ಮಂಗಳೂರು: ಸಾಹಿತಿ, ಕವಿ, ವಿಮರ್ಶಕ, ಚಿಂತಕ, ಹವ್ಯಾಸಿ ಛಾಯಾಗ್ರಾಹಕ ಕೇಶವ ಕುಡ್ಲ ಅವರ ನಿಧನಕ್ಕೆ ಯಕ್ಷಾಂಗಣ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅವರು, ಕೇಶವ ಕುಡ್ಲ (ಕೇಶವ ಎಸ್.ವಟಿ) ಮೂಲತ: ಹಾಸನ ಜಿಲ್ಲೆಯ ಬೇಲೂರಿನವರಾಗಿದ್ದು ವಿಮಾ ಕಂಪೆನಿಯಲ್ಲಿ ಉದ್ಯೋಗಿಯಾಗಿ ಮಂಗಳೂರಿನಲ್ಲಿ ನೆಲೆಸಿದ್ದರು. ನಮಗೆಲ್ಲ ಆತ್ಮೀಯರಾಗಿದ್ದರು. ಕೀಟಲೋಕದ ಛಾಯಾಚಿತ್ರ ಗ್ರಹಣ ಮತ್ತು ಬರವಣಿಗೆ ಅವರ ಹವ್ಯಾಸವಾಗಿತ್ತು. ಅವರ ಹಿರಿಯ ಸಹೋದರ ಶ್ರೀವತ್ಸ ಎಸ್.ವಟಿ ಖ್ಯಾತ ಬರಹಗಾರರು. ಸ್ವಯಂ ಸಾಧನೆಯಿಂದ ತುಳು ಕಲಿತು ತುಳು ಭಾಷೆಯಲ್ಲಿ ಕಾದಂಬರಿಯನ್ನು ರಚಿಸಿದ ಸಾಹಸಿ ಕೇಶವ ವಟಿ; ಕೇಶವ ಕುಡ್ಲರಾಗಿ ಇಲ್ಲಿನವರೇ ಆದರು. ಅವರ ಸಾಹಿತ್ಯ ಸಾಧನೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿಯೂ ಲಭಿಸಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಚಿರಂತನವಾಗಿ ಉಳಿಯುವ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅವರು ಕೊಟ್ಟಿದ್ದಾರೆ. ಕಥಾ ಸಂಕಲನ, ಲೇಖನ ಸಂಕಲನ, ಕಾದಂಬರಿ, ಅನುವಾದ, ಅನುಭವ ಕಥನ ಸಹಿತ ವಿವಿಧ ಕೃತಿಗಳನ್ನು ರಚಿಸಿದ್ದಾರೆ. 112 ಕಥೆಗಳು ಒಂದು ಕಾದಂಬರಿ ಪ್ರಕಟವಾಗಿವೆ. ಅನಿವಾರ್ಯಗಳು, ಆರುನೂರು ರೂಪಾಯಿ ಹೆಜ್ಜೆ,, ಚಿನ್ಮಯಿ, ಕಥಾ ಪಯಣ, ಅಯನ, ಜಾತ್ರೆಯ ಹುಚ್ಚು, ಹುತ್ತವ ಕಟ್ಟಿ ಅಡಗಿತ್ತು ನೋವು, ಮತ್ತೊಂದು ಅವಕಾಶ (ಕ್ಯಾನ್ಸರ್ ಜೊತೆ ಮುಖಾಮುಖಿ) ಇತ್ಯಾದಿ ಅವರ ಪ್ರಕಟಿತ ಕೃತಿಗಳು. ಜಾನಕಿ ಬ್ರಹ್ಮಾವರ ಅವರ 'ರುಕ್ಕು' ತುಳು ಕಾದಂಬರಿಯನ್ನು ಇಡಿಯಾಗಿ ಅನುವಾದಿಸಿದ ಸಾಧನೆ ಅವರದು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಎಂ.ಪಿ. ಶ್ರೀನಾಥ್ ನೇತೃತ್ವದಲ್ಲಿ ಇತ್ತೀಚೆಗೆ ಅವರೊಂದಿಗೆ 'ಮನೆಯಂಗಳದಲ್ಲಿ ಸಂವಾದ' ನಡೆದಿತ್ತು ಎಂದು ಭಾಸ್ಕರ ರೈ ಕುಕ್ಕುವಳ್ಳಿ ಸ್ಮರಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ