ಬೆಂಗಳೂರು: ‘ಆಟೋಮೊಬೈಲ್ ನಿಂದ ಮೊಬೈಲ್ ವರೆಗೆ ಹಾಗೂ ತಂತ್ರಜ್ಞಾನವನ್ನು ಆಧರಿಸಿದ ನಮ್ಮ ಬದುಕಿನ ವಿವಿಧ ಹಂತಗಳಲ್ಲಿ ಸೆಮಿಕಂಡಕ್ಟರ್‍ಗಳ ಪಾತ್ರ ಬಹು ದೊಡ್ಡದು. ಭಾರತದಂತಹ ದೊಡ್ಡ ದೇಶ ಈ ತನಕ ಇಂತಹ ನಿತ್ಯೋಪಯೋಗಿ ಹಾಗೂ ಅನಿವಾರ್ಯವಾಗಿರುವ ಸೆಮಿಕಂಡಕ್ಟರ್‍ಗಳಿಗಾಗಿ ಇತರೆ ದೇಶಗಳ ಆಮದನ್ನೇ ಆಶ್ರಯಿಸಿರುವುದು ವಿಷಾದದ ಸಂಗತಿ. ಅಚ್ಚರಿಯ ಸಂಗತಿಯೆಂದರೆ, ಇಡೀ ವಿಶ್ವದಾದ್ಯಂತ ಇರುವ ಸೆಮಿಕಂಡಕ್ಟರ್ ತಯಾರಿಕಾ ಘಟಕಗಳಲ್ಲಿ ವಿನ್ಯಾಸವನ್ನು ಸಜ್ಜುಗೊಳಿಸುವ ಇಂಜಿನಿಯರ್‍ಗಳ ಪೈಕಿ ಶೇಕಡಾ 20ರಷ್ಟು ಭಾರತೀಯ ತಂತ್ರಜ್ಞರು! ಇಂತಹ ಪಳಗಿದ ಅತ್ಯಂತ ಬುದ್ದಿವಂತ ತಂತ್ರಜ್ಞರಿದ್ದರೂ ನಾವು ಸೆಮಿಕಂಡಕ್ಟರ್‍ಗಳ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡುತ್ತಿಲ್ಲ. ಇದರಿಂದ ಅನೇಕ ಸವಲತ್ತುಗಳು ಹಾಗೂ ಆಧುನಿಕ ಸೌಲಭ್ಯಗಳು ಜನಸಾಮಾನ್ಯರನ್ನು ತಲುಪಲು ವಿಳಂಬವಾಗುತ್ತಿದೆ.
2026ನೇ ಇಸವಿಯ ಹೊತ್ತಿಗೆ ಈ ಉದ್ಯಮದ ಮಾರುಕಟ್ಟೆ ಮೌಲ್ಯ 26 ಬಿಲಿಯನ್ ಅಮೆರಿಕನ್ ಡಾಲರ್‍ಗಳಷ್ಟಾಗಲಿದೆ. ನಮ್ಮ ಯುವ ತಂತ್ರಜ್ಞರು ಈಗ ಈ ಹೊಸ ಮನ್ವಂತರದಲ್ಲಿ ಸೆಮಿಕಂಡಕ್ಟರ್ ಉದ್ಯಮ ಕ್ಷೇತ್ರದಲ್ಲಿ ತೊಡಗಬೇಕು, ಪ್ರಸ್ತುತ, ಶೇಕಡಾ 95ರಷ್ಟು ಚಿಪ್‍ಗಳನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಜಗತ್ತಿನ ಇತರೆ ಭಾಗಗಳಿಗೆ ರಫ್ತು ಮಾಡುವ ಸುಸ್ಥಿತಿ ತಲುಪುವಂತೆ ಮಾಡಲು ಪಣ ತೊಡಬೇಕು. ಆಗ ಮಾತ್ರ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ನಮ್ಮ ಕಾಣಿಕೆಯೂ ಸಲ್ಲುತ್ತದೆ’, ಎಂದು ಭಾರತ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಅಭಿವೃದ್ಧಿ ಹಾಗೂ ಅನ್ವೇಷಣಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ನರೇಶ್ ಕುಮಾರ್ ನುಡಿದರು.
ಅವರು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗ, ಐಮ್ಯಾಪ್ಸ್ ಇಂಡಿಯಾದ ಸಹಯೋಗದೊಂದಿಗೆ ಏರ್ಪಡಿಸಿದ್ದ ಸೆಮಿಕಂಡಕ್ಟರ್ ಹಾಗೂ ಚಿಪ್‍ಗಳ ವಿನ್ಯಾಸ ಮತ್ತು ಪ್ಯಾಕೇಜಿಂಗ್, ಜೋಡಿಸುವಿಕೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ಶ್ರೀಯುತರು – ‘ಸೆಮಿಕಂಡಕ್ಟರ್‍ಗಳ ಉತ್ಪಾದನಾ ಘಟಕಗಳು ಯಾವುದೇ ಕಂಪನಗಳಿಗೂ ಈಡಾಗದ ಹಾಗೆ ಅತ್ಯಂತ ವೈಜ್ಞಾನಿಕವಾಗಿ ನಿರ್ಮಾಣವಾಗಬೇಕು, ಏಕೆಂದರೆ ಸಣ್ಣ ಕಂಪನ ಕೂಡ ಚಿಪ್‍ಗಳ ಗುಣಮಟ್ಟವನ್ನು ನಾಶಗೊಳಿಸುತ್ತದೆ’, ಎಂದರು.
ಡಿ.ಆರ್.ಡಿ.ಓ ದ ವಿಶ್ರಾಂತ ಮಹಾನಿರ್ದೇಶಕ ಡಾ. ಕೆ.ಡಿ. ನಾಯಕ್, ಐಮ್ಯಾಪ್ಸ್ ಇಂಡಿಯಾದ ಅಧ್ಯಕ್ಷ ವಿಜಯಕುಮಾರ್ ಪೂಜಾರಿ ಹಾಗೂ ಅಮೆರಿಕಾದ ಸೇಜ್‍ನ ತಾಂತ್ರಿಕ ಮಾರ್ಗದರ್ಶಕ ಡಾ. ಎಂ.ಎಚ್. ಕೋರಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಸಿ. ನಾಗರಾಜ್. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ‘ಸೆಮಿಕಂಡಕ್ಟರ್ ದಶಕಗಳಿಂದ ಅಸ್ತಿತ್ವದಲ್ಲಿದ್ದರೂ ಇದೀಗ ಅದು ತನ್ನ ಆಧುನಿಕ ರೂಪದಲ್ಲಿ ಹೊಸ ತಂತ್ರಜ್ಞಾನವನ್ನು ಆಧರಿಸಿ ಹೊರ ಬರುತ್ತಿದೆ. ಇದರಿಂದ ನಮ್ಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಜ್ಜುಗೊಳಿಸುವ ಕೆಲಸವನ್ನು ಐಮ್ಯಾಪ್ಸ್ ಇಂಡಿಯಾ ಸಮರೋಪಾದಿಯಲ್ಲಿ ಮಾಡಬೇಕಾಗಿದೆ. ಇದಕ್ಕಾಗಿ ಈಗಾಗಲೇ ಈ ತಂತ್ರಜ್ಞಾನವನ್ನಾಧರಿಸಿದ ಪದವಿ ತರಗತಿಗಳನ್ನು ಆರಂಭಿಸಿರುವ ದೇಶದ ಕೆಲವೇ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಬೃಹತ್ ಕಾರ್ಯಾಗಾರಗಳನ್ನು ರಾಷ್ಟ್ರಾದ್ಯಂತ ಹಮ್ಮಿಕೊಳ್ಳಲು ಐಮ್ಯಾಪ್ಸ್ ಇಂಡಿಯಾಗೆ ತಜ್ಞ ನೆರವು ನೀಡಲಿದೆ’, ಎಂದರು.
ದೇಶಾದ್ಯಂತ ಬಂದಿದ್ದ ನೂರಾರು ತಂತ್ರಜ್ಞರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಎರಡು ದಿನಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಸಮ್ಮೇಳನದಲ್ಲಿ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಸಮ್ಮೇಳನದ ಆಯೋಜನೆಯ ಮುಖ್ಯಸ್ಥರಾದ ಡಾ. ರಾಮಚಂದ್ರ ಎ.ಸಿ, ಡಾ. ಪರಮೇಶಾಚಾರಿ ಬಿ.ಡಿ ಹಾಗೂ ಇತರೆ ಶೈಕ್ಷಣಿಕ ಸಿಬ್ಬಂದಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ