ಬಟ್ಟಲ ತುಂಬಾ ಕುಸುಲಕ್ಕಿ ಅನ್ನ, ಬಟ್ಟಲ ಬದಿಯಲ್ಲಿ ಮಾವಿನಕಾಯಿಯ ಉಪ್ಪಿನಕಾಯಿ, ಎರಡು ದೊಡ್ಡ ಚಮಚ ತುಪ್ಪ ಬಡಿಸಿ ಬೆಳಗ್ಗೆ ಪಿ.ಜಿ.ಯಲ್ಲಿ ಕೊಟ್ಟರೆ ಅದನ್ನು ಮೃಷ್ಟಾನ್ನ ಭೋಜನವೆಂದು ಉಣ್ಣುತ್ತಿದ್ದೆವು. ಓದಿಗೆಂದು ದೂರದ ಊರಿಗೆ ಹೋದಾಗ ಉಳಿಯಲು ಹಾಸ್ಟೇಲ್ ಸಿಗದೆ ಪರದಾಡಿದಾಗ ಹ್ಯಾಗೋ ಒಂದು ಪಿ.ಜಿ. ಸೆಟ್ ಮಾಡಿ ಕೊಟ್ಟಿದ್ದರು ನಮ್ಮ ಸರ್. ಸಸ್ಯಹಾರಿಯಾದುದರಿಂದ ತುಂಬಾ ಕಷ್ಟದಲ್ಲಿ ಸಿಕ್ಕಿತ್ತು ಪಿ. ಜಿ. . ಮನೆಯಲ್ಲಿ ಅಮ್ಮ ಮಾಡಿ ಕೊಡುತ್ತಿದ್ದ ಬಿಸಿಬಿಸಿ ತಿಂಡಿಗೆ ತುಪ್ಪ ಹಾಕಿ ತಿಂದು ಮಾತ್ರ ಗೊತ್ತಿದ್ದ ನನಗೆ ಮೊದಲ ದಿನ ಬಟ್ಟಲ ತುಂಬಾ ಕೊಟ್ಟ ಗಂಜಿ ಗಂಟಲಲ್ಲೇ ಇಳಿಯಲಿಲ್ಲ. ಆದರೆ ನಮ್ಮ ಇಲ್ಲಿನ ಉರಿ ಬಿಸಿಲಿಗೆ ತಿಂಡಿಗಿಂತ ಕುಸುಲಕ್ಕಿ ಗಂಜಿಯೇ ಹಿತಕರ ಎಂದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಅಂದು ಅಜ್ಜಿ ನಿತ್ಯವೂ ಬೆಳಗ್ಗೆ ಸರಬರ ಸರಬರ ಎಂದು ಮೊಸರು ಕಡೆಯುತ್ತಿದ್ದರೆ ಅಚ್ಚರಿಯೆನಿಸುತ್ತಿತ್ತು. ಬೆಳಗ್ಗೆ ದನದ ಕೊಟ್ಟಿಗೆಯಿಂದ ಹಾಲು ಕರೆದು ತಂದ ಹಾಲು ಮರುದಿನಕ್ಕೆ ಮೊಸರಾಗುವುದೇ ನಮಗೊಂದು ಚಮತ್ಕಾರವೆನಿಸುತ್ತಿತ್ತು. ಅದರೊಂದಿಗೆ ಕಡಗೋಲಿನೊಂದಿಗೆ ಆಟವಾಡುತ್ತಾ ಸ್ವಲ್ಪ ಹೊತ್ತಲ್ಲೇ ಅಜ್ಜಿ ಕೈತುಂಬಾ ಬೆಣ್ಣೆ ತೆಗೆದು ತೋರಿಸುವುದು ನಮಗೊಂದು ಮ್ಯಾಜಿಕ್ ನಂತೆ ತೋರುತ್ತಿತ್ತು. ವಾರವಿಡೀ ಮೊಸರು ಕಡೆದು ತೆಗೆದಿಟ್ಟ ಬೆಣ್ಣೆಯನ್ನು ನಿತ್ಯವೂ ತೊಳೆದು ಶುದ್ಧೀಕರಿಸಿ ಸಂಗ್ರಹಿಸಿ ವಾರದ ಕೊನೆಯಲ್ಲಿ ಕಾಯಿಸಿ ತುಪ್ಪ ಮಾಡುವ ಪ್ರಕ್ರಿಯೆ ನಮಗೆ ಸೋಜಿಗವೇ ಆಗಿತ್ತು. ಒಂದು ಒಲೆಯಲ್ಲಿ ಬೆಣ್ಣೆ ತುಪ್ಪವಾಗುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಮೈಸೂರ್ ಪಾಕ್ ಮಾಡಿದರೆ ಹೇಗೆ ಎಂಬ ಯೋಚನೆಗೆ ಅಡಿಪಾಯ ಹಾಕುವುದು ಘಮಘಮಿಸಲಾರಂಭಿಸುವ ತುಪ್ಪ.
ಅದಾಗ ತಾನೇ ಮಾಡಿದ ಬಿಸಿ ತುಪ್ಪ ಬಳಸಿ ಮಾಡಿದ ಮೈಸೂರು ಪಾಕದ ರುಚಿಗೆ ಯಾವ ಕೃತಕ ತುಪ್ಪ ಬಳಸಿ ಮಾಡಿದಾಗ ಬಾರದು. ತುಪ್ಪದ ಬಿಸಿ ಆರುವ ಮೊದಲೇ ಹದವಾದ ಸಕ್ಕರೆ ಪಾಕದೊಂದಿಗೆ ಕಡಲೆಹಿಟ್ಟು ತುಪ್ಪದೊಂದಿಗೆ ಬೆರೆಯುತ್ತಾ ಬಾಯಿಯಲ್ಲಿ ನೀರೂರುವಂತಹ ಮೈಸೂರು ಪಾಕ ತಯಾರಿಸುವುದು ಒಂದು ಕಲೆ. ಇದು ಪಾಕ ವಿಜ್ಞಾನ ವನ್ನು ಅರ್ಥಮಾಡಿ ಕೊಂಡವನಿಗಷ್ಟೇ ಒಲಿವ ಸಿದ್ದಿ.
ತುಪ್ಪ ಎಲ್ಲರೂ ಇಷ್ಟ ಪಡುವುದಿಲ್ಲ. ಅದಕ್ಕೆ ಅವರದ್ದೇ ಆದ ಕಾರಣವಿರುತ್ತದೆ. ಸಾಮಾನ್ಯವಾಗಿ ಕಾಯಿಹೋಳಿಗೆ, ಕಡ್ಲೆ ಹೋಳಿಗೆಯೊಂದಿಗೆ ಒಳ್ಳೆಯ ಕಾಂಬಿನೇಷನ್ ಈ ತುಪ್ಪ. ಒಂದು ಒಳ್ಳೆಯ ಹೋಳಿಗೆಯನ್ನು ಸುವಾಸಿತ ತುಪ್ಪದೊಂದಿಗೆ ಸವಿದಾಗ ಮಾತ್ರ ಪರಿಪೂರ್ಣವೆನಿಸುತ್ತದೆ. ಆದರೆ ಒಮ್ಮೊಮ್ಮೆ ತುಪ್ಪ ಚೆನ್ನಾಗಿ ಇರುವುದಿಲ್ಲ. ಅದು ಹಳತಾಗಿದ್ದರೆ ಪರಿಮಳ ಬೆರೆಯಾಗಿರುತ್ತದೆ. ಇನ್ನೂ ಸರಿಯಾಗಿ ಕಾದಿಲ್ಲವಾದರೆ ಅಥವಾ ಹೆಚ್ಚು ಕಾಯಿಸಿದರೆ , ಅಥವಾ ಮತ್ತೆ ಮತ್ತೆ ಬಿಸಿ ಮಾಡಿದರೆ ರುಚಿ ಹಾಳುತ್ತದೆ. ಅದರ ಸಂರಚನೆ ವ್ಯತ್ಯಾಸವಾಗುತ್ತದೆ. ಅಲ್ಲದೆ ರಾಸಾಯನಿಕವಾಗಿಯೂ ಬದಲಾವಣೆಯಾಗುತ್ತದೆ. ತುಪ್ಪವನ್ನು ತುಪ್ಪವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.
ನಿತ್ಯ ಒಂದೊಂದು ಚಮಚ ತುಪ್ಪವನ್ನು ಆಹಾರದಲ್ಲಿ ಬಳಸಿದಾಗ ಹಲವು ದೈಹಿಕ ಸಮಸ್ಯೆ ಗಳು ದೂರವಾಗುತ್ತದೆ. ಮಕ್ಕಳಿಗೆ ಅಗತ್ಯವಾದ ಶಕ್ತಿ ಸಾಮರ್ಥ್ಯ ಗಳು, ಬುದ್ಧಿವಂತಿಕೆ , ಬಲಿಷ್ಠ ಮೂಳೆಗಳ ರಚನೆಯಲ್ಲಿ ತುಪ್ಪದ ಪಾತ್ರ ದೊಡ್ಡದು. ಇನ್ನೂ ದೇಹದ ಸೌಂದರ್ಯ ಕಾಪಾಡುವಲ್ಲೂ ಮಹತ್ವದ ಪಾತ್ರ ತುಪ್ಪ ವಹಿಸುತ್ತದೆ. ಆಯುರ್ವೇದದ ಪ್ರಕಾರ ತುಪ್ಪವನ್ನು ವ್ಯಕ್ತಿ ನಿಯಮಿತವಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಅತ್ಯುತ್ತಮವಾದುದ್ದು ಎನ್ನಲಾಗುತ್ತದೆ. ತುಪ್ಪದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಕೊಬ್ಬಿನಂಶ ಇರುವುದರಿಂದ ಇದನ್ನು ದಿವ್ಯ ಔಷಧಿ ಎಂದು ಪರಿಗಣಿಸಲಾಗುವುದು. ತುಪ್ಪವು ನಮ್ಮ ದೇಹವನ್ನು ಬೆಚ್ಚಗಿಡುವುದು. ಆದ್ದರಿಂದ ಚಳಿಗಾಲದಲ್ಲಿ ತುಪ್ಪವನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಲು ವಿಶೇಷವಾಗಿ ಸೂಚಿಸಲಾಗುವುದು. ಶಕ್ತಿಯನ್ನು ನೀಡುವ ತುಪ್ಪವು ಕರುಳಿನ ಆರೋಗ್ಯವನ್ನು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವುದು. ಅಲ್ಲದೆ ನಿತ್ಯದ ಮಲವಿಸರ್ಜನೆ ಹಾಗೂ ಜೀರ್ಣ ಕ್ರಿಯೆಗೂ ತುಪ್ಪದ ಸೇವನೆ ಸಹಕಾರಿಯಾಗಿದೆ. ಇನ್ನೇಕೆ ತಡ ನಿತ್ಯವೂ ಒಂದು ಚಮಚ ತುಪ್ಪ ಬಳಸಿ ಆರೋಗ್ಯ ಕಾಪಾಡಿ ಕೊಳ್ಳಿ.
- ಅಶ್ವಿನಿಮೂರ್ತಿ ಅಯ್ಯನಕಟ್ಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ