ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆ (ಕುಪ್ಮಾ)

Upayuktha
0

ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ: ಯು.ಟಿ.ಖಾದರ್




ವಿದ್ಯಾಗಿರಿ: ‘ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಅನುದಾನ ರಹಿತ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. 




ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆ (ಕುಪ್ಮಾ) ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡ ‘ಪದವಿ ಪೂರ್ವ ಶಿಕ್ಷಣ- ಮುಕ್ತ ಸಮ್ಮೇಳನ 2024’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 




‘ಪದವಿಪೂರ್ವ ಶಿಕ್ಷಣವು ವಿದ್ಯಾರ್ಥಿಯ ಮೂಲಭೂತ ಹಕ್ಕು. ಅದನ್ನು ಜಾರಿಗೆ ತರಲು ಸರ್ಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈ ಜೋಡಿಸಿವೆ. ವಿದ್ಯಾರ್ಥಿಗಳು ಬಲಿಷ್ಠವಾದರೆ, ದೇಶ ಬಲಿಷ್ಠವಾಗಲು ಸಾಧ್ಯ. ವ್ಯಕ್ತಿತ್ವ ರೂಪಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ’ ಎಂದರು. ಶಿಕ್ಷಣ ನೀಡುವುದು ನಿಜವಾದ ದೇಶಪ್ರೇಮ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ‘ಕುಪ್ಮಾ’ ಶಿಕ್ಷಣ ಸಂಸ್ಥೆಗಳ ಕಷ್ಟ-ಸುಖ ಹಂಚಿಕೊಳ್ಳುವ ಸಂಘಟನೆಯಾಗಬೇಕು ಎಂದರು. ಕೇವಲ ವೈದ್ಯರು ಅಥವಾ ಎಂಜಿನಿಯರ್‍ಗಳನ್ನು ಮಾತ್ರವಲ್ಲ, ಉತ್ತಮ ರಾಜಕಾರಣಿಗಳನ್ನೂ ರೂಪಿಸಿ ಎಂದು ಅವರು ಮನವಿ ಮಾಡಿದರು.  




ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕುಪ್ಮಾದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ‘ಖಾಸಗಿ ಸಂಸ್ಥೆಗಳ ಕುರಿತು ಕೀಳು ಮನೋಭಾವ ಸಲ್ಲದು. ಸಮಾಜಕ್ಕೆ ಅವರ ಕೊಡುಗೆಯನ್ನು ಗಮನಿಸಿ. ಗೌರವಿಸಿ. ಸರ್ಕಾರ ಖಾಸಗಿ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಎಲ್ಲರಿಗೂ ಸಮಾನ ನಿಯಮ ಇರಲಿ’ ಎಂದರು. 




‘ಸಮಾಜದ ಪರಿಕಲ್ಪನೆಯ ದೃಷ್ಟಿಯಲ್ಲಿ ನಾವು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಒಮ್ಮೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ನೋಡಿ. ದಾಖಲೆಗಳನ್ನು ಪರಿಶೀಲಿಸಿ. ಮಾರ್ಚ್ 3ರಂದು ನಡೆಯಲಿರುವ ಪ್ರವೇಶ ಪರೀಕ್ಷೆಗೆ ಈಗಾಗಲೇ 7 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಬೇಡಿಕೆಯನ್ನು ವಿಶ್ಲೇಷಿಸಿ’ ಎಂದರು.  ಮುಂದಿನ ದಿನಗಳಲ್ಲಿ ‘ಕುಪ್ಮಾ’ ಪ್ರತಿ ಜಿಲ್ಲೆಯಲ್ಲೂ ಸಂಘಟನೆ ಹೊಂದಬೇಕು. ಕೇವಲ ಆಡಳಿತ ಮಂಡಳಿ ಮಾತ್ರವಲ್ಲ, ಪ್ರಾಂಶುಪಾಲರು, ಶಿಕ್ಷಕರ ಸಂಘಟನೆಯನ್ನೂ ಬಲಪಡಿಸಬೇಕು’ ಎಂದರು. 




‘ರಾಜ್ಯದಲ್ಲಿ 5,885 ಪದವಿಪೂರ್ವ ಕಾಲೇಜುಗಳಿದ್ದು, ಈ ಪೈಕಿ 3,566 ಅನುದಾನ ರಹಿತ ಕಾಲೇಜುಗಳಿವೆ. ರಾಜ್ಯದಲ್ಲಿ 7,02,062 ರಷ್ಟು ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಶೇ74 ಫಲಿತಾಂಶ ಬಂದಿದೆ. ಸರ್ಕಾರಿ ಕಾಲೇಜುಗಳು ಶೇ 63, ಅನುದಾನಿತ ಶೇ 71 ಫಲಿತಾಂಶ ಪಡೆದಿದ್ದರೆ, ಅನುದಾನಿತ ರಹಿತ ಕಾಲೇಜುಗಳಲ್ಲಿ 83.73 ಫಲಿತಾಂಶ ಬಂದಿದೆ. ಫಲಿತಾಂಶ ಹೆಚ್ಚಳಕ್ಕೆ ಅನುದಾನಿತ ರಹಿತ ಕಾಲೇಜುಗಳ ಕೊಡುಗೆ ಮಹತ್ತರ. ಶೇ 90ಕ್ಕೂ ಹೆಚ್ಚು ಅಂಕ ಪಡೆದ ಅತಿಹೆಚ್ಚಿನ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು’ ಎಂದು ಅವರು ಮಾಹಿತಿ ನೀಡಿದರು. 




ವಿಧಾನ ಪರಿಷತ್ ಸದಸ್ಯ ಕೆ.ಎಲ್. ಭೋಜೇಗೌಡ ಮಾತನಾಡಿ, ‘ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳನ್ನು ಒಂದುಗೂಡಿಸುವ ಸಂಘಟನೆಯ ಆರಂಭವು ಶ್ಲಾಘನೀಯ’ ಎಂದರು. 




ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಹದಿಹರೆಯದ ಮಕ್ಕಳು ಇರುವ ಪದವಿ ಪೂರ್ವ ಶಿಕ್ಷಣ ಸಂಸ್ಥೆ ನಡೆಸುವುದು ಬಹುದೊಡ್ಡ ಸವಾಲು. ಅದನ್ನು ನೀವೆಲ್ಲ ನಿಭಾಯಿಸುತ್ತಿದ್ದೀರಿ. ನಾನು ನಿಮ್ಮ ಜೊತೆ ಇರುತ್ತೇನೆ’ ಎಂದರು. 




ಕುಪ್ಮಾದ ಅಧಿಕೃತ ವೆಬ್‍ಸೈಟ್‍ನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬಿಡುಗಡೆಗೊಳಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ  ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ, ಸಂಘಟನೆಯ ಪ್ರಮುಖರಾದ ಪ್ರೊ. ನರೇಂದ್ರ ಎಲ್. ನಾಯಕ್, ಎಂ.ಬಿ.ಪುರಾಣಿಕ್, ಫಾ.ಲಿಯೋ ಲಸ್ರಾದೋ, ಕೆ.ಸಿ.ನಾಯಕ್, ಡಾ.ಅಬ್ದುಲ್ ಖಾದಿರ್, ಡಾ.ಜಯಪ್ರಕಾಶ್ ಗೌಡ ಇದ್ದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 




ಸಭಾಕಾರ್ಯಕ್ರಮದ ನಂತರ ನಡೆದ ಪ್ರಥಮ ಗೋಷ್ಠಿಯಲ್ಲಿ  ‘’ಕುಪ್ಮಾದ ಉದ್ದೇಶ ಹಾಗೂ ಗುರಿಗಳ ಕುರಿತು’’ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಸುಧಾಕರ ಶೆಟ್ಟಿ ಹಾಗೂ  ಶಾರದಾ ಸಮೂಹ ಸಂಸ್ಥೆಗಳ ಎಂ ಬಿ ಪುರಾಣಿಕ್,  ಎಕ್ಸ್‍ಪರ್ಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಕುಪ್ಮಾದ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್  ಸಂವಾದ ನಡೆಸಿಕೊಟ್ಟರು.   ‘’ಕುಪ್ಮಾವನ್ನು ಸಂಘಟಿತವಾಗಿ ಪ್ರತಿ ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕುರಿತು’’ ಎಕ್ಸ್‍ಲೆಂಟ್ ಸಂಸ್ಥೆಯ ಯುವರಾಜ್ ಜೈನ್, ಶಕ್ತಿ ಶಿಕ್ಷಣ ಸಂಸ್ಥೆಗಳ  ಕೆಸಿ ನಾಯ್ಕ್ ಹಾಗೂ ಮೈಸೂರಿನ ಶ್ರೀ ವಿಶ್ವಭಾರತಿ ಶಿಕ್ಷಣ ಸಂಸ್ಥೆಗಳ  ವಿಶ್ವನಾಥ್ ಶೇಷಾಚಲ ಚರ್ಚಿಸಿದರು. ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top