ರಾಮಾಯಣದಲ್ಲಿ ಚಾರಿತ್ರಿಕ, ಸಾಂಸ್ಕøತಿಕ ಹಾಗೂ ಪೌರಾಣಿಕ ಮಹತ್ವವಿದೆ: ಡಾ. ಶ್ರೀಧರ್ ಹೆಚ್ ಜಿ
ಪುತ್ತೂರು: ಪ್ರಪಂಚದ ಶ್ರೇಷ್ಠ ನಾಲ್ಕು ಮಹಾಕಾವ್ಯಗಳಲ್ಲಿ ರಾಮಾಯಣವೂ ಒಂದು. ಹಾಗಾಗಿ ರಾಮ ರಾಜ್ಯದ ಪರಿಕಲ್ಪನೆ ಪುರುಷೋತ್ತಮ ಬಾಲಕನಾಗಿರುವಾಗಲೇ ಆರಂಭವಾಗಿರುತ್ತದೆ. ಅದಕ್ಕೆ ಪೂರಕವಾಗಿ ಸಾಕೇತ ಅಯೋಧ್ಯೆ ಎಂಬುದಾಗಿ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿದೆ. ಈ ನಿಟ್ಟಿನಲ್ಲಿ ರಾಮಾಯಣವನ್ನು ಓದಿದರೆ ಭಾರತೀಯ ಸಂಸ್ಕøತಿಯ ಇತಿಹಾಸ ಓದಿದಂತೆ. ಅಷ್ಟೇ ಅಲ್ಲದೆ ಇದರಲ್ಲಿ ಚಾರಿತ್ರಿಕ, ಸಾಂಸ್ಕøತಿಕ ಹಾಗೂ ಪೌರಾಣಿಕ ಮಹತ್ವವಿದೆ ಎಂದು ಕಾಲೇಜಿನ ಪರಿಕ್ಷಾಂಗ ಕುಲಸಚಿವ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಹೆಚ್ ಜಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ನಡೆದ ಪಂಪಾರಾಮ ಸ್ಮರಣೆಯಲ್ಲಿ ‘ರಾಮರಾಜ್ಯದ ಪರಿಕಲ್ಪನೆ' ಎಂಬ ವಿಷಯದ ಕುರಿತು ಪ್ರಸ್ತಾಪಿಸಿ ಮಾತನಾಡಿದರು.
ರಾಮಾಯಣದಲ್ಲಿ ರಾಮನ ನೀತಿಗಳು ಪ್ರತ್ಯೇಕ ವಿದಾನವಾಗಿ ಕಾಣಿಸುತ್ತದೆ. ರಾಮನ ಆದರ್ಶಗಳು, ರಾಮ ಬದುಕಿನಲ್ಲಿ ಹೇಗೆ ನಡೆದುಕೊಂಡ, ಬದುಕಿನಲ್ಲಿ ಎದುರಾದ ಘಟನೆಗಳನ್ನು ನಿಭಾಯಿಸಿದ ಪರಿ ಎಲ್ಲರಿಗೂ ಮಾದರಿ. ಹಾಗಾಗಿ ಭಾರತೀಯರ ಬದುಕು ವ್ಯವಸ್ಥಿತವಾಗಿ ರೂಪುಗೊಳ್ಳುವಲ್ಲಿ, ಒಂದು ಆದರ್ಶದ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ರಾಮನ ಪಾತ್ರ ಮಹತ್ವವಾದುದು. ಇಂದಿನ ಯುವಕರಿಗೆ ರಾಮನೇ ಆದರ್ಶ. ಸುಖೀ ರಾಜ್ಯ ಹೇಗಿರಬೇಕೆಂದು ತಿಳಿಸಿಕೊಟ್ಟವನೇ ಶ್ರೀರಾಮ. ಅದೇ ರಾಮ ರಾಜ್ಯದ ಪರಿಕಲ್ಪನೆ. ರಾಮನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹಾಗೂ ರಾಮರಾಜ್ಯ ನಿರ್ಮಾಣದಲ್ಲಿ ವಶಿಷ್ಟ ಮತ್ತು ವಿಶ್ವಾಮಿತ್ರರ ಕೊಡುಗೆ ಗಣನೀಯವಾಗಿದೆ. ಹಾಗಾಗಿ ಒಂದು ಜೀವನ, ಬದುಕು ಹೇಳುವಂತಹದ್ದು ಹೇಗೆ ನಮ್ಮನ್ನು ಬೇರೆ ಬೇರೆ ಕವಲುಗಳಲ್ಲಿ ಕರೆದುಕೊಂಡು ಹೋಗುತ್ತದೆಯೋ ಅದಕ್ಕೆ ನಾವು ಒಗ್ಗಿಕೊಂಡಲ್ಲಿ ನಮ್ಮ ಬದುಕು ಅತ್ಯಂತ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಪ್ರಭು ಶ್ರೀರಾಮನ ಆದರ್ಶಗಳು ಜನರನ್ನು ನೂರಾರು ರೀತಿಯಲ್ಲಿ ಉತ್ತೇಜಿಸುತ್ತದೆ. ಭಾರತ ಶಾಂತಿಸ್ಥಾಪಕ ದೇಶ. ನಮ್ಮ ಚಿಂತನೆ ಮತ್ತು ಧರ್ಮವನ್ನು ಉಳಿಸಿಕೊಳ್ಳಲು ಇರುವ ಮಣ್ಣು ಭಾರತ. ನಮ್ಮ ನಾಗರೀಕತೆ, ಸಂಸ್ಕೃತಿ, ಧರ್ಮ, ಜೀವನ ಮೌಲ್ಯ, ಪೌರುಷ, ಸಾಹಸ ಹಾಗೂ ಸತ್ಯದ ಗುರುತೇ ಶ್ರೀರಾಮ. ಆತನ ವ್ಯಕ್ತಿತ್ವ ಅಂತಹದ್ದು. ಈ ನಿಟ್ಟಿನಲ್ಲಿ ರಾಮನ ಜೀವನದಲ್ಲಿ ಸೀತಾಮಾತೆಯ ಪಾತ್ರ ಮಹತ್ವವಾದುದು. ಹಾಗಾಗಿ ರಾಮ ಮಡದಿಯನ್ನು ಸಹಧರ್ಮಿಣಿ ಎಂದು ಕರೆಯುತ್ತಾನೆ. ಅಂದರೆ ಧರ್ಮವನ್ನು ಹೇಳಿಕೋಡುವವಳು ಎಂದರ್ಥ. ಅದಕ್ಕಾಗಿಯೇ ಭಾರತದಲ್ಲಿ ಸ್ತ್ರೀಯರಿಗೆ ಶ್ರೇಷ್ಠವಾದ ಸ್ಥಾನಮಾನವಿರುವುದು ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್, ಇದೊಂದು ಅಪೂರ್ವ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಿದ್ದು, ಬಹುಶಃ ಇಲ್ಲಿ ಜನವರಿ 22ರ ವರೆಗೆ ನಡೆಯುತ್ತಿರುವ ಶ್ರೀರಾಮೋತ್ಸವ ಕಾರ್ಯಕ್ರಮ ಒಂದು ಇತಿಹಾಸ ಸೃಷ್ಟಿದೆ ಎಂದರೆ ತಪ್ಪಾಗರಾರದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಿಂದೆ ಅದೆಷ್ಟೋ ಕರಸೇವಕರ ಬಲಿದಾನವಿದೆ, ಹೋರಾಟದ ಕಥೆಗಳನ್ನು ಆಲಿಸುವಾಗ ರೋಮಾಂಚನವಾಗುತ್ತದೆ ಹಾಗೂ ಇಂದಿನ ಬೆಳವಣಿಗೆಯನ್ನು ಗಮನಿಸುವಾಗ ಹೆಮ್ಮೆಯೂ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ್ ಸಾಮಂತ್, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯಕ್, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತಾ ಸ್ವಾಗತಿಸಿ, ಪ್ರಜ್ಞಾ ಕೆ ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಬಿಕಾಂ ವಿದ್ಯಾರ್ಥಿನಿ ಕಾವ್ಯಶ್ರೀ ನಿರೂಪಿಸಿದರು.
ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಮರ್ಯಾದ ಪುರುಷೋತ್ತಮ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಶುಭ ಸಂದರ್ಭದಲ್ಲಿ ಡಾ| ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಲಿದ್ದು, ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಆರತಿ ಬೆಳಗಿ ಅವರನ್ನು ಬೀಳ್ಕೊಟ್ಟರು.
ಉದ್ಘಾಟನೆ, ಗೌರವಾರ್ಪಣೆ:
ಶ್ರೀ ರಾಮೋತ್ಸವ ಆರನೇ ದಿನದ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಪುಷ್ಪಾ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಕೊನೆಯಲ್ಲಿ ರಾಮ ಭಾವಪೂಜೆಯ ಮೂಲಕ ಕಾರ್ಯಕ್ರಮವು ಸಂಪನ್ನಗೊಂಡಿತು. ಜೊತೆಗೆ ಈ ಸಂದರ್ಭದಲ್ಲಿ ಭೌತಶಾಸ್ತ್ರ ಪ್ರಯೋಗಾಲಯದ ಪರಿಚಾರಕರಾದ ಮಹೇಶ್ ಮತ್ತು ಪ್ರಮೋದ್ ಇವರಿಗೆ ಗೌರವ ಸಮರ್ಪಿಸಲಾಯಿತು.
ಯಕ್ಷ-ಗಾನ-ನಾದ ವೈಭವ:
ಕಾಲೇಜಿನ ಯಕ್ಷಗಾನ-ಯಕ್ಷರಂಜಿನಿ ಸದಸ್ಯರಿಂದ ಯಕ್ಷ-ಗಾನ-ನಾದ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ