ಯುತ್ತಮ ಛಾಯಾಗ್ರಾಹಕ. ಜಿ ಟೀವಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯ ಸತ್ಯ ಪಾತ್ರದಾರಿಣಿ ತಮ್ಮ ಸೊಸೆ ಎಂದು ನಮ್ಮ ಮಾತಿನ ನಡುವೆ ಹೇಳಿದರು. ಇದೇ ಸಂದರ್ಭ ಲೇಖಕಿ ಪ್ರತಿಮಾ ಹಾಸನ್ ನಡೆಸಿದ ಪ್ರತಿಮಾ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಆನ್‍ಲೈನ್ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಸಿನಿಮಾ ಬರಹ ಕುರಿತ್ತಾಗಿ ಕೆಲ ಅನುಭವ ಹಂಚಿಕೊಂಡರು.
ಈಗ ಹಿಂದಿರುಗಿ ನೋಡುತ್ತಿದ್ದೇನೆ. ಏನೇನನ್ನೆಲ್ಲಾ ಮಾಡಿದ್ದೇನೆ. ಈ 40 ವರ್ಷಗಳ ವೃತ್ತಿ ಬದುಕಿನಲ್ಲಿ ನವಭಾರತ, ಉದಯವಾಣಿ, ಚಿತ್ರದೀಪ, ಚಿತ್ರತಾರಾ, ಅರಗಿಣಿ, ಸಂಚು, ಅಭಿಮಾನಿ, ತಾಯಿ, ಕ್ರೀಡಾ ಲೋಕ, ಅಭಿಮಾನಿ, ತಾಯಿ, ಕ್ರೀಡಾ ಲೋಕ, ಸಂಯುಕ್ತ ಕರ್ನಾಟಕ, ಚಿತ್ರ ಸೌರಭ, ಕರ್ಮವೀರ, ವಿಜಯ ಕರ್ನಾಟಕ, ಆಂದೋಲನ, ಮೈಸೂರು ನುಡಿ, ರಾಯಚೂರು ವಾಣಿ, ಚಿತ್ರಲತಾ, ವಿಜಯಚಿತ್ರ, ರೂಪತಾರಾ, ಅಚ್ಚರಿ, ಹಾಯ್ ಬೆಂಗಳೂರು, ಸುದ್ಧಿ ಟಿವಿ, ಉದಯ ಟಿವಿ, ಈಟಿವಿ, ದೀಪಾವಳಿ ವಿಶೇಷಾಂಕಗಳು ಇವೆಲ್ಲವುಗಳಿಗೂ ಕೆಲಸ ಮಾಡಿ 25 ಪುಸ್ತಕಗಳನ್ನು ಬರೆದು ಈಗ ಮನೆಯಲ್ಲಿ ಕೂತು ಹಳೆಯ ದಾಖಲೆಗಳನ್ನೆಲ್ಲಾ ಒಟ್ಟು ಸೇರಿಸಿ ಶುಭಂ ಎಂಬ 25ನೇ ಪುಸ್ತಕ ಬರೆದಿದ್ದೇನೆ. ನನ್ನ ಕೆಲಸ ನೂರಾರು. ನಾನು ಜರ್ನಲಿಸ್ಟಾ? ಸ್ಕ್ರೀನ್ ಪ್ರಿಂಟರಾ? ಪೇಸ್ಟಪ್ ಆರ್ಟಿಸ್ಟಾ? ಕವರ್ ಪೇಜ್ ಆರ್ಟಿಸ್ಟಾ, ಒಳಪುಟ ವಿನ್ಯಾಸಕಾರನಾ? ಬರಹಗಾರನಾ? ಅಂಕಣಕಾರನಾ? ಲೇಖಕನಾ? ಇತಿಹಾಸಕಾರನಾ? ನಟನಾ? ನಿರ್ಮಾಪಕನಾ? ನಾಟಕಕಾರನಾ? ನಿರೂಪಕನಾ? ಟಿವಿ ಕಾರ್ಯಕ್ರಮ ಪ್ರೊಡ್ಯೂಸರಾ ನಾನು ಅಂದರೆ ಏನು ನನಗಿನ್ನೂ ಅರ್ಥವಾಗಿಲ್ಲ.
ಬಹುಶ: ಒಂದು ದಿನದ ಭೇಟಿಯಲ್ಲಿ ಅವರು ನನಗೂ ಅರ್ಥವಾಗಿಲ್ಲ. ನಾನು ಸಿನಿಮಾ ಬರಹಗಳನ್ನು ಅಷ್ಟಾಗಿ ಓದುವವನಲ್ಲ. ಆದರೆ ಶುಭಂನಲ್ಲಿ 40 ವರ್ಷಗಳ ಸಿನಿಮಾ ಬರಹಗಳನ್ನು ಓದುತ್ತಾ ಹೋದಂತೆ ನನಗೆ ಹಳೆಯದೆಲ್ಲಾ ನೆನಪಾಗುತ್ತಾ ಬಂತು. ನಾನು ಪರ್ತಕರ್ತನಾಗಲು ಬಯಸಿ ಆಗ ಬೇಲೂರಿನಿಂದ ಪ್ರಕಟವಾಗುತ್ತಿದ್ದ ಮಾರ್ಗಪ್ರಭ ಪತ್ರಿಕೆಗೆ ಹಾಸನದಿಂದ ವರದಿ ಬರೆದೆ. ಸಂಕೇನಹಳ್ಳಿ ರಂಗನಾಥ್ 6 ವಾರ ನಡೆಸಿದ ಒಕ್ಕೂಟ ವಾರಪತ್ರಿಕೆಯ ಗೌ. ಸಹ ಸಂಪಾದಕನಾಗಿದ್ದೆ. ಅರಗಿಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಪೋಟೋ ಕಾಮಿಕ್ಸ್ ಮಾದರಿ ನಾನು ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಪೋಟೋಗ್ರಾಫರ್ ಅರಕಲಗೊಡು ಪ್ರಕಾಶ್ ಪೋಟೋ ತೆಗೆದು ಅರಗಿಣಿಯಲ್ಲಿ ಪ್ರಕಟಿಸಲು ಕೋರಿ ಅದು ಸಾಧ್ಯವಾಗದೇ ನಿರಾಶೆಗೆ ಒಳಗಾಗಿದ್ದೆ.
ಅಭಿಮಾನಿ ಪ್ರಕಾಶನದ ಸಂಚು ಪತ್ರಿಕೆಗೆ ಕಥೆ ಬರೆದೆ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಹಲವಾರು ಮ್ಯಾಗಜಿನ್‍ಗಳು ಗೊರೂರಿಗೆ ಬರುತ್ತಿದ್ದವು. ತರಿಸುತ್ತಿದ್ದವರು ನರಸಿಂಹಯ್ಯ ಎಂಬುವರು. ಅವುಗಳನ್ನೆಲ್ಲಾ ಓದುತ್ತಿದ್ದೆ. ಬರೆಯಲು ಪ್ರೇರಣೆಗೊಂಡು ಬರೆದಿದೆ. ಅವುಗಳನ್ನೆಲ್ಲಾ ಫೈಲ್ ಮಾಡಿ ಸಂಗ್ರಹಿಸಿದ್ದು ಪುಸ್ತಕ ಮಾಡಲು ಅನುಕೂಲವಾಯಿತು. ಈಗ ನನಗೆ 63 ನಡೆಯುತ್ತಿದೆ. ನನ್ನ ಇಷ್ಟೇ ಸಂಖ್ಯೆಯ ಪುಸ್ರಕಗಳು ಪ್ರಕಟವಾಗಿವೆ. ಹೌದು ಪತ್ರಿಕೋದ್ಯಮ ಸಿನಿಮಾ ಒಂದು ಗ್ಲಾಮರ್ ಪ್ರಪಂಚ. ಅಲ್ಲಿ ಹೋರಾಡಿ ಉಳಿದುಕೊಳ್ಳುವುದೆಂದರೇ ಸಮುದ್ರದಲ್ಲಿ ತಿಮಿಂಗಲಗಳ ನಡುವೆ ಮೀನು ಉಳಿದು ಬದುಕಿದಂತೆ. ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ನೋಡಿ ಬೆಳೆದವು ನಾವು. ಇಲ್ಲಿ ಬ್ಲ್ಯಾಕ್ ಯಾವುದು ವೈಟ್ ಯಾವುದು? ಪುಸ್ತಕದ ಮುಖಪುಟದಲ್ಲಿ ಗಣೇಶ್ ಕಾಸರಗೋಡು ಬ್ಲ್ಯಾಕ್ ಅಂಡ್ ವೈಟ್‍ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಶುಭಂ.
- ಗೊರೂರು ಅನಂತರಾಜು, ಹಾಸನ.
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ
ಮೊ: 9449462879.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ