ತನ್ನಿಮಿತ್ತ ಲೇಖನ: ಜ.4- ಕಾಲಭೈರವಾಷ್ಟಮಿ- ಕಾಲಭೈರವಂ ಭಜೆ

Upayuktha
0


ನಿರಾಕಾರನೂ, ಸಚ್ಚಿದಾನಂದ ಸ್ವರೂಪನೂ, ಅವ್ಯಕ್ತನೂ, ಅಗೋಚರನೂ, ಭಯಂಕರ ಸ್ವರೂಪನೂ ಆದ ಭೈರವೇಶ್ವರನ ದಿವ್ಯವಾದ, ಭವ್ಯವಾದ, ಬೃಹತ್ತಾದ ಕಾಲಭೈರವೇಶ್ವರ ದೇವಾಲಯವು ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿದೆ. ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಜ 4ರಂದು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಕಾಲಭೈರವಾಷ್ಟಮಿ ಮಹೋತ್ಸವ ನಡೆಯಲಿದೆ.



ಕಾಲಭೈರವನ ಜಯಂತಿಯನ್ನು ಪ್ರತಿ ಮಾರ್ಗಶಿರ ಮಾಸದ ಕೃಷ್ಣ ಅಷ್ಟಮಿ ದಿವಸ ಆಚರಿಸುವುದು ರೂಢಿಯಲ್ಲಿ ಬಂದಿದೆ. ಕರ್ನಾಟಕದಲ್ಲಿ ಆದಿಚುಂಚನಗಿರಿಯ ಕಾಲಭೈರವ ದೇವಸ್ಥಾನ ಭವ್ಯವೂ ಬೃಹತ್ತೂ ಆಗಿದೆ. ಆದಿಚುಂಚನಗಿರಿ ಕ್ಷೇತ್ರ ಅಧಿದೇವತೆ ಕಾಲಭೈರವನೇ. ಕಾಪಾಲಿಕರು, ಅಘೋರಿಗಳು, ಅಸ್ಸಾಮಿನ ತಾಂತ್ರಿಕರು, ಕರ್ನಾಟಕದಿಂದ ಹಿಡಿದು ಕಾಶ್ಮೀರ, ಶ್ರೀಲಂಕಾ, ನೇಪಾಳಗಳಲ್ಲಿ ಕೂಡ ಕಾಲಭೈರವನ ಆರಾಧನೆ ನಡೆಯುವುದು. ಕಾಲಭೈರವ ರೂಪದಲ್ಲಿ ಭೀಕರವಾಗಿದ್ದರೂ ಹೆಸರು ಕೇಳಿದರೆ ಭಯಪಡುವಂತಿದ್ದರೂ ನಿಜಕ್ಕೂ ಮೂಲಕ ಸಂರಕ್ಷಕನೇ. 


ಕಾಲಭೈರವನ ಆರಾಧನೆಯ ಮೂಲಕ ಅನೇಕ ಶುಭ ಫಲಗಳು ದೊರೆಯುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. ಕಾಲಭೈರವ 'ಕಾಲ'ದ ದೇವತೆ. ಅವನನ್ನು ಪೂಜಿಸುವುದರಿಂದ ನಾವು ವೃಥಾ ಕಾಲ ಕಳೆಯುವುದನ್ನು ತಪ್ಪಿಸಿ ನಮ್ಮ ಕಾಲವನ್ನು ಉತ್ತಮ ಕೆಲಸಗಳಲ್ಲಿ ತೊಡಗಿಸಲು ಸಾಧ್ಯವಾಗುವುದು. ಈತನ ಆರಾಧನೆಯಿಂದ ಸೋಮಾರಿತನ ಅಥವಾ ಕೆಲಸಗಳನ್ನು ಮುಂದೂಡುವ ಪ್ರವೃತ್ತಿಗಳಿಗೆ ಪೂರ್ಣ ವಿರಾಮ ಬೀಳುವುದು. ಅವನನ್ನು ನಂಬಿದಂಥವರನ್ನು ತನ್ನ ಶಕ್ತಿ ಮಾತ್ರದಿಂದಲೇ ಪರಿಶುದ್ಧಗೊಳಿಸುತ್ತಾನೆ ಎನ್ನಲಾಗಿದೆ. ವಿರುದ್ಧವಾಗಿರುವ ಸಂದರ್ಭಗಳನ್ನು ಅನುಕೂಲಕಾರಿಯಾಗಿ ಮಾರ್ಪಡಿಸುವುದರಲ್ಲಿ ಕಾಲಭೈರವನ ಅರ್ಚನೆ, ಅಷ್ಟಕದ ಜಪ ಬಹು ಸಹಾಯಕಾರಿ ಎನ್ನುತ್ತಾರೆ. 


ಕಾಲಭೈರವ ಕ್ಷೇತ್ರಪಾಲ. ದೇವಸ್ಥಾನಗಳನ್ನು ಸಂರಕ್ಷಿಸುವ ದೇವತೆ. ಆದ್ದರಿಂದಲೇ ಶಿವ ಮತ್ತು ಶಕ್ತಿಯ ದೇವಸ್ಥಾನಗಳಲ್ಲಿ ಕಾಲಭೈರವನದೇ ಒಂದು ಆಲಯವಿರುತ್ತದೆ. ದೇವಸ್ಥಾನದ ಬಾಗಿಲುಗಳನ್ನು ಮುಚ್ಚಿದ ನಂತರ ಬೀಗದ ಕೈಗಳನ್ನು ಕಾಲಭೈರವನಿಗೆ ಒಪ್ಪಿಸಿ ಹೋಗುವುದು ಪದ್ಧತಿ. ಆದರಿಂದ ದೇವಾಲಯದ ಸಂರಕ್ಷಣೆಯ ಹೊಣೆಯನ್ನು ಅವನಿಗೆ ಒಪ್ಪಿಸಿದಂತೆ. ಮರುದಿನ ಅವನಿಂದ ಬೀಗದ ಕೈಗಳನ್ನು ಪಡೆದೇ ದೇವಸ್ಥಾನದ ಬಾಗಿಲುಗಳನ್ನು ತೆರೆಯುವುದು. 


ಆದಿ ಶಂಕರಾಚಾರ್ಯರು ಅವರ ಜೀವಿತ ಕಾಲದಲ್ಲಿ ಭಾರತ ದೇಶವನ್ನು ಸುತ್ತಾಡಿ ಹಲವಾರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು. ಅವುಗಳಲ್ಲಿ ಕಾಶಿ ಅಥವಾ ವಾರಾಣಾಸಿ ಒಂದು ತೀರ್ಥಕ್ಷೇತ್ರ. ಪವಿತ್ರ ಗಂಗೆಯ ದಡದಲ್ಲಿರುವ ಕಾಶಿಯ ಕ್ಷೇತ್ರಪಾಲ ದೈವ ಕಾಲಭೈರವ. ಕಾಲಭೈರವ ಮೂರ್ತಿಯ ದರ್ಶನದಿಂದ ಪ್ರೇರಿತರಾದ ಆಚಾರ್ಯರು ಎಂಟು ಸಂಸ್ಕೃತ ಶ್ಲೋಕಗಳ ಸುಂದರ 'ಕಾಲಭೈರವಾಷ್ಟಕ' ಎಂಬುದನ್ನು ರಚಿಸಿದ್ದಾರೆ. ಇಂದಿಗೂ ಅದು ಭಕ್ತರ ನಾಲಗೆಗಳ ಮೇಲೆ ನಲಿದಾಡುವ ಅಷ್ಟಕವಾಗಿದೆ. 


ಯಾತ್ರಾರ್ಥಿ ಭಕ್ತರನ್ನು ಕಾಪಾಡುವವನು ಅವನೇ. ರಾತ್ರಿ ಹೊತ್ತು ಪ್ರಯಾಣ ಮಾಡುವವರು ಕಾಲಭೈರವನಿಗೆ ದೀಪಾರತಿ ಮಾಡಿ ಅಥವಾ ದೀಪ ಹಚ್ಚಿ ಪ್ರಯಾಣ ಆರಂಭಿಸುವುದರಿಂದ ಕ್ಷೇಮ ಎಂಬುದು ನಂಬಿಕೆ. ಸಮುದ್ರಗಳಾಚೆ ವಾಸಿಸುವವರು ತಮ್ಮ ಪ್ರಯಾಣಗಳನ್ನು ಆರಂಭಿಸುವುದರ ಮೊದಲು ಕಾಲಭೈರವನ ಪೂಜೆ ಮಾಡಿಸುವುದು ಅವರ ರಕ್ಷಣೆಯ ದೃಷ್ಟಿಯಿಂದ ಬಹಳ ಉತ್ತಮ ಎನ್ನಲಾಗಿದೆ. 


ಕಾಲಭೈರವನ ವಿಗ್ರಹಗಳನ್ನು ನೋಡಿದರೆ ಭಯ ಉಂಟಾಗುವುದು ಸಹಜ. ದಪ್ಪ ಹೊಟ್ಟೆ, ರೌದ್ರವಾಗಿ ಕಾಣುವ ಕಣ್ಣುಗಳು, ಚಾಚಿಕೊಂಡಿರುವ ಕೋರೆ ಹಲ್ಲುಗಳು, ಆನೆಯ ಚರ್ಮವನ್ನುಟ್ಟಿರುವುದು. ಕೊರಳಲ್ಲಿ ಹಾವಿನ ಹಾರ, ಜೊತೆಗೆ ನಾಯಿಯ ವಾಹನ ಮೊದಲಾದವು ಒಟ್ಟಿನಲ್ಲಿ ಭಯ ಹುಟ್ಟಿಸುವುದರಲ್ಲಿ ಆಶ್ಚರ್ಯವೇನಿಲ್ಲ. 


ಕಾಲಭೈರವ ಶಿವನ ಅಂಶ. ಕಾಲಭೈರವನನ್ನು ಕುರಿತು ಶಿವ ಮಹಾಪುರಾಣದಲ್ಲಿ ಕುತೂಹಲಕರವಾದ ಆಖ್ಯಾನವಿದೆ. ಒಮ್ಮೆ ವಿಷ್ಣು ಮತ್ತು ಬ್ರಹ್ಮ ಜ್ಯೋತಿರ್ಲಿಂಗದ ಗಾತ್ರವನ್ನು ಅಳೆಯುವ ಪ್ರಯತ್ನ ಮಾಡಲುಪಕ್ರಮಿಸಿದರಂತೆ. ಜ್ಯೋತಿರ್ಲಿಂಗ ಎಂದರೆ ಶಿವನು ಬೆಳಕಿನ ರೂಪದಲ್ಲಿರುವ ಲಿಂಗ. ವಿಷ್ಣು ಪಾತಾಳದ ಕಡೆ ಪಯಣಿದನಂತೆ. ಬ್ರಹ್ಮ ಊರ್ಧ್ವಮುಖಿಯಾಗಿ ಹೊರಟನಂತೆ. ಆದರೆ ಅವರಿಬ್ಬರೂ ಕೊನೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲವಂತೆ. ಊರ್ಧ್ವಮುಖಿಯಾಗಿ ಪಯಣಿಸುತ್ತಿದ್ದ ಬ್ರಹ್ಮನಿಗೆ ಅವನ ದಾರಿಯಲ್ಲಿ ಒಂದು ಹೂವಿನ ಪಕಳೆ ದೊರೆಯಿತಂತೆ. ಅದು ಜ್ಯೋತಿರ್ಲಿಂಗದ ತಲೆಯ ಭಾಗದಿಂದಲೇ ಬಿದ್ದಿರಬೇಕೆಂದು ಅಂದುಕೊಂಡ ಬ್ರಹ್ಮ ತಾನು ಜ್ಯೋತಿರ್ಲಿಂಗದ ಊರ್ಧ್ವ ಸ್ಥಾನವನ್ನು ತಲುಪಿದ್ದಾಗ ಹೇಳಿದನಂತೆ. ಅದು ಸತ್ಯಕ್ಕೆ ದೂರವಾಗಿದ್ದ ಮಾತು. ವಿಷ್ಣು ಮಾತ್ರ ತಾನು ಸೋತೆನೆಂದು ಒಪ್ಪಿಕೊಂಡ. ಆದರೆ ಬ್ರಹ್ಮ ತನ್ನ ಎತ್ತರಕ್ಕೆ ಹೋಗಿಲ್ಲವೆಂಬುದು ಶಿವನಿಗೆ ಖಚಿತವಾಗಿತ್ತು. ಬ್ರಹ್ಮನು ಅಸತ್ಯವನ್ನು ನುಡಿಯುತ್ತಿದ್ದಾನೆಂದು ಶಿವ ಕುಪಿತನಾದನಂತೆ. ರೌದ್ರಾವತಾರ ತಾಳಿದ ಶಿವ ತನ್ನ ಹುಬ್ಬಿನಿಂದ ಒಂದು ಕೂದಲನ್ನು ಕಿತ್ತು ಕಾಲಭೈರವನನ್ನು ಸೃಷ್ಟಿಸಿದನಂತೆ. (ಕೆಲವು ಕಡೆ ತನ್ನ ಉಗುರಿನಿಂದ ಸೃಷ್ಟಿಸದನೆಂದೂ ಉಲ್ಲೇಖಿಸಲಾಗಿದೆ.)


 ಹೀಗೆ ಜನ್ಮ ತಳೆದ ಕಾಲಭೈರವ ಭಯಂಕರ ರೂಪಿನಿಂದ ನಿಂತನಂತೆ. ಶಿವನು ಬ್ರಹ್ಮನನ್ನು ಕೊಲ್ಲುವಂತೆ ಆಜ್ಞಾಪಿಸಿದನಂತೆ. ಕಾಲಭೈರವ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿದನಂತೆ. ಅದೇ ಬ್ರಹ್ಮಕಪಾಲವೇ ಕಾಲಭೈರವನ ಕೈಯಲ್ಲಿರುವ ತಲೆ ಬುರುಡೆಯಂತೆ. ಆಗಿನಿಂದ ಚತುರ್ಮುಖ ಬ್ರಹ್ಮ ಸದ್ಬುದ್ಧಿಯನ್ನು ಕಲಿತು ಲೋಕಕ್ಕೆ ಹಿತ ಮಾಡುವವನಾದನಂತೆ. 


 ಆದರೆ ಕಾಲಭೈರವನಿಗೆ ಬ್ರಹ್ಮನ ಶಿರವನ್ನು ಕಡಿದ ಪಾಪ ಅಂಟಿಕೊಂಡಿತು. ಆದ್ದರಿಂದ ಕೈಯಲ್ಲಿ ಬ್ರಹ್ಮ ಕಪಾಲವನ್ನು ಹಿಡಿದು ಅವನು ಕಾಪಾಲಕನಾಗಿ ನಿರಂತರ ತೀರ್ಥಯಾತ್ರೆ ಮಾಡಬೇಕಾಗಿ ಬಂದಿತಂತೆ. ಹೀಗೆ ಸಂಚರಿಸುವಾಗ ವಾರಣಾಸಿಗೆ ತಲುಪಿದಾಗ ಕೈಯಲ್ಲಿದ್ದ ಬ್ರಹ್ಮಕಪಾಲ ನೆಲದ ಮೇಲೆ ಬಿದ್ದು ಪಾಪಕ್ಕೆ ಪರಿಹಾರ ದೊರೆಯಿತಂತೆ. ಬ್ರಹ್ಮಕಪಾಲ ಕೆಳಕ್ಕೆ ಬಿದ್ದ ಸ್ಥಳದಲ್ಲಿಯೇ ಕಾಶಿಯಲ್ಲಿ ಇಂದು ಕಾಲಭೈರವನ ದೇವಸ್ಥಾನವಿದೆ ಎಂಬುದು ಸ್ಥಳ ಪುರಾಣ. ಕಾಲಭೈರವನ ವಾಹನ ನಾಯಿ. ಆದ್ದರಿಂದ ಅನೇಕ ಭಕ್ತರು ನಾಯಿಗೆ ಆಹಾರ ನೀಡುವುದರ ಮೂಲಕ ಕಾಲಭೈರವನನ್ನು ಸಂತಸಪಡಿಸಬಹುದೆಂದು ನಂಬುತ್ತಾರೆ. 



ಕಾಲಭೈರವಾಷ್ಟಕಮ್

ಶ್ರೀಮದ್‌ಶಂಕರಾಚಾರ್ಯರು ಶ್ರೀ ಗುರುಗೋವಿಂದ ಭಗವತ್ಪಪಾದರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದು ಗೀತೋಪನಿಷತ್ತುಗಳು ಬ್ರಹ್ಮಸೂತ್ರಾದಿ ಅನೇಕ ಶಾಸ್ತ್ರಗಳು ಅಧ್ಯಯನ ಮಾಡಿ ಅದ್ವೈತ ಧರ್ಮ ಭೋದನೆ ಮಾಡಿಕೊಂಡು ಉತ್ತರ ಭಾರತದ ಕಡೆ ತಮ್ಮ ಶಿಷ್ಯರೊಡಗೂಡಿ ತೀರ್ಥಕ್ಷೇತ್ರಗಳನ್ನು ದರ್ಶನ ಮಾಡಲು ಹೊರಟರು. ಪವಿತ್ರ ನದಿಗಳಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧೂ, ಕಾವೇರಿ ಮೊದಲಾದ ನದಿಗಳ ದಡದಲ್ಲಿರುವ ಪವಿತ್ರ ಕ್ಷೇತ್ರ ದರ್ಶನ ಮಾಡಿಕೊಂಡು ಪರಮ ಪವಿತ್ರವಾದ ಗಂಗಾನದಿ ಕ್ಷೇತ್ರದಲ್ಲಿ ಪ್ರಸಿದ್ಧ ಶ್ರೀ ಕಾಶಿ ಕ್ಷೇತ್ರವು ದ್ವಾದಶ ಲಿಂಗಗಳಲ್ಲೂ ಶ್ರೇಷ್ಠವಾದ ಕಾಶಿ ಕ್ಷೇತ್ರ (ವಾರಣಾಸಿ ಕ್ಷೇತ್ರ)ದ ಶ್ರೀ ವಿಶ್ವನಾಥನ ದರ್ಶನಕ್ಕೆ ಶಿಷ್ಯರೊಡಗೂಡಿ ಆಗಮಿಸಿ ಪವಿತ್ರವಾದ ಗಂಗಾನದಿಯಲ್ಲಿ ಮಿಂದು ಶ್ರೀ ವಿಶ್ವನಾಥ ಸ್ವಾಮಿ ಮೇಲೆ ಪವಿತ್ರ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿದರು. ಶಿಷ್ಯರೊಡಗೂಡಿ ಸ್ತೋತ್ರಗಳನ್ನು ಪಠಿಸಿ ದರ್ಶನ ಪಡೆದರು. ನಂತರ ಇದೇ ಕ್ಷೇತ್ರದ ಇತರ ದೇವಾಲಯಗಳ ದರ್ಶನಕ್ಕೆ ಹೊರಟರು. ಆದರೆ ವಿಶ್ವನಾಥನ ಸನಿಹದಲ್ಲೇ ಇರುವ ಶ್ರೀ ಕಾಲಭೈರವ ದರ್ಶನಕ್ಕೆ ಮುಂದಾಗಲಿಲ್ಲ. ಆ ದೇವಾಲಯದಿಂದ ಮುಂದಕ್ಕೆ ಹೊರಟರು. ಭಗವಾನ ಶ್ರೀ ಕಾಲಭೈರವ ಸ್ವಾಮಿ ಬಿಡಬೇಕಲ್ಲ, ಕೆಲವು ಅಡಿಗಳು ಕ್ರಮಿಸುವಷ್ಟರಲ್ಲಿ ಶ್ರೀ ಕಾಲಭೈರವ ಸ್ವಾಮಿ ಬೇಡನ ವೇಷ ಧರಿಸಿ ವೇದ ಮಾತೆಗಳನ್ನು 4 ಶ್ವಾನಗಳಾಗಿ ಮಾಡಿಕೊಂಡು ಶ್ರೀ ಶಂಕರ ಯತಿಗಳು ಮತ್ತು ಶಿಷ್ಯರುಗಳ ಎದುರು ಬಂದು ನಿಂತನು. ಶ್ರೀ ಶಂಕರ ಯತಿಗಳ ಮತ್ತು ಶಿಷ್ಯರು ಎದುರಾಗಿನಿಂತ ಇವರನ್ನು ಶ್ರೀಗುರುಗಳು ಬರುತ್ತಿದ್ದಾರೆ ದೂರ ಸರಿಯಿರಿ ದೂರ ಸರಿಯಿರಿ ಎಂಬುದಾಗಿ ಕೂಗುತ್ತಾರೆ. ಇವರ ಯಾವ ಮಾತನ್ನು ಕೇಳಿಸದಂತೆ ಶ್ರೀ ಕಾಲಭೈರವಸ್ವಾಮಿ, ಬೇಡನು ಹಾಗೂ 4 ಶ್ವಾನಗಳು ದಾರಿ ಬಿಡಲಿಲ್ಲ. ಶ್ರೀ ಕಾಲಭೈರವಸ್ವಾಮಿ ಆನಂತರ ನಮ್ಮ ಕೆಲವು ಪ್ರಶ್ನೆಗಳು ಇವೆ ಎಂದರು. ಶ್ರೀ ಶಂಕರ ಯತಿಗಳು ಮುಂಧೆ ಬಂದರು ಪ್ರಶ್ನೆ ಏನೆಂದು ಪ್ರಶ್ನಿಸಿದರು. ಸಾಕ್ಷಾತ್ ಶಿವನೇ ಹೀಗೆ ಒಮ್ಮೆಲೆ ಪ್ರತ್ಯಕ್ಷರಾದ ಶ್ರೀ ಕಾಲಭೈರವ ಸ್ವಾಮಿಯ ದರ್ಶನ ಪಡೆದ ಶ್ರೀ ಶಂಕರರು ಶ್ರೀ ಕಾಲಭೈರವ ಸ್ವಾಮಿಯವರನ್ನು ಭಕ್ತಿಯಿಂದ 8 ಶ್ಲೋಕವುಳ್ಳ ಅಷ್ಟಕ ಸ್ತೋತ್ರವನ್ನು ಹಾಡಿದರು. 


 ಭೂತಸಂಘನಾಯಕ ವಿಶಾಲಕೀರ್ತಿದಾಯಕಂ 

 ಕಾಶಿವಾಸಲೋಕ ಪುಣ್ಯಪಾಪಶೋಧಕಂ ವಿಭುಮ್|

 ನೀತಿಮಾರ್ಗ ಕೋವಿದಂ ಪುರಾತನಂ ಜಗತ್ಪತಿಂ 

 ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ||


ಶ್ರೀ ಕಾಲಭೈರವ ಸ್ವಾಮಿ ತನ್ನ ನಿಜರೂಪವಾದ ಒಂದು ಕೈಯಲ್ಲಿ ತ್ರಿಶೂಲ ಒಂದು ಕೈಯಲ್ಲಿ ಭಿಕ್ಷಾಪಾತ್ರೆ ಮಾನವ ರುಂಡಗಳ ಮಾಲೆ ಧರಿಸಿದವನಾಗಿ ಅಗ್ನಿಶಿಲೆಯನ್ನೇ ಕಿರೀಟವಾಗಿ ಧರಿಸಿ ನಾಲ್ಕು ಶ್ವಾನರೂಪವಾಗಿದ್ದವರು ನಾಲ್ಕು ವೇದ ಮಾತೆಯರೊಂದಿಗೆ ನಿಲ್ಲುವವನಾದನು. 



- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು

ಮೊಬೈಲ್ : 9739369621

ಇ-ಮೇಲ್ : padmapranava@yahoo.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top