ಮಂಗಳೂರು: ಚೆನ್ನೈನ ಹೆಸರಾಂತ ವಯಲಿನ್ ವಾದಕ ಸೋದರರಾದ ಗಣೇಶ್ ರಾಜಗೋಪಾಲನ್ ಮತ್ತು ಕುಮರೇಶ್ ರಾಜಗೋಪಾಲನ್ ಅವರಿಂದ ನಗರದ ಪುರಭವನದಲ್ಲಿ ಜ.15ರಂದು ದ್ವಂದ್ವ ವಯಲಿನ್ ಕಛೇರಿ ನಡೆಯಲಿದೆ.
ನಗರದ ಕಲಾಶಾಲೆ, ಸ್ವರಾಲಯ ಸಾಧನಾ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸುತ್ತಿರುವ ಸ್ವರ ಸಂಕ್ರಾಂತಿ ಉತ್ಸವ-24 ಇದರ ಅಂಗವಾಗಿ ಈ ವಯಲಿನ್ ಕಛೇರಿ ನಡೆಯಲಿದೆ. ಮೃದಂಗದಲ್ಲಿ ವಿದ್ವಾನ್ ಅನಂತ ಆರ್. ಕೃಷ್ಣನ್ ಹಾಗೂ ಖಂಜಿರದಲ್ಲಿ ವಿದ್ವಾನ್ ಸುಂದರ ಕುಮಾರ್ ಸಾಥ್ ನೀಡಲಿದ್ದಾರೆ.
ರಾಮ ಮೂರ್ತಿಗೆ ಸ್ವರ ರತ್ನ ಪ್ರಶಸ್ತಿ:
ನಿಡ್ಲೆಯ ಖ್ಯಾತ ವಯಲಿನ್ ವಾದಕ ಹಾಗೂ ಅಂತಾರಾಷ್ಟ್ರೀಯ ಸಂಗೀತ ಸಾಧಕ ವಿಠ್ಠಲ ರಾಮ ಮೂರ್ತಿ ಅವರ ಜೀವಮಾನದ ಸಂಗೀತ ಸೇವೆಯನ್ನು ಪರಿಗಣಿಸಿ ಈ ಬಾರಿಯ ಸ್ವರ ರತ್ನ ವಿಶೇಷ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗುವುದು.
ರಾಮಮೂರ್ತಿ ಅವರು ನಿಡ್ಲೆಯ ಮೂಲ ಮನೆಯಲ್ಲಿ ಕಳೆದ 20 ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಸಂಪೂರ್ಣ ಉಚಿತವಾಗಿ 'ಕರುಂಬಿತ್ತಿಲ್ ಶಿಬಿರ' ಎಂಬ ಸಂಗೀತ ಶಿಬಿರ ನಡೆಸುತ್ತಿದ್ದಾರೆ. ದೇಶ-ವಿದೇಶಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಶಿಬಿರದ ಹೆಗ್ಗಳಿಕೆಯಾಗಿದೆ. ಅವರ ಸಂಗೀತ ಸಾಧನೆಯನ್ನು ಗೌರವಿಸಿ ಇತ್ತೀಚೆಗೆ ಅಮೆರಿಕದ ಟೇಂಪಿ ಅರಿಜೋನಾ ನಗರದಲ್ಲಿ ನವೆಂಬರ್ 5ರಂದು 'ವಿಠ್ಠಲ ರಾಮಮೂರ್ತಿ ದಿನ' ಎಂದು ಘೋಷಿಸಲಾಗಿತ್ತು.
ಮೂವರು ಸಾಧಕರಿಗೆ ಪ್ರಶಸ್ತಿ:
ಇದೇ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಮೂವರು ಹಿರಿಯ ಸುಗಮ ಸಂಗೀತ ಗುರುಗಳಾದ ವಿದ್ವಾನ್ ನಾಗೇಶ್ ಎ ಬಪ್ಪನಾಡು, ವಿದುಷಿ ಪ್ರತಿಭಾ ಸಾಮಗ ಮತ್ತು ವಿದ್ವಾನ್ ಯು.ಜಿ ನಾರಾಯಣ ಶರ್ಮ ಕುಂಬ್ಳೆ ಅವರಿಗೆ ಸ್ವರ ಸಾಧನಾ ಪ್ರಶಸ್ತಿ-24 ನೀಡಿ ಗೌರವಿಸಲಾಗುವುದು.
ಸ್ವರ ಸಂಕ್ರಾಂತಿ ಉತ್ಸವಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ. ಮಧ್ಯಾಹ್ನ 2 ಗಂಟೆಯಿಂದ ಸ್ವರಾಲಯದ 50 ವಿದ್ಯಾರ್ಥಿಗಳಿಂದ ವಯಲಿನ್ ವಾದನ ಕಛೇರಿ ನಡೆಯಲಿದೆ. ಸಂಜೆ 4ರಿಂದ ಗಣೇಶ್ ಮತ್ತು ಕುಮರೇಶ್ ಅವರ ಕಛೇರಿ ಪ್ರಾರಂಭವಾಗಲಿದೆ. ಆಸಕ್ತರು ಮುಂಚಿತವಾಗಿ ನಿಗದಿತ ಉಚಿತ ಪಾಸ್ ಪಡೆದುಕೊಂಡು ಕಾರ್ಯಕ್ರಮ ಆರಂಭಕ್ಕೆ ಮೊದಲೇ ಆಸೀನರಾಗಲು ಪ್ರಕಟಣೆ ಕೋರಿದೆ
ಹೆಚ್ಚಿನ ಮಾಹಿತಿ ಮತ್ತು ಉಚಿತ ಪಾಸ್‌ಗಳಿಗಾಗಿ 80953 42424 ಸಂಪರ್ಕಿಸಬಹುದು ಎಂದು ಸ್ವರಾಲಯ ಸಾಧನಾ ಪೌಂಡೇಶನ್ ಇದರ ಮ್ಯಾನೇಜಿಂಗ್ ಟ್ರಸ್ಟಿ ವಿಶ್ವಾಸ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ