ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಾಯಕತ್ವ ತರಬೇತಿ ಶಿಬಿರ

Upayuktha
0

ಸಾಂವಿಧಾನಿಕ ಮಾರ್ಗವೇ ದೇಶಪ್ರೇಮದ ಶ್ರೇಷ್ಠ ಮಾರ್ಗ: ಕ್ಯಾ.ಗಣೇಶ್ ಕಾರ್ಣಿಕ್  



ವಿದ್ಯಾಗಿರಿ: ‘ಶಿಕ್ಷಣ ಕೇವಲ ಪದವಿ ಪಡೆಯಲು ಅಲ್ಲ. ನಿಮಗೆ ನೀವು ಉತ್ತರದಾಯಿತ್ವ, ಜವಾಬ್ದಾರಿ, ಹೊಣೆಗಾರಿಕೆ ಹೊಂದುವುದು. ಇತರರ ಉಸ್ತುವಾರಿ ಬದಲಾಗಿ ವೈಯಕ್ತಿಕ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದು. ಅದುವೇ ನಾಯಕತ್ವ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.



75ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು  ಮುಂಡ್ರೆದಗುತ್ತು ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ)ಯಲ್ಲಿ ಗುರುವಾರ ಹಮ್ಮಿಕೊಂಡ ‘ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಪಾತ್ರ- ನಾಯಕತ್ವ ತರಬೇತಿ ಶಿಬಿರ'ವನ್ನು ಉದ್ಘಾಟಿಸಿ ಅವರು ಮೊದಲ ಉಪನ್ಯಾಸ ನೀಡಿದರು.




‘ಬದುಕು ಸುಂದರ ಪಯಣ. ವೈವಿಧ್ಯತೆಯಲ್ಲಿ ಏಕತೆಯು ಭಾರತವನ್ನು ಸುಂದರ ದೇಶ ಮಾಡಿದೆ. ಜೀವನದಲ್ಲಿ ದೇಶ ಮೊದಲು. ಮನುಷ್ಯ ನಿರ್ಮಾಣ ನಮ್ಮ ಗುರಿಯಾಗಬೇಕು. ಪ್ರಜಾಪ್ರಭುತ್ವವೇ ಶ್ರೇಷ್ಠ ಆಡಳಿತ ಮಾದರಿ. ನಿಮ್ಮ ಆತ್ಮಸಾಕ್ಷಿ ನಿಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಅದರ ಮಾತಿಗೆ ಬೆಲೆ ಕೊಡಿ. ವಿದ್ಯಾರ್ಥಿ ಜೀವನದಲ್ಲೇ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ. ಒಳ್ಳೆಯ ಮನುಷ್ಯನಾಗುವ ಕುರಿತು ಚಿಂತಿಸಿ’ ಎಂದರು.



‘ಮಹಾನ್ ಮೇಧಾವಿ ಸಾಕ್ರಟೀಸ್ ಹೇಳಿದಂತೆ, ನಿಮ್ಮ ನಿಮ್ಮ ಅಂತರ್ಯದ ಸೌಂದರ್ಯ ಹೆಚ್ಚಿಸಿಕೊಳ್ಳಿ’ ಎಂದರು. ‘ಸಿಯಾಚಿನ್‍ನಲ್ಲಿ ಉಂಟಾದ ಹಿಮಪಾತದಲ್ಲಿ ಸಿಲುಕಿದ ಸೈನಿಕ  ರೆಹಮುತ್ತುಲ್ಲಾ  36 ಗಂಟೆಗಳ ಬಳಿಕ ಪತ್ತೆಯಾಗಿದ್ದು, ಅವರ ರಕ್ಷಣೆ ಮಾಡಲಾಗಿತ್ತು. ಆದರೆ, ಅವರು ಕಾಲು ಕಳೆದುಕೊಂಡಿದ್ದರು. ಹೀಗಾಗಿ ಸೇನೆ ಬಿಡಬೇಕಾಗಿ ಬಂತು. ಆದರೆ,  ‘ನಾನು ಮತ್ತೆ ಹುಟ್ಟಿ ಸೈನಿಕನಾಗುತ್ತೇನೆ' ಎಂದು ಪ್ರತಿಜ್ಞೆ ಮಾಡಿದರು. ಇದು ದೇಶಪ್ರೇಮಕ್ಕೆ ಸಾಕ್ಷಿ ಎಂದು ಕಾರ್ಣಿಕ್ ಉದಾಹರಣೆ ನೀಡಿದರು.




ಆಳ್ಬಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ,  ವಿದ್ಯಾರ್ಥಿಗಳಿಗೆ ಶಿಸ್ತು ಮಾದರಿ. ಶಿಸ್ತು ಇದ್ದಾಗ ಬಾಹ್ಯ ನಿಯಂತ್ರಣದ ಅವಶ್ಯಕತೆ ಇಲ್ಲ. ನಾನು 50 ಸಾವಿರ ವಿದ್ಯಾರ್ಥಿಗಳ ಕಾಲೇಜು ಕಂಡಿದ್ದೇನೆ. ಆದರೆ, ದೇಶಪ್ರೇಮದ ಕಾರ್ಯಕ್ರಮ ಇಷ್ಟೊಂದು ಶ್ರದ್ಧೆ- ಶಿಸ್ತಿನಿಂದ ಮಾಡುವ ವಿದ್ಯಾರ್ಥಿ ಹಾಗೂ ಬಳಗವನ್ನು ಕಂಡಿಲ್ಲ ಎಂದರು. ವೈವಿಧ್ಯತೆಯಲ್ಲಿ ಏಕತೆಯೇ ದೇಶದ ಅಸ್ಮಿತೆ. ಪ್ರದೇಶ, ಭಾಷೆ, ಧರ್ಮ ಬೇರೆ ಬೇರೆಯಾಗಿದ್ದರೂ ಎಲ್ಲರನ್ನೂ ಗೌರವಿಸಿ. ಪ್ರಪಂಚವನ್ನು ಪ್ರೀತಿಸಿ, ನೆರೆಹೊರೆಯವರ ಜೊತೆ ಬದುಕು ಆನಂದಿಸಿ. ಪ್ರತ್ಯೇಕತೆ ಬೇಡ ಏಕತೆ ಇರಲಿ’ ಎಂದು ಹಿತವಚನ ಹೇಳಿದರು.



‘ನಿಮ್ಮ ಮತ್ತು ಬೇರೆಯವರ ಸಮಯವನ್ನು ಗೌರವಿಸಿ. ಸಮಯ ಗೌರವಿಸದವ ದೇಶ ಗೌರವಿಸಲು ಸಾಧ್ಯವಿಲ್ಲ’ ಎಂದರು. ಸೈನಿಕರ ತ್ಯಾಗ ಶ್ರೇಷ್ಠ. ಆದರೆ ಅದನ್ನು ನಾವು ಗೌರವಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಬೇಕಾಗಿದೆ. ಮಕ್ಕಳೇ ಸಾಧಕರ ಮಾತುಗಳನ್ನು ಬರೆದುಕೊಳ್ಳಿ, ಪ್ರಶ್ನೆ ಕೇಳಿ, ನೈಜ ಗುರುವನ್ನು ಹುಡುಕಿ ಅನುಸರಿಸಿ ಎಂದರು.



ಅವಿಭಜಿತ ದಕ್ಷಿಣ ಕನ್ನಡದ 26 ಕಾಲೇಜುಗಳಿಂದ 1600ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಉಪನ್ಯಾಸಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ವಂದಿಸಿದರು.



ಉಪನ್ಯಾಸ-2: 

'ನ್ಯಾಯಾಂಗ ಕ್ರಿಯಾಶೀಲತೆ' ಕುರಿತು ಮಾತನಾಡಿದ ಹಿರಿಯ ವಕೀಲ ಎಂ.ಕೆ. ವಿಜಯ ಕುಮಾರ್, ಪ್ರಜಾಪ್ರಭುತ್ವವೇ ಶ್ರೇಷ್ಠ ಆಡಳಿತ ಮಾದರಿಯಾಗಿದ್ದು, ಸಂವಿಧಾನ ಪರಮೋಚ್ಛವಾಗಿದೆ. ಸಂವಿಧಾನ ಮಾರ್ಗವನ್ನು ನಿರಾಕರಿಸುವುದು ಅರಾಜಕತೆಯಾಗಿದೆ’ ಎಂದರು.



‘ದೇಶದಲ್ಲಿ ಸಂವಿಧಾನವೇ ಅತ್ಯುನ್ನತ. ಅದು ನಮಗೆ ಕರ್ತವ್ಯ, ಹಕ್ಕು, ಅಧಿಕಾರಗಳನ್ನು ನೀಡಿದೆ. ಭಾರತ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಬಡ, ಅನಕ್ಷರಸ್ಥ ದೇಶ ಆಗಿತ್ತು. ಕಳೆದ 75 ವರ್ಷಗಳಲ್ಲಿ ದೇಶ ಐದನೇ ಸ್ಥಾನಕ್ಕೆ ಕಾಲಿಡುತ್ತಿರುವುದು ಶ್ರೇಷ್ಠತೆಯಾಗಿದೆ’ ಎಂದರು.



‘ಸಾಂವಿಧಾನಿಕ ಬಿಕ್ಕಟ್ಟು ಹಾಗೂ ಕಾನೂನು ನಿರ್ವಾತ ಏರ್ಪಟ್ಟ ಸಂದರ್ಭದಲ್ಲಿ ನ್ಯಾಯಾಂಗವು ಸಂವಿಧಾನ ಹಾಗೂ ಜನರ ರಕ್ಷಣೆ ಮಾಡಿದೆ. ಇಂತಹ ಸಂದರ್ಭಗಳಲ್ಲಿ ನಾವು ನ್ಯಾಯಾಂಗ ಕ್ರಿಯಾಶೀಲತೆ ಬಹುಮುಖ್ಯವಾಗಿದೆ’ ಎಂದರು. ‘ವ್ಯಕ್ತಿ ಬಂಧನಕ್ಕೆ 10 ನಿಯಮಗಳು, ಬಿಹಾರ ಜೈಲಿನಲ್ಲಿ ಶಿಕ್ಷೆಯ ಅವಧಿಗಿಂತ ಹೆಚ್ಚಿನ ಅವಧಿ ಇದ್ದ ಕೈದಿಗಳ ಬಿಡುಗಡೆ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ, 2ಜಿ ಹಗರಣದ 122 ಗುತ್ತಿಗೆ ರದ್ಧತಿ, ಗ್ರಾಮ ಸ್ವಚ್ಛತೆ ಕುರಿತು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೀಡಿದ ತೀರ್ಪು, ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ರಚನೆಯು ನ್ಯಾಯಾಂಗ ಕ್ರಿಯಾಶೀಲತೆಗೆ ಪ್ರಮುಖ ನಿದರ್ಶನಗಳಾಗಿವೆ’ ಎಂದರು.



‘ಸಮಾಜದ ಸಮರ್ಪಕ ಅರಿವಿಲ್ಲದವರು ಮೀಸಲಾತಿಯನ್ನು ಪ್ರಶ್ನಿಸುತ್ತಾರೆ. ಸಮಾನತೆ ತರಲು ಸಮಾಜದ ಸ್ಥಿತಿಯನ್ನು ಸಮಗ್ರವಾಗಿ ಅರಿತುಕೊಳ್ಳಬೇಕು. ಶತ ಶತಮಾನಗಳ ಸಮಾಜದ ಸ್ಥಿತಿ, ಎಲ್ಲ ದೃಷ್ಟಿಕೋನಗಳಿಂದ ಅಧ್ಯಯನದ ಮೂಲಕ ಮೀಸಲಾತಿಯನ್ನು ತರಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಸಹಸ್ರಾರು ವರ್ಷ ಲಕ್ಷಾಂತರ ಜನರ ಶೋಷಣೆ, ಅಸಮಾನತೆ, ವಿದ್ಯೆ- ಉದ್ಯೋಗ- ಭೂ ಇತ್ಯಾದಿ ಹಕ್ಕುಗಳ ನಿರಾಕರಣೆ ಮತ್ತಿತರ ಸಮಸ್ಯೆಗಳಿಂದ ಸಮಾಜವನ್ನು ಹೊರತರಲು ತಜ್ಞರು ಸೇರಿ ಮೀಸಲಾತಿ ತಂದಿದ್ದಾರೆ. ಅದರ ಬಳಕೆಯ ಬಗ್ಗೆ ಜಿಜ್ಞಾಸೆ ಇದೆ’ ಎಂದರು. ಜನಸಂಖ್ಯೆ ಹೆಚ್ಚಳ ಕಾರಣ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯದಾನ ವಿಳಂಬಕ್ಕೆ ಕಾರಣವಾಗಿತ್ತಿದೆ. ಜನಸಂಖ್ಯೆ ನಿಯಂತ್ರಣ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲುದು’ ಎಂದರು.



ಉಪನ್ಯಾಸ-3: 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, ‘ಜನರ ಪಾಲ್ಗೊಳ್ಳುವಿಕೆ, ಪಾರದರ್ಶಕತೆ ಹಾಗೂ ವಿಕೇಂದ್ರೀಕರಣದಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ. ಪಂಚಾಯತ್ ರಾಜ್ ಮೂಲಕ ಈ ಪ್ರಯತ್ನ ನಡೆಯುತ್ತಿದೆ’ ಎಂದರು. 



‘ಜನ ಗ್ರಾಮಸಭೆಯಲ್ಲಿ ಪಾಲ್ಗೊಳ್ಳಬೇಕು. ತಮ್ಮ ಮೂಲಸೌಕರ್ಯಗಳ ಬಗ್ಗೆ ಪ್ರಶ್ನಿಸಬೇಕು. ನೀವು ಪ್ರಶ್ನಿಸಿ- ಪಾಲ್ಗೊಂಡಷ್ಟು ಪ್ರಗತಿ ಹೆಚ್ಚಾಗುತ್ತದೆ. ನಿಮ್ಮ ಕೆಲಸ ಆಗದೇ ಇದ್ದರೆ, ಸಹಾಯವಾಣಿ 1902 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ಇಲಾಖೆಗೆ ಇ-ಮೇಲ್ ಮಾಡಿ’ ಎಂದರು.  ‘ಪಾರದರ್ಶಕತೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ. ಅದಕ್ಕಾಗಿ ‘ಪಂಚತಂತ್ರ’, ಆನ್‍ಲೈನ್ ಸಭೆ (ಪಂಚಮಿತ್ರ) ಹಾಗೂ ವೆಬ್‍ಸೈಟ್ ಮೂಲಕ ಜನರಿಗೆ ನೇರ ಮಾಹಿತಿ ಹಾಗೂ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಸದ್ಬಳಕೆ ಮಾಡಿ’ ಎಂದರು. 



‘ಗ್ರಾಮ ಸ್ವರಾಜ್ ಅನ್ನು ಮೈಸೂರು ರಾಜರು ಪ್ರಾಯೋಗಿಕವಾಗಿ ನಡೆಸಿದ್ದರು. ಗಾಂಧೀಜಿ ಆದ್ಯತೆ ನೀಡಿದರು. ರಾಜ್ಯದಲ್ಲಿ 1983ರಲ್ಲಿ ಅಬ್ದುಲ್ ನಜೀರ್ ಸಾಬ್ ಜಾರಿಗೆ ತಂದಿದ್ದರು. 1993 ದೇಶದಲ್ಲೇ ಕಾಯಿದೆ ಆಗಿ ಬಂದಿದೆ’ ಎಂದರು. ‘ವರ್ಷಕ್ಕೆ ಕನಿಷ್ಠ 2 ಗ್ರಾಮಸಭೆ ನಡೆಯಬೇಕು. ಗ್ರಾಮ ಸಭೆಯಲ್ಲಿ  ಪಾಲ್ಗೊಳ್ಳಿ. ನಿಮ್ಮ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿ’ ಎಂದರು. 



ರಾಜ್ಯದಲ್ಲಿ 5,951 ಗ್ರಾಮ ಪಂಚಾಯತ್‍ಗಳಿವೆ. ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಲಾಗಿದ್ದು, 2,600 ಕ್ಕೂ ಹೆಚ್ಚು ಮಹಿಳೆಯರು ತ್ಯಾಜ್ಯ ವಾಹನದ ಚಾಲಕರಾಗಿದ್ದಾರೆ. 11 ಸಾವಿರ ಮಹಿಳೆಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದ ಅವರು, ಗ್ರಾಮ ಪಂಚಾಯಿತಿ ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಿ’ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಜವಾಬ್ದಾರಿ ನಕ್ಷೆ ರೂಪಿಸಲಾಗುತ್ತಿದೆ. ಮಕ್ಕಳ ಬಜೆಟ್ ರೂಪಿಸುವ 100 ಗ್ರಾ.ಪಂ.ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾ.ಪಂ. ಮೂಲಕ ಹಲವಾರು ಕಾರ್ಯಕ್ರಮಗಳಿದ್ದು, ಪ್ರಯೋಜನ ಪಡೆದುಕೊಳ್ಳಿ’ ಎಂದರು. 



ಉಪನ್ಯಾಸ-4: 

‘ಕೋಟಿ ಸಂಪಾದನೆ ಇದ್ದರೂ, ಉಸಿರಾಡಲು ಆಮ್ಲಜನಕ, ಜೀವಕ್ಕೆ ನೀರು ಬೇಕು. ಅದಕ್ಕೆ ಪರಿಸರ- ಕಾಡು ಇರಬೇಕು’ ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಹೇಳಿದರು. ಹೋರಾಟಗಳು ಸಾಮಾಜಿಕ ನ್ಯಾಯಕ್ಕಾಗಿ. ಜನರ ಬದುಕಿನ ಹಕ್ಕಿಗಾಗಿ ಎಂದ ಅವರು, ನಾಗರಿಕತೆ ಹುಟ್ಟಲು ನದಿ ಕಾರಣವಾಯಿತು. ನದಿಗಳ ಮಾಲಿನ್ಯ ಮೂಲಕ ನಾವೇ ನಾಗರಿಕತೆ ನಾಶ ಮಾಡುತ್ತಿದ್ದೇವೆ ಎಂದರು.   



‘ಕಾಡು, ವನ್ಯಜೀವಿ, ಜೀವ ಸಂಪತ್ತು ಉಳಿಸುವ ಸಲುವಾಗಿ ಹಿರಿಯರು ಹಲವು ದೇವರನ್ನು ಸೃಷ್ಟಿಸಿದರು. ಈಗ ದೇವರ ಹೆಸರಲ್ಲೇ ಪರಿಸರ ನಾಶ ಮಾಡುತ್ತಿದ್ದಾರೆ. ಎಷ್ಟೇ ದುಬಾರಿ ಹರಕೆ ನೀಡಿದರೂ, ಪರಿಸರ ಹಾನಿ ಪಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು. ಪ್ರಕೃತಿಯ ಅಸ್ತಿತ್ವ ಉಳಿದರೆ ಮಾತ್ರ ಮನುಷ್ಯನ ಉಳಿವು ಸಾಧ್ಯ. ಅಂತರ್ಜಲ ಕುಸಿತ, ಜಾಗತಿಕ ತಾಪಮಾನ ಏರಿಕೆ ಮತ್ತಿತರ ಸಮಸ್ಯೆಗಳು ತೀವ್ರವಾಗುತ್ತಿವೆ.  ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಉಳಿಸೋಣ ಎಂದರು. 



ನಮ್ಮ ದೇಶದಲ್ಲಿ ಅಧ್ಯಾತ್ಮಿಕ ಮತ್ತು ಬದುಕಿನ ರಾಮನ ಪ್ರತಿಷ್ಠಾನ ಆಗಬೇಕು. ಏಕೆಂದರೆ, ರಾಮ ಪ್ರಮುಖ ಕಾಲ ಕಾಡಲ್ಲಿ ಕಳೆದಿದ್ದು, ಅಂತಹ ಕಾಡಿನ ಸಂರಕ್ಷಣೆ ನಡೆಯಬೇಕಾಗಿದೆ ಎಂದರು. ‘63 ದೇಶದಲ್ಲಿ ನಿಷೇಧಗೊಂಡ ಎಂಡೋಸಲ್ಫಾನ್ ಅನ್ನು ನಮ್ಮ ಕರಾವಳಿಯಲ್ಲಿ ಗೇರು ಗಿಡಕ್ಕೆ ಸಿಂಪಡಿಸಿದರು. ಆಗ ಹೋರಾಟಗಾರರು, ಪರಿಸರ ತಜ್ಞರು ವಿರೋಧಿಸಿದರು. ಆದರೆ ಜನ ಮಾತನಾಡಲಿಲ್ಲ. ಹೀಗಾಗಿ ಇಂದು 8,360 ಮಕ್ಕಳು ಮಾಂಸದ ಮುದ್ದೆ ಆಗಿದ್ದಾರೆ. ಬಾಯಿಮುಚ್ಚಿ ಕುಳಿತುಕೊಳ್ಳುವವರೇ ದೊಡ್ಡ ಅಪರಾಧಿಗಳು’ ಎಂದರು.  



ನೀರು ನಮ್ಮ ಜೀವಜಲ. ಗರ್ಭದಿಂದ ಸಾವಿನ ತನಕ ನೀರು ಬೇಕು. ಸೂರ್ಯ ಬೆಳಕನ್ನು, ಮರ-ಗಿಡ ಆಮ್ಲಜನಕವನ್ನು, ಭೂಮಿ ನೀರನ್ನು ನೀಡುತ್ತಿದೆ. ಆದರೆ, ಅವು ಯಾವತ್ತೂ ಬಿಲ್ ನೀಡಿಲ್ಲ. ನಾವು ಎಚ್ಚರಿಕೆಯೂ ವಹಿಸಿಲ್ಲ. ನಿರಂತರ ನಿರ್ಲಕ್ಷ್ಯದಿಂದ ಕ್ಯಾನ್ಸರ್ ಆಸ್ಪತ್ರೆಗೆ ನಾವು ಗ್ರಾಹಕರಾಗುತ್ತಿದ್ದೇವೆ ಎಂದರು. 



ಫ್ರೆಂಡ್ಸ್ ಆಫ್ ಲೇಕ್ಸ್ ಸಹ-ಸಂಸ್ಥಾಪಕ, ಸರೋವರ ಸಂರಕ್ಷಕ ರಾಮ್ ಪ್ರಸಾದ್ ಬಿ. ಮಾತನಾಡಿ, ಕೆರೆಯು ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಪ್ರವಾಹ ತಡೆ ಮಾಡುತ್ತದೆ. ಕೆರೆ ಉಳಿಸಿದರೆ ನೀರಿನ ರಕ್ಷಣೆ, ನೀರಿನಿಂದ ಜೀವ ರಕ್ಷಣೆ ಸಾಧ್ಯ. ನಿಮ್ಮ ಭವಿಷ್ಯ ನೀವೇ ಉಳಿಸಿಕೊಳ್ಳಬೇಕಾಗಿದೆ ಎಂದರು.  ಕಳೆದ 30 ವರ್ಷದಲ್ಲಿ ಶೇ50 ಸಂಪನ್ಮೂಲಗಳ ದುರ್ಬಳಕೆ ಆಗಿದೆ. ಅತಿ ಹೆಚ್ಚು ದುರ್ಬಳಕೆ ಆಗಿರುವುದು ನೀರು. ಮುಂದಿನ ಮಹಾಯುದ್ಧ ಯುದ್ಧ ನೀರಿಗಾಗಿ ಆಗಲಿದೆ. ನೀರು ನೀವು ಬದುಕುವ ಮೂಲ. ಸಂಪನ್ಮೂಲ ಅಲ್ಲ. ಚೋಳರ ಕಾಲದಿಂದ ಜಲಸಂರಕ್ಷಣೆ ಕಾರ್ಯ ನಡೆದಿದೆ. ಆದರೆ, ಈಚಿನ ನಿರ್ಲಕ್ಷ್ಯವು ಸಮಸ್ಯೆಗೆ ಈಡು ಮಾಡುತ್ತಿದೆ. ನೀರಿನ ರಕ್ಷಣೆಗೆ ಕ್ರಮ ವಹಿಸಿ ಎಂದರು. 



ಉಪನ್ಯಾಸ-5: 


ಕಾರ್ಗಿಲ್ ಯೋಧ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ, ಕಾರ್ಗಿಲ್ ಯುದ್ಧದ ಸಂದರ್ಭಗಳನ್ನು ವಿವರಿಸಿದರು.  ‘ಹಿಮಗಳ ನಡುವೆಯೂ 21 ದಿನಗಳು ನಿದ್ದೆ, ಆಹಾರವನ್ನು ಮರೆತು ಬಿಡಬೇಕಾದ ಸ್ಥಿತಿ. ಶೇ 50ರಷ್ಟು ಮಾತ್ರ ಆಮ್ಲಜನಕ ಇರುವ ಗಾಳಿ. 10 ಹೆಜ್ಜೆ ಹಾಕಲು 100 ಮೀಟರ್ ಓಡಿದಷ್ಟು ಶ್ರಮದ ಕ್ಲಿಷ್ಟಕರ ಪರಿಸ್ಥಿತಿ ಕಾರ್ಗಿಲ್‍ನಲ್ಲಿ ಇತ್ತು’ ಎಂದು ವಿವರಿಸಿದರು. ‘ಯಾವಾಗ ಉಸಿರಿನ ಕೊನೆ, ಬರುವಾಗ ಯಾರನ್ನು ಹೊತ್ತು ತರುತ್ತೇವೆ ಎಂಬ ಭಯ. ಅನ್ನ ಮತ್ತು ಗುಂಡಿನ ಪೈಕಿ ಯಾವುದನ್ನು ತಿನ್ನುತ್ತೇವೆ ಎಂಬ ಭರವಸೆ ಇರಲಿಲ್ಲ’ ಎಂದರು.  



‘ಯುದ್ಧಕ್ಕೆ ತಯಾರಾದ ಸೈನಿಕನಲ್ಲಿರುವ ಆಲೋಚನೆಗಳನ್ನು ತಿಳಿಯಲು ನಾವು ಪ್ರಯತ್ನಿಸುವುದಿಲ್ಲ. ನಾನು ಕಾಲಿಗೆ ಗಾಯಗೊಂಡಿತು. ಹಲವರು ಇದು ದುರಾದೃಷ್ಟ ಎಂದರೆ, ನಾನು ದೇಶಸೇವೆಯ ಅವಕಾಶ ಸಿಕ್ಕಿದ್ದು ಅದೃಷ್ಟ ಎನ್ನುತ್ತೇನೆ. ದೇಶಕ್ಕಾಗಿ ಹೋರಾಡಿದ್ದೇನೆ ಎಂಬ ಸಂತೋಷ ನನಗಿದೆ.  ಅತಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿರುವುದು ಹೆಮ್ಮೆಯ ವಿಷಯ ಎಂದರು. ಆಳ್ವಾಸ್ ಸಾಂಸ್ಕೃತಿಕ  ತಂಡದಿಂದ ಮಣಿಪುರದ ಸ್ಟಿಕ್ ನೃತ್ಯ, ಪುರುಲಿಯೊ ಸಿಂಹ ಕುಣಿತ, ಡೊಳ್ಳು ಕುಣಿತ, ಮಲ್ಲಕಂಬದ ಸಾಂಸ್ಕೃತಿಕ  ವೈಭವ ನಡೆಯಿತು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top