ಮರ್ಯಾದಾ ಪುರುಷೋತ್ತಮ ಶ್ರೀರಾಮ- ಅಗಣಿತ ಗುಣಧಾಮ

Upayuktha
0






ಶ್ರೀರಾಮ ಇದು ಭಾರತೀಯರ ಉಸಿರನಲ್ಲಿ ಬೆರೆತು ಹೋದ ಹೆಸರು. ಭಾರತೀಯರ ಪಾಲಿಗೆ ಶ್ರೀರಾಮ ಕೇವಲ ಮನುಷ್ಯನಲ್ಲ. ಧರೆಗಿಳಿದ ಭಗವಂತ. ಮಾನವನ ರೂಪದಲ್ಲಿ ಮನುಷ್ಯನ ಬದುಕನ್ನು ನಿರ್ದೇಶಿಸಿದ ಮಹಾಶಕ್ತಿ. ಸೌಂದರ್ಯ, ಪರಾಕ್ರಮ, ಕರುಣೆ, ತ್ಯಾಗ ಮುಂತಾದ ಸದ್ಗುಣಗಳ ಸಾಕಾರಮೂರ್ತಿ. ಅಧರ್ಮದ ದಾರಿಯನ್ನು ಎಂದೂ ತುಳಿಯದ ಮರ್ಯಾದಾ ಪುರುಷೋತ್ತಮ. ತ್ರೇತಾಯುಗದ ಮಹಾಪುರುಷನಾದರೂ ದೇಶ-ಕಾಲಗಳ ಎಲ್ಲೆಯನ್ನು ಮೀರಿ ನಿಂತ ಆದರ್ಶಗಳ ತವರು. ಭಾರತದಲ್ಲಿ ಶ್ರೀರಾಮ ಎಂದೆಂದಿಗೂ ಪ್ರಸ್ತುತ.


ಅದಕ್ಕೆಂದೇ ವಾಲ್ಮೀಕಿ, “ರಾಮನನ್ನು ನೋಡದ ಮತ್ತು ರಾಮನ ಕಣ್ಣಿಗೆ ಬೀಳದ ವ್ಯಕ್ತಿ ಜಗತ್ತಿನಲ್ಲಿಯೇ ಅತ್ಯಂತ ನತದೃಷ್ಟ” ಎಂದು ಅಪ್ಯಾಯತೆಯಿಂದ ಶ್ರೀರಾಮನನ್ನು ಬಣ್ಣಿಸುತ್ತಾನೆ. ಇತಿಹಾಸದಲ್ಲಿ ಪ್ರಾಯಶಃ ಶ್ರೀರಾಮನಷ್ಟು ಮಾನವಜೀವನವನ್ನು ಪ್ರಾಭಾವಿಸಿದ ಬೇರೊಬ್ಬ ವ್ಯಕ್ತಿಯನ್ನು ನಾವು ಕಾಣಲಾರೆವು. ಆದಿಕವಿ ವಾಲ್ಮೀಕಿ ಕಟ್ಟಿಕೊಟ್ಟ, ಶ್ರೀರಾಮನ ಬದುಕಿಗೆ ಸಂಬಂಧಿಸಿದ, ಸ್ಫೂರ್ತಿದಾಯಕ ಘಟನವಾವಳಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.


ಹುಚ್ಚೆದ್ದ ಜನತೆ:

ಅದು ದಶರಥನ ಆಳ್ವಿಕೆಯ ಕಾಲ. ತರುಣ ಶ್ರೀರಾಮ ಅಯೋಧ್ಯೆಯ ಕಣ್ಮಣಿಯಾಗಿದ್ದ. ತನ್ನ ಸದ್ಗುಣ-ನಡತೆಗಳಿಂದ ಎಲ್ಲ ವರ್ಗದ ಜನರ ಪ್ರೀತಿ-ಅಭಿಮಾನಗಳನ್ನು ಗಳಿಸಿದ್ದ. ಎಲ್ಲರ ಮನೆಯ ಮಗನಾಗಿದ್ದ. ಸರ್ವರ ಹೃದಯವನ್ನು ಸೂರೆ ಮಾಡಿದ್ದ.

“ಸಚ ನಿತ್ಯಂ ಪ್ರಶಾಂತಾತ್ಮಾ ಮೃದುಪೂರ್ವಂ ಪ್ರಭಾಷುತೇ|

ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ||

ಕಥಂಚಿದುಪಕಾರೇಣ ಕೃತಕೃತ್ಯೇನ ತುಷ್ಯತಿ|

ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮ ವೃತ್ತಯಾ||”

ಶ್ರೀರಾಮನ ಮನಸ್ಸು ಸದಾ ನಿರ್ಮಲ, ಸ್ವಚ್ಛ-ಸುಂದರ ಸರೋವರ. ಮಾತಿಗೆ ಮುಂಚೆ ಮಿನುಗುವ ಮಂದಹಾಸ. ಸಹಜವಾಗಿ ಹೊರಹೊಮ್ಮುವ ಮೃದುಮಾತುಗಳು. ಯಾರಾದರೂ ಕಟುವಾಗಿ ಮಾತನಾಡಿದರೂ ಪ್ರತ್ಯುತ್ತರ ಕೊಡದ ಸೌಜನ್ಯ. ಮತ್ತೊಬ್ಬರು ಮಾಡಿದ ಅತಿಚಿಕ್ಕ ಉಪಕಾರವನ್ನೂ ಬಾಯ್ತುಂಬ ಪ್ರಶಂಸಿಸುವ ಉದಾರ ಹೃದಯ. ಯಾರೇ ಅನ್ಯಾಯ ಮಾಡಲಿ ಅದನ್ನು ಕ್ಷಮಿಸಿಬಿಡುವ ದೊಡ್ಡ ಗುಣ.


ಇಂತಹ ಮಗನನ್ನು ನೋಡಿದ ದಶರಥನಿಗೆ ಹೃದಯ ತುಂಬಿ ಬಂದಿತ್ತು. ಶ್ರೀರಾಮನನ್ನು ಯುವರಾಜನನ್ನಾಗಿ ಮಾಡುವ ಹೆಬ್ಬಯಕೆ ಹೊರಬಂದಿತು. ತನ್ನ ನಿರ್ಧಾರವನ್ನು ದಶರಥ ಪ್ರಕಟಿಸಿಯೇ ಬಿಟ್ಟ. ಆಗ ಜನರ ಪ್ರತಿಕ್ರಿಯೆ ಅದ್ಭುತ, ಅವರ್ಣನೀಯ.


“ಇತಿ ಬ್ರುವಂತಂ ಮುದಿತಾಃ ಪ್ರತ್ಯನಂದನ್ನೃಪಾನೃಪಮ್|‌

ವೃಷ್ಟಿಮಂತಂ ಮಹಾಮೇಘಂ ನರ್ದಂತ ಇವ ಬರ್ಹಿಣಃ||

ದಶರಥನ ನಿರ್ಧಾರವನ್ನು ಕೇಳಿದ ಅಯೋಧ್ಯೆಯ ಜನತೆ ಹುಚ್ಚೆದ್ದು ಕುಣಿಯಿತು. ಮಳೆಸುರಿಸುವ ಮೋಡಗಳನ್ನು ನೋಡಿ ನವಿಲುಗಳು ಸಂಭ್ರಮಿಸುವಂತೆ ಎಲ್ಲರೂ ಆನಂದದ ಹೊಳೆಯಲ್ಲಿ ಕೊಚ್ಚಿಹೋದರು. ದಶರಥನನ್ನು ಮುಕ್ತಕಂಠದಿಂದ ಪ್ರಶಂಸಿದರು. ಶ್ರೀರಾಮನ ವ್ಯಕ್ತಿತ್ವ ಹಾಗಿತ್ತು.


ಪೌರಾನ್‌ ಸೃಜನವತ್‌ ನಿತ್ಯಂ ಕುಶಲಂ ಪರಿಪೃಚ್ಛತಿ|

ವ್ಯಸನೇಷು ಮನುಷ್ಯಾಣಾಂ ಭೃಶಂ ಭವತಿ ದುಃಖಿತಃ|

ಉತ್ಸವೇಷು ಚ ಸರ್ವೇಷು ಪಿತೇವ ಪರಿತುಷ್ಯತಿ||

ಅಯೋಧ್ಯೆಯ ಜನತೆ ಶ್ರೀರಾಮನ ಹೃದಯವೇ ಆಗಿತ್ತು. ರಾಮ ಪ್ರತಿನಿತ್ಯ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಪ್ರತಿಯೊಬ್ಬರ ಮನೆಯ ಸಂತೋಷಗಳು ಅವನ ಸಂತೋಷಗಳಾಗಿರುತ್ತಿದ್ದವು. ಮನೆಯ ಹಿರಿಯನಂತೆ ಅವರ ಸಂಭ್ರಮಕ್ಕೆ ಹಿರಿಹಿರಿ ಹಿಗ್ಗುತ್ತಿದ್ದ. ಹೆರವರ ಯಾತನೆಯಿಂದ ಅವನ ಹೃದಯ ಒಡದೇ ಹೋಗುತ್ತಿತ್ತು. ಇದು ಶ್ರೀರಾಮ, ಜನಮಾನಸವನ್ನು ವ್ಯಾಪಿಸಿದ ಪರಿ. ರಾಜನೊಬ್ಬನಿಗಿರಬೇದಾದ ಅದರ್ಶ.


ಇತಿಹಾಸದ ಅವನ ತ್ಯಾಗ :

ಕೈಕೇಯಿ ಮತ್ತು ಮಂಥರೆಯ ಪಿತೂರಿಯಿಂದ ಅಯೋಧ್ಯೆಯಲ್ಲಿ ದೊಡ್ಡ ಅನಾಹುತವೇ ನಡೆದು ಹೋಯಿತು. ಕೈಕೇಯಿ ಕೇಳಿದ ವರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಯುವರಾಜನ ಪದವಿಯಲ್ಲಿ ರಾಮನನ್ನು ಪಟ್ಟಾಭಿಷಿಕ್ತನನ್ನಾಗಿ ಧನ್ಯನಾಗುವ ದಶರಥನ ಕನಸು ನುಚ್ಚುನೂರಾಯಿತು. ಅಯೋಧ್ಯೆ ವ್ಯಥೆಗೆ ಬಲಿಯಾಯಿತು. ಆ ಪ್ರಸಂಗದಲ್ಲಿ ರಾಮಾಯಾಣದ ಮಾತುಗಳು ಹೃದಯ ವಿದ್ರಾವಕ.


“ಪುತ್ರಂ ಪ್ರಥಮಜಂ ದೃಷ್ಟ್ವಾ ಜನನೀ ನಾಭ್ಯನಂದತ”

ಅಯೋಧ್ಯೆಯ ಎಲ್ಲ ಪ್ರಜೆಗಳು ತಮ್ಮ ಕೆಸಲಗಳನ್ನು ಸ್ಥಗಿತಗೊಳಿಸಿದರು. ವ್ಯಾಪಾರಿಗಳು ಸ್ವಯಂಪ್ರೇರಣೆಯಿಂದ ಅಂಗಡಿ-ಮುಗ್ಗಟ್ಟಗಳನ್ನು ಮುಚ್ಚಿದರು. ಗೃಹಿಣಿಯರು ಮನೆಯಲ್ಲಿ ಒಲೆಯನ್ನೇ ಹೊತ್ತಿಸಲಿಲ್ಲ. ಹಸುಗಳು ತಮ್ಮ ಕರುಗಳಿಗೆ ಹಾಲನ್ನೇ ಕುಡಿಸಲಿಲ್ಲ. ಮುಳುಗಿದ ಸೂರ್ಯ ಹೊರಬರಲೇ ಇಲ್ಲ. ಅಷ್ಟೇ ಏಕೆ? ರಾಮ ವನವಾಸಕ್ಕೆ ಹೋದ ವಿಷಗಳಿಗೆಯಲ್ಲಿ ಹುಟ್ಟಿದ ಚೊಚ್ಚಲು ಸಂತಾನವನ್ನು ತಾಯಿ ತಿರುಗಿ ನೋಡಲಿಲ್ಲ. ಶಿಶುಗಳು ಎದೆಹಾಲಿನ ಅಮೃತದಿಂದ ವಂಚಿತವಾದವು. ಇದು ಅಯೋಧ್ಯೆಯ ಜನತೆ ರಾಮನಿಗೆ ತಮ್ಮನ್ನು ಅರ್ಪಿಸಿಕೊಂಡ ಪರಿ.


ಕಾಡಿಗೆ ತೆರಳುವಾಗ ಶ್ರೀರಾಮನಾಡುವ ಮಾತುಗಳಂತೂ ಸುವರ್ಣಾಕ್ಷರದಲ್ಲಿ ಬಡೆದಿಡಬೇಕಾದವುಗಳು. 

ಯುವರಾಜನಾಗಿ ಮೆರೆಯಬೇಕಿದ್ದ ರಾಮ ಕಾಡಿಗೆ ನಡೆಯಬೇಕಾಯಿತು. ಅದಕ್ಕೆ ಕಾರಣಳಾದ ಕೈಕೇಯಿಯನ್ನು ಶ್ರೀರಾಮ ನಿಂದಿಸದೇ ಪ್ರಶಂಸೆಯ ಮಾತುಗಳನ್ನಾಡುತ್ತಾನೆ.


“ವನುಭವಿ ತನುಮಾತ್ರ ತ್ರಾಣ ಮಾಜ್ಞಾಪಿತಂ ಮೇ

ಸಕಲಭುವನ ಭಾರಃ ಸ್ಥಾಪಿತೋ ವತ್ಸಮೂರ್ದ್ನಿ”

“ತಾಯಿ ನಿನಗೆ ನನ್ನ ಮೇಲೆ ಅದೆಷ್ಟು ಕರುಣೆ! ರಾಜ್ಯವಾಳುವುದೆಂದರೆ ಮುಳ್ಳಿನ ಹಾಸಿಗೆಯಲ್ಲಿ ಮಲಗಿದಂತೆ. ಆ ಕಷ್ಟವನ್ನು ನನಗೆ ಕೊಡದೇ ನಿನ್ನ ಮಗ ಭರತನಿಗೆ ಕೊಟ್ಟೆ. ನನ್ನನ್ನು ಕಾಡಿಗೆ ಕಳುಹಿಸಿದರೂ ನನಗೆ ಸುಖವನ್ನೇ ಕರುಣಿಸಿರುವಿ. ಅಲ್ಲಿ ನನ್ನ ಯೋಗಕ್ಷೇಮವನ್ನಷ್ಟೇ ನಾನು ನೋಡಿಕೊಂಡರಾಯಿತು. ಯಾವ ಚಿಂತೆಯೂ ನನಗಿಲ್ಲ. ಈ ಪ್ರೀತಿಗೆ ನಾನು ಚಿರಋಣಿ.” ಇವು ವ್ಯಂಗ್ಯದ ಮಾತುಗಳಲ್ಲ. ಹೃದಯಾಂತರಾಳದ ಮಾತುಗಳು.


ಹೀಗೆ ಹೇಳಿದ ರಾಮ ಕಾಡಿಗೆ ನಡೆದೇಬಿಟ್ಟ. ಮನಸ್ಸು ಬಂಡೆಗಲ್ಲಿನಂತಿತ್ತು. ಮನೋವಿಕಾರದ ಯಾವು ಕುರುಹುಗಳೂ ಮುಖದಲ್ಲಿ ಕಾಣಲಿಲ್ಲ.

“ನ ವನಂ ಗಂತುಕಾಮಸ್ಯ ತ್ಯಜತಶ್ಚ ವಸುಂಧರಾಮ್|‌

ಸರ್ವಲೋಕಾತಿಗಸ್ಯೇವ ಲಕ್ಷ್ಯತೇ ಚಿತ್ತವಿಕ್ರಿಯಾ||”

ಇದು ಶ್ರೀರಾಮ ಎಲ್ಲರನ್ನೂ ಮೀರಿನಿಂತ ಇತಿಹಾಸದ ಅಪೂರ್ವ ಘಟನೆ. ಪಿತೃವಾಕ್ಯದ ಪರಿಪಾಲನೆಗಾಗಿ ಕೈಗೆ ದಕ್ಕಿದ್ದ ಸಮೃದ್ಧ ರಾಷ್ಟ್ರವನ್ನು ಕಸದಂತೆ ಕಂಡ ರಾಮನ ಆದರ್ಶ ಅಭೂತಪೂರ್ವ. ಅಧಿಕಾರಕ್ಕಾಗಿ ಎಲ್ಲವನ್ನೂ ಮಾಡುವ ಇಂದಿನ ಸಂದರ್ಭಕ್ಕೆ ಅತ್ಯಂತ ಮಾದರಿ.


ಎಂದೂ ಮಾಸದ ಅನುರಾಗ:

ಲಂಕೆಯಲ್ಲಿ ನಡೆದ ಸೀತೆಯ ಅಗ್ನಿಪರೀಕ್ಷೆ ಮತ್ತು ತುಂಬುಗರ್ಭೀಣಿಯಾದ ಸೀತೆಯನ್ನು ಕಾಡಿಗೆ ಕಳುಹಿಸಿದ ಈ ಎರಡು ಘಟನೆಗಳು, ಇವತ್ತಿಗೂ ಚರ್ಚೆಗೆ ಗುರಿಯಾಗುತ್ತಿವೆ. ಹೊರನೋಟಕ್ಕೆ ಈ ಎರಡು ಪ್ರಸಂಗಗಳು ಶ್ರೀರಾಮನ “ಸ್ತ್ರೀ ವಿರೋಧೀ” ಘಟನೆಗಳೆನಿಸಿದರೂ ರಾಜನೊಬ್ಬನಿಗೆ ಎದುರಾಗುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ತಿಳಿಯಾಗುತ್ತವೆ.


ರಾವಣನ ಮರಣಾನಂತರ ಶ್ರೀರಾಮಸೀತೆಯನ್ನು ಸ್ವೀಕರಿಸದೇ ಯಾರೂ ಊಹಿಸದ ರೀತಿಯಲ್ಲಿ ಕಟುನುಡಿಗಳನ್ನಾಡಿ ಅಗ್ನಿಪರೀಕ್ಷೆಗೆ ಗುರಿಮಾಡುತ್ತಾನೆ. ಆದರೆ ಅವನ ಮನಸ್ಸಿನಲ್ಲಿದ್ದ ಕೋಲಾಹ, ಸಂಕಟಗಳು ಶಬ್ದಾತೀತವಾದವುಗಳು. ಆ ಸಂದರ್ಭದಲ್ಲಿ ಅವನಾಡುವ ಮಾತುಗಳನ್ನು ನೋಡಿ,

“ಅವಷ್ಯಂ ತ್ರಿಷುಲೋಕೇಷು ನಸೀತಾ ಪಾಪಮರ್ಹತಿ|

ಅನನ್ಯಾಹಿ ಮಯಾಸೀತಾ ಭಾಸ್ಕರೇಣ ಪ್ರಭಾಯಥಾ||”

ಸೀತೆ ನನ್ನ ಮನದನ್ನೇ, ನನ್ನ ಪ್ರಾಣ, ನಮ್ಮೀರ್ವರ ಅನುರಾಗದ ಬೆಸುಗೆ ಅತ್ಯಂತ ಧೃಡವಾದುದು. ಸೂರ್ಯ ಮತ್ತು ಅವನ ಬೆಳಕಿಗೆ ಇರುವ ನಂಟಿನಂತೆ ನನ್ನ, ಸೀತೆಯ ಪ್ರೇಮ ಎಂದೂ ಅಳಿಯಲಾರದ್ದು. ಜಾನಕಿಯ ಅಂತರಗವನ್ನು ನಾನು ಚೆನ್ನಾಗಿ ಬಲ್ಲೆ, ಎಲ್ಲೇ ಇರಲಿ ಅವಳೆಂದೂ ತಪ್ಪು ದಾರಿ ತುಳಿಯುವುದಿಲ್ಲ. ಅದರೆ ರಾಜನಾಗಿ ನನಗೆ ಕೆಲವು ಅನಿವಾರ್ಯತೆಗಳಿವೆ. “ಸುಧೀರ್ಘಕಾಲ ರಾವಣನ ವಶದಲ್ಲಿದ್ದ ಸೀತೆಯನ್ನು ರಾಮ ಸ್ವೀಕರಿಸಿಬಿಟ್ಟ, ಅವನು ಕಾಮುಕ” ಎನ್ನುವ ಲೋಕಾಪವಾದದ ಸಾಧ್ಯತೆಯಿಂದಾಗಿ ನಾನಿವಳನ್ನು ಅಗ್ನಿಪರೀಕ್ಷೆಗೆ ಗುರಿಮಾಡಬೇಕಿದೆ.” ಹೀಗೆ ಹೇಳಿದ ರಾಮನಿಗೆ ಸೀತೆಯು ಅಗ್ನಿಪರೀಕ್ಷೆಯನ್ನು ಗೆದ್ದು ಬರುವ ಅಚಲ ವಿಶ್ವಾಸವಿತ್ತು. ಜಾನಕಿಯ ಶೀಲ ಶಂಕಿಸುವ ದುರ್ಬಲ ಮನಸ್ಥಿತಿ ಎಂದೂ ಶ್ರೀರಾಮನಿಗಿರಲಿಲ್ಲ.


ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳಿಸಿದ್ದೂ ಇದೇ ಹಿನ್ನೆಲೆಯಲ್ಲಿ

“ಪೌರಾಪವಾದಃ ಸುಮಹಾನ್‌ ತಥಾ ಜನಪದಸ್ಯಚ|

ವರ್ತತೇ ಮಯಿ ಭೀಭತ್ಸಃ ಸಮೇ ಮರ್ಮಾಣಿಕೃಂತತೇ||”

ರಾಮನಿಗೆ ಸೀತೆಯ ಪಾತಿವೃತ್ಯದ ಬಗ್ಗೆ ಏಳ್ಳಷ್ಟೂ ಶಂಕೆಯಿರಲಿಲ್ಲ. ಆದರೆ ದುಷ್ಟಶಕ್ತಿಗಳು ಅವಳ ಶೀಲದ ಬಗ್ಗೆ ಮಾಡಿದ್ದ ಬಿರುಸಾದ ಅಪಪ್ರಚಾರ ಮುಳ್ಳಿನಂತೆ ಅವನ ಮನಸ್ಸನ್ನು ಚುಚ್ಚುತ್ತಿತ್ತು. ತನ್ನ ವ್ಯಯಕ್ತಿಕ ಸಂಗತಿಗಳಿಗಿಂತಲೂ ಸೂರ್ಯವಂಶದ ಕೀರ್ತಿ ಅವನಿಗೆ ಹೆಚ್ಚಾಗಿತ್ತು. ಅದಕ್ಕೆ ಕಳಂಕ ಬರುವುದನ್ನು ಅವನು ಸಹಿಸಲಿಲ್ಲ. ಅನಿವಾರ್ಯವಾಗಿ ಸೀತೆಯನ್ನು ಬಿಡಬೇಕಾಯಿತು.


ಅದರೆ ಸಾಮಾನ್ಯರು ಭಾವಿಸದಂತೆ ಏಕಾಂಗಿಯಾಗಿ ಅವಳನ್ನು ಕಾಡಿಗೆ ಅಟ್ಟಲಿಲ್ಲ. ಶ್ರೀರಾಮ ವಾಲ್ಮೀಕಿ ಮುನಿಗಳ ಆಶ್ರಮದಂತಹ ಸುಭದ್ರ ನೆಲೆಯನ್ನು ಸೀತೆಗೆ ಒದಗಿಸಿದ್ದಾನೆ. ಲವ-ಕುಶರ ಹೆರಿಗೆಯಾಗುವ ವೇಳೆ ಅಲ್ಲಿ ಶತ್ರಘ್ನನಿದ್ದಾನೆ. ಅಶ್ರಮಕ್ಕೆ ಎಲ್ಲ ಬಂಧುಗಳು ಬಂದು ಹೋಗುವ ಸೂಚನೆ ವಾಲ್ಮೀಕಿ ರಾಮಾಯಣದಲ್ಲಿದೆ.

ಈ ಎರಡೂ ಘಟನೆಗಳನ್ನು ನಾವು ಸಂಕುಚಿತ ದೃಷ್ಟಿಯಿಂದ ನೋಡಲೇ ಬಾರದು. ಪ್ರಜೆಗಳ ಪ್ರತಿನಿಧಿಯಾದವನಿಗೆ ಸ್ವಂತ ಬದುಕಿಗಿಂತ ಪ್ರಜೆಗಳೇ ಮುಖ್ಯರಾಗಿರುತ್ತಾರೆ. ನಾಯಕನಾದವನು ವ್ಯಕ್ತಿಗತ ಹಿತಾಸಕ್ತಿಯನ್ನು ಮೀರಿ ಪ್ರಜೆಗಳಿಗೆ ಸ್ಪಂಧಿಸಬೇಕಾಗುತ್ತದೆ. ಸ್ವಲ್ಪವೂ ಕಳಂಕ ಅಂಟದಂತೆ ಶಾಸನ ಮಾಡಬೇಕಾಗುತ್ತದೆ. ಈ ರೀತಿಯ ಉದಾತ್ತ ಮೌಲ್ಯದ ದರ್ಶನ ಶ್ರೀರಾಮನ ವ್ಯಕ್ತಿತ್ವದಲ್ಲಿ ಕಾಣಬೇಕು.


ಪತಿತ ಪಾವನ ಸೀತಾರಾಮ:

ಶ್ರೀರಾಮ ಕಾರುಣ್ಯಮೂರ್ತಿ. “ಪತಿತೋದ್ಧಾರ” ಶ್ರೀರಾಮನ ವ್ಯಕ್ತಿತ್ವದ ಪ್ರಮುಖವಾದ ಅಂಶ. ದುಷ್ಟ ಶಕ್ತಿಗಳ ಸಂಹಾರಕ್ಕೆಂದೇ ವನವಾಸ ಮೀಸಲಾಯಿತು. ಅನೇಕ ಸಜ್ಜನರನ್ನು ರಾಮ ಉದ್ಧರಿಸಿದ. ಶಾಪಗ್ರಸ್ತಳಾಗಿ ಕಲ್ಲಾಗಿ ಬಿದ್ದಿದ್ದ ಅಹಲ್ಯೆಗೆ ಜೀವಕೊಟ್ಟು ಗೌತಮರ ಜೊತೆ ಸೇರಿಸಿದ. ಶಬರಿಯಂತಹ ಬೇಡಜಾತಿಯ ಹೆಣ್ಣುಮಗಳ ಸತ್ಕಾರ ಸ್ವೀಕರಿಸಿದ. ಭಕ್ತಿಗೆ ಜಾತಿ ಮುಖ್ಯವಲ್ಲವೆಂದು ಸಾರಿದ. ಮೀನುಗಾರ ಮುಖ್ಯಸ್ಥನಾದ ಗುಹ ಶ್ರೀರಾಮನ ಮೇಲೆ ಧೃಡವಾದ ಭಕ್ತಿಯನ್ನಿಟ್ಟುಕೊಂಡಿದ್ದ. ವಿರಾಧ-ಕಬಂಧರಂತಹ ನರಮಾಂಸ ಭಕ್ಷಕರು ಶ್ರೀರಾಮನ ಸಂಪರ್ಕದಿಂದ ಉತ್ತಮ ಚೇತನರಾದರು. ತನ್ನ ಪರಮ ಶತ್ರುವಾದ ರಾವಣನಿಗೂ ಅಂತ್ಯಸಂಸ್ಕಾರ ಮಾಡಿಸಿದ ಹಿರಿಮೆ ಶ್ರೀರಾಮನದ್ದು. ವಾಲಿವಧೆ, ಶಂಬೂಕವಧೆಗೂ ಸರಿಯಾದ ಸಮಾಧಾನಗಳೂ ರಾಮಾಯಣದಲ್ಲಿವೆ.


ಹೀಗೆ ಭಗವಂತ ಮಾನವನಾಗಿ ಅವತರಿಸಿ, ದುರ್ಭರ ಸನ್ನಿವೇಷಗಳಲ್ಲಿ ಮನುಷ್ಯ ನಡೆದುಕೊಳ್ಳಬೇಕಾದ ರೀತಿ-ನೀತಿಗಳನ್ನು ತೋರಿಸಿ ಅದರ್ಶಪ್ರಾಯನಾಗಿದ್ದಾನೆ. ದೇಶದ ಪ್ರತಿಯೊಬ್ಬ ಪ್ರಜೆಯ ಅಂತರಂಗದಲ್ಲೂ ಶ್ರೀರಾಮಚಂದ್ರನ ಪ್ರತಿಷ್ಠೆಯಾಗಿದೆ.



- ಶ್ಯಾಮಾಚಾರ್ಯ ಬಂಡಿ

ಪ್ರಾಧ್ಯಾಪಕರು, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top