"ಪರೀಕ್ಷೆಯನ್ನು ಒಂದೋ ನಾವು ಮಿತ್ರನನ್ನಾಗಿ ಕಾಣಬೇಕು, ಇಲ್ಲಾ ಶತ್ರುವನ್ನಾಗಿ ನೋಡಬೇಕು". ಮಿತ್ರನೆಂದೂ ಅಹಿತವನ್ನುಂಟುಮಾಡಲಾರ. ಹೆದರಿಕೆಯಿಲ್ಲ. ಗೆಲುವು ನಿಶ್ಚಿತ. ಶತ್ರುವೆಂದು ತಿಳಿದರೆ ಯಾವ ರೀತಿಯಲ್ಲಾದರೂ ಅವನಿಗೆ ಹೆದರದೆ ಬಾಗದೆ ಎದುರಿಸಿ ಅವನನ್ನು ಸೋಲಿಸಿಯೇ ಸಿದ್ಧ ಎನ್ನುವ ಕೆಚ್ಚೆದೆಯ ದೃಢಮನದಿಂದ ಪರೀಕ್ಷೆಯನ್ನು ಎದುರಿಸಬೇಕು. ಗೆಲುವು ಕಟ್ಟಿಟ್ಟ ಬುತ್ತಿ. ಆಯ್ಕೆ ನಮ್ಮದು. ಮಿತ್ರನನ್ನಾಗಿ ಕಾಣುವುದು ಉಚಿತವೆಂಬುದು ನನ್ನ ಅನುಭವ.
ಕೊಠಡಿಯನ್ನು ಪ್ರವೇಶಿಸಲು ಗಂಟೆ ಬಾರಿಸಿದಾಗ ಇಂದಿನ ಪರೀಕ್ಷೆಯಲ್ಲಿ ನಾನು ಚೆನ್ನಾಗಿ ಬರೆದು ಉತ್ತಮ ಅಂಕಗಳನ್ನು ಪಡೆಯುತ್ತೇನೆಂಬ ದೃಢಭಾವನೆಯೊಂದಿಗೆ ಕೊಠಡಿಯನ್ನು ಪ್ರವೇಶಿಸಬೇಕು.
ಕೊಠಡಿಯನ್ನು ಪ್ರವೇಶಿಸಿ ಉತ್ತರಿಸಿ ಹೊರಬರುವ ತನಕ-
• ನೋಂದಣಿ ಸಂಖ್ಯೆ ಪರಿಶೀಲನೆ
• ಪ್ರಶ್ನೆ ಪತ್ರಿಕೆಯ ಅಧ್ಯಯನ
• ಉತ್ತರ ಪತ್ರಿಕೆಯನ್ನು ತುಂಬುವುದು
• ಉತ್ತರಿಸುವುದು
• ಉತ್ತರ ಪತ್ರಿಕೆಯನ್ನು ಮರಳಿಸುವುದು- ಇಷ್ಟು ಹಂತಗಳಿವೆ.
● ನೋಂದಣಿ ಸಂಖ್ಯೆಯ ಪರಿಶೀಲನೆ:
• ನಮ್ಮ ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆಯು ಆ ಕೊಠಡಿಯ ಡೆಸ್ಕಿನಲ್ಲಿ ಬರೆದಿದೆಯೇ? ಎಂಬುದನ್ನು ನೋಡುವುದು.
• ಬರೆದಿದ್ದರೆ ನಮ್ಮ ಪ್ರವೇಶ ಪತ್ರದಲ್ಲಿ ನಮೂದಿಸಿರುವ ನೋಂದಣಿಸಂಖ್ಯೆಯೂ ಅಲ್ಲಿ ಬರೆದಿರುವುದೂ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿ ನಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವುದು.
• ಕುಳಿತುಕೊಂಡ ಬಳಿಕ ಆ ಪ್ರದೇಶದಲ್ಲಿ ಪರೀಕ್ಷೆಯ ನಿಯಮಗಳಿಗೆ ಧಕ್ಕೆ ತರುವಂತಹ ವಸ್ತುಗಳು,ಬರಹಗಳು ಇವೆಯೇ ಎಂಬುದನ್ನು ಗಮನಿಸುವುದು.
• ಅಂತಹದ್ದು ಕಂಡುಬಂದರೆ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತರುವುದು.
• ಕೆಲವೊಮ್ಮೆ ಡೆಸ್ಕ್ ಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಬರಹಗಳನ್ನು ಆ ತರಗತಿಯ ವಿದ್ಯಾರ್ಥಿಗಳು ಬರೆದಿರುತ್ತಾರೆ. ಅಂತಹವುಗಳು ಕಂಡುಬಂದರೂ ಮೇಲ್ವಿಚಾರಕರ ಗಮನಕ್ಕೆ ತಪ್ಪದೇ ತರಬೇಕು
• ಪ್ರವೇಶ ಪತ್ರ, ಬರಹದ ಉಪಕರಣಗಳನ್ನು ಡೆಸ್ಕಿನ ಮೇಲಿಟ್ಟು ಪ್ರಶ್ನೆ ಪತ್ರಿಕೆಯು ಬರುವ ತನಕ ನಿಶ್ಚಿಂತರಾಗಿ ಶಾಂತ ಚಿತ್ತದಿಂದ ಇರಬೇಕು.
(ತಪ್ಪಿಯೂ; ಪ್ರಶ್ನೆಗಳು ಕಠಿಣವಾಗಿದ್ದರೆ, ಹೇಗಿರಬಹುದು... ಎಂದು ಯೋಚಿಸಬಾರದು).
● ಪ್ರಶ್ನೆ ಪತ್ರಿಕೆಯ ಅಧ್ಯಯನ:
• ಪ್ರಶ್ನೆ ಪತ್ರಿಕೆಯು ಸಿಕ್ಕಿದ ಕೂಡಲೇ ಮೇಲಿಂದ ಮೇಲೆ
* ಅದು ಅಂದಿನ ಪರೀಕ್ಷೆಗೆ ಸಂಬಂಧಪಟ್ಟದ್ದೇ?
* ನಾವು ಓದಿದ ಪಠ್ಯಪುಸ್ತಕಕ್ಕೆ ಸಂಬಂಧಿಸಿದುದೇ?(ಹಳೆ ಪಠ್ಯಪುಸ್ತಕದ ಪೂರಕ ಪರೀಕ್ಷಾರ್ಥಿಗಳೂ ಇರುತ್ತಾರೆ. ಅವರಿಗೆ ವಿಷಯ ಅಂದಿನದಾದರೂ ಪ್ರಶ್ನೆಪತ್ರಿಕೆ ಬೇರೆಯೇ ಇರುತ್ತದೆ).
* ಎಲ್ಲಾ ಪುಟಗಳು ಮುದ್ರಿತವಾಗಿವೆಯೇ ಎಂಬುದನ್ನು ಗಮನಿಸಬೇಕು.
● ಪ್ರಶ್ನೆ ಪತ್ರಿಕೆಯನ್ನು ಓದಲು ತೊಡಗಿದಾಗ-
• ಮೊದಲ ಸುತ್ತಿನಲ್ಲಿ ನಮ್ಮ ಮೆಚ್ಚಿನ ಪಾಠ/ಅಧ್ಯಾಯಗಳಿಂದ ಪ್ರಶ್ನೆಗಳು ಬಂದಿವೆಯೇ ಎಂಬುದನ್ನು ಹುಡುಕಬೇಕು (ಹೆಚ್ಚಾಗಿ ಈ ಪಾಠ/ಅಧ್ಯಾಯಗಳ ಪ್ರಶ್ನೆಗಳ ಉತ್ತರ ನಮಗೆ ಗೊತ್ತಿರುತ್ತದೆ).
• ಇವುಗಳ ಪ್ರಶ್ನೆ ಸಂಖ್ಯೆಗಳನ್ನು ಸಾಧ್ಯವಾದರೆ ಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಗುರುತುಗಳನ್ನು ಪತ್ರಿಕೆಯ ಮೇಲೆ ಮಾಡಬಾರದು.
• ಎರಡನೆಯ ಸುತ್ತಿನಲ್ಲಿ ಉತ್ತರ ಗೊತ್ತಿರುವ ಬೇರೆ ಪ್ರಶ್ನೆಗಳಿವೆಯೇ ಎಂಬುದನ್ನು ಹುಡುಕಬೇಕು (ಈ ಎರಡು ಸುತ್ತುಗಳಲ್ಲಿ ನಾವು ಯಶಸ್ವಿಯಾದರೆ ನಮಗರಿವಿಲ್ಲದಂತೆಯೇ ನಮ್ಮ ಮೊಗವರಳುತ್ತದೆ. ಇಲ್ಲಿಗೆ ಪರೀಕ್ಷೆಯನ್ನು ಅರ್ಧ ಗೆದ್ದಂತೆ!).
• ಮೂರನೆಯ ಸಲ ಓದುವಾಗ ಇತರ ಪ್ರಶ್ನೆಗಳತ್ತ ಗಮನಹರಿಸಬೇಕು. ಇಲ್ಲೂ ಸಾಮಾನ್ಯ ಉತ್ತರ ಗೊತ್ತಿರುವ ಪ್ರಶ್ನೆಗಳತ್ತ ಗಮನ ಹರಿಸಬೇಕು.
• ಸಮಯವುಳಿದಲ್ಲಿ ನಾಲ್ಕನೆಯ ಸಲ ಎಲ್ಲಾ ಪ್ರಶ್ನೆಗಳತ್ತ ಗಮನ ಹರಿಸಬೇಕು.
ಇಷ್ಟು ಹಂತಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದುವುದೇ ಪ್ರಶ್ನೆ ಪತ್ರಿಕೆಯ ಅಧ್ಯಯನ.
ಪರೀಕ್ಷೆಯ ಸೋಲು-ಗೆಲುವು ಈ ಹಂತದಲ್ಲಡಗಿದೆ. (ನೂರು ಮೀಟರ್ ಓಟದಲ್ಲಿ starting ಹೇಗೆ ಮುಖ್ಯವೋ ಹಾಗೆ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯ ಅಧ್ಯಯನ ಮುಖ್ಯ). ಅದಕ್ಕಾಗಿಯೆ ಶಿಕ್ಷಣ ಇಲಾಖೆಯು ಪ್ರಶ್ನೆಪತ್ರಿಕೆಯ ಅಧ್ಯಯನಕ್ಕಾಗಿ ಹದಿನೈದು ನಿಮಿಷಗಳ ಅವಧಿಯನ್ನು ಹೆಚ್ಚುವರಿಯಾಗಿ ನೀಡಿದೆ. ಮಾತ್ರವಲ್ಲ ನಾವು ತತ್ಕ್ಷಣ ಉತ್ತರ ಬರೆಯುವ ಧಾವಂತಕ್ಕೊಳಗಾಗಬಾರದೆಂದು ಉತ್ತರ ಪತ್ರಿಕೆಯನ್ನು ಮತ್ತೆಯೇ ಕೊಡುವ ಕ್ರಮವನ್ನಿಸಿಕೊಂಡಿದೆ.
ವಿಶೇಷ ಗಮನಕ್ಕೆ:
● ಇಡೀ ಪರಿಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರೂಪಿತವಾಗಿದೆ.
ಉತ್ತರಗಳನ್ನು ನಾಳೆ ಬರೆಯುವ, ಆಗದೇ?
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ