ಬೇಯಿಸಿ ಒಣಗದ ಮತ್ತು ಬೇಯಿಸಲು ಸಿದ್ದಗೊಂಡಿರುವ ಸುಲಿದ ಅಡಿಕೆಯನ್ನು ಏನು ಮಾಡುವುದು?

Upayuktha
0


ಳೆದ ಮೂರು ದಿನದಿಂದ ಬಿಸಿಲು ಇಲ್ಲದ ವಾತಾವರಣ.  ನಿನ್ನೆ ರಾತ್ರಿಯಿಂದ ನಿರಂತರ ಸಣ್ಣ ಮಳೆ.  ಇನ್ನೂ ಮೂರು ದಿನ ಮಳೆ- ಮೋಡ ಮುಂದುವರೆಯುವ ಸಾಧ್ಯತೆ ಇದೆಯಂತೆ.

ಕೆಲವು ಅಡಿಕೆ ಬೆಳೆಗಾರರು ಕಳೆದ ಮೂರು ದಿನದಿಂದ, ಒಂದೆರಡು ಹಂಡೆಯಷ್ಟು ಅಡಿಕೆ ಬೇಯಿಸಿ ಒಣಗಲು ಹಾಕಿದ್ದಾರೆ, ಆದರೆ ಸ್ವಲ್ಪವೂ ಬಿಸಿಲು ಇಲ್ಲದ ಕಾರಣ, ಅಡಿಕೆಯಲ್ಲಿ ಹೂ ಬಂದಿದೆ.

ಇವತ್ತು ಬೇಯಿಸಲು ಸಿದ್ದ ಪಡಿಸಿ, ಹಂಡೆಗೆ ತುಂಬಿಸಿಟ್ಟು, ಚೊಗರು ಹಾಕಿಟ್ಟ ಅಡಿಕೆ ಹಂಡೆಯ ಒಲೆಗೆ ಇಂದು ಬೆಂಕಿ ಹಾಕಲಿಲ್ಲ, ಕಾರಣ ಬಿಡದೆ ಬರುತ್ತಿರುವ ಸಣ್ಣ ಮಳೆ!!

ಇನ್ನು ಒಂದು-ಎರಡು ಹಂಡೆಯಷ್ಟು ಮೆಶಿನ್‌ನಲ್ಲಿ ಸುಲಿದ ಅಡಿಕೆಯ ಮುಗುಟು ಬಿಡಿಸಿ, ಬೇಯಿಸಲು ಸಿದ್ದಮಾಡಿಟ್ಟಾಗಿದೆ.

**

ಇಷ್ಟರ ಜೊತೆಗೆ, ಖರ್ಚೂ ಗೀಟುವುದಿಲ್ಲ ಅಂತ ಹಾಳು ಬಿಟ್ಟ ಒಂಚೂರು ಗದ್ದೆಯಲ್ಲಿ, ಈ ವರ್ಷ ಅಕ್ಕಿ-ಭತ್ತಗಳ ರೇಟು ಏರಿದ ಖುಷಿಯಲ್ಲಿ, ಈ ಬಾರಿ ಗದ್ದೆ ಮಾಡೇ ಬಿಡುವ ಅಂತ ಇದ್ದ ಒಂದೂವರೆ ಖಂಡಗ ಗದ್ದೆಗೆ ಬೇಲಿ ಬಿಗಿದು ಭತ್ತ ಹಾಕಲಾಗಿತ್ತು.  ಬಾಡಿಗೆ ಮೆಶಿನ್ ಬಂದಿದ್ದರಿಂದ, ನಿನ್ನೆ ಅದನ್ನು ಕುಯಿಲೂ ಮಾಡಲಾಗಿದೆ.  ಇವತ್ತು ಕುಯಿದ ಗದ್ದೆಯಲ್ಲಿ ಪೂಷಾ ಮಳೆಯ ನೀರು!!! ಎರಡು ಮೂರು ದಿನ ಮಳೆ ಮುಂದುವರೆದರೆ ಏನು ಮಾಡುವುದು ಅಂತ ಒಂದು ಸಮಸ್ಯೆ.


ಅಡಿಕೆ ಎಲೆ ಚುಕ್ಕಿ ವಿಸ್ತಾರಗೊಳ್ಳುವುದಕ್ಕೆ ಇವತ್ತಿನ ವಾತಾವರಣ ಹೇಳಿ ಮಾಡಿಸಿದಂತಿದೆ, ಕೂಡಲೆ Metalaxyl (systemic) + Mancozeb (contact) + hexaconozol:- systemic  ಎಲ್ಲ ಸ್ಪ್ರೇ ಮಾಡಿ ಅಂತ ವಾಟ್ಸಪ್‌ನಲ್ಲಿ ರಿಪೀಟ್ ಮೆಸೇಜ್‌ಗಳು ಬರ್ತಾ ಇವೆ. ಈಗ ಅಡಿಕೆ ಕೊನೆ ತೆಗೆಯುವುದಕ್ಕೇ ಜನ ಸಿಗುತ್ತಿಲ್ಲ, ಇನ್ನು ಔಷಧಿ ಸ್ಪ್ರೇಗೆ ಜನ ಎಲ್ಲಿಂದ ತರುವುದು?.  ಇದೂ ಒಂದು ಸಮಸ್ಯೆ!!.  


'ಪರ್ಯಾಯ ಬೆಳೆ, ಅಕ್ಕಿ ಖರ್ಚಿಗಾದರೂ ಇರಲಿ' ಅಂತ ತೋಟದ ಮಧ್ಯ ಬೆಳೆದ ಕಾಫಿ ಗಿಡದಲ್ಲಿ, ಹಣ್ಣಾದ ಕಾಫಿ ಉದುರುತ್ತಿದೆ.  ಗಿಡದಲ್ಲಿ ಉಳಿದ ಕಾಫಿ ಹಣ್ಣಿನ ಪಕ್ಕದಲ್ಲೇ ಇನ್ನು ಹೂ ಬರುತ್ತಾ? ಎಂತೇನಾ?

**

ಇದಿಷ್ಟು ಈ ದಿನದ ಬಹುತೇಕ ಅಡಿಕೆ, ಗದ್ದೆ, ಚೂರು ಕಾಫಿ ಇರುವವರ ಸಮಸ್ಯೆ!!!

**

ಜಪಾನ್‌ನಲ್ಲಿ ಹೊಸ ಕ್ಯಾಲೆಂಡರ್‌ನ್ನು ಗೋಡೆಗೆ ಹಾಕುವಾಗಲೇ ಭೂಕಂಪ, ಸುನಾಮಿ, ಏರ್ ಕ್ರಾಶ್‌ಗಳಾಗಿ ಜನ ಜೀವನ ಅಸ್ತವ್ಯಸ್ತ, ಸಾವು ನೋವು ಉಂಟಾಗಿದೆ. ಜಪಾನ್‌ನಷ್ಟು ಅಲ್ಲದಿದ್ದರೂ, ಇಲ್ಲಿ ನಮ್ಮ ಸಮುದ್ರಗಳಲ್ಲಿನ ಸೈಕ್ಲೋನ್ ಅಡಿಕೆ, ಭತ್ತ, ಕಾಫಿ ಬೆಳೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ.  ಹೊಸ ಕ್ಯಾಲೆಂಡರ್ ವರ್ಷದಲ್ಲೇ ದೋಷಗಳಿವೆಯಾ?

ಇರಲಿ, ಇದೆಲ್ಲ ಇದ್ದದ್ದೆ.  ಪರಿಹಾರ ಹುಡುಕಿಕೊಳ್ಳಬೇಕು.  ಆಗುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು.

**

ಪುನಃ ಸುಲಿದಿಟ್ಟ, ಸುಲಿದು ಬೇಯಿಸಿ ಒಣಗದಿರುವ ಅಡಿಕೆಗೆ ಬರುವ!!.  

ಡ್ರೈಯರ್ ಇದ್ದವರು ಅದರಲ್ಲಿ ಅಡಿಕೆ ಒಣಗಿಸುತ್ತಾರೆ, ಸಮಸ್ಯೆ ಇಲ್ಲ.  ಹೊಗದಟ್ಟಿ ವ್ಯವಸ್ಥೆ ಇದ್ದವರೂ ಸ್ವಲ್ಪ ಸ್ವಲ್ಪ ಅದರಲ್ಲಿ ಒಣಗಿಸಬಹುದು, ಅಡ್ಡಿ ಇಲ್ಲ.


ಆದರೆ, ಈ ಎರಡೂ ವ್ಯವಸ್ಥೆ ಇಲ್ಲದವರು ಏನು ಮಾಡಬಹುದು?  

ಯಾರಾದರು ಅನುಭವೀ ಹಿರಿಯ ಅಡಿಕೆ ತಜ್ಞ ರೈತರು ಮಾಹಿತಿ ಕೊಡಬಹುದಾ? 


ಜೊತೆಗೆ ಈ ಕೆಳಗಿನ ಪ್ರಯತ್ನಗಳನ್ನು ಮಾಡುವ ಪ್ರಯತ್ನಗಳಿಂದ ಏನಾಗಬಹುದು ಅಂತ ಸಲಹೆ ಅಭಿಪ್ರಾಯ ಕೊಡಬಹುದಾ?

1) ಮುಗುಟು ತೆಗೆದು ಬೇಯಿಸಲು ಸಿದ್ದ ಮಾಡಿದ ಅಡಿಕೆಯನ್ನು ನೀರಿನಲ್ಲಿ (ಯತೇಚ್ಚ ಚೊಗರಿದ್ದರೆ ಅದರಲ್ಲಿ) ನೆನೆಸಿಟ್ಟು, ಬಿಸಿಲು ಬಂದ ಮೇಲೆ ಬೇಯಿಸಿ ಒಣಗಿಸುವುದು (ಈ ಕ್ರಮವನ್ನು ಈಗಾಗಲೆ ಅನೇಕರು ಮಾಡುತ್ತಿದ್ದಾರೆ.  ಆದರೆ, ಹೀಗೆ ಎಷ್ಟು ದಿನಗಳವರೆಗೆ ನೆನೆಸಿಡಬಹುದು?)

2) ಬೇಯಿಸಿ ಒಣಗಿಸಲು ಹರಡಿದ ಅಡಿಕೆಯನ್ನು (ಹೂ ಬಂದಿರುವುದು) ಎತ್ತಿ ತಂದು ನೀರಿನಲ್ಲಿ ನೆನಸಿಡುವುದು.  ಈ ಬೇಯಿಸಿದ ಮತ್ತು ಏನೇನೂ ಒಣಗಿರದ ಅಡಿಕೆಯನ್ನು ನೀರಿನಲ್ಲಿ ನೆನಸಿಟ್ಟರೆ ಮತ್ತು ಮೂರು-ನಾಲ್ಕು ದಿನಗಳ ನಂತರ (ಬಿಸಿಲು ಬಂದರೆ) ಬೇಯಿಸಿ ಒಣಗಿಸಿದರೆ ಏನಾದರು ತೊಂದರೆ ಆಗಬಹುದಾ?

3) ಬೇಯಿಸಿ ಒಣಗಿಸಲು ಹರಡಿದ ಅಡಿಕೆಯನ್ನು (ಹೂ ಬಂದಿರುವುದು) ತಂದು ಅಡಿಕೆ ತಟ್ಟಿ, ಅಡಿಕೆ ಟ್ರೇಗಳಲ್ಲಿ, ಮಳೆ ಬೀಳದ ಜಾಗದಲ್ಲಿ ಇಟ್ಟು ಗಾಳಿಗೆ ಬಿಡುವುದು.  ಹೂ ಬರುವುದು ಹೆಚ್ಚಾಗಬಹುದು.  ಬಿಸಿಲು ಬಂದ ಮೇಲೆ ಪುನ ಕುದಿ ಚೊಗರಿಗೆ ಹಾಕಿ, ಒಂದು ಕುದಿ ಬರಿಸಿ, ಒಣಗಿಸುವುದು.  ಆದೀತಾ?.

4) ಸೌದೆ ಕೊಟ್ಟಿಗೆಯಲ್ಲಿ, ಮಣ್ಣಿನ ನೆಲದಲ್ಲಿ, ಹಳೇ ಸೀರೆ-ಪಂಚೆ ಹಾಕಿ ಹರಡಿಡುವುದು, ಬಿಸಿಲು ಬಂದ ಮೇಲೆ ಪುನಃ ಕುದಿ ಚೊಗರಿಗೆ ಹಾಕಿ, ಒಂದು ಕುದಿ ಬರಿಸಿ, ಒಣಗಿಸುವುದು. ಆಗಬಹುದಾ?

5) ರಾತ್ರಿ ಮತ್ತು ಮಳೆ ಬರುವಾಗ ಒಣಗಿರದ ಅಡಿಕೆಯನ್ನು ಮುಚ್ಚಿಡುವುದರಿಂದ ಹೂ ಬರುವಿಕೆ ಹೆಚ್ಚಾಗುತ್ತದೆ.  ಬದಲಿಗೆ ಮುಂದಿನ ಮೂರು ದಿನ ಅಂಗಳದಲ್ಲಿ/ಚಪ್ಪರದಲ್ಲಿ/ಟ್ರೇನಲ್ಲಿ ಆ ಅಡಿಕೆಯನ್ನು ಹಾಗೇ ಬಿಡುವುದು!!  ಮಳೆಯ ನೀರಿಗೆ ಚೊಗರು ತೊಳೆದುಕೊಂಡು ಹೋಗಬಹುದು.  ಹೆಚ್ಚಾಗಿ ಮೆಶಿನ್‌ನಲ್ಲಿ ಅಡಿಕೆ ಸುಲಿಯುವುದರಿಂದ ಬೆಟ್ಟೆ (ರಾಶಿ ಇಡಿ) ಅಡಿಕೆಯೇ ಆಗಿರುವುದರಿಂದ, ಈ ಕ್ರಮದಲ್ಲಿ ಹೆಚ್ಚಾಗಿ ಹೂ ಬಂದು ಅಡಿಕೆ ಹಾಳಾಗಲಿಕ್ಕಿಲ್ಲ ಅಂತ ಅನಿಸುತ್ತೆ.  ಯಾರಾದರು ಹೀಗೆ ಮಾಡಿದವರಿದ್ದಾರಾ?  ಬಿಸಿಲು ಬಂದ ಮೇಲೆ ಬಿಸಿ ಚೊಗರಿಗೆ ಹಾಕಿ ಒಣಗಿಸುವುದು.  ಹೇಗೆ? 

6) ಇವುಗಳ ಬದಲಾಗಿ, ಬೇಯಿಸಿ ಒಣಗದ ಮತ್ತು ಬೇಯಿಸಲು ಸಿದ್ದಗೊಂಡಿರುವ ಸುಲಿದ ಅಡಿಕೆಯನ್ನು ಕಾಪಾಡಿಕೊಳ್ಳಲು ಬೇರೆ ಯಾವುದಾದರು ಮಾರ್ಗಗಳಿವೆಯಾ?


ಅಡಿಕೆ ಒಣಗಿಸುವ ಸಮಸ್ಯೆಗೆ ನಿಮ್ಮ ಅಭಿಪ್ರಾಯ, ಸಾಧ್ಯತೆಯ ದಾರಿಗಳು, ಪ್ರತಿಕ್ರಿಯೆಗಳು ಅನೇಕ ಅಡಿಕೆ ರೈತರಿಗೆ ಅನುಕೂಲವಾಗಬಹುದು. ಕೊಡಿ.


-ಅರವಿಂದ ಸಿಗದಾಳ್, ಮೇಲುಕೊಪ್ಪ.

9449631248



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top