ಶ್ರೀರಾಮ ಕಥಾ ಲೇಖನ ಅಭಿಯಾನ-47: ವಿಶ್ವವ್ಯಾಪಿ ರಾಮಾಯಣದ ವಿವಿಧ ರೂಪಗಳು

Upayuktha
0

 





- ಉಮಾ ರಮೇಶ್

ತಾವೆಲ್ಲ ವಾಲ್ಮೀಕಿ ರಾಮಾಯಣದ ಬಗ್ಗೆ ಅರಿತಿರುವಿರಿ. ಆದರೆ ಪ್ರಪಂಚದಲ್ಲಿ ರಾಮಾಯಣದ ಸುಮಾರು 300 ರೂಪಾಂತರಗಳಿವೆ ಎಂದು ಬಲ್ಲಿರಾ! ಭಾರತವನ್ನು ಬಿಟ್ಟು, ಏಷ್ಯಾ ಖಂಡದ  ಎಲ್ಲ ದೇಶಗಳಲ್ಲೂ ರಾಮಾಯಣದ ವಿವಿಧ ಪ್ರಾದೇಶಿಕ ಭಾಷಾ ರೂಪಾಂತರಗಳಿವೆ. ಬರ್ಮಾ, ಇಂಡೋನೇಷಿಯಾ, ಕಾಂಬೋಡಿಯಾ, ಲಾವೋಸ್, ಫಿಲಿಫೈನ್ಸ್ ಹಾಗೂ ಚೀನಾ ಇಲ್ಲೆಲ್ಲಾ ರಾಮಾಯಣದ ಕಥಾವಸ್ತು ಆಧರಿಸಿದ ಹಾಗೂ ವಿಷಯಾಧಾರಿತ ರೂಪಾಂತರಗಳನ್ನು ಕಾಣುವಿರಿ. ಉದಾ: 12ನೇ ಶತಮಾನದಲ್ಲಿಯ ಶಾಸ್ತ್ರೀಯ ರೂಪಗಳು ತಮಿಳಿನ ರಾಮಾವತಾರಂ, ಖೆಮರ್ ರೇಮ್ ಕೇರ್, ಪುರಾತನ ಜಾವಾದ ಕಾಕಾವಿನ್ ರಾಮಾಯಣ, ಥಾಯ್ ರಾಮಾಕೈನ್ ಹಾಗೂ ಲಾವೋಸ್‌ನ ಫ್ರಾ ಲಾಕ್/ಫ್ರಾ ಲಾಮ್. ನಮ್ಮ ದೇಶದಲ್ಲಿ ಲಭ್ಯವಿರುವ ಇತರ ರಾಮಾಯಣಗಳೆಂದರೆ ಆಧ್ಯಾತ್ಮ ರಾಮಾಯಣ, ವಸಿಷ್ಠ ರಾಮಾಯಣ (ಇದಕ್ಕೆ ಯೋಗ ವಸಿಷ್ಠ ಎನ್ನುತ್ತಾರೆ). ಲಘು ಯೋಗ ವಸಿಷ್ಠ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ಅದ್ಭುತ ರಾಮಾಯಣ. ಮಹಾಭಾರತದಲ್ಲಿ ವನಪರ್ವದಲ್ಲಿ ರಾಮೋಖ್ಯಾನ ಪರ್ವ ಎಂಬ ಭಾಗ ಬರುತ್ತದೆ. ಭಾಗವತ ಪುರಾಣದಲ್ಲಿ ಸಹ 9ನೇ ಸ್ಕಂಧದಲ್ಲಿ  ರಾಮನ ಕಥೆ ಬರುತ್ತದೆ. ವಿಷ್ಣು ಪುರಾಣ ಹಾಗೂ ಅಗ್ನಿ ಪುರಾಣಗಳಲ್ಲೂ ರಾಮನ ಸಂಕ್ಷಿಪ್ತ ಕಥೆ ಬರುತ್ತದೆ. 


ಪ್ರಾದೇಶಿಕ ಅವತರಣಿಕೆಗಳು:- 

ಉತ್ತರ ಭಾರತದಲ್ಲಿ :- 16ನೇ ಶತಮಾನದಲ್ಲಿ ತುಳಸೀದಾಸರು ಬರೆದ  ರಾಮಚರಿತ ಮಾನಸ, ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ:- ಇಲ್ಲಿ 19ನೇ ಶತಮಾನದಲ್ಲಿ ಕಾಶ್ಮೀರಿ ಭಾಷೆಯ ರಾಮಾವತಾರ ಚರಿತ ಇದೆ. ಗುಜರಾತಿನಲ್ಲಿ:- 17ನೇ ಶತಮಾನದಲ್ಲಿ ಪ್ರೇಮಾನಂದಸ್ವಾಮಿ ತುಳಸಿದಾಸ  ರಾಮಾಯಣವನ್ನು ತುಳಸೀಕೃತ ರಾಮಾಯಣ ಎಂಬ ಹೆಸರಿನಲ್ಲಿ ಗುಜರಾತಿ ಭಾಷೆಯಲ್ಲಿ ಅಳವಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ:- 16ನೇ ಶತಮಾನದಲ್ಲಿ ಏಕನಾಥರು ಮರಾಠಿ ಭಾಷೆಯಲ್ಲಿ ರಚಿಸಿರುವ ಭಾವಾರ್ಥ ರಾಮಾಯಣ ಪ್ರಚಲಿತವಿದೆ.  12 ಅಥವಾ 13ನೇ ಶತಮಾನದಲ್ಲಿ ರಾಮಾಯಣವನ್ನು ಹಳೆಯ ಮರಾಠಿ ಭಾಷೆಯಲ್ಲಿ ಅನುವಾದಿಸಿರುವ  ಪ್ರಸ್ತಾಪಗಳು ಸಿಗುತ್ತವೆ. ಆಸ್ಸಾಂಮಿನಲ್ಲಿ ಮಾಧವ ಕಂಡಲಿ ಬರೆದಿರುವ ಆಸಾಮಿ ಭಾಷೆಯಲ್ಲಿರುವ ಕಥಾ ರಾಮಾಯಣ ಅಥವಾ ಕೊಥಾ ರಾಮಾಯಣ ಪ್ರಖ್ಯಾತವಾಗಿದೆ.

ಬಂಗಾಲದಲ್ಲಿ:-  15ನೇ ಶತಮಾನದಲ್ಲಿ ಕವಿ ಕೃತ್ತಿಬಾಸ್ ಬರೆದಿರುವ ಬಂಗಾಳಿ ಭಾಷೆಯ ಕೃತ್ತಿವಾಸಿ ರಾಮಾಯಣ ಲಭ್ಯವಿದೆ. ಒರಿಸ್ಸಾದಲ್ಲಿ:- 16ನೇ ಶತಮಾನದಲ್ಲಿ ಬಲರಾಮದಾಸ್, ಒರಿಯಾ ಭಾಷೆಯ ದಂಡಿ ರಾಮಾಯಣ ಅಥವಾ ಜಗಮೋಹನ ರಾಮಾಯಣವನ್ನು ಅಳವಡಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ:- ರಾಮಾಯಣದ ತೆಲುಗು ಅವತರಣಿಕೆಯನ್ನು ಅಳವಡಿಸಿದವರು ಬುಧ್ಧಾರೆಡ್ಡಿ ಇದರ ಹೆಸರು ಶ್ರೀ ರಂಗನಾಥ ರಾಮಾಯಣಮು. ಇದಲ್ಲದೆ ಕವಯಿತ್ರಿ ಮೊಲ್ಲಾ ರಾಮಾಯಣವನ್ನು ಮೊಲ್ಲ ರಾಮಾಯಣಮು ಎಂಬ ಹೆಸರಿನಲ್ಲಿ ಅಳವಡಿಸಿದ್ದಾರೆ.

ಕರ್ನಾಟಕದಲ್ಲಿ:- ಕನ್ನಡದಲ್ಲಿ ರಾಮಾಯಣದ ಅನೇಕ ಅವತರಣಿಕೆಗಳು ಲಭ್ಯವಿದೆ. 13ನೇ ಶತಮಾನದಲ್ಲಿ ಬರೆಯಲಾದ ಜೈನ ಆವೃತ್ತಿಯಾದ ಕುಮುದೇಂದು ರಾಮಾಯಣ, 16 ಶತಮಾನದಲ್ಲಿ ಕುಮಾರ ವಾಲ್ಮೀಕಿ ಬರೆದ ತೊರವೆ ರಾಮಾಯಣ 13ನೇ ಶತಮಾನದಲ್ಲಿ ನಾಗಚಂದ್ರ ಬರೆದ ರಾಮಚಂದ್ರ ಚರಿತ ಪುರಾಣ ಲಭ್ಯವಿದೆ. ಮುದ್ದಣ ಎಂಬ ಕಾವ್ಯ ನಾಮದ ನಂದಳಿಕೆ ಲಕ್ಷ್ಮೀ ನಾರಾಯಣ 1895ರಲ್ಲಿ ಬರೆದಿರುವ  ಅದ್ಭುತ ರಾಮಾಯಣ ಹಾಗೂ ರಾಮಾಶ್ವಮೇಧಂ ಇವುಗಳನ್ನು ಓದಿದವರೇ ಬಲ್ಲರು ಆ ರುಚಿಯ. ಕುವೆಂಪು ಅವರು ಬರೆದ ರಾಮಾಯಣ ದರ್ಶನಂ ಕೃತಿಯನ್ನು ಯಾರಾದರೂ ಮರೆಯಲು ಸಾಧ್ಯವೇ!?

ತಮಿಳುನಾಡಿನಲ್ಲಿ:- 12ನೇ ಶತಮಾನದಲ್ಲಿ ಕಂಬನ್ ಎಂಬ ಕವಿ ಬರೆದಿರುವ ಕಂಬ ರಾಮಾಯಣಂ ಜನಪ್ರಿಯವಾಗಿದೆ.

ಕೇರಳದಲ್ಲಿ:-  16ನೇ ಶತಮಾನದಲ್ಲಿ ತುಂಚಥ್ಥು ಎಳುತಚ್ಚನ್ ಮಲಯಾಳಂ ಭಾಷೆಯಲ್ಲಿ ಬರೆದಿರುವ ಆಧ್ಯಾತ್ಮ ರಾಮಾಯಣಂ ಕಿಳಿಪಾಟ್ಟು ಅಲ್ಲಿ ಪ್ರಸಿದ್ಧವಾಗಿದೆ. 

ನೇಪಾಳದಲ್ಲಿ:- 19ನೇ ಶತಮಾನದಲ್ಲಿ ಭಾನುಭಕ್ತ ಆಚಾರ್ಯ ನೇಪಾಳಿ ಭಾಷೆಯಲ್ಲಿ ಬರೆದಿರುವ ಕೃತಿ ಭಾನುಭಕ್ತ ರಾಮಾಯಣ್. ಮುಂದೆ 20ನೇ ಶತಮಾನದಲ್ಲಿ ಸಿಧ್ಧಿದಾಸ್ ಮಹಜು ಬರೆದಿರುವ ಸಿದ್ಧಿ ರಾಮಾಯಣ್  ಸಹ ಅಲ್ಲಿ ಲಭ್ಯವಿದೆ.


ಗೋವಾದಲ್ಲಿ:- 15ನೇ ಶತಮಾನದಲ್ಲಿ ಕರಡಾಳಿಪುರದಲ್ಲಿ ಕೃಷ್ಣದಾಸ ಶಮಾ ಕೊಂಕಣಿ ಭಾಷೆಯಲ್ಲಿ ಬರೆದಿರುವ ರಾಮಾಯಣು ಲಭ್ಯವಿದೆ. ಪೋರ್ತುಗಾಲದಲ್ಲಿ ಸಹ ಈ ಹಸ್ತ ಪ್ರತಿಗಳು ಲಭ್ಯವಿವೆ.

ಉರ್ದು ಭಾಷೆಯಲ್ಲಿ:- 17ನೇ ಶತಮಾನದಲ್ಲಿ ಬರೆಯಲಾಗಿರುವ ಕೃತಿಯ ಹೆಸರು ಪೋತಿ ರಾಮಾಯಣ. ಇತರ ಅವತರಣಿಕೆಗಳು ಭಾರತದಲ್ಲಿ:-ಚಂಪೂ ರಾಮಾಯಣ್ , ಆನಂದ ರಾಮಾಯಣ್ , ಮಂತ್ರ ರಾಮಾಯಣ್, ಶ್ರೀ ರಾಮಾಯಣ್  ಮಂಗೇರಿ, ಶ್ರೀ ರಂಗನಾಥ ರಾಮಾಯಣ್, ಭಾಸ್ಕರ್ ರಾಮಾಯಣ್, ಗುರುಗೋಬಿಂದ್ ಸಿಂಗ್ ಬರೆದಿರುವ ಗೋಬಿಂದ್ ರಾಮಾಯಣ್ ಹಾಗೂ ರಾಧೆ ಶಾಮ್ ರಾಮಾಯಣ್. ಭಾರತದ ಹೊರಗಿನ ದೇಶಗಳಲ್ಲಿ:- ಕಾಂಬೋಡಿಯಾದಲ್ಲಿ ರಿಯಾಮ್ ಕೇರ್; ಥೈಲ್ಯಾಂಡಿನಲ್ಲಿ ರಾಮಕೇನ್; ಬರ್ಮಾದಲ್ಲಿ (ಮೈನಮಾರ್):- ಯಾಮಾ ಝಾಟ್‌ಡಾವ್;  ಮಲೇ಼ಷಿಯಾದಲ್ಲಿ:- ಹಿಕಾಯತ್ ಸೇರೀ ರಾಮ: ಫಿಲಿಫೈನ್ಸ್ನಲ್ಲಿ ರಾಝಾ ಮಗಾಂದಿರಿ, ಎಂದು ಕರೆಯಲ್ಪಟ್ಟರೆ  ಟಿಬೆಟ್‌ನ ದುನ್‌ಹುವಾಂಗ್‌ನಲ್ಲಿ  ಅನೇಕ ಹಸ್ತ ಪ್ರತಿಗಳು ಲಭ್ಯವಿವೆ.


ಇಂಡೋನೇಶಿಯಾದಲ್ಲಿ ತಾರಿ ಕಚಕ್ ಎಂದು ಹೆಸರಾಗಿರುವ ಬಾಲಿಯ ಹಿಂದೂ ನೃತ್ಯ, ಸಂಗೀತ, ನಾಟಕ ರೂಪ 1930ರಲ್ಲಿ ಬಾಲಿಯಲ್ಲಿ ಅಭಿವೃದ್ಧಿಯಾಯಿತು. ಆರಂಭದಲ್ಲಿ ಇದು ಕೇವಲ ಪುರುಷರು ಪಾತ್ರವಹಿಸುವ ಚುಟುವಟಿಕೆಯಾಗಿತ್ತು. 2006ರಲ್ಲಿ ಮೊಟ್ಟ ಮೊದಲ ಮಹಿಳೆಯರ ಕಚಕ್ ತಂಡ ಆರಂಭವಾಯಿತು. ಇದು ರಾಮಾಯಣದ ಕಥೆಯನ್ನೂ ಆಧರಿಸಿದ್ದು, ಸಾಂಪ್ರದಾಯಿಕವಾಗಿ ಬಾಲಿಯ ದೇವಾಲಯಗಳು ಹಾಗೂ ಗ್ರಾಮಗಳಲ್ಲಿ ಪ್ರದರ್ಶಿಸಲ್ಪಡುತ್ತಿತ್ತು. ಇದಕ್ಕೆ ರಾಮಾಯಣದ ಕೋತಿ ಪಠಣ ಎಂದೂ ಹೆಸರಿದೆ. ಒಂದು ವರ್ತುಲದಲ್ಲಿ 150 ಕಲಾವಿದರು ಭಾಗವಹಿಸುವ ಕಲೆ ಇದು. ಇವರು ತಮ್ಮ ಸೊಂಟದ ಸುತ್ತ ಕೆರೆಗೆರೆಯ ಬಟ್ಟೆಗಳನ್ನು ಹಾಕಿಕೊಂಡು, ತಮ್ಮ ಕೈಗಳು ಹಾಗೂ ತೋಳುಗಳ ಚಲನೆ ಮಾಡುತ್ತಾ, ಚೆಕ್ ಚೆಕ್ ಎಂದು ಪಠಣ ಮಾಡುತ್ತಾರೆ. ಇದು ರಾಮಾಯಣದ ಯುದ್ಧದ ವರ್ಣನೆ ಮಾಡುತ್ತದೆ. ಇಲ್ಲಿ ಹನುಮಂತನ ನಾಯಕತ್ವದಲ್ಲಿ ವಾನರ ಕೋತಿಗಳು, ಕೆಟ್ಟ ರಾವಣನ ವಿರುದ್ಧದ ಯುದ್ಧದಲ್ಲಿ ರಾಜಕುಮಾರ ರಾಮನಿಗೆ ಸಹಾಯ ಮಾಡುತ್ತವೆ. ಕಚಕ್‌ನ ಬೇರುಗಳು ಭೂತೋಚ್ಛಾಟನೆ ಪ್ರೇರೇಪಿಸುವ ತೀಕ್ಷ್ಣ ನೃತ್ಯ ಸಂಘ್ಯಾಂಗ್‌ದಲ್ಲಿದೆ.


ಇತಿಹಾಸ:- ಮೂಲತಃ ಪುರುಷರ ಸಾಮೂಹಿಕ ಧ್ವನಿಯ ಕೂಗಿನ ಹಿನ್ನೆಲೆಯ ನೃತ್ಯ ಇದಾಗಿತ್ತು. 1930ರಲ್ಲಿ ವಾಲ್ಟರ್ ಸ್ಪೈಸ್ ಎಂಬ ಜರ್ಮನಿಯ ಚಿತ್ರಕಲಾವಿದ ಹಾಗೂ ಸಂಗೀತಗಾರ ಬಾಲಿಯಲ್ಲಿ ವಾಸಿಸುವಾಗ ಈ ಧಾರ್ಮಿಕ ರೂಢಿಯಲ್ಲಿ ಕುತೂಹಲ ತಾಳಿದ. ಈತ ಇದನ್ನು ಹಿಂದೂ ರಾಮಾಯಣ ಆಧರಿಸಿದ ನಾಟಕವನ್ನಾಗಿ ಪರಿವರ್ತಿಸಿದ. ಇದರಲ್ಲಿ ಪಾಶ್ಚಿಮಾತ್ಯ ಪ್ರವಾಸಿ ಪ್ರೇಕ್ಷಕರಿಗಾಗಿ ನೃತ್ಯ ಪ್ರದರ್ಶನವನ್ನು ಸೇರಿಸಿದ. ವಾಲ್ಟರ್ ಸ್ಪೈಸ್ ಇಂಡೋನೇಶಿಯನ್ ನೃತ್ಯಕಾರ ವಾಯನ್‌ಲಿಂಬಕ್ ಜೊತೆಗೆ ಸೇರಿ ಕೊಂಡು ಇದಕ್ಕಾಗಿ ಕೆಲಸ ಮಾಡಿದ. ಅಂತರ್‌ರಾಷ್ಟ್ರೀಯ  ಪ್ರವಾಸೀ ಪ್ರದರ್ಶನಗಳಿಗಾಗಿ ಬಾಲಿಯ ತಂಡಗಳಿಗೆ ನೃತ್ಯಗಳನ್ನು ಏರ್ಪಡಿಸಿ, ವಾಯನ್‌ಲಿಂಬಕ್ ಇವುಗಳನ್ನು ಜನಪ್ರಿಯಗೊಳಿಸಿದ್ದ. ಈ ಪ್ರವಾಸಗಳಿಂದ ಕಚಕ್ ಅಂತರ್‌ರಾಷ್ಟ್ರೀಯವಾಗಿ ಜನರ ಅರಿವಿಗೆ ಬಂತು.


ಉಳುವಾಟು ದೇವಸ್ಥಾನದಲ್ಲಿ ಕಚಕ್ ಪ್ರದರ್ಶನ ಉಳುವಾಟು ದೇವಾಲಯದ ಆವರಣದಲ್ಲಿರುವ, ವರ್ತುಲಾಕಾರದ ಬಯಲು ರಂಗಸ್ಥಳದಲ್ಲಿ, ಸೂರ್ಯಾಸ್ತದ ಸಮಯದಲ್ಲಿ, ಆರಂಭವಾಗುವ ಈ ಪ್ರದರ್ಶನ ಕತ್ತಲಾದ ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. ಇದಕ್ಕೆ ಬೆಂಕಿ ನೃತ್ಯ ಎಂದೂ ಕರೆಯುತ್ತಾರೆ. ಭಾರತೀಯ ರಾಮಾಯಣದಂತೆ, ಇಲ್ಲಿಯ ಕಚಕ್ ಪ್ರದರ್ಶನದ ಕಥೆ ಇರುವುದಿಲ್ಲ. ಇದರಲ್ಲಿ ರಾಮ, ಸೀತೆ, ರಾವಣ, ಹನುಮಂತ ಪಾತ್ರಗಳು ಬಂದರೂ, ಅವರು ಮಾಡುವ ನಾಟಕೀಯ ಸಂಭಾಷಣೆ ಕಡಿಮೆ. ಹೆಚ್ಚಾಗಿ ಮುಖ ಹಾಗೂ ಅಂದಾಭಿನಯದಲ್ಲಿ ನೃತ್ಯವಿರುತ್ತದೆ. ಮಧ್ಯ ಮಧ್ಯ ಪದೇ ಪದೇ ವರ್ತುಲಾಕಾರದಲ್ಲಿ ಕುಳಿತ ಪುರುಷ ಕಲಾವಿದರು ಕಚಕ್ ಕಚಕ್ ಎಂದು ಸಾಮೂಹಿಕವಾಗಿ ಕೂಗುತ್ತಿರುತ್ತಾರೆ. ಇಲ್ಲಿ ರಾಮನ ಸನ್ನಿಧಿಯಲ್ಲಿ ಹನುಮಂತ ರಾವಣನನ್ನು ಸೋಲಿಸಿ ಕೊಲ್ಲುತ್ತಾನೆ. ಆ ಸಂದರ್ಭದಲ್ಲಿ ಅಲ್ಲಿ ಹರಡಿದ ಬೆಂಕಿಯ ಜ್ವಾಲೆಯ ಹಿನ್ನೆಲೆಯಲ್ಲಿ, ಕೋತಿಗಣ ಹನುಮಂತನೊಂದಿಗೆ ಕುಣಿಯುತ್ತವೆ. 


ಅ. ಜಕಾರ್ತದ ಕೊಲೆಸೇ ಕನಿಸಿಯಸ್‌ನಲ್ಲಿ ಪ್ರದರ್ಶಿಸಲ್ಪಡುವ ಕಚಕ್:- ಜೇಮ್ಸ್ ಕ್ಲಿಫ್ಫರ್ಡ್ ವಿವರಿಸಿರುವಂತೆ "ಇದು ಆಧುನಿಕ ಕಲೆ ಹಾಗೂ ಸಂಸ್ಕೃತಿಗಳ ವ್ಯವಸ್ಥೆ. ಇದರಲ್ಲಿ ಕಲೆಯನ್ನು ಪಶ್ಚಿಮ ಅಥವಾ ಕೇಂದ್ರ ಅಧಿಕಾರವು ಪಶ್ಚಿಮೇತರ ಅಥವಾ ಬಾಹ್ಯ ಸಾಂಸ್ಕೃತಿಕ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ, ಪರಿವರ್ತಿಸುತ್ತದೆ ಹಾಗೂ ಬಳಸುತ್ತದೆ. ಒಂದಾನೊಂದು ಕಾಲದಲ್ಲಿ ಯಾವ ಸಂಸ್ಕೃತಿಯೂ ಪೂರ್ಣವಾಗಿತ್ತೋ ಅದನ್ನು ಬೇರೆಯೇ ಇನ್ನೊಂದು ಪೂರ್ಣ ಸಂಸ್ಕೃತಿ ಆಗಿತ್ತು". ಇದಕ್ಕೆ ವಿರುದ್ಧವಾಗಿ ಪ್ರದರ್ಶಕ, ನೃತ್ಯ ನಿರ್ದೇಶಕ ಹಾಗೂ ಪಂಡಿತನಾಗಿದ್ದ ವಯಾಬ್ ದಿಬಿಯಾ ಹೇಳುವಂತೆ "ಯಾವಾಗ ವಿದೇಶಿ ಗುಪ್ತಚಾರರು ಈ ದ್ವೀಪಕ್ಕೆ ಬಂದರೋ, ಆಗಾಗಲೇ ಬಾಲಿಯ ಜನರು ಈ ರೂಪವನ್ನು ಅಭಿವೃದ್ಧಿಪಡಿಸುತ್ತಿದ್ದರು. 1920ರಲ್ಲಿ ಲಿಂಬಕ್ ಬಾರೆಸ್ ಚಳುವಳಿಯನ್ನು ಕಚಕ್‌ನ ನಾಯಕ ಪಾತ್ರದಲ್ಲಿ ಸೇರಿಸಿದ್ದ. ಗುಪ್ತಚಾರರು ಈ ಸಂಶೋಧನೆಯನ್ನು ಇಷ್ಟಪಟ್ಟರು. ಮೊದಲು ಗೆಮೆಲಿಯನ್ ಪ್ರದರ್ಶನವಿದ್ದುದನ್ನು ರಾಮಾಯಣ ಆಧರಿಸಿದ ದೃಶ್ಯ ವೈಭವದಲ್ಲಿ ಕಚಕ್ ಅನ್ನು ಸಾಮೂಹಿಕ ಗಾಯನವನ್ನಾಗಿ ಈತ ಪರಿಚಯಿಸಿದ". 


ಬ. ಉಬುದ್‌ನಲ್ಲಿ ಪುರಾ ದಾಲೆಂ ದೇವಾಲಯದಲ್ಲಿಯ ಕಚಕ್:- ಸಾಮಾನ್ಯವಾಗಿ 50ರಿಂದ 100 ಪುರುಷರು ಸೊಂಟದ ಕೆಳಗೆ ಮಾತ್ರ ವಸ್ತ್ರ ಧರಿಸಿ ಕುಣಿಯುತ್ತಾರೆ. ವರ್ತುಲಾಕಾರಗಳಲ್ಲಿ ಇವರು ಅನೇಕ ವೃತ್ತಗಳಲ್ಲಿ ಕುಣಿಯುವಾಗ, ಅವರ ಮಧ್ಯದಲ್ಲಿ ತೆಂಗಿನ ಎಣ್ಣೆಯಿಂದ ಹಚ್ಚಿದ ದೀಪ ಉರಿಯುತ್ತಿರುತ್ತದೆ. ಇವರು ಲಯಬದ್ಧವಾಗಿ ತಮ್ಮ ದೇಹಗಳನ್ನು ಎಡಕ್ಕೆ ಹಾಗೂ ಬಲಕ್ಕೆ ತಿರುಗಿಸುತ್ತಾ "ಚಕ್ ಕೆ ಚಕ್-ಕಚಕ್ ಕಚಕ್ ಎಂದು ಸತತವಾಗಿ ಮೆಲ್ಲಗೆ ಲಯದಲ್ಲಿ ಹೇಳುತ್ತಿರುತ್ತಾರೆ. ಕ್ರಮೇಣ ಲಯದ ವೇಗ ಹೆಚ್ಚುತ್ತಾ ಹೆಚ್ಚುತ್ತಾ, ಅವರು ಗಾಳಿಯಲ್ಲಿ ತಮ್ಮ ಕೈಗಳನ್ನು ಮೇಲೆತ್ತಿ ನಡುಗಿಸುತ್ತಾರೆ. ಈ 'ಕೆಚಕ್' ಪಠಣ ಮಾಡುವ ಪುರುಷರು ರಾಮನ ವಾನರ ಗುಂಪಿನವರು ಹಾಗೂ ರಾಕ್ಷಸ-ರಾವಣನ ಗುಂಪಿನ ರಾಕ್ಷಸರು. ಸಾಮಾನ್ಯವಾಗಿ ಈ ಪ್ರದರ್ಶನ ಒಂದು ಗಂಟೆಯ ಅವಧಿಯದು. ಇಲ್ಲಿ ಸೀತಾ-ರಾಮರ ದಂಡಾಕಾರಣ್ಯದ ವನವಾಸದೊಂದಿಗೆ, ಕಥೆ ಆರಂಭವಾಗುತ್ತದೆ. ಬಂಗಾರದ ಜಿಂಕೆ ಬರುತ್ತದೆ. ರಾವಣ-ಸೀತೆಯನ್ನು ಅಪಹರಿಸುತ್ತಾನೆ. ರಾವಣ-ಜಟಾಯು ಯುದ್ಧವಾಗುತ್ತದೆ. ಹನುಮಂತನಿಂದ ಸೀತಾನ್ವೇಷಣೆಯಾಗುತ್ತದೆ. ರಾಮ-ರಾವಣರ ಮಧ್ಯೆ ಯುದ್ಧವಾಗುತ್ತದೆ. ಈ ನೃತ್ಯಗಾರರು ಸ್ಥಳೀಯ ಗ್ರಾಮೀಣ ಜನರು, ಇವರೆಲ್ಲ ಸುತ್ತಮುತ್ತಲೂ ವಾಸಿಸುವವರು. ಇವರಿಗೆಲ್ಲಾ ನೃತ್ಯ ಬಿಟ್ಟು ಬೇರೆಯೇ ಉದ್ಯೋಗವಿದೆ. ಸಂಜೆ 6ಕ್ಕೆ ಆರಂಭವಾಗುವ ಕಚಕ್ ನೃತ್ಯಕ್ಕೆ  ಮೊದಲು ತಮ್ಮ ದಿನನಿತ್ಯದ ಉದ್ಯೋಗವನ್ನು ಮಾಡಿ ಮುಗಿಸಿರುತ್ತಾರೆ. ಪ್ರೇಕ್ಷಕರಿಗೆ ಅಂದAದು ಮಾರಿದ ಟಿಕೆಟ್ ಹಣದ ಆದಾಯದಿಂದ ಈ ನೃತ್ಯಗಾರರಿಗೆ ಆದಾಯ ಸಿಗುತ್ತದೆ.


ಇಲ್ಲಿಯ ನೃತ್ಯಪಟುಗಳಲ್ಲಿ ಎರಡು ವಿಧಗಳಿವೆ. ಕಚಕ್ ಎಂಬ ಸಾಮೂಹಿಕ ಮಂತ್ರ ಘೋಷಣೆ ಮಾಡುವ ಪುರುಷ ಕಲಾವಿದರು ಹಾಗೂ ಸೀತ, ರಾಮ, ಲಕ್ಷ್ಮಣ, ರಾವಣ, ಹನುಮ, ಜಟಾಯು ಮುಂತಾದ ರಾಮಾಯಣ ನೃತ್ಯಪಟುಗಳು. ಇದರಲ್ಲಿ ಒಬ್ಬ ವ್ಯಕ್ತಿ ಪಠಣದ ಗತಿ ನಿಯಂತ್ರಿಸಲು ಆಗಾಗ 'ಪೋ...ಪೋ...ಪೋ...ಪೋ' ಎಂದು ಪಠಣ ಮಾಡುತ್ತಿರುತ್ತಾನೆ. ಇನ್ನೊಬ್ಬ ಸಮೂಹ ಗಾಯನದ ಮುಂದಾಳಾಗಿದ್ದು ಆತ ಸಾಮೂಹಿಕ ಪಠಣ ನಿಲ್ಲಿಸಲು, ಮತ್ತೆ ಆರಂಭಿಸಲು 'ಧೀ ಧೀ' ಹಾಗೂ 'ಛಿಯಾತ್' ಎಂಬ ಆದೇಶಗಳನ್ನು  ಧ್ವನಿಯ ಮೂಲಕ ಕೊಡುತ್ತಾನೆ. ಅಲ್ಲಿ ಇರುವ ಇನ್ನೊಬ್ಬ ಪುರುಷ ಪಠಣದ ಜೊತೆಗೆ ಮಧುರವಾದ, ಲಯಬದ್ಧವಾದ ಸ್ವರದಲ್ಲಿ ಹಾಡುತ್ತಾನೆ. ನೃತ್ಯದ ಸಂದರ್ಭಕ್ಕೆ ಅನುಗುಣವಾಗಿ ಗಾಯನದ ಮೂಲಕ "ಶೀ...ರ್-ಯಾಂಗ್-ನ್ಗಗೆರ್-ಯಾಂಗ್-ನ್ಗಗೀರ್" ಎನ್ನುತ್ತಿರುತ್ತಾನೆ. ಇದರ ಮಧ್ಯದಲ್ಲಿ ದಲಾಂಗ್ ಎನ್ನುವ ಇನ್ನೊಬ್ಬ ವ್ಯಕ್ತಿ, ಬಾಲಿನೀಸ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಕಥೆಯನ್ನು ಹೇಳುತ್ತಿರುತ್ತಾನೆ. ಈ ಕರ್ತವ್ಯಗಳಿಗೆ ಸಾಮಾನ್ಯವಾಗಿ ಹಿರಿಯ ಪುರುಷ ನೃತ್ಯಪಟುಗಳನ್ನು ಆರಿಸಿರುತ್ತಾನೆ. ಉಳಿದ ಪಠಣಕಾರರು "ಚಕ್-ಚಕ್-ಚಕ್" ಎಂದು ಸತತವಾಗಿ ಒಂದೇ ಸ್ವರದಲ್ಲಿ ಸಾಮರಸ್ಯದಿಂದ ಹೇಳುತ್ತಿರುತ್ತಾರೆ. ಇವುಗಳಲ್ಲಿ ರಾಮ, ಸೀತ, ಲಕ್ಷ್ಮಣ ಹಾಗೂ ಬಂಗಾರದ ಜಿಂಕೆ ಪಾತ್ರಗಳ ಚಲನವಲನವು ಸೌಮ್ಯ ಹಾಗೂ ಮೃಧುವಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ ಇಂಥ ಚಲನಾ ಶೈಲಿಗಳಲ್ಲಿ ತರಬೇತಿ ಹೊಂದಿದ ಮಹಿಳೆಯರು ಈ ಪಾತ್ರಗಳನ್ನು ಮಾಡುತ್ತಾರೆ. ಪುರುಷರು, ಪೌರುಷದ ಪಾತ್ರಗಳಾದ ರಾವಣ, ಹನುಮಾನ್, ಸುಗ್ರೀವ ಮುಂತಾದ ಪಾತ್ರಗಳನ್ನು ಮಾಡುತ್ತಾರೆ. ಕಚಕ್ ಪ್ರದರ್ಶನದ ಕೆಲವು ಹಂತಗಳಲ್ಲಿ ಕೆಲವು ಆಚರಣೆಗಳು ನಡೆಯುತ್ತವೆ. ಉದಾ:- ಹನುಮಂತ ಬೆಂಕಿ ಹಚ್ಚುವ ಸಂದರ್ಭದಲ್ಲಿ, ಹನುಮಂತನ ಪಾತ್ರದ ಕಲಾವಿದನನ್ನು ಒಬ್ಬ ಪೂಜಾರಿ, ಆಶೀರ್ವಧಿಸುತ್ತಾನೆ. ಆಗ ಆ ಪಾತ್ರಧಾರಿ ತೀಕ್ಷ್ಣ ರೂಪಕ್ಕೆ ಹೋಗಿ ನಂತರ ಬೆಂಕಿ ಒದೆಯುವ ನೃತ್ಯ ಆರಂಭವಾಗುತ್ತದೆ. ಈ ನೃತ್ಯಪಟು ಆ ಭಕ್ತಿಯ ಆವೇಶದಲ್ಲಿ ಇರುವುದರಿಂದ, ಬೆಂಕಿಯಿAದ ಆತನಿಗೆ ಯಾವ ನೋವು ಅಥವಾ ಅಪಾಯ ಉಂಟಾಗುವುದಿಲ್ಲ.


ಈ ಭುವಿಯ ಮೇಲಿರುವ ರಾಮಾಯಣದ ಸ್ಥಳಗಳು :

ಆಸ್ತಿಕರಿಗೆ. ನಂಬಿದವರಿಗೆ ರಾಮಾಯಣ-ಮಹಾಭಾರತ-ಭಾಗವತ ನಡೆದ ಘಟನೆಗಳು. ನಂಬದಿದ್ದವರಿಗೆ ಇವು ಮಹಾಕಾವ್ಯಗಳು. ಆದರೆ, ಹುಡುಕಿ ಸ್ಥಳಗಳನ್ನು ನೋಡಿ ಬಂದವರಿಗೆ ನಮ್ಮ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ರಾಮಾಯಣದಲ್ಲಿ ಬರುವ ಅಥವಾ ರಾಮಾಯಣ ನಡೆದ ಸ್ಥಳಗಳನ್ನು ಹೋಲುವ ಸ್ಥಳಗಳಿವೆ. 


ಕರ್ನಾಟಕದಲ್ಲಿ- ಕಿಷ್ಕಿಂದೆ:- ವಿಜಯನಗರ ಸಾಮ್ರಾಜ್ಯದ ಹಂಪೆಯಿಂದ 5 ಕಿ.ಮಿ ಇರುವ ಆನೆಗುಂದಿ, ತುಂಗಾಭದ್ರಾ ನದಿಯ ಬಲದಂಡೆಯ ಮೇಲಿದ್ದು ಇದೇ ರಾಮಾಯಣ ಕಾಲದ ಕಿಷ್ಕಿಂದೆ. ಇಲ್ಲಿಯೇ ಶ್ರೀರಾಮ ಲಕ್ಷö್ಮಣರನ್ನು ಮೊದಲು ಹನುಮಂತ ಕಂಡದ್ದು, ಕಿಷ್ಕಿಂದೆ ಆಳುತ್ತಿದ್ದವ ಸುಗ್ರೀವ. ಆತನ ಅಣ್ಣ ವಾಲಿಯೊಂದಿಗೆ ನಡೆದ ಜಗಳದಲ್ಲಿ ವಾಲಿ ಸುಗ್ರೀವನನ್ನು ಅಲ್ಲಿಂದ ಓಡಿಸಿದ. ಸುಗ್ರೀವ ಮತಂಗ ಪರ್ವತಕ್ಕೆ ಹೋದ. ರಾವಣ ಸೀತೆಯನ್ನು ಅಪಹರಿಸಿದಾಗ, ರಾಮಲಕ್ಷö್ಮಣರು ದಕ್ಷಿಣಕ್ಕೆ ಬಂದು ಸುಗ್ರೀವ ಹನುಮಂತರನ್ನು ಕಂಡರು. ರಾಮ ಮಾಲ್ಯವಂತ ಬೆಟ್ಟದ ಮೇಲೆ ಆಗ ವಾಸಿಸಿದ . ಇದು ಈಗ ಕಂಪ್ಲಿಗೆ ಹೋಗುವ ದಾರಿಯಲ್ಲಿ, ಹಂಪಿಯ ವಿರೂಪಾಕ್ಷ ದೇವಾಲಯದಿಂದ ಪೂರ್ವಕ್ಕೆ 6 ಕಿ.ಮಿ ದೂರದಲ್ಲಿದೆ. ಇಲ್ಲಿರುವ ರಂಗನಾಥನ ದೇವಾಲಯzಲ್ಲಿ ಸ್ರೀರಾಮನ ದೊಡ್ಡ ಮೂರ್ತಿಯಿದೆ. ಹಂಪಿಯ ವಿರೂಪಾಕ್ಷ ಹಾಗೂ ವಿಠ್ಠಲ ದೇವಾಲಯಗಳ ನಡುವೆ, ತುಂಗಭದ್ರಾ ನದಿಯ ದಡದ ಮೇಲೆ ಸುಗ್ರೀವನ ಗುಹೆಯಿದೆ. ಇಲ್ಲಿ ಸುಗ್ರೀವ ಆಕಾಶದಿಂದ ಬಿದ್ದ ಸೀತೆಯ ಆಭರಣಗಳನ್ನು ರಕ್ಷಿಸಿ ಇಟ್ಟಿದ್ದನಂತೆ. ಆ ಗುರುತುಗಳು ಇಲ್ಲಿಯ ಬಂಡೆಗಳ ಮೇಲಿವೆ. ಬಳಿಯ ಅಂಬಾಪುರ ಗ್ರಾಮದಲ್ಲಿ ರಾಶಿ ರಾಶಿ ಬೂದಿಯಿದ್ದು ಇದು ಶ್ರೀರಾಮ ವಧಿಸಿದ ವಾಲಿಯ ಅಂತ್ಯಕ್ರಿಯೆಯ ನಂತರ ಅಲ್ಲಿ ಉಳಿದ ಬೂದಿಯಂತೆ. 15ನೇ ಶತಮಾನದ ಹಜಾರಿ ರಾಮ ದೇವಾಲಯ ಶ್ರೀರಾಮನಿಗೆ ಮುಡುಪಾಗಿಟ್ಟ ದೇವಾಲಯ. ಕೋದಂಡರಾಮ ದೇವಾಲಯದಲ್ಲಿ ಸೀತೆ ರಾಮ ಲಕ್ಷ್ಮಣರ ಮೂರ್ತಿಗಳು ಸ್ನಾನಘಟ್ಟದ ಎದುರಿಗಿವೆ.  ಸುಗ್ರೀವಗೆ ಕಪಿರಾಜ್ಯದ ರಾಜನೆಂದು ರಾಮ ಕಿರೀಟಧಾರಣೆ ಮಾಡಿಸಿದ್ದ ಸ್ಥಳ ಇದಂತೆ. ಹಂಪಿ:-ಇಲ್ಲಿಯ ಅಂಜನಾದ್ರಿ ಬೆಟ್ಟದಲ್ಲೇ ಹನುಮಂತ ಜನಿಸಿದ್ದು. ರಿಷಿಮುಖ ನಡುಗಡ್ಡೆಯಲ್ಲಿ ಹನುಮಂತ ರಾಮಲಕ್ಷ್ಮಣದ ಜೊತೆ ಓಡಾಡಿದ್ದು. ಕೋದಂಡರಾಮನ ದೇವಾಲಯದ ಬಳಿ ಸೀತೆಯ ಸೆರಗನ್ನು ಬಂಡೆಯ ಮೇಲೆ ಕಾಣುತ್ತೀರಿ. ಚಿಂತಾಮಣಿ ದೇವಾಲಯವೇ ಸುಗ್ರೀವನ ಗವಿ.ಇಲ್ಲಿಯೇ ಸುಗ್ರೀವನನ್ನು ರಾಮಲಕ್ಷ್ಮಣರು ಕಂಡದ್ದು. ರಾಮಲಕ್ಷ್ಮಣರು ಮಳೆಗಾಲದಲ್ಲಿ ತಂಗಿದ್ದ ಸ್ಥಳವೇ ಮಾಲ್ಯವಂತ ರಘುನಾಥ ದೇವಾಲಯ.


ತಮಿಳುನಾಡಿನ ರಾಮೇಶ್ವರಂ:- ರಾಮೇಶ್ವರದಲ್ಲಿ ರಾಮಾಯಣದ ಅನೇಕ ಸ್ಥಳಗಳಿವೆ. ಸೇತುವೆಬಳಿ ರಾಮೇಶ್ವರ ಪ್ರವೇಶಿಸುವಾಗ, ಒಂದು ದೇವಾಲಯವಿದೆ. ಇಲ್ಲಿ ಒಳಗಡೆ ತೇಲುವ ಬಂಡೆಯಿದೆ. ಕಪಿಸೈನ್ಯದೊಂದಿಗೆ ಲಂಕೆಗೆ ಹೋಗುವಾಗ, ಸಮುದ್ರ ದಾಟಲು ಇಲ್ಲಿ ಸೇತುವೆ ಕಟ್ಟಲಾಯಿತಂತೆ. ಈ ದೇವಾಲಯದ ಬಳಿ ಲಕ್ಷ್ಮಣತೀರ್ಥ. ರಾಮತೀರ್ಥಗಳಿವೆ. ಇಲ್ಲಿ ರಾಮಲಕ್ಷ್ಮಣರು ಸ್ನಾನ ಮಾಡಿದರಂತೆ.  ಶ್ರೀರಾಮ  ತನ್ನ ಬಾಣಹೊಡೆದು ನೆಲದಲ್ಲಿ ಚಿಮ್ಮಿಸಿದ ಚಿಲುಮೆಯೇ ಕೋಡಿ ತೀರ್ಥ. ಲಂಕೆಯ ಯುದ್ಧದಲ್ಲಿ ತನಗೆ ಬಂದಿರಬಹುದಾದ ಪಾಪ £ವಾರಿಸಿಕೊಳ್ಳಲು ರಾಮ ತನ್ನ ತಲೆ ಕೂದಲು ತೊಳೆದ ಸ್ಥಳವೇ ಜಟಾ ತೀರ್ಥ.


ಆಂಧ್ರಪ್ರದೇಶ ರಾಜ್ಯದ ಲೇಪಾಕ್ಷಿ:- ಪುಷ್ಪಕವಿಮಾನದಲ್ಲಿ ರಾವಣ ಸೀತೆಯನ್ನು ಅಪಹರಿಸಿ ಒಯ್ಯುವಾಗ, ಅವನನ್ನು ತಡೆಯಲು ಹೋರಾಡಿದ ಜಟಾಯುವಿನ ರೆಕ್ಕೆ ಕತ್ತರಿಸಲ್ಪಟ್ಟು ಜಟಾಯು ಬಿದ್ದ ಸ್ಥಳ ಇದೇ ಎಂದು ಇಲ್ಲಿಯವರು ಹೇಳುತ್ತಾರೆ.


ಮಹಾರಾಷ್ಟ ರಾಜ್ಯದಲ್ಲಿ- ನಾಸಿಕ್:-  ಇದೇ ಅಂದಿನ ಪಂಚವಟಿ. ಗೋದಾವರಿ ನದಿ ದಡದ ಮೇಲಿರುವ ನಾಸಿಕ್‌ಗೆ ಮುಂಬೈಯಿAದ 5 ಗಂಟೆ ಪ್ರಯಾಣ. ವನವಾಸದ ಸಂದರ್ಭದಲ್ಲಿ ಶ್ರೀರಾಮ ಇಲ್ಲಿ ನೆಲಸಿದ್ದನಂತೆ. ಇಲ್ಲಿಂದಲೇ ರಾವಣ ಸೀತೆಯನ್ನು ಅಪಹರಿಸಿದ್ದು. ಲಕ್ಷö್ಮಣ ರಾವಣನ ತಂಗಿ ಶೂರ್ಪನಖಿಯ ಮೂಗು ಕೊಯ್ದದ್ದು ಇಲ್ಲೇ. ಇದರಿಂದಲೇ ಈ ಸ್ಥಳಕ್ಕೆ ನಾಸಿಕ್ ಎಂಬ ಹೆಸರು ಬಂದಿದೆ. ಇಲ್ಲಿ 12 ವರ್ಷಗಳಿಗೆ ಒಮ್ಮೆ ಕುಂಭಮೇಳ ನಡೆಯುತ್ತದೆ. ಇಲ್ಲಿಯ ರಾಮಕುಂಡ ನಾಸಿಕದ ಮುಖ್ಯ ತೀರ್ಥಯಾತ್ರಾ ಸ್ಥಳ. ಇಲ್ಲಿ ರಾಮ, ಸೀತೆ ಸ್ನಾನ ಮಾಡಿದ ಸ್ಥಳವಂತೆ. ಇದಕ್ಕೆ ಅಸ್ತಿವಿಲಯ ತೀರ್ಥ ಎನ್ನುತ್ತಾರೆ. ರಾಮ ತನ್ನ ತಂದೆ ದಶರಥನ ನೆನಪಿನಲ್ಲಿ  ಇಲ್ಲಿ ಅಂತ್ಯಕ್ರಿಯೆ ಮಾಡಿದ್ದನಂತೆ. ಇಲ್ಲಿರುವ ಕಾಲಾರಾಮ ಮಂದಿರ, ಸೀತಾಗುಹೆ, ಕಪಾಲೇಶ್ವರ ಮಂದಿರ ಆ ಪರಂಪರೆಯದು.


ಚಿತ್ರಕೂಟ:-  14 ವರ್ಷಗಳ ತಮ್ಮ ವನವಾಸದ ಅವಧಿಯಲ್ಲಿ ರಾಮ ಸೀತೆಯರು 11 ವರ್ಷ ಇದ್ದರಂತೆ. ಚಿತ್ರಕೂಟವು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳ ಗಡಿಯ ಬಳಿ, ಲಖ್ನೋದ ದಕ್ಷಿಣಕ್ಕಿದೆ. ಇದು ಅಲಹಾಬಾದದಿಂದ ದಕ್ಷಿಣಕ್ಕೆ 132 ಕಿ.ಮಿ ಅಂತರದಲ್ಲಿದೆ. ಭರತ ಚಿತ್ರಕೂಟಕ್ಕೆ ಬಂದು ಅಯೋಧ್ಯೆಗೆ ಹಿಂದಿರುಗು ಎಂದು ರಾಮನನ್ನು ಬೇಡಿಕೊಂಡರೂ, ರಾಮ ತನ್ನ ತಂದೆಯ ಆಜ್ಞೆ ಮೀರಲಾರೆ ಎಂದು ಭರತಗೆ ತನ್ನ ಪಾದುಕೆ ಕೊಟ್ಟು ಕಳಿಸಿದ.ಇಲ್ಲಿ ರಾಮನಿದ್ದ ಬೆಟ್ಟವೇ ಕಾಮದ್ ಗಿರಿ.

ಪ್ರಯಾಗ:- ಉತ್ತರಪ್ರೇಶ ರಾಜ್ಯದ ಅಲಹಾಬಾದ್ ಬಳಿ ಪ್ರಯಾಗವಿದೆ. ವನವಾಸಕ್ಕೆ ಹೊರಟಾಗ ಶ್ರೀರಾಮ ಸೀತೆಯರು ಇಲ್ಲಿ ಮೊದಲಬಾರಿ ವಿಶ್ರಾಂತಿ ಪಡೆದರಂತೆ.

ನೇಪಾಳ:- ಸೀತೆ ಜನಕರಾಜನ ಮಗಳಾಗಿ ಇದ್ದ ಮಿಥಿಲೆ ಅಥವಾ ಜನಕಪುರ ಈಗ ನೇಪಾಳದಲ್ಲಿ ಹಾಗೂ ಭಾರತದೇಶದ ಬಿಹಾರದ ಸ್ವಲ್ಪ ಭಾಗದಲ್ಲಿದೆ.


ಶ್ರೀಲಂಕಾದಲ್ಲಿ:- ಚಿಲಾವ್ ಬಳಿಯಿದೆ ಮುನ್ನೇಶ್ವರಂ ದೇವಾಲಯ. ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಶ್ರೀರಾಮ ಇಲ್ಲಿಯೇ ಶಿವನ್ನು ಪ್ರಾರ್ಥಿಸಿದ್ದು, ಈ ದೋಷ ಪರಿಹಾರಕ್ಕಾಗಿ ಶಿವ ರಾಮನಿಗೆ ನಾಲ್ಕು ಶಿವಲಿಂಗಗಳನ್ನು ಸ್ಥಾಪಿಸಿ ಪೂಜಿಸಲು ಹೇಳಿದ. ಅವೇ ಮನಾವರಿ, ತಿರುಕೋನೇಶ್ವರಂ, ತಿರುಕೇಥೇಶ್ವರಂ ಹಾಗೂ ರಾಮೇಶ್ವರಂ. ಚಿಲಾವ್‌ದಿಂದ 10 ಕಿ.ಮಿ ದೂರದಲ್ಲಿ ಮನಾವರಿ ಇದೆ. ಇದೇ ರಾಮ ಸ್ಥಾಪಿಸಿದ ಮೊದಲ ಶಿವಲಿಂಗ. ಶ್ರೀರಾಮನ ಜನನ ಕ್ರಿ.ಶ.ಪೂ. 5114ರಲ್ಲಿ ಎಂದು ತಜ್ಞರು ಹೇಳುತ್ತಾರೆ. ಅಂತೆಯೇ ಈ ಶಿವಲಿಂಗ 7000 ವರ್ಷ ಹಳೆಯದು.


ತಲೈಮನಾರ್:- ತಲೈಮನ್ನಾರ ಕಡಲ ತೀರ ಶ್ರೀರಾಮ ಲಂಕೆಗೆ ಹೋಗಲು ಮೊದಲ ಬಾರಿ ತನ್ನ ಪಾದ ಊರಿದ ಸ್ಥಳವಂತೆ. ಈ ತುದಿಯಿಂದ ವಾನರ ವಾಸ್ತುಶಿಲ್ಪಿ ನಳ ಕಲ್ಲುಗಳ ಮೇಲೆ ರಾಮನ ಹೆಸರು ಬರೆದು ಅವುಗಳನ್ನು  ನೀರಿನಲ್ಲಿ ಹಾಕಿ ರಾಮಸೇತು ಕಟ್ಟಿಸಿದ. ಈ ತೇಲುವ ಕಲ್ಲುಗಳನ್ನು ಈಗಲೂ ರಾಮೇಶ್ವರದ ಪಂಚಮುಖಿ ಹನುಮಂತನ ದೇವಾಲಯದಲ್ಲಿ ಕಾಣಬಹುದು. ಶ್ರೀಲಂಕಾ ನೌಕಾದಳ ಕೊಡುವ ದೋಣಿಯಾನದಲ್ಲಿ, ಕಡಿಮೆ ಆಳದ, ಕಡಿಮೆ ನೀರಿರುವ ಕೆಲವು ಸ್ಥಳಗಳಲ್ಲಿ ಈ ರಾಮ ಸೇತುವೆಯ ಅವಶೇಷಗಳನ್ನು ಕಾಣಬಹುದಂತೆ.


ಮನ್ನಾರದ ತಿರುಕೇಥೀಶ್ವರಂ:- ಮನ್ನಾರದಿಂದ 10ಕಿ.ಮಿ ದೂರದಲ್ಲಿದೆ ಇದು. ರಾಮ ಸ್ಥಾಪಿಸಿದ ಲಿಂಗಕ್ಕೆ ದೇವಾಲಯ ಕಟ್ಟಿಸಿದವ ರಾವಣನ ಮಾವ ಮಯ. ಇದನ್ನು ಪೋರ್ಚುಗೀಜರು ಹಾಳು ಮಾಡಿದರು. 1900ರಲ್ಲಿ ಇದರ ಪುನಃಸ್ಥಾಪನೆಯಾಯಿತು.


ಅಶೋಕವಾಟಿಕಾ (ಅಶೋಕ ವನ) :- ಹಿಂದೆ ಇದು ರಾವಣನ ಲಂಕೆಯ ಉದ್ಯಾನವಾಗಿದ್ದು, ಇಲ್ಲಿಯ ಅಶೋಕ ಮರದ ಕೆಳಗೇ ರಾವಣನ ಬಂಧಿಯಾಗಿದ್ದಳು ಸೀತೆ. ಈಗ ಇದು ಹಕ್‌ಗಲಾ ಸಸ್ಯ ಉದ್ಯಾನವಾಗಿದೆ. ಇಲ್ಲಿ ಸೀತಾ ಎಲಿಯಾ ಹಳ್ಳಿಯಲ್ಲಿ ಸೀತಾ ಅಮ್ಮನ್ ದೇವಸ್ಥಾನವಿದೆ. ಇಲ್ಲಿಯೇ ಸೀತೆಯನ್ನು ರಾವಣ ಇರಿಸಿದ್ದ.


ಉಸ್ಸನ್ ಗೋಡಾ:- ಹಿಂದೆ ರಾವಣ ತನ್ನ ಪುಷ್ಪಕ ವಿಮಾನವನ್ನು ಇಡಲು ಬಳಸುತ್ತಿದ್ದ ಸ್ಥಳ ಇದು. ಹನುಮಂತ ಲಂಕೆಯನ್ನು ಸುಟ್ಟಾಗ ಇದೂ ಸುಟ್ಟು ಹೋಯಿತಂತೆ.


ದಿವರುಂ ಪೋಲಾ:- ಸೀತಾ ಎಲಿಯಾದಿಂದ ಇದು 15 ಕಿ.ಮಿ ದೂರದಲ್ಲಿದೆ. ಇಲ್ಲಿಯೇ ಸೀತೆಯ ಅಗ್ನಿಪರೀಕ್ವೆ ನಡೆದದ್ದು.

ರಾಮ್ ಬೋಡಾ:- ಕ್ಯಾಂಡಿಯಿಂದ 50 ಕಿ.ಮಿ ದೂರದಲ್ಲಿರುವ ರಾಮ್ ಬೋಡಾದಲ್ಲಿ ಬೆಟ್ಟದ ಮೇಲಿರುವ ಭಕ್ತ ಹನುಮಾನ್ ದೇವಾಲಯ ಎದುರಿಗಿರುವ ಸರೋವರ ನೋಡುತ್ತಿದೆ. ಇಲ್ಲಿಯೇ ಹನುಮಂತ ಸೀತಾದೇವಿಯನ್ನು ಹುಡುಕಿದನಂತೆ. ಈಗ ಇದನ್ನು ಚಿನ್ಮಯ ಮಿಷನ್ ಆಧುನಿಕ ಕಾಲದಲ್ಲಿ ಸ್ಥಾಪಿಸಿದೆ. ಸೀತಾದೇವಿಯ ಕಣ್ಣುಗಳಿಂದ ಉರುಳಿದ ಕಣ್ಣೀರು, ಸೀತಾ ಕಣ್ಣೀರಿನ ಕೊಳ ಹತ್ತಿರದಲ್ಲಿದೆ. ರಾಮ ಬೋಡಾ ಬೆಟ್ಟದ ಕೆಳಗಿನ ಕೊಳದ ಎರಡೂ ಪಕ್ಕ ಹಿಂದೆ ರಾಮ ರಾವಣರ ಸೈನ್ಯ ವಿತಿದ್ದವಂತೆ.


ಕೊನ್ನೇಶ್ವರಂ:- ತ್ರಿನ್‌ಕೋಮಾಲಿ ಪಟ್ಟಣದಲ್ಲಿ ಅಗಸ್ತ ಋಷಿ ಕಟ್ಟಿದ ದಕ್ಷಿಣ ಕೈಲಾಸವಿದೆ. ಶ್ರೀರಾಮ ಪೂಜೆ ಮಾಡಿದ ಸ್ಥಳವಿದು. ರಾವಣನ ತಾಯಿ ಲಿಂಗಪೂಜೆ ಮಾಡಲು ಬಯಸಿದಾಗ, ರಾವಣ ಶಿವಲಿಂಗ ಬಯಸಿ ಈ ದಕ್ಷಿಣ ಕೈಲಾಸದಲ್ಲಿ ತಪಸ್ಸು ಮಾಡಿದನಂತೆ. ಶಿವ ಒಲಿಯದಿದ್ದಾಗ ಕೈಲಾಸ ಪರ್ವತ ಎತ್ತಲು ಹೋಗಿ, ಸೋತು, ಸಿಟ್ಟಿನಿಂದ ತನ್ನ ಕತ್ತಿಯಿಂದ ಪರ್ವತದ ಒಂದು ಭಾಗ ಕೆತ್ತಿದ. ಸಿಟ್ಟಿಗೆದ್ದ ಈಶ್ವರ. ಆತನ ಕೋಪ ದೂರಮಾಡಲು ರಾವಣ ತನ್ನ ತಲೆ, ಭುಜಗಳನ್ನು ವೀಣೆ ಮಾಡಿ, ತನ್ನ ಕರುಳುಗಳನ್ನೇ ತಂತಿಗಳನ್ನಾಗಿ ಮಾಡಿ ವೀಣೆ ನುಡಿಸಿ ಹಾಡಿದ. ಆಗ ಈಶ್ವರನ ಕೋಪ ದೂರವಾಯಿತಂತೆ.ಚೋಳರಾಜರ ಆಶ್ರಯದಲ್ಲಿ ದೊಡ್ಡ ಗೋಪುರವಿದ್ದ ಈ ದೇವಾಲಯದಲ್ಲಿ ರಾಮಾಯಣ ಹಾಗೂ ಮಹಾಭಾರತದ ಕೆತ್ತನೆಗಳಿದ್ದವು. ಇದನ್ನ ಪೋರ್ಚುಗೀಜರು ಕ್ರಿ.ಶ 1622ರಲ್ಲಿ ಹಾಳು ಮಾಡಿದರು. ಆಗ ನೆಲದಲ್ಲಿ ಹೂತು ಹೋಗಿದ್ದ ಶಿವ ಪಾರ್ವತಿ ಗಣೇಶರ ಮೂರ್ತಿಗಳು ಮುಂದೆ ಸಿಕ್ಕ ಮೇಲೆ ಈ ದೇವಾಲಯದ ಪುನಃಸ್ಥಾಪನೆಯಾಯತು. ರಾವಣ ಸ್ಥಾಪಿಸಿದ್ದ ಸ್ವಯಂಭು ಲಿಂಗವನ್ನು, 1956ರಲ್ಲಿ ಹೆಸರಿನಲ್ಲಿ ಜಿಗಿದ ಅರ್ಥರ್ ಕ್ಲಾರ್ಕ್ ಮತ್ತೆ  ಕಂಡು ಹಿಡಿದನಂತೆ. 

ಸಿಗಿರಿಯಾ (ಸಿಂಹಬಂಡೆ):- ಈ ಕೋಬ್ರಾ ಹುಡ್ ಗವಿ ವಿಶ್ವ ಪರಂಪರಾ ಸ್ಥಳ. ಡಾಮ್ ಬುಲ್ಲಾ ಪಟ್ಟಣದಿಂದ 5ಕಿ.ಮಿ ದೂರದಲ್ಲಿದೆ. ಎಲ್ಲಿ ತಾನು ಅಪಹರಿಸಿದ ಸೀತೆ ಬೇರೆಯವರಿಗೆ ಪತ್ತೆಯಾಗುವಳೇ ಎಂಬ ಅಂಜಿಕೆಯಿಂದ, ರಾವಣ ಸೀತೆಯನ್ನು ಅನೇಕ ಸ್ಥಳಗಳಲ್ಲಿ ಬzಲಾಯಿಸಿ ಬದಲಾಯಿಸಿ ಮುಚ್ಚಿಡುತ್ತಿದ್ದನಂತೆ.  ಇಸ್ತಿಪುರ, ಸೀತಾ ಪೋಕುಣ, ಉಸನ್ ಗೋಡಾ, ಸೀತಾ ಕೋಟುವಾ ಹಾಗೂ ಅಶೋಕ ವಾಟಿಕಾಗಳೇ ಅ ಸ್ಥಳಗಳು.

* * *


- ಉಮಾ ರಮೇಶ್

ಮಾಜಿ ನಿರ್ದೇಶಕರು, ಟಿ.ಒ.ಟಿ. ಟರ‍್ಸ್ ಪ್ರೈ. ಲಿಮಿಟೆಡ್

ಹಾಗೂ ಪ್ರವಾಸ ಸಲಹೆಗಾರರು

# 2210, ಮೊದಲ ಅಂತಸ್ತು, ಪಚ್ಚೆ ರಸ್ತೆ 4ನೇ ಕ್ರಾಸ್, 

ಕುವೆಂಪುನಗರ `ಕೆ' ಬ್ಲಾಕ್, ಮೈಸೂರು-570 023. ಮೊ.ನಂ. 9342124555


ಉಮಾ ರಮೇಶ್ ಅವರ ಕಿರುಪರಿಚಯ 

66 ವರ್ಷಗಳ ಉಮಾ ರಮೇಶ್ ಬಿ.ಎಸ್ಸಿ. ಪದವೀಧರೆ. ಪ್ರವಾಸಿ ಕ್ಷೇತ್ರದ ತರಬೇತಿ ಪಡೆದು, ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಟಿ.ಓ.ಟಿ.ಟೂರ್ಸ್‌  ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ದೇಶೀಯ ಹಾಗೂ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಕೊಡುವುದು, ಪ್ರವಾಸಿಗರಿಗೆ ಪಾಸ್ ಪೋರ್ಟ್, ವೀಸಾ, ವಿದೇಶಿ ವಿನಿಮಯ ಕೊಡಿಸುವುದು. ವಿಮಾನಯಾನ ಟಿಕೆಟ್‌ಗಳನ್ನು ಹಾಗೂ ವಿವಿಧ ಪ್ಯಾಕೇಜುಗಳನ್ನು ಮಾಡಿಕೊಡುವ ಕೆಲಸ ಮಾಡಿದರು. ಈಗ ಗೃಹಿಣಿಯಾಗಿ ಪತಿಯ ಸಂಸ್ಥೆಗಳಲ್ಲಿ ಹೆಗಲು ಕೊಟ್ಟು ನಿಂತಿದ್ದಾರೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
To Top