-ಶಾಂತಾ ನಾಗಮಂಗಲ, ಬೆಂಗಳೂರು
ಅಯೋಧ್ಯಾ ನಗರೀ ಎಂದರೆ “ಯೋದ್ಧುಮ್ ಅಶಕ್ಯಾ” ಅಂದರೆ ಯಾರಿಂದಲೂ ಜಯಿಸಲಸಾಧ್ಯವಾದ ನಗರೀ ಎಂದು ಅದರ ಶಾಬ್ದಿಕ ಅರ್ಥ. ಅಯೋಧ್ಯಾ ಮೋಕ್ಷವನ್ನು ಕೊಡುವ ಏಳು ನಗರಗಳಲ್ಲಿ ಒಂದು ಎಂಬುದು ನಮ್ಮ ಭಾರತೀಯರ ಶ್ರದ್ಧೆ. ಅದರಲ್ಲೂ ಅಯೋಧ್ಯೆಯನ್ನು ಮಹಾಪುರೀ ಎಂದು ಕರೆಯಲಾಗುತ್ತದೆ. ಇಷ್ಟೆಲ್ಲಾ ಮಹತ್ವವನ್ನು ಇಂದೂ ಉಳಿಸಿಕೊಂಡಿರುವ ಈ ಅಯೋಧ್ಯೆ ರಾಮಾಯಣದಲ್ಲಿ ಹೇಗೆ ವರ್ಣಿತವಾಗಿದೆ? ರಾಮಾಯಣದ ಒಳಪುಟಗಳಲ್ಲಿ ಅದನ್ನು ಅನ್ವೇಷಿಸೋಣ.
ವಾಲ್ಮೀಕಿ ಮಹರ್ಷಿಗಳ ರಾಮಾಯಣ ಕಾವ್ಯ ಆರಂಭವಾಗುವುದು ಅಯೋಧ್ಯೆಯ ವರ್ಣನೆಯೊಂದಿಗೆ. 23 ಶ್ಲೋಕಗಳಲ್ಲಿ ಅಯೋಧ್ಯಾ ನಗರವು ವರ್ಣಿಸಲ್ಪಟ್ಟಿದೆ. ಇಂದಿನ ಯಾವುದೇ ಮುಂದುವರೆದ ರಾಷ್ಟ್ರದ, ಸುಸಮೃದ್ದ, ಸುವ್ಯವಸ್ಥಿತವಾದ ನಗರಕ್ಕೆ ಸಡ್ಡುಹೊಡೆಯುವಂತಿತ್ತು ದಶರಥಪಾಲಿತವಾದ ಪುರಾತನ ಅಯೋಧ್ಯೆ. ಇದು ಅತ್ಯಂತ ಪುರಾತನ ಏಕೆಂದರೆ ಸ್ವತಃ ಮನು ಚಕ್ರವರ್ತಿಯಿಂದ ನಿರ್ಮತವಾದ್ದು ಇದು. ಮನುವಿನಿಂದಲೇ ಆರಂಭಿಸಿ ಇಕ್ಷ್ವಾಕುವಂಶದ ಮಹಾರಾಜರೆಲ್ಲರೂ ಬಾಳಿಕೊಂಡು ಬರುತ್ತಿದ್ದ ಅಪೂರ್ವವಾದ ನಗರ ಇದು ಎನ್ನುತ್ತದೆ ವಾಲ್ಮೀಕಿ ರಾಮಾಯಣ. ಇದರ ಭೌಗೋಳಿಕ ವಿವರಗಳನ್ನು ಕಾವ್ಯವು ಹೀಗೆ ಕಟ್ಟಿಕೊಡುತ್ತದೆ-
ಕೋಸಲೋ ನಾಮ ಮುದಿತಃ ಸ್ಫೀತೋ ಜನಪದೋ ಮಹಾನ್ |ನಿವಿಷ್ಟಃ ಸರಯೂತೀರೇ ಪ್ರಭೂತಧನಧಾನ್ಯವಾನ್ ||
ಅಯೋಧ್ಯಾನಾಮ ನಗರೀ ತತ್ರಾಸೀತ್ ಲೋಕವಿಶ್ರುತಾ |ಮನುನಾ ಮಾನವೇಂದ್ರೇಣ ಯಾ ಪರೀ ನಿರ್ಮಿತಾ ಸ್ವಯಮ್ ||
ಕೋಸಲ ಎನ್ನುವ ವಿಶಾಲವಾದ, ಧನಧಾನ್ಯ ಸಮೃದ್ಧವಾದ , ಸರಯೂ ನದೀತೀರದಲ್ಲಿರುವ ಜನಪದ ಅಂದರೆ ರಾಜ್ಯ. ಅದರ ರಾಜಧಾನಿ ಅಯೋಧ್ಯೆ ಎನ್ನುವ ನಗರ. ಅದು ಲೋಕವಿಶ್ರುತವಾಗಿತ್ತು. ಮನುಚಕ್ರವರ್ತಿಯಿಂದಲೇ ನಿರ್ಮಿತವಾದ ನಗರವು ಅದಾಗಿತ್ತು.
ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ | ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ ||
ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ | ಮುಕ್ತಪುಷ್ಪಾವಕಿರ್ಣೇನ ಜಲಸಿಕ್ತೇನ ನಿತ್ಯಶಃ ||
ಮಹಾನಗರಿ ಅಯೋಧ್ಯೆಯು ಹನ್ನೆರಡು ಯೋಜನ ಉದ್ದವಾಗಿಯೂ, ಮೂರು ಯೋಜನದಷ್ಟು ಅಗಲವಾಗದ್ದು, ಒಳ್ಳೆಯ ದೊಡ್ಡ ದೊಡ್ಡ ರಸ್ತೆಗಳಿದ್ದವು. “ಸುವಿಭಕ್ತಮಹಾಪಥಾ” ಎನ್ನುವುದಕ್ಕೆ ವ್ಯಾಖ್ಯಾನಕಾರರು “ರಸ್ತೆಯ ಎರಡೂ ಬದಿಗಳಲ್ಲಿ ನೆರಳೀವ ಮರಗಳಿಂದ ಕೂಡಿ” ಎಂದು ಅರ್ಥೈಸುತ್ತಾರೆ. ಅಂದರೆ ನಾವು ಈಗ ಕಾಣುವ ಪಾದಚಾರಿ ಮಾರ್ಗಗಳು, ರಸ್ತೆಬದಿಯಲ್ಲಿ ಸಾಲು ಮರಗಳನ್ನು ನೆಡುವ ಪದ್ಧತಿ ರಾಮಾಯಾಣದ ಕಾಲಕ್ಕೇ ಇದ್ದವು ಎಂದು ಊಹಿಸಬಹುದು. ಮೈಸೂರಿನ ಥಂಡೀ ಸಡಕ್ ನ್ನು ನೋಡಿದವರಿಗೆ ಇದು ಕಣ್ಮುಂದೆ ಬರುವ ಚಿತ್ರ.
ಇನ್ನು ಆ ರಸ್ತೆಗಳನ್ನು ನಿತ್ಯವೂ ನೀರು ಚಿಮುಕಿಸಿ, ಹೂವಗಳನ್ನುಚೆಲ್ಲಿರುತ್ತಿದ್ದರಂತೆ. ಅವೆಲ್ಲವೂ ಮಣ್ಣಿನ ರಸ್ತೆಗಳಾಗಿದ್ದಿರಬೇಕು. ಧೂಳಡಗಿಸಲು ನೀರು ಚಿಮುಕಿಸುವ ವ್ಯವಸ್ಥೆ ಇದ್ದಿರಬೇಕು. ಈ ವಿಸ್ತಾರವಾದ ನಗರವನ್ನು ಪಗಡೆಯ ಹಾಸಿನಂತೆ ಕಟ್ಟಿದ್ದರು ಎನ್ನುತ್ತದೆ ರಾಮಾಯಣ- ಚಿತ್ರಾಮಷ್ಟಪದಾಕಾರಾಂ ವರನಾರೀಗಣೈರುತಾಮ್ |
ಪಗಡೆಹಾಸಿನಂತೆ ಇದ್ದ ಅಯೋಧ್ಯೆಯ ಮಧ್ಯದಲ್ಲಿ ದಶರಥನ ಅರಮನೆ (ಇಕ್ಷ್ವಾಕುಗಳ) ಇತ್ತು. ಸುತ್ತ ನಾಲ್ಕು ದಿಕ್ಕಿನಲ್ಲೂ ಊರು ಬೆಳೆದಿತ್ತು ಎಂದು ವ್ಯಾಖ್ಯಾನಕಾರರು ವ್ಯಾಖ್ಯಾನಿಸುತ್ತಾರೆ.
ಅಯೋಧ್ಯೆಯು ರಾಜಧಾನಿ ಯಾಗಿದ್ದದ್ದರಿಂದ ಅಲ್ಲಿ ಅನೇಕ ದಿಡ್ಡಿ ಬಾಗಿಲುಗಳೂ, ಅಲಂಕೃತವಾದ ಹೆಬ್ಬಾಗಿಲು (ಕವಾಟ ತೋರಣವತೀಂ) ಗಳಿಂದ ಸುಂದರವಾಗಿತ್ತು. ಒಂದೇ ಅಳತೆಯ , ಅಂಗಡಿ ಸಾಲುಗಳು ಇದ್ದವು. ಎತ್ತರವಾದ ಉಪ್ಪರಿಗೆಯ ವಿಮಾನಗೃಹಗಳಿದ್ದವು. ವಿಮಾನಗಳೆಂದರೆ ಏಳು ಅಂತಸ್ತಿನ ಉಪ್ಪರಿಗೆ ಮನೆಗಳು ಎಂಬ ಅರ್ಥವಿದೆ. ಇದು ಅತ್ಯಂತ ಶ್ರೀಮಂತರು ವಾಸಿಸುವ ರೀತಿಯದಾದರೆ ಸಾಮಾನ್ಯರು ವಾಸಿಸುವ ಮನೆಗಳು ಹೇಗಿದ್ದವು ? ವಾಲ್ಮೀಕಿಗಳ ಕ್ರಾಂತ ದೃಷ್ಟಿ ಅದನ್ನು ಕಂಡಿದೆ. ವರ್ಣಿಸಿದೆ-ಗೃಹಗಾಢಾಮ್ ಅವಿಚ್ಛಿದ್ರಾಂ ಸಮಭೂಮಿನಿವೇಶಿತಾಮ್ |
ಸಾಮಾನ್ಯ ಪ್ರಜೆಗಳ ಮನೆಗಳು ಒತ್ತೊತ್ತಾಗಿದ್ದವು. ಹಳ್ಳ ತಿಟ್ಟುಗಳಲಿಲ್ಲದ ಸಮಭೂಮಿಯ ಮೇಲೆ ಈ ನಗರವು ಕಟ್ಟಲ್ಪಟ್ಟಿತ್ತು. (ಗಂಗೆಯ ಬಯಲಲ್ಲವೇ)
ಇನ್ನು ಇಲ್ಲಿ ಪ್ರಜೆಗಳಿಗೆ ನೆಮ್ಮದಿಯಾಗಿ ಬಾಳಲು ಅನ್ನ-ನೀರಿಗೆ ಸಮಸ್ಯೆಯೇ ಇರಲಿಲ್ಲ ಎನ್ನುತ್ತದೆ ರಾಮಾಯಣ. ಕಾರಣ-
ಶಾಲಿತಂಡುಲಸಂಪೂರ್ಣಾಮ್ ಇಕ್ಷುಕಾಂಡರಸೋದಕಮ್ ||
ಶಾಲಿ ಅಂದರೆ ಬಿಳಿಅಕ್ಕಿ ಸಮೃದ್ಧವಾಗಿ ದೊರೆಯುತ್ತಿತ್ತು. ಜೊತೆಗೆ ಕಬ್ಬಿನರಸದಷ್ಟು ಸಿಹಿಯಾದ ಕುಡಿಯವ ನೀರು ಸಿಗುತ್ತಿದ್ದರಿಂದ ಪ್ರಜೆಗಳು ತಮ್ಮ ಜೀವನವನ್ನು ಸುಖದಿಂದ ಕಳೆಯುತ್ತಿದ್ದರು.
ಹಾಲು ಮೊಸರು, ಬೆಣ್ಣೆಗಳ ಪೂರೈಕೆಗೆ ಹಸುಗಳನ್ನೂ, ಪ್ರಯಾಣದ, ಸಾಮಾನು ಸಾಗಣೆಯ ಅಗತ್ಯಗಳಿಗಾಗಿ ಕುದುರೆ, ಹೇಸರಗತ್ತೆ, ಒಂಟೆ, ಅನೆ ಮೊದಲಾದ ಪ್ರಾಣಿಗಳನ್ನು ಚೆನ್ನಾಗಿ ಸಾಕಿದ್ದರು.
ವಾಜಿವಾರಣಸಂಪೂರ್ಣಾಂ ಗೋಭಿರುಷ್ಟ್ರೈಃ ಖರೈಃಸ್ತಥಾ |
ಹೊಟ್ಟೆ ಬಟ್ಟೆಯ ಚಿಂತೆ ಕಳೆದ ಮೇಲೆ, ನಾಗರೀಕ ಸೌಕರ್ಯಗಳೂ, ಒಳ್ಳೆಯ ಪೌರವ್ಯವಸ್ಥೆಗಳೂ ದೊರಕಿ ನೆಮ್ಮದಿ ಯಿದ್ದಾಗ ಸಂಗೀತ, ಸಾಹಿತ್ಯ, ನಾಟಕವೇ ಮೊದಲಾದ ಕಲೆಗಳ ಕಡೆಗೆ ಮನುಷ್ಯನ ಮನಸ್ಸು ವಾಲುವುದು. ಅಯೋಧ್ಯೆಯ ಜನಜೀವನವೂ ಇದಕ್ಕೆ ಹೊರತೇನೂ ಆಗಿರಲಿಲ್ಲ. ಎಷ್ಟರ ಮಟ್ಟಿಗೆ ಅದು ತನ್ನ ಸಾಂಸ್ಕೃತಿಕ ವೈಭವವನ್ನು, ಪ್ರಗತಿಯನ್ನು ಹೊಂದಿತ್ತೆಂದರೆ ಅಲ್ಲಿ ಆಗಲೇ “ ಸ್ತ್ರೀನಾಟಕ ಸಂಘಗಳು “ಎಲ್ಲ ಕಡೆ ಇದ್ದವು ಎನ್ನುತ್ತಾರೆ ಮಹರ್ಷಿಗಳು.
ವಧೂ ನಾಟಕ ಸಂಘೈಶ್ಚ ಸಂಯುಕ್ತಾಂ ಸರ್ವತಃ ಪುರೀಮ್ ||
ನಾವು ನಮ್ಮ ನಾಗರತ್ನಮ್ಮನವರ “ಸ್ತ್ರೀ ನಾಟಕಮಂಡಳಿ” ಅಂದರೆ ವಧೂನಾಟಕ ಮಂಡಳಿಯನ್ನು ಕಂಡಿದ್ದೇವೆ. ಆದರೆ ರಾಮಾಯಣದ ಕಾಲದಲ್ಲಿಯೇ ಇದು ಇತ್ತು ಎಂಬುದು ಅಚ್ಚರಿಯ ವಿಚಾರ. ಮಹರ್ಷಿಗಳು ಗಂಡಸರ ಅಥವಾ ಸಾಮಾನ್ಯ ನಾಟಕ ಮಂಡಳಿಗಳಿತ್ತು ಎಂದು ಬರೆಯದೆ ಕೇವಲ “ವಧೂನಾಟಕ ಮಂಡಳಿಯು ನಗರದ ಎಲ್ಲ ಕಡೆಯೂ ಇತ್ತು ಎಂದು ವಿಶೇಷವಾಗಿ ವರ್ಣಿಸಿದ್ದಾರೆ. ಹೆಂಗಸರದ್ದೇ ಇದೆ ಎಂದ ಮೇಲೆ ಗಂಡಸರದ್ದೂ ಇದ್ದೇ ಇರತ್ತೆ ಅನ್ನುವುದು ಸುಲಭವಾಗಿ ಊಹಿಸ ಬಹುದಾದದ್ದು ಎಂಬುದು ಅವರ ಅಭಿಪ್ರಾಯವಿರಬೇಕು. ಒಟ್ಟಿನಲ್ಲಿ ಜನಜೀವನ ತುಂಬಾ ಉನ್ನತಮಟ್ಟದ್ದಾಗಿತ್ತು ಎನ್ನುವುದು ತಿಳಿಯುತ್ತದೆ.
ಜನರ ಆಮೋದ ಪ್ರಮೋದಕ್ಕಾಗಿ ಉಪವನಗಳು, ಉದ್ಯಾನಗಳು, ಕ್ರೀಡಾಶೈಲಗಳೂ, ಮಾವಿನತೋಪುಗಳೂ (ವನವಿಹಾರಕ್ಕಾಗಿ) ಅಲ್ಲಲ್ಲಿ ಇದ್ದವು. ಜನ ಯಾವಾಗಲೂ ಆನಂದಿತರಾಗಿ ಅಲ್ಲಿ ಕಾಲಕಳೆಯುತ್ತಿದ್ದರು ಎಂಬೆಲ್ಲಾ ವರ್ಣನೆಗಳಿವೆ. ಇನ್ನು ಜನರಾದರೋ ಸಂಗೀತವಾದ್ಯಗಳನ್ನು ನುಡಿಸುವಲ್ಲಿಯೂ, ಕೇಳುವಲ್ಲಿಯೂ ತುಂಬಾ ಪರಿಣತರಿದ್ದರು. ಹಾಗಾಗಿ ಅಲ್ಲಿ ಯಾವಾಗಲೂ ವಾದ್ಯಗಳ ಮಂಗಳ, ಮಂಜುಳ ನಾದವು ತುಂಬಿರುತ್ತಿತ್ತು-
ದುಂಧುಭೀಭಿರ್ಮೃದಂಗೈಶ್ಚ ವೀಣಾಭಿಃ ಪಣವೈಸ್ತಥಾ |ನಾದಿತಾಂ ಭೃಶಮತ್ಯರ್ಥಂ ಪೃತಿವ್ಯಾಂ ತಾಮ್ ಅನುತ್ತಮಾಮ್ ||
ಹೀಗೆ ಕಲಾವಿದರುಗಳಿಂದಲೂ, ಅವರ ಕಲೆಯ ನಾದದಿಂದಲೂ ತುಂಬಿದ ಅಯೋಧ್ಯೆಯು ಭೂಮಂಡಲದಲ್ಲೇ ಹೋಲಿಕೆಯಿಲ್ಲದ ಅತ್ಯಂತ ಶ್ರೇಷ್ಠ ನಗರವಾಗಿತ್ತು. ಆಯುಧಗಳನ್ನು ತಯಾರಿಸುವ ಯಂತ್ರಾಗರಗಳೂ, ಕರಕುಶಲ ಶಿಲ್ಪಿಗಳೂ ಇದ್ದರು ಎಂಬೆಲ್ಲಾ ವರ್ಣನೆಗಳು ಸಿಗುತ್ತವೆ.
ಇಂಥ ನಗರಕ್ಕೆ ನಾನಾ ದೇಶಗಳಿಂದ ವಣಿಗ್ಜನರು (ವ್ಯಾಪಾರಿಗಳು) ಬರುವುದರಲ್ಲಿ ಏನಾಶ್ಚರ್ಯ? ಇದು ನಮ್ಮ ವಿಜಯನಗರ ಸಾಮ್ರಾಜ್ಯವನ್ನು ನೆನಪಿಸುತ್ತದೆ ಅಲ್ಲವೇ?
ಇಷ್ಟೆಲ್ಲಾ ಸಂಪತ್ತು-ಸಮೃದ್ಧಿ ತುಂಬಿತುಳುಕುತ್ತಿದ್ದ ಅಯೋಧ್ಯೆಯಲ್ಲಿ ರಕ್ಷಣೆಯ ವ್ಯವಸ್ಥೆಯೂ ಚೆನ್ನಾಗಿಯೇ ಇತ್ತು ಎನ್ನುತ್ತದೆ ರಾಮಾಯಣ. ಹೇಗೆಂದರೆ-ದುರ್ಗಗಂಭೀರಪರಿಖಾಂ ದುರ್ಗಾಮನ್ಯೈರ್ದುರಾಸದಾಮ್ |
ಅಂದರೆ ನಗರದ ಸುತ್ತಲೂ ವಿಶಾಲವಾದ ದುರ್ಗ (ಪ್ರಾಕಾರ) ವಿತ್ತು. ಅದರಾಚೆಗೆ ಆಳವಾದ ಅಗಳು (ಗಂಭೀರಪರಿಖಾಂ) ಇದ್ದು, ಯಾವ ಶತ್ರುವೂ ಅದನ್ನು ದಾಟಿ ನುಗ್ಗಿಬರಲು ಆಗುತ್ತಲೇ ಇರಲಿಲ್ಲ.
ದುರ್ಗ, ಪರಿಖೆಗಳು ಕಲ್ಲುಮಣ್ಣಿನಿಂದ ನಿರ್ಮಿತವಾದ ಸಾಧನಗಳು. ವ್ಯವಸ್ಥೆಗಳು. ಇವೆಲ್ಲವೂ ಇದ್ದೂ ಜನರಲ್ಲಿ, ಯೋಧರಲ್ಲಿ ಧೈರ್ಯ, ಶೌರ್ಯಗಳು, ಮುನ್ನುಗುವ ಅದಟು, ರಾಷ್ಟ್ರಪ್ರೇಮ ವಿಲ್ಲದೇ ಇದ್ದರೆ ಯಾವುದೂ ಪ್ರಯೋಜಕ್ಕೆ ಬರದು. ಆದರೆ ಆ ಅಯೋಧ್ಯೆಯ ಜನರಾದರೋ –
ಶಬ್ದವೇಧ್ಯಂ ಚ ವಿತತಂ ಲಘುಹಸ್ತಾ ವಿಶಾರದಾಃ |ಸಿಂಹವ್ಯಾಘ್ರವರಾಹಾಣಾಂ ಮತ್ತಾನಾಂ ವರ್ದತಾಂ ವನೇ |
ಶಬ್ದವೇಧಿ, ಶಸ್ತ್ರಗಳಲ್ಲಿ, ಬಾಣಪ್ರಯೋಗಗಳಲ್ಲಿ ಚೆನ್ನಾಗಿ ಶಿಕ್ಷಿತರಾಗಿದ್ದ ವೀರರು. ಅರಣ್ಯದಲ್ಲಿ ಮದೋನ್ಮತ್ತವಾಗಿ ಓಡಾಡುವ ಸಿಂಹ, ಹುಲಿ, ಕಾಡುಹಂದಿಗಳನ್ನೂ ಅಟ್ಟಿಸಿಕೊಂಡು ಹೋಗಿ ಕೊಲ್ಲಬಲ್ಲವರಾಗಿದ್ದರು. ಇಂತಹ ವೀರರಾಗಿದ್ದರೂ ಅವರು ಎಂದೂ ಅಧರ್ಮ ಅನ್ಯಾಯಗಳಿಂದ ಯಾರ ಮೇಲೂ ಕೈ ಮಾಡುತ್ತಿರಲಿಲ್ಲವಂತೆ-
ಯೇ ಚ ಬಾಣೈರ್ನವಿಧ್ಯಂತಿ ವಿವಿಕ್ತಮ್ ಅಪರಾವರಮ್ |
ಅಂದರೆ ಅವರುಗಳು ವಿವಿಕ್ತಂ –ಬಂಧುಬಳಗವಿಲ್ಲದ ಅನಾಥ ಅಸಹಾಯನನ್ನೂ, ಅಪರಾವರಮ್ ಎಂದರೆ ವಂಶಕ್ಕೆ ಒಂದೇ ಕುಡಿಯಾಗಿರುವವರನ್ನು, ವಿವಿಕ್ತಂ– ಹೆದರಿ ಓಡುವವನನ್ನು ಎಂದೂ ಕೊಲ್ಲುತ್ತಿರಲಿಲ್ಲ ಎಂದು.
ಇದು ಅಯೋಧ್ಯೆಯ ಕ್ಷಾತ್ರಮುಖವನ್ನು ಹೇಳುವುದಾಯಿತು. ಅದರ ಬ್ರಾಹ್ಮ ಅಂದರೆ ಲೋಕಹಿತಕ್ಕಾಗಿ ನಡೆಯುತ್ತಿದ್ದ ವೇದ-ಯಜ್ಞಗಳಿಗೆ ಸಂಬಂಧಿಸಿದ ಮುಖವನ್ನು ರಾಮಾಯಣ ಹೀಗೆ ತೋರಿಸುತ್ತದೆ-
ತಾಮಗ್ನಿಮದ್ಭಿರ್ಗುಣವದ್ಭಿರಾವೃತಾಂ ದ್ವಿಜೋತ್ತಮೈರ್ವೇದಷಡಂಗಪಾರಗೈಃ |
ಸಹಸ್ರದೈಃ ಸತ್ಯರಥೈರ್ಮಹಾತ್ಮಭಿ-ರ್ಮಹರ್ಷಿಕಲ್ಪೈರ್ ಋಷಿಭಿಷ್ಚ ಕೇವಲೈಃ ||
ಆ ಆಯೋಧ್ಯೆಯಲ್ಲಿ ಆಹಿತಾಗ್ನಿಗಳು ಅಂದರೆ ಮನೆಯಲ್ಲಿ ಗೃಹ್ಯಾಗ್ನಿಯನ್ನು ಇಟ್ಟುಕೊಂಡು ಮೂರು ವೇಳೆಗಳಲ್ಲೋ ಅಗ್ನಿಗೆ ಆಹುತಿಗಳನ್ನು ಕೊಡುವ ಅಗ್ನಿಹೋತ್ರಿಗಳೂ, ಶಮ ದಮಾದಿ ಗುಣಗಳಿರುವವರೂ (ಶಮ ಎಂದರೆ ಮನಸ್ಸಿನ ನಿಯಂತ್ರಣ, ದಮ ಎಂದರೆ ಇಂದ್ರಿಯಗಳ ನಿಯಂತ್ರಣ), ಷಡಂಗಗಳ ಸಹಿತ ವೇದಗಳನ್ನು ಕ್ರಮವಾಗಿ ಗುರುಮುಖದಿಂದ ಹೇಳಿಸಿಕೊಂಡವರೂ, ಸಹಸ್ರವಿಧದಲ್ಲಿ ದಾನ ಕೊಡುವವರೂ, ಸತ್ಯವಂತರೂ ಆದ ಮಹಾತ್ಮರೂ, ಋಷಿಗಳೂ ಇದ್ದರು. ಈ ಅಯೋಧ್ಯೆಗೆ ಆಗ ರಾಜ ದಶರಥನಾಗಿದ್ದ.
ಇದು ರಾಮಾಯಣ ಕಾವ್ಯದಲ್ಲಿ ಸಾಕ್ಷಾತ್ತಾಗಿ ವರ್ಣಿಸಿರುವ ಅಯೋಧ್ಯೆ. ಇಂದು ಅಯೋಧ್ಯೆ ಯಥಾವತ್ತಾಗಿ ಹಾಗೆಯೇ ಇಲ್ಲದಿರಬಹುದು. ಆದರೆ ಹೆಸರು ಅದೇ ಅಯೋಧ್ಯೆ. ಅದೇ ಸರಯೂ. ಜನಮಾನಸದಲ್ಲಿ ಕಿಂಚಿತ್ತೂ ಬದಲಾಗದ ಅದೇ ಭಾವ ಶ್ರದ್ಧೆ. ಆದ್ದರಿಂದಲೇ ಸುಮಾರು 5000 ವರ್ಷಕ್ಕೂ ಹಿಂದಿನ ರಾಮಾಯಣ ಇಂದಿಗೂ ಎಲ್ಲರಿಗೂ ಪ್ರಿಯವಾದ ಕಾವ್ಯವಾಗಿದೆ.
- ಶ್ರೀಮತಿ ಶಾಂತಾ ನಾಗಮಂಗಲ
94498 50874
ಲೇಖಕರ ಸಂಕ್ಷಿಪ್ತ ಪರಿಚಯ:
ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಮತಿ ಶಾಂತಾ ನಾಗಮಂಗಲ ಅವರು, ಮುಖ್ಯವಾಗಿ ಗಮಕ ವ್ಯಾಖ್ಯಾತೃಗಳು. ಹಲವಾರು ವರ್ಷಗಳಿಂದ ಗಮಕವಾಚನಕ್ಕೆ ವ್ಯಾಖ್ಯಾನ ಮಾಡಿಕೊಂಡು ಬಂದಿದ್ದಾರೆ. ಸ್ವತಂತ್ರವಾಗಿ ವಿಷಯಾಧಾರಿತ ಪ್ರವಚನಗಳನ್ನು ಮಾಡುತ್ತಾರೆ. ಲೇಖಕಿಯೂ ಆಗಿದ್ದಾರೆ. ಲಲಿತಾ ಪ್ರಬಂಧಗಳು, ಕಥೆ ಕವನಗಳನ್ನು ಕೆಲವು ಛಂದಸ್ಸಿನಲ್ಲಿ ಪದ್ಯಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಪ್ರಬಂಧಗಳು, ಕವನಗಳು ಪ್ರಕಟವಾಗಿವೆ. ಕೆಲವು ಪುಸ್ತಕಗಳೂ ಹೊರಬಂದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ