ಮುಕ್ತಕ
ರಾಮನನು ನುತಿಸಿದರೆ ನರಜನ್ಮ ಪಾವನವು
ಸಾಮಗಾನದ ಭಜನೆ ಪುಣ್ಯಭಾಜನವು |
ಸೋಮಶೇಖರ ತನ್ನ ಮನದನ್ನೆ ಪಾರ್ವತಿಗೆ
ರಾಮಮಂತ್ರವನೊರೆದ - ಪುಟ್ಟಕಂದ ||
(ಕಂದನ ಮುತ್ತು.- ಕುಳಮರ್ವ)
ನಾರದ-ವಾಲ್ಮೀಕೀ ಸಂವಾದ:
ಒಮ್ಮೆ ನಾರದ ಮಹರ್ಷಿಗಳು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಚಿತ್ತೈಸಿದ್ದರು. ಅವರನ್ನು ಯಥೋಚಿತವಾಗಿ ಸತ್ಕರಿಸಿದ ವಾಲ್ಮೀಕಿಯು ಒಂದು ಜಿಜ್ಞಾಸೆಯನ್ನು ಮುಂದಿಟ್ಟರು. "ಮಹರ್ಷಿಗಳೇ, ಸಕಲ ಸದ್ಗುಣ ಸಂಪನ್ನ, ಮಹಾಪರಾಕ್ರಮಿ, ಧರ್ಮಜ್ಞ, ಸತ್ಯವ್ರತ, ಸಂಕಲ್ಪ ಧುರಂಧರ, ಸದಾಚಾರವಂತ, ಸರ್ವ ಶಾಸ್ತ್ರ ಪಂಡಿತ, ಕಾರ್ಯಶೀಲ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜೈಸಿದವನು, ನಿರಹಂಕಾರಿ, ಅಸೂಯಾರಹಿತ, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲುವವನು- ಇಂತಹ ಗುಣಗಳಿಂದ ಕೂಡಿ ಸಮಸ್ತ ಜನರ ಪ್ರೀತಿಗೌರವಗಳಿಗೆ ಪಾತ್ರನಾಗಿ, ಅಜಾತಶತ್ರುವೂ ಆಗಿರುವವನು ಇಡಿಯ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ" ಎಂದು ಪ್ರಶ್ನಿಸಿದರು.
ಆಗ ನಾರದರು "ಎಲೈ ವಾಲ್ಮೀಕಿಯೇ, ನೀನು ಅಪೇಕ್ಷಿಸಿದ ಸಕಲಗುಣ ಸಂಪನ್ನನಾದವನು ಸಮಸ್ತಲೋಕಗಳಲ್ಲಿ ಹುಡುಕಿದರೂ ಕೇವಲ ಒಬ್ಬ ಮಾತ್ರನಿದ್ದಾನೆ! ಅವನೇ ಅಯೋಧ್ಯೆಯ ಚಕ್ರವರ್ತಿ ದಶರಥ-ಕೌಸಲ್ಯೆಯರ ಸುಪುತ್ರ ಮರ್ಯಾದಾ ಪುರುಷೋತ್ತಮನಾದ ಭಗವಾನ್ ಶ್ರೀ ರಾಮಚಂದ್ರ" ಎಂದರು. ಆಗ ವಾಲ್ಮೀಕಿಗೆ ಶ್ರೀರಾಮನ ದಿವ್ಯಕಥೆಯನ್ನು ಆಲಿಸುವ ಕುತೂಹಲ ಉಂಟಾಗಲು ನಾರದರು ಎಲ್ಲ ವಿಚಾರಗಳನ್ನೂ ಸೂಕ್ಷ್ಮವಾಗಿ ತಿಳಿಸಿದರು.
ರಾಮಾಯಣದ ಮೂಲ:
ಸೂರ್ಯದೇವನು ದೈನಂದಿನ ಕಾರ್ಯಗಳನ್ನು ಮುಗಿಸಿ ಅಸ್ತಮಿಸಲು ಪಡುಗಡಲಿಗೆ ಸರಿಯುತ್ತಿದ್ದಂತೆಯೇ ಸಂಜೆಯಾಗುತ್ತಿರುವುದನ್ನರಿತ ವಾಲ್ಮೀಕಿಯು ಸ್ನಾನಮಾಡಲೆಂದು ಮಂಜುಳ ನಿನಾದದಿಂದ ಹರಿಯುತ್ತಿರುವ ತಮಸಾ ನದಿಯೆಡೆಗೆ ಹೋದನು. ಸ್ನಾನಮಾಡಲೆಂದು ನೀರಿಗಿಳಿಯುತ್ತಿದ್ದಂತೆಯೇ ದುರಂತ ಘಟನೆಯೊಂದು ಆತನ ಕಣ್ಣೆದುರಿನಲ್ಲಿಯೇ ನಡೆದುಹೋಯಿತು! ಅಲ್ಲಿಯೇ ಮರದ ಮೇಲೆ ಸಲ್ಲಾಪದಲ್ಲಿದ್ದ ಕ್ರೌಂಚಪಕ್ಷಿಗಳ ಜೋಡಿಯೊಂದಕ್ಕೆ ಬೇಡನೊಬ್ಬ ಬಾಣ ಬಿಟ್ಟನು. ಬಾಣಾಘಾತದಿಂದ ಗಂಡುಹಕ್ಕಿಯು ವಿಲವಿಲನೆ ಒದ್ದಾಡಿ ಸತ್ತೇಹೋಯಿತು. ಹೆಣ್ಣುಹಕ್ಕಿಯ ದುಃಖ ವರ್ಣಿಸಲಸಾಧ್ಯ! ಈ ಹೃದಯವಿದ್ರಾವಕ ದೃಶ್ಯವನ್ನು ನೋಡಿದ ವಾಲ್ಮೀಕಿಯ ಹೃದಯದಲ್ಲಿ ಕರುಣೆಯುಕ್ಕಿ ಹರಿಯಿತು! ತನಗೆ ಅರಿವಿಲ್ಲದಂತೆಯೇ ವಾಲ್ಮೀಕಿಯ ಬಾಯಿಯಿಂದ ಶ್ಲೋಕರೂಪದ ಮಾತೊಂದು ಹೊರಟಿತು--
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶ್ಶಾಶ್ವತೀಸ್ಸಮಾಃ
ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ ||
ತನ್ನ ಮುಖದಿಂದ ಹೊರಟ ಈ ಛಂದೋಬದ್ಧ ಶ್ಲೋಕವೇ ಶಾಪರೂಪದ್ದಾಯಿತೆಂದು ಪಶ್ಚಾತ್ತಾಪದಿಂದ ದುಃಖಿಸತೊಡಗಿದ ವಾಲ್ಮೀಕಿಯನ್ನು ಸಂತೈಸಲು ಸಾಕ್ಷಾತ್ ಬ್ರಹ್ಮದೇವನೇ ಬರಬೇಕಾಯಿತು. "ಎಲೈ ವಾಲ್ಮೀಕಿಯೆ, ನೀನು ನಾರದನಿಂದ ಉಪದೇಶಿತವಾದ ಕಥೆಯನ್ನು ಇದೇ ಛಂದಸ್ಸಿನಲ್ಲಿ ಪೂರ್ಣವಾಗಿ ರಚಿಸು. ಆ ಮಹಾಕಾವ್ಯವೇ ಪ್ರಪಂಚದ ಆದಿಕಾವ್ಯವೆಂಬ ಬಿರುದಿನೊಂದಿಗೆ ಆಚಂದ್ರಾರ್ಕತಾರಂಬರವಾಗಿ ಸಮಸ್ತಲೋಕಗಳಲ್ಲೂ ಪೂಜಿಸಲ್ಪಡುವುದು" ಎಂದು ಆತನನ್ನು ಸಮಾಧಾನ ಪಡಿಸಿದನು.
ಆ ಪ್ರಕಾರ ವಾಲ್ಮೀಕಿಯು ಕರುಣಾರಸವೇ ಉಕ್ಕಿಹರಿಯುವ 24,000 (ಇಪ್ಪತ್ನಾಲ್ಕು ಸಾವಿರ) ಶ್ಲೋಕಗಳುಳ್ಳ ಶ್ರೀಮದ್ರಾಮಾಯಣ ಮಹಾಕಾವ್ಯವನ್ನು ರಚಿಸಿ ಅದನ್ನು ಸೀತಾರಾಮಚಂದ್ರರ ಅವಳಿ ಪುತ್ರರತ್ನರಾದ ಕುಶಲವರಿಗೆ ಬೋಧಿಸಿದನು. ಆ ಮಕ್ಕಳು ರಾಮಾಯಣವನ್ನು ಶ್ರೀರಾಮನ ಆಸ್ಥಾನದಲ್ಲಿಯೇ ಬಹು ಮನೋಜ್ಞವಾಗಿ ಸುಶ್ರಾವ್ಯವಾಗಿ ಹಾಡಿದರು.
ಮುಕ್ತಕ
ದೇವನೆಂದರೆ ರಾಮ, ಲೋಕಹಿತ ಕಾರಕನು
ಭಾವನೆಯ ಸಾಮ್ರಾಜ್ಯಪತಿ ಸಾರ್ವಭೌಮ |
ನೋವಪರಿಹರಿಸುತಲವನು ಕಾಯುತಿರುವಾಗ
ಸಾವಿನಲು ಸಾಯುಜ್ಯ - ಪುಟ್ಟಕಂದ ||
(ಕಂದನ ಮತ್ತು - ಕುಳಮರ್ವ)
ಪುಣ್ಯಪ್ರದವಾದ ರಾಮಾಯಣ ಮಹಾಕಾವ್ಯವು ಪ್ರಪಂಚದ ಎಲ್ಲ ಭಾಷೆಗಳಿಗೂ ಅತ್ಯುತ್ತಮ ರೀತಿಯಲ್ಲಿ ವಿವಿಧ ಛಂದಸ್ಸುಗಳಲ್ಲಿ ಭಾಷಾಂತರಗೊಂಡು ಜನಪ್ರಿಯತೆಯ ಮುಂಚೂಣಿಯಲ್ಲಿ ನಿಂತಿದೆ. ಈ ಭಕ್ತಿಕಾವ್ಯ ಪ್ರಪಂಚದ ಯಾವುದೇ ವೇದೋಪನಿಷತ್ತುಗಳಿಗೂ ಕಡಿಮೆಯಲ್ಲ.
ಕೇರಳದಲ್ಲಿ ರಾಮಾಯಣ ಮಾಸಾಚರಣೆ
ಭಾರತದಾದ್ಯಂತ ಅತ್ಯಂತ ಜನಪ್ರಿಯವಾಗಿ ಪುಣ್ಯಪ್ರದವಾದ ರಾಮಾಯಣವು ವಿದೇಶಗಳಲ್ಲಿಯೂ ಗೌರವದ ಸ್ಥಾನವನ್ನು ಹೊಂದಿದೆ. ರಾಮಾಯಣವಿಲ್ಲದ ಭಾಷೆಯಿಲ್ಲ; ರಾಮಾಯಣವಿಲ್ಲದ ರಾಜ್ಯವಿಲ್ಲ. ಭಾರತದ ದಕ್ಷಿಣತುದಿಯ ಕರಾವಳಿಯುದ್ದಕ್ಕೂ ವ್ಯಾಪಿಸಿಕೊಂಡಿರುವ ಪರಶುರಾಮ ಸೃಷ್ಟಿಯ ಕೇರಳದಲ್ಲಿ ರಾಮಾಯಣ ಮಹಾಕಾವ್ಯಕ್ಕೆ ವಿಶಿಷ್ಟವಾದ ಪಾರಾಯಣ ಹಾಗೂ ಮಹಾಪೂಜೆಯ ಗೌರವವಿದೆ.
ಮಲಯಾಳ ಕ್ಯಾಲೆಂಡರಿನ ಕರ್ಕಿಡಕಂ ಎಂಬ ಮಾಸವು ರಾಮಾಯಣ ಮಾಸವೆಂದೇ ಪ್ರಸಿದ್ಧವಾಗಿದೆ. ಇದಕ್ಕೆ ಸೌರಮಾನ ಪ್ರಕಾರದಲ್ಲಿ ಕರ್ಕಟಕ ಮಾಸ ಎಂದು ಹೆಸರು. ತುಳುವಿನಲ್ಲಿ 'ಆಟಿ ತಿಂಗೊಳು' ಎನ್ನುತ್ತಾರೆ. ಆಟಿ ತಿಂಗಳಿನಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟ.ಕೃಷಿಕೆಲಸಗಳನ್ನು ನಿರ್ವಹಿಸಲೂ ಕಷ್ಟ. ಹಲವು ರೋಗರುಜಿನಗಳ ಬಾಧೆಯೂ ಈ ಮಾಸದಲ್ಲಿ ಕಂಡುಬರುತ್ತದೆ.
ಪರಿಹಾರೋಪಾಯ:
'ಆಟಿಕಳಂಜ' ಎಂಬ ದೈವ ಮನೆಮನೆಗೂ ಭೇಟಿನೀಡಿ ಕುಣಿದು ಮಾರಿಕಳೆದು ಎಲ್ಲ ರೀತಿಯಲ್ಲಿಯೂ ಶುಭವನ್ನು ಹಾರಯಿಸಿ ಕಾಣಿಕೆಯನ್ನು ಸ್ವೀಕರಿಸುವ ಪದ್ಧತಿಯಿದೆ. ರೋಗರುಜಿಗಳ ಕಾಟದಿಂದ ಜನಜಾನುವಾರುಗಳನ್ನು ರಕ್ಷಿಸುವ ಸಾಮರ್ಥ್ಯ ಆಟಿಕಳಂಜನಿಗೆ ಇದೆಯೆಂಬುದು ತುಳುನಾಡು ಮತ್ತು ಕೇರಳದ ಜನರ ನಂಬಿಕೆ.
ಇನ್ನೂ ಹಲವು ಪ್ರಮುಖವಾದ ಆಚರಣೆಗಳಲ್ಲಿ ರಾಮಾಯಣ ಮಾಸಾಚರಣೆ ಪ್ರಮುಖವಾದುದು. ಮಲಯಾಳ ಭಾಷೆಯ ಪಿತಾಮಹನೆಂದೇ ಪ್ರಸಿದ್ಧನಾದ ತುಂಜತ್ತ್ ಎಳುತ್ತಚ್ಚನ್ ಎಂಬ ಕವಿ ಬರೆದ ಅಧ್ಯಾತ್ಮ ರಾಮಾಯಣದ ಕಿಳಿಪ್ಪಾಟ್ಟು ಎಂಬ ಮಲಯಾಳ ಆವೃತ್ತಿ ತಿಂಗಳು ಪೂರ್ತಿ ಪಾರಾಯಣ ಮಾಡಲ್ಪಡುತ್ತದೆ.
ಆಚರಣೆಯ ಕ್ರಮ:
ಕೇರಳದ ಸಾಂಪ್ರದಾಯಿಕ ದೀಪ 'ನೀಲವಿಳಕ್ಕು'. ಅದನ್ನು ಮುಸ್ಸಂಜೆಯ ಸಮಯದಲ್ಲಿ ಮನೆಗಳಲ್ಲಿ ಬೆಳಗಿ ಜನರು ಅಧ್ಯಾತ್ಮ ರಾಮಾಯಣವನ್ನು ಭಕ್ತಿಯಿಂದ ಪಠಿಸುತ್ತಾರೆ. ಪ್ರತಿದಿನವೂ ಆಯ್ದ ಭಾಗವನ್ನು ಓದುತ್ತಾ ಬಂದು ಕೊನೆಯದಿನ ಮುಕ್ತಾಯಗೊಳಿಸು ವುದು ಪದ್ಧತಿ. ಆದಿನ ಕೆಲವೆಡೆ ರಾಮಾಯಣ ಗ್ರಂಥಕ್ಕೆ ವಿಶೇಷ ಪೂಜೆ ಹಾಗೂ ಮಂಗಳಾರತಿಯನ್ನೂ ಮಾಡುವ ಸಂಪ್ರದಾಯವಿದೆ.
ಮಳೆಗಾಲದಲ್ಲಿ ಭತ್ತದಗದ್ದೆಗಳು ಜಲಾವೃತಗೊಂಡು ಯಾವುದೇ ಧಾನ್ಯಗಳನ್ನು ಬೆಳೆಯಲಾರದ ದಿನಗಳಲ್ಲಿ ಪ್ರಕೃತಿಯ ಕೋಪವನ್ನು ತಣಿಸಲು ಜನರು ರಾಮಾಯಣವನ್ನು ಪಾರಾಯಣ ಮಾಡಲು ತೊಡಗಿದ್ದರು. ಈ ತಿಂಗಳಲ್ಲಿ ಯಾವುದೇ ಹೊಸ ಉದ್ಯಮಗಳನ್ನು ತೊಡಗುವಂತಿಲ್ಲ. ಮದುವೆ ಮೊದಲಾದ ಶುಭಕಾರ್ಯಗಳನ್ನು ಮಾಡುವಂತಿಲ್ಲ. ಎಲ್ಲ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಓಡಿಸುವುದೇ ಈ ಆಚರಣೆಗಳ ಉದ್ದೇಶ.
ಕರ್ಕಟಕ ಮಾಸದ ಒಂದರಂದು ಬೆಳಗ್ಗೆ ಬೇಗನೆ ಎದ್ದು ನಿತ್ಯವಿಧಿಗಳನ್ನು ಪೂರಯಿಸಿ ಸಮೀಪದ ದೇವಸ್ಥಾನಕ್ಕೆ ಭೇಟಿ ನೀಡುವುದು ಸಂಪ್ರದಾಯ. ಅನಂತರ ಅಷ್ಟಮಾಂಗಲ್ಯ ತಯಾರಿಸಿ ದೀಪವನ್ನು ಹಚ್ಚಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿ ಪುಸ್ತಕವನ್ನು ಮುಟ್ಟಿ ನಮಸ್ಕರಿಸಿ ಗೌರವಿಸಿ ಭಕ್ತಿಯಿಂದ ಓದಲು ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಪಶ್ಚಿಮ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತು ಓದಬಹುದು. ಇತರ ಸಮಯಗಳಲ್ಲಿ ಉತ್ತರಕ್ಕೆ ಮಾತ್ರ ಮುಖಮಾಡಿ ಓದಬೇಕು. ಇಂತಿಷ್ಟೇ ಪುಟಗಳನ್ನು ಓದಬೇಕೆಂಬ ನಿಯಮವೇನೂ ಇಲ್ಲ. ಆದರೆ ಯುದ್ಧದ ಸಂದರ್ಭ, ನಾಯಕನ ಮರಣದ ಸಂದರ್ಭವೇ ಮೊದಲಾದ ನಕಾರಾತ್ಮಕ ಭಾವನೆಗಳು ಎದುರಾದಾಗ ಓದುವಿಕೆಯನ್ನು ನಿಲ್ಲಿಸಬಾರದು. ಪ್ರತಿದಿನವೂ ಓದನ್ನು ಮುಕ್ತಾಯಗೊಳಿಸುವ ಮೊದಲು ಎರಡು ಶುಭ ಸಾಲುಗಳನ್ನು ಓದಬೇಕು. ಮನೆಯ ಎಲ್ಲ ಸದಸ್ಯರೂ ಓದಬಹುದು. ಶ್ರೀರಾಮನ ಜನನದಿಂದ ತೊಡಗಿ ಪಟ್ಟಾಭಿಷೇಕದ ವರೆಗಿನ ಅಧ್ಯಾಯಗಳನ್ನು ಮಾತ್ರ ಓದಬೇಕು. ಬಾಲಕಾಂಡದಲ್ಲಿ 'ಶ್ರೀರಾಮ ರಾಮ---' ಎಂದು ಪ್ರಾರಂಭವಾಗುವ ಹದಿನಾಲ್ಕು ಸಾಲುಗಳನ್ನು ಆರಂಭದಲ್ಲಿ ಓದಬೇಕು. ತಿಂಗಳಲ್ಲಿ ಒಂದು ದಿನವಾದರೂ ಅನ್ನದಾನವನ್ನೂ ಕೂಡ ಮಾಡುವುದು ಪುಣ್ಯದ ಕೆಲಸ.
ಮಲಯಾಳ ಪಂಚಾಂಗದ ತಿಂಗಳಾದ ಕರ್ಕಿಡಕಂ ಮಳೆಗಾಲದ ತಿಂಗಳುಗಳಾದ ಜೂನ್- ಜುಲೈ ತಿಂಗಳುಗಳಲ್ಲಿ ಬರುತ್ತದೆ. ಕೇರಳೀಯರು ಇದನ್ನು 'ಪಂಜ ಕರ್ಕಿಡಕಂ' ಎನ್ನುತ್ತಾರೆ. 'ಪಂಜಂ' ಎಂದರೆ ಬರಗಾಲ ಎಂದರ್ಥ. ಕರ್ಕಿಡಕ ಮಾಸದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರಿಗೆ ಕೃಷಿಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯವಾಗುತ್ತಿತ್ತು. ಆದುದರಿಂದ ಅವರು ಈ ಸಮಯವನ್ನು ರಾಮಾಯಣ ಗ್ರಂಥವನ್ನು ಪಾರಾಯಣ ಮಾಡುವುದಕ್ಕೆ ಬಳಸಿಕೊಳ್ಳುತ್ತಾರೆ. ಇಡಿಯ ತಿಂಗಳಲ್ಲಿ ಅಜ್ಜ, ಅಜ್ಜಿ ಮೊದಲಾದ ಹಿರಿಯರು ಮಕ್ಕಳಿಗೆ ರಾಮಾಯಣದ ಕಥೆಗಳನ್ನು ಹೇಳುವುದು ಪರಿಪಾಠವಾಯಿತು.
ಎಲ್ಲ ಹಿಂದೂ ಕುಟುಂಬಗಳಲ್ಲಿಯೂ ಈ ಆಚರಣೆ ಒಂದು ವ್ರತದಂತೆ ನಡೆಯುತ್ತಿತ್ತು. 2024ರಲ್ಲಿ ರಾಮಾಯಣ ಮಾಸವು ಜುಲೈ 16 ರಿಂದ ಮೊದಲ್ಗೊಂಡು ಆಗಸ್ಟ್ 16 ರ ವರೆಗೆ ಮುಂದುವರಿಯುವುದು. ಮನೆಗಳಲ್ಲಿ ಮಾತ್ರವಲ್ಲದೆ ದೇವಾಲಯಗಳಲ್ಲಿ, ಭಜನಾಮಂದಿರಗಳಲ್ಲಿ ಕೂಡಾ ರಾಮಾಯಣ ಮಾಸಾಚರಣೆ ನಡೆದುಬರುತ್ತದೆ.
ರಾಮಾಯಣ ಮಾಸದಲ್ಲಿ ಭಗವಾನ್ ಶ್ರೀರಾಮ ಮತ್ತು ಆತನ ಸಹೋದರರಿಗೆ ಸಮರ್ಪಿತವಾದ ನಾಲ್ಕು ದೇವಾಲಯಗಳಿಗೆ ತೀರ್ಥಯಾತ್ರೆ ಕೈಗೊಳ್ಳಲಾಗುತ್ತಿದೆ. ಇದನ್ನು 'ನಾಲಂಬಲ ದರ್ಶನಂ' ಎಂದು ಕರೆಯುತ್ತಾರೆ. ಕರ್ಕಿಡಕ ಮಾಸದಲ್ಲಿ ಬರುವ ಅಮಾವಾಸ್ಯೆಗೆ ಪ್ರತ್ಯೇಕ ವೈಶಿಷ್ಟ್ಯವಿದೆ. ಕುಟುಂಬದಲ್ಲಿ ತೀರಿಹೋದ ಹಿರಿಯರಿಗೆ ನದಿ ಅಥವಾ ಸಮುದ್ರತೀರದಲ್ಲಿ ಆದಿನ ವಿಶೇಷವಾಗಿ ಪಿಂಡಪ್ರದಾನ ಮಾಡಿ ಗೌರವಿಸುವ ಪದ್ಧತಿಯೂ ಕೇರಳದಲ್ಲಿದೆ.
ಗಮಕ ಶ್ರಾವಣ:
ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟ ಕಾಸರಗೋಡಿನ ಕನ್ನಡಿಗರೂ ಇತ್ತೀಚೆಗಿನ ಹಲವು ವರ್ಷಗಳಿಂದ ಅವರವರ ಮನೆಗಳಲ್ಲಿಯೋ ದೇವಾಲಯಗಳಲ್ಲಿಯೋ ಯಥಾಶಕ್ತಿ ರಾಮಾಯಣ ಪಾರಾಯಣವನ್ನು ಬಹಳ ಭಕ್ತಿಯಿಂದ ಮಾಡುತ್ತಾರೆ. ಹಿಂದುಗಳು ನಡೆಸುವ ಹಲವು ಖಾಸಗೀ ಶಾಲೆಗಳಲ್ಲಿಯೂ ಆಟಿ ತಿಂಗಳಲ್ಲಿ ರಾಮಾಯಣ ವಾಚನ ಹಾಗೂ ರಾಮಾಯಣದ ಕಥೆಯನ್ನು ಹೇಳುವ ಸಂಪ್ರದಾಯವಿದೆ.
ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕರ್ಕಟಕ ಮಾಸದ ಕೊನೆಯಲ್ಲಿ ಬರುವ ಶ್ರಾವಣ ಮಾಸದಲ್ಲಿ ಕಾಸರಗೋಡಿನ ವಿವಿಧ ದೇವಾಲಯ, ಮಠ, ಶಾಲೆ, ಮನೆ, ಆಶ್ರಮಗಳೇ ಮೊದಲಾದ ಕೇಂದ್ರಗಳಲ್ಲಿ ರಾಮಾಯಣ ಮಾಸಾಚರಣೆ ಯನ್ನು 'ಗಮಕ ಶ್ರಾವಣ' ಎಂಬ ಹೆಸರಿನಲ್ಲಿ ನಾವು ಆಚರಿಸಿಕೊಂಡು ಬರುತ್ತೇವೆ. ನಿಗದಿಪಡಿಸಿದ ದಿನಗಳಲ್ಲಿ ಯಾವುದೇ ರಾಮಾಯಣ ಗ್ರಂಥದ ಆಯ್ದಭಾಗವನ್ನು ವಾಚನ ಹಾಗೂ ವ್ಯಾಖ್ಯಾನಗಳನ್ನು ಮಾಡುತ್ತಿರುವ ಪದ್ಧತಿ ಕಳೆದ 15 ವರ್ಷಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ನಾವೇ ಹುಟ್ಟುಹಾಕಿದ್ದೇವೆ. ಕನ್ನಡ ಮಾತ್ರವಲ್ಲದೆ ಸಂಸ್ಕೃತ, ತುಳು, ಮಲಯಾಳ ಭಾಷೆಗಳ ರಾಮಾಯಣಗಳ ಆಯ್ದ ಭಾಗವನ್ನೂ ಇಲ್ಲಿ ಬಳಸಿಕೊಳ್ಳುತ್ತಿರುವುದಕ್ಕೆ ಅವಕಾಶವನ್ನೂ ನೀಡುತ್ತೇವೆ.
ಸೀತಾರಾಮಚಂದ್ರರ ಅವಳಿ ಮಕ್ಕಳಾದ ಕುಶಲವರು ಆದಿ ಗಮಕಿಗಳೆಂದು ಪ್ರತೀತಿಯಿದೆ. ಅವರು ಜನಿಸಿದುದು ಶ್ರಾವಣ ಮಾಸದಲ್ಲಿ. ಆ ದಿವ್ಯ ಸ್ಮರಣೆಗಾಗಿ ಶ್ರಾವಣದಲ್ಲಿಯೂ ರಾಮಾಯಣದಿಂದಾಯ್ದ ಭಾಗದ ವಾಚನ ವ್ಯಾಖ್ಯಾನವನ್ನು ನಾವು ನಡೆಸಿಕೊಂಡು ಬರುತ್ತೇವೆ.
ಮಲಯಾಳದ ರಾಮಾಯಣ ಮಾಸಾಚರಣೆಯು ಕೇರಳದಾದ್ಯಂತ ಕರ್ಕಿಡಕ ಮಾಸದಲ್ಲಿ ಆಚರಿಸಲ್ಪಡುತ್ತದೆ. ಆದರೆ 'ಗಮಕ ಶ್ರಾವಣ' ಎಂಬ ರಾಮಾಯಣ ಮಾಸಾಚರಣೆ ಶ್ರಾವಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಜರಗುವುದು.
ಶ್ರೀ ಗಣಪತಿ ಹೋಮ, ವಿವಿಧ ರೀತಿಯಲ್ಲಿ ಶ್ರೀ ಭಗವತಿ ಸೇವೆ, ಭಜನೆಗಳಿಗೂ ವಿಶೇಷ ಪ್ರಾಶಸ್ತ್ಯವಿದೆ. ಗುಟ್ಟದೀಪದಲ್ಲಿ ಸುತ್ತಲೂ ಐದು ಕಡೆಗಳಲ್ಲಿ ಬತ್ತಿಗಳನ್ನಿರಿಸಿ ಶಾಸ್ತ್ರೋಕ್ತವಾಗಿ ಉರಿಸುವ ದೀಪಕ್ಕೆ ಮಹತ್ವವಿದೆ. ಇತ್ತೀಚೆಗಿನ ದಿನಗಳಲ್ಲಿ ಕೆಲವೆಡೆಗಳಲ್ಲಿ ರಾಮಾಯಣ ಮಾಸಾಚರಣೆ ಯಲ್ಲಿ ಸ್ವಲ್ಪ ನಿಷ್ಠೆ ಕುಂಠಿತವಾಗುತ್ತಿರುವುದೂ ಕಂಡುಬರುತ್ತದೆ. ಹಾಗಾಗದಂತೆ ಶ್ರೀ ಸೀತಾರಾಮಚಂದ್ರ ದೇವರು ಎಲ್ಲರಿಗೂ ಸದ್ಬುದ್ಧಿಯನ್ನು ಕರುಣಿಸಲಿ.
ಮುಕ್ತಕ
ಶ್ರೀರಾಮನೇ ನಮಗೆ ಆರಾಧ್ಯ ಭಗವಂತ
ನಾರಾಯಣನೆ ಅವನು ಅವತಾರ ಮೂರ್ತಿ |
ಸೂರ್ಯಕುಲ ತಿಲಕನವ ದೇವ ಪುರುಷೋತ್ತಮನು
ಕಾರ್ಯಸಾಧಕ ವಿಷ್ಣು - ಪುಟ್ಟಕಂದ ||
(ಕಂದನ ಮುತ್ತು - ಕುಳಮರ್ವ)
-ವಿ.ಬಿ. ಕುಳಮರ್ವ, ಕುಂಬ್ಳೆ
'ಶ್ರೀನಿಧಿ' ನಾರಾಯಣ ಮಂಗಲ,
ಕುಂಬಳೆ-ಬದಿಯಡ್ಕ ರಸ್ತೆ,
ಕುಂಬಳೆ
ಮೊಬೈಲ್: 94464 84585
ಲೇಖಕರ ಕಿರು ಪರಿಚಯ:
ಶ್ರೀಯುತ ವಿ.ಬಿ ಕುಳಮರ್ವ ಅವರು ನಿವೃತ್ತ ಅಧ್ಯಾಪಕರು, ಸಾಹಿತಿ, ಶಿಕ್ಷಣ ತಜ್ಞರು. ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪದ ನಿವಾಸಿ. ಸುಮಾರು 10 ಸಾವಿರ ಶಬ್ಗಗಳಿಗೂ ಮಿಕ್ಕಿದ ಪದಗಳಿರುವ ಹವಿ-ಸವಿ-ಕೋಶ ನಿಘಂಟು ಸಹಿತ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವಾರು ಸಾಹಿತ್ಯ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ಭಾಗಿಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



