ಶ್ರೀಮತಿ (ಡಾಕ್ಟರ್) ರೇಖಾ ಶ್ರೀನಿವಾಸನ್, ಬೆಂಗಳೂರು
"ರಾಮಾಯಣ ಆದಿ ಕಾವ್ಯ, ಜನರ ಶ್ರದ್ಧೆ ಹಾಗೂ ಭಕ್ತಿಯಿಂದ ಅದು ಜನಜೀವನದ ಹಾಸುಹೊಕ್ಕಾಗಿದೆ. ಆದರೆ ಅದಕ್ಕೆ ಪುರಾತತ್ವ ಹಾಗೂ ಐತಿಹಾಸಿಕ ದಾಖಲೆ ಇಲ್ಲ" ಎಂಬುದಾಗಿ ಅಂದಿನ ಭಾರತ ಸರಕಾರವೇ ಅತ್ಯುಚ್ಚ ನ್ಯಾಯಾಲಯದಲ್ಲಿ ಹೇಳಿಕೆ ನೀಡಿತ್ತು. ಇದು 2008 ರಲ್ಲಿ ಸೇತುಸಮುದ್ರಂ ಎಂಬ ಪ್ರಾಜೆಕ್ಟ್‌ನಲ್ಲಿ ರಾಮ ಸೇತುವೆಯನ್ನು ಒಡೆದು ಹಡಗುಗಳು ಹೋಗಲು ಅನುವು ಮಾಡಿಕೊಡಬೇಕು ಎಂಬ ತಮಿಳು ನಾಡಿನ ಸರಕಾರದ ಉದ್ದೇಶಕ್ಕೆ ನೀಡಿದ ಭಾವನಾತ್ಮಕವೆನಿಸುವ ತಡೆಯಾಜ್ಞೆ ಮನವಿಯ ಸಂಬಂಧ ಉದ್ಭವಿಸಿತ್ತು. ಈ ವಿಷಯದಲ್ಲಿ ನನಗೂ ಕುತೂಹಲ ಜಾಗೃತವಾಯಿತು. ರಾಮಾಯಣ ಕಥೆಯನ್ನು ಹೇಳಿದವರು ಮೂಲ ಕರ್ತೃ ನಾರದರು ಹಾಗೂ ಅದನ್ನು ಬರೆದವರು ವಾಲ್ಮೀಕಿ ಋಷಿಗಳು. ಅದರ ಪ್ರತಿಗಳ ಪ್ರತಿಗಳ ಪ್ರತಿಗಳು ಮಾತ್ರ ಈಗ ಲಭ್ಯವಿದೆ. ಆದರೂ 7000 ವರ್ಷಗಳ ನಂತರವೂ ಈ ಕಥಾನಕ ಉಪಲಬ್ಧವಿದೆ ಎಂದರೆ ಕಲ್ಪನೆ ಇಷ್ಟು ಶಕ್ತಿ ಶಾಲಿಯೇ ಅಂತ ನನಗನಿಸಿತು, ನಿಮಗೂ ಅನಿಸಿರಬೇಕಲ್ಲ? ಬನ್ನಿ ಕೆಲವು ಮಾಹಿತಿಗಳನ್ನು ವಿಶ್ಲೇಷಿಸೋಣ, ನಮಗೆ ಅನುಸಂಧಾನಿತ ಪುರಾವೆಗಳು ಸಿಗುತ್ತವೆಯೋ ಇಲ್ಲವೋ ನೋಡೋಣ.
ಮೊದಲು ಶ್ರೀ ರಾಮನ ಜನನದ ತಿಥಿ ವಾರ ನಕ್ಷತ್ರದ ಆಧಾರ ಗಮನಿಸೋಣ ಅದರ ಮೇಲೆ ವೇದಿಕ್ ರಿಸರ್ಚ್ ಐ ಸರ್ವ್ ರವರು ನಾಸಾದವರು ಉಪಯೋಗಿಸಿ ಅಂತರಿಕ್ಷ ಸಂಶೋಧನೆಗೆ ಬಳಸುವ ಸಾಫ್ಟ್ ವೇರ್ ನಿಂದ ಲೆಕ್ಕಿಸಿ ಬಿ.ಸಿ.5114 ಜನವರಿ 10 ರಂದು ಹುಟ್ಟಿರುವುದಾಗಿ ದಾಖಲಿಸಿದ್ದಾರೆ. ಅಂದರೆ ಏಳು ಸಾವಿರ ವರ್ಷಗಳ ಹಿಂದೆ. ಹಾಗಾದರೆ ನಾವ್ಯಾಕೆ ಈಗಿನ ಕಾಲಘಟ್ಟದಲ್ಲಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ರಾಮನವಮಿ ಆಚರಿಸುತ್ತೇವೆ ಅಂತ ಪ್ರಶ್ನೆ ಏಳಬಹುದು. ಅದರ ಕಾರಣ ಪ್ರಿಸಿಷನ್ ಈಕ್ವಿನಾಕ್ಸ್ ಅಂದರೆ 72 ವರ್ಷಗಳಿಗೊಮ್ಮೆ ಉಳಿಯುವ ಗಳಿಗೆಗಳ ಪೇರಿಕೆಯಾಗಿ ಒಂದು ದಿನ ಸೇರಿಸಲ್ಪಟ್ಟಿದೆ, ಹಾಗಾಗಿ 7,200 ವರ್ಷಗಳಿಗೆ 100 ದಿನಗಳ ಸೇರ್ಪಡೆ ಆಗುತ್ತದೆ.
ಸಂಶೋಧಕರಾದ ಶ್ರೀ ಬಾಲಾಪುರ್ ಎಟ್.ಆಲ್ ಅವರು “ಪ್ಲಾಂಟ್ಸ್ ಆಫ್ ರಾಮಾಯಣ” ಎಂಬ 1986ರಲ್ಲಿ ಪ್ರಕಟಿಸಿದ ಪುಸ್ತಕದಲ್ಲಿ ರಾಮಾಯಣವು ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬಹಳ ಚರ್ಚಿಸಲಾಗಿದೆ ಆದರೆ ಅದರಲ್ಲಿ ಉಲ್ಲೇಖಿತ ವೈಜ್ಞಾನಿಕ ವಿಚಾರಗಳಾದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಹವಾಮಾನ ಶಾಸ್ತ್ರ, ಶಿಲ್ಪ ಶಾಸ್ತ್ರ ಹಾಗೂ ಪುರಾತತ್ವ ದಾಖಲೆಗಳ ಬಗ್ಗೆ ಯಾರು ಗಮನ ಹರಿಸಿಲ್ಲ ಎನ್ನುತ್ತಾರೆ. ಈ ಪುಸ್ತಕದಲ್ಲಿ ಸಪ್ತ ಕಾಂಡಗಳಲ್ಲಿ ಪ್ರತಿ ಯೊಂದು ಭೌಗೋಳಿಕ ವರ್ಣನೆಯೊಂದಿಗೆ ಕೂಡಿದ 200ಕ್ಕೂ ಹೆಚ್ಚು ಸಸ್ಯಗಳು ಅದರ ಈಗಿನ ಬೊಟಾನಿಕಲ್ ಹೆಸರು, ಉಲ್ಲೇಖಿತ ಶ್ಲೋಕ ಸಂಖ್ಯೆಯೊಂದಿಗೆ ನಮೂದಿಸಲಾಗಿದೆ.
ಅಂತೆಯೇ ಚೆನ್ನೈನ ಸಸ್ಯಶಾಸ್ತ್ರಜ್ಞರಾದ ಶ್ರೀ ಅಮೃತ ಲಿಂಗಂ ಮತ್ತು ಸಹಯೋಗಿಗಳು ಮೂರು ವರ್ಷಗಳ ಸತತ ಸಂಶೋಧನೆ ನಡೆಸಿ “ಪ್ಲಾಂಟ್ ಡೈವರ್ಸಿಟಿ ಇನ್ ವಾಲ್ಮೀಕಿ ರಾಮಾಯಣ” ಎಂಬ ಸಂಶೋಧನಾ ಲೇಖನ ದಲ್ಲಿ ಬರೆದಿರುವ ಆ ಸ್ಥಳ ಹಾಗೂ ಅಲ್ಲಿ ವರ್ಣಿಸಲಾದ ಗಿಡ ಗಂಟೆಗಳು, ಹೂವು ಹಣ್ಣು, ಅರಣ್ಯದ ಪ್ರಾಣಿ ಪಕ್ಷಿಗಳೆಲ್ಲವೂ, ಕರಾರುವಕ್ಕಾಗಿ ಈಗಲೂ ದೊರಕುತ್ತವೆ ಎಂದು ನಮೂದಿಸಿದ್ದಾರೆ. ಅದೇ ಲೇಖನದಲ್ಲಿ 182 ಜಾತಿ ಸಸ್ಯಗಳು. ಅದರಲ್ಲಿ 105 ಬಗೆಯ ವೃಕ್ಷಗಳು, ಮಿಕ್ಕ ಸಸ್ಯಗಳಲ್ಲಿ ಬಳ್ಳಿಗಳು, ಚಿಕ್ಕ ಗಿಡಗಳು, ನೀರಲ್ಲಿ ಬೆಳೆಯುವಂತಹವು ಹಾಗೂ ಹುಲ್ಲಿನ ಬಗೆಗಳಿವೆ. ಇದಿಷ್ಟು ಅಲ್ಲದೆ ನಾಲ್ಕು ವಿಧದ ಕಾಡುಗಳ ವರ್ಣನೆ ಇದೆ. ಅವೆಂದರೆ ಉಷ್ಣವಲಯದ ಪತನಶೀಲ ಕಾಡುಗಳು ಚಿತ್ರಕೂಟ ಹಾಗೂ ದಂಡಕಾರಣ್ಯ.
ಶ್ರೀಲಂಕಾದ ನಿತ್ಯಹರಿದ್ವರ್ಣ ಮತ್ತು ಹಿಮಾಲಯದ ಅರೆ ನಿತ್ಯಹರಿದ್ವರ್ಣ ಪೈನ್ ಕಾಡುಗಳು. ಆದರೆ ಈಗ ನೈಮಿಷಾರಣ್ಯ, ಚಿತ್ರಕೂಟ, ದಂಡಕಾರಣ್ಯ ಹಾಗು ಪಂಚವಟಿ ಆಗಿನಂತೆ ದಟ್ಟ ಕಾಡುಗಳಾಗಿ ಉಳಿದಿಲ್ಲ. ರಾಮಾಯಣದಲ್ಲಿ ವರ್ಣಿಸಿರುವ ಭೂವಿನ್ಯಾಸ, ನದಿಯ ಜಲಾನಯನ ಪ್ರದೇಶ, ಪರ್ವತಗಳು, ಅರಣ್ಯಗಳು, ಹಾಗೂ ಸಸ್ಯ ಸಂಪತ್ತು ಈಗಲೂ ಕರಾರುವಕ್ಕಾಗಿ ಅದೇ ಪ್ರದೇಶದಲ್ಲಿ, ಸಾವಿರಾರು ವರ್ಷಗಳ ನಂತರವೂ ಕಾಣಸಿಗುತ್ತವೆ ಎಂಬುದು ವಿಶೇಷ. ಇನ್ನು ಹೆಚ್ಚು ಮಾಹಿತಿಗಾಗಿ ಶ್ರೀ ಅರುಣ್ ಕುಮಾರ್ ಅವರ "ಬಯೋ ಡೈವರ್ಸಿಟಿ ಇನ್ ಎಪಿಕ್ ರಾಮಾಯಣ" ಎಂಬ ಸಂಶೋಧನಾ ಲೇಖನದಲ್ಲಿ ಓದಬಹುದು.
ಅದೇ ರೀತಿ ಶ್ರೀ ರಾಮ ಸೀತಾ ಹಾಗೂ ಲಕ್ಷ್ಮಣರು ಕಾಲ್ನಡಿಗೆಯಲ್ಲಿ ಸಾಗಿ ಈಗಿನ ನಾಸಿಕ್ ಬಳಿ ಪಂಚವಟಿಯಲ್ಲಿದ್ದಾಗ ರಾವಣ ಸೀತಾಪಹರಣ ಮಾಡಿದುದಾಗಿಯೂ ಅಲ್ಲಿಂದ ವಾಯು ಮಾರ್ಗದಲ್ಲಿ ಸೀತಾ ದೇವಿ ಹಂಪಿಯ ಮೇಲೆ ಹಾದು ಹೋಗುವಾಗ ತನ್ನ ಒಡವೆಗಳನ್ನು ಕೆಳಗೆ ಹಾಕಿದಾಗ ಹನುಮಂತನಿಗೆ ದೊರಕಿದುದಾಗಿಯೂ ಹೇಳಲಾಗುವುದು. ಹಾಗೆ ವಾಯು ಮಾರ್ಗದಲ್ಲಿ ಸಂಚರಿಸುವಾಗ ಲಂಕೆಗೆ ಸೇರಲು ಇದೇ ಹತ್ತಿರದ ಹಾದಿಯೆಂಬುದು ಗಮನಿಸತಕ್ಕದ್ದು.
ಶ್ರೀ ರಾಮ ಲಕ್ಷ್ಮಣರು ಒಂದು ವರ್ಷ ಅಲೆದು ಹನುಮಂತನ ನೋಡಿದ ಮೇಲೆ ಸೀತಾ ದೇವಿಯ ಅಪಹರಣ ಹಾಗೂ ಯಾವ ಮಾರ್ಗದಲ್ಲಿ ಹೋಗಿರಬಹುದು ಅನ್ನುವ ಮಾಹಿತಿ ಆಕೆಯ ಒಡವೆಯನ್ನು ಗುರುತಿಸಿ ಸಿಗುತ್ತದೆ. ನಂತರ ಹನುಮಂತನ ಸಹಾಯದಿಂದ ಸೀತಾದೇವಿ ಲಂಕೆಯಲ್ಲಿರುವುದು ಖಚಿತವಾಗಿ ರಾಮೇಶ್ವರಂಗೆ ಎಲ್ಲರೂ ಬರುತ್ತಾರೆ. ಯಾಕಂದರೆ ಅದು ಲಂಕೆಗೆ ಅತಿ ಸಮೀಪದಲ್ಲಿದೆ ಈಗಲೂ ಧನುಷ್ಕೋಟಿಯಿಂದ ಲಂಕೆಯನ್ನು ಕಾಣಬಹುದಲ್ಲವೇ ಹದಿನಾಲ್ಕು ನಾಟಿಕಲ್ ಮೈಲುಗಳಷ್ಟೇ.
ರಾಮೇಶ್ವರದಲ್ಲಿ ರಾಮ ಲಕ್ಷ್ಮಣರು ಮೊದಲು ಸೇರಿದ ಜಾಗದದಿಂದ ಅಲ್ಲಿನ ಅತಿ ಎತ್ತರದ ಗಂಧಮಾದನ ಪರ್ವತವನ್ನೇರಿ ಕೂಲಂಕಷವಾಗಿ ಪರಿಶೀಲಿಸಿದರು. ಆ ದಾಖಲೆಗಳು “ರಾಮರ್ ಪದಂ” ಅಂತ ಈಗ ದೇವಸ್ಥಾನವಾಗಿ ನಮಗೆ ಕಾಣಸಿಗುತ್ತದೆ.
ಹಾಗಯೇ ಲಂಕೆಯಿಂದ ರಾಮನ ಶರಣು ಹೊಂದಲು ಬಂದ ವಿಭೀಷಣನು ಧನುಷ್ಕೋಟಿಯ ಕೋದಂಡರಾಮ ಸ್ವಾಮಿ ದೇವಸ್ಥಾನದ ಬಳಿಯಲ್ಲಿ ಭೇಟಿಯಾಗುತ್ತಾನೆ. ಅದು ಸಮುದ್ರದ ದಂಡೆಯಾಗಿದ್ದು ಶ್ರೀ ಲಂಕಾಗೆ ಅತಿ ಸಮೀಪದಲ್ಲಿದೆ. ಇದು ರಾಮೇಶ್ವರಂ ಹಾಗೂ ಧನುಷ್ಕೋಟಿ ನಡುವಲ್ಲಿದೆ.
ರಾಮಸೇತು ಎಂಬುದು ಓಷನೋಗ್ರಫಿ ಯ ರಿಸರ್ಚ್ ನಂತೆ ಏಳುಸಾವಿರ ವರ್ಷಗಳಷ್ಟು ಹಳೆಯದು. ಧನುಷ್ಕೋಟಿಯ ಬಳಿ ಹಾಗೂ ಮನ್ನಾರ್ ದ್ವೀಪದ ಸಾಗರದಂಡೆಯ ಕಾರ್ಬನ್ ಡೇಟಿಂಗ್ ಮಾಹಿತಿ ರಾಮಾಯಣದಲ್ಲಿ ಉಲ್ಲೇಖಿಸಲಾದ ಕಾಲಕ್ಕೆ ಸರೀ ಹೊಂದುತ್ತದೆ. ರಾಮಾಯಣದಲ್ಲಿ ನಲ ನೀಲ ಎಂಬ ಕಪಿಗಳ ಮುಖಂಡತ್ವದಲ್ಲಿ ಸುಣ್ಣದಂತಹ ಪುಮೈಸ್ ಎಂಬ (ಲೈಮ್ ಸ್ಟೋನ್ ಶೋಲ್) ಹಗುರವಾದ ಕಲ್ಲು, ಆದರೆ ಅದು ವಿಶೇಷವಾಗಿ ನಿರ್ಮಿತವಾದದ್ದು ಅಂದರೆ ನೊರೆ, ನಡುವೆ ಗಾಳಿಯ ಬುದ್ಬದಗಳು ಲಾವಾದೊಂದಿಗೆ ಸೇರಿ ಘನೀಕರಿಸಿರುವ ಅವು ನೀರಲ್ಲಿ ಮುಳುಗದೆ ತೇಲಬಲ್ಲವು. ಈಗಲೂ ಈ ವಿಶೇಷ ಕಲ್ಲುಗಳನ್ನು ರಾಮೇಶ್ವರಂನಲ್ಲಿ ಕಾಣಬಹುದು. ಇದರ ವಿಸ್ತೀರ್ಣ ಮೂರುವರೆ ಕಿಮೀ, ಅದರ ಉದ್ದ ಮೂವತ್ತೈದು ಕಿ.ಮಿ.ಗಳು ಅಂದರೆ 1:10 ರ ಪ್ರಮಾಣ. ಇದರ ವಿಸ್ತೀರ್ಣ ರಾಮಾಯಣ ಯುದ್ಧ ಕಾಂಡ 22ನೇ ಸರ್ಗ ಎಪ್ಪತ್ತನಾಲ್ಕನೇ ಶ್ಲೋಕದಲ್ಲಿ 100 ಯೋಜನ ಉದ್ದ ಮತ್ತು 10 ಯೋಜನೆ ವಿಸ್ತಾರ ಎಂದೆನಲಾಗಿದೆ.
ಲಕ್ಷ್ಮಣ ಹಾಗೂ ವಾನರ ಸೈನ್ಯದ ಪುನರುಜ್ಜೀವನಕ್ಕಾಗಿ ದ್ರೋಣಗಿರಿಯನ್ನು ಹನುಮಂತ ತರುವನು. ಅದನ್ನು ಕೈಲಾಸ ಹಾಗೂ ರಿಷಭ ಪರ್ವತಗಳ ನಡುವಲ್ಲಿದೆ ಎಂದು ವರ್ಣಿಸಲಾಗಿದೆ. ಈಗಿನ ಬದರೀನಾಥ ಹಾಗೂ ತುಂಗಾನಾಥದ ನಡುವೆ ಎಂದು ತಿಳಿದು ಬರುತ್ತದೆ. ಮೃತ ಸಂಜೀವಿನಿ ಎಂಬ ಸಸ್ಯ ಸೆಗೆನೆಲ್ಲ ಬೈರೋಪ್ಟರಿಸ್ ಎಂಬುದಾಗಿದೆ.
ಶ್ರೀ ಲಂಕಾದಲ್ಲಿನ ರಾವಣನ ಅರಮನೆಯ ಪಳೆಯುಳಿಕೆಗಳು ಸಿಕ್ಕಿವೆ. ಅಲ್ಲದೆ ಪುಷ್ಪಕ ವಿಮಾನ ರಾವಣನ ಬಳಿಯಿದ್ದ ಹಲವಾರು ವಿಮಾನಗಳ ಪೈಕಿ ಒಂದು. ಶ್ರೀ ಲಂಕಾದಲ್ಲಿನ ಹಲವು ಜಾಗೆಗಳ ಹೆಸರುಗಳು ವಿಮಾನ ನಿಲ್ದಾಣ ಹಾಗೂ ನಿರ್ಮಾಣದ ಅರ್ಥ ಸಿಂಹಳಿ ಭಾಷೆಯಲ್ಲಿ ಸೂಚಿಸುವಂತಿರುವುದು ಸೋಜಿಗವೇ, ಪೂರಕವೇ? ಇದು ನಾನು ಹೇಳಿದ್ದೇನೆ ನೀವು ಕೇಳಿ ಪ್ರಶ್ನೆ ಮಾಡಬಾರದು, ತರ್ಕಕ್ಕೆ ಆಸ್ಪದವಿಲ್ಲ ಎಂಬಂತಿಲ್ಲ. ಎಲ್ಲವೂ ತರ್ಕಬದ್ಧ, ದೇವಸ್ಥಾನ, ಸ್ಥಳಪುರಾಣ, ಕಥಾನಕ, ಶ್ಲೋಕಗಳಲ್ಲಿ ಖಚಿತ ಮಾಹಿತಿ, ಆ ಚುಕ್ಕೆಗಳನ್ನು ಸೇರಿಸಿದರೆ ನಮಗೆ ಸಂಪೂರ್ಣ ರೂಪುರೇಷೆ ಲಭ್ಯ ಇದಲ್ಲವೇ ವೈಜ್ಞಾನಿಕ ಮನೋಭಾವ ಎಂಬುದು? ಈ ಮಾಹಿತಿ ವ್ಯತಿರಿಕ್ತವಾಗಿ ಕಂಡುಬರಲು ಸಾಧ್ಯತೆ ಇದೆ ಅದಕ್ಕೆ ಕಾರಣ ನಮ್ಮ ಜ್ಞಾನದ ಮಟ್ಟ ಹಾಗು ಏಳು ಸಾವಿರ ವರ್ಷಗಳ ಅಂತರವಲ್ಲದೆ ಬೇರೇನು ಕಾರಣ ಹೇಳಿ? ವಿತಂಡ ವಾದಿಗಳು ಎಷ್ಟೇ ಕುತರ್ಕ ಮಾಡಿದರೂ, ನಿಜವು ಅಗ್ನಿಯಂತೆ ಜ್ವಲಿಸುತ್ತಿಲ್ಲವೇ? ಅದರ ಫಲವೇ ರಾಮಜನ್ಮಭೂಮಿಯಲ್ಲಿ ರಾಮ ಲಲ್ಲಾನ ದೇವಸ್ಥಾನ ವೈಜ್ಞಾನಿಕವಾಗಿ ಹಾಗೂ ದೃಢೀಕೃತ ಸಾಕ್ಷಿ ಪುರಾವೆಗಳೊಂದಿಗೆ ನಿರ್ಮಾಣ ವಾಗುತ್ತಿರುವು ನಮಗೆ ಹೆಮ್ಮೆ ಸಂತಸ ತರುವ ಸಮಾಚಾರವಾಗಿದೆಯಷ್ಟೇ.
ಡಾಕ್ಟರ್ ರೇಖಾ ಶ್ರೀನಿವಾಸನ್ (99400 31162)
ಲೇಖಕರ ಸಂಕ್ಷಿಪ್ತ ಪರಿಚಯ:
ಮಂತ್ರಾಲಯ ಬಳಿಯ ಆದವಾನಿಯಲ್ಲಿ ಜನಿಸಿದ್ದು. ಬೆಳೆದದ್ದು ಚಿತ್ರದುರ್ಗದಲ್ಲಿ. ಶ್ರೀ ಶ್ರೀನಿವಾಸ ಅವರ ಪತ್ನಿಯಾಗಿ ಚೆನ್ನೈನಲ್ಲಿ ನೆಲೆಸಿ ಇಪ್ಪತ್ನಾಲ್ಕು ವರ್ಷಗಳಿಂದ ಹೋಮಿಯೋಪತಿ ವೈದ್ಯೆಯ ವೃತ್ತಿ ಜೀವನವಾದರು, ಪ್ರವೃತ್ತಿಯಲ್ಲಿ ಬರಹಗಾರ್ತಿ ಆಗುವ ಹಂಬಲ. ಇಪ್ಪತ್ತು ವರ್ಷಗಳ ನಂತರ ಪುನಃ ಕನ್ನಡ ಸಾಹಿತ್ಯ ಓದುವ, ಬರೆಯುವ ಕೈಂಕರ್ಯ ಮುಖಪುಸ್ತಕದ ಮೂಲಕ ಪುನರುಜ್ಜೀವನ ವಾಯಿತು. ಹತ್ತಾರು ಸಣ್ಣ ಕಥೆಗಳನ್ನು, ಮನೋವೈಜ್ಞಾನಿಕ ಕಥೆಯನ್ನು ಬರೆದ ಅನುಭವ. ಆಧ್ಯಾತ್ಮಿಕ ಒಲವು ಇರುವುದರಿಂದ “ಸುಗುಣ ಡೈಜೆಸ್ಟ್” ನಲ್ಲಿ ಬರಹಗಳು ಪ್ರಕಟಗೊಂಡಿವೆ. ಚೆನ್ನೈ ಮೈಲಾಪುರ ಉಡುಪಿ ಮಠದಲ್ಲಿ ಪುರಂದರದಾಸರ ಆರಾಧನೆ ಪ್ರಯುಕ್ತ ಅವರ ಕೀರ್ತನೆಗಳ ಸಂಗೀತ ಸ್ಪರ್ಧೆಗಳನ್ನು ಐದು ಸತತ ವರ್ಷಗಳು ಸಂಚಾಲಕಿಯಾಗಿರುವ ಸೌಭಾಗ್ಯ ಒದಗಿತ್ತು. ಹೋಮಿಯೋಪತಿ ಹಾಗೂ ಸ್ನಾತಕೋತ್ತರ ವಿಷಯಗಳಾದ ಮನಃಶಾಸ್ತ್ರ,ಪಾಲಿಯೇಟಿವ್ ಕೇರ್ ಬಗ್ಗೆ ಮೆಡಿಕಲ್ ಜರ್ನಲ್ ಗಳಿಗೆ ಬರೆಯುವುದು ಹವ್ಯಾಸ ಹಾಗೆಯೇ ಸಂಶೋಧನಾ ಲೇಖನಗಳನ್ನು ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಮಂಡಿಸಿರುವುದು ಉಂಟು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ