ಕಣ್ವತೀರ್ಥ ಮಠದ ನೂತನ ಸುತ್ತುಪೌಳಿ ಸಮರ್ಪಣೆ

Upayuktha
0

ಪೇಜಾವರ ಶ್ರೀಗಳಿಗೆ ಅಭಿವಂದನೆ, ಶ್ರೀಗಳಿಂದ ಸಮುದ್ರಪೂಜೆ  



ತಲಪಾಡಿ: ಕಣ್ವಮುನಿಗಳ ತಪೋಭೂಮಿ, ಶ್ರೀ ರಾಮಾಂಜನೇಯರು ಶ್ರೀ ಮಹಾರುದ್ರ ದೇವರ ದಿವ್ಯ ಸಾನ್ಬಿಧ್ಯ,  ಜಗದ್ಗುರು ಮಧ್ವಾಚಾರ್ಯರು ಚಾತುರ್ಮಾಸ್ಯ ವ್ರತಗೈದ ಪುಣ್ಯ ನೆಲೆ, ಶ್ರೀ ಮಧ್ವರು ಉಡುಪಿ ಅಷ್ಟಮಠಗಳಿಗೆ ಆಡಳಿತಾತ್ಮಕ ವ್ಯವಸ್ಥೆಗಳಿಗಾಗಿ ದ್ವಂದ್ವಮಠಗಳ ನಂಟು ಕಲ್ಪಿಸಿಕೊಟ್ಟ ಪವಿತ್ರ ಸ್ಥಳ‌ ಪೇಜಾವರ ಮಠದ ಯತಿ ಪರಂಪರೆಯಲ್ಲಿ ಬಂದ ಶ್ರೀ ವಿಜಯಧ್ವಜ ತೀರ್ಥರ ತಪೋಭೂಮಿ, ಶ್ರೀ ವಿಶ್ವಮಾನ್ಯತೀರ್ಥರ ಬೃಂದಾವನ ಕ್ಷೇತ್ರ ಹೀಗೆ ಹಲವು ಪಾವನ ಹಿನ್ನೆಲೆ ಗಳನ್ನೊಗೊಂಡ ಕ್ಷೇತ್ರವಾಗಿರುವ ಕೇರಳ ಗಡಿಭಾಗ ತಲಪಾಡಿ ಸಮೀಪವಿರುವ  ಶ್ರೀ ಕಣ್ವತೀರ್ಥ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಸುತ್ತು ಪೌಳಿ ಸಮರ್ಪಣೆ ಹಾಗೂ ಮಠದ ಆಡಳಿತ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಅಭಿವಂದನ ಕಾರ್ಯಕ್ರಮಗಳು ಮಂಗಳವಾರ ನೆರವೇರಿದವು.


ಶಿಥಿಲವಾಗಿದ್ದ ಸುತ್ತುಪೌಳಿಯನ್ನು ಭಕ್ತರ ನೆರವಿನೊಂದಿಗೆ ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದೆ.‌ ಇದರ ಸಮರ್ಪಣೆಯ ಅಂಗವಾಗಿ ವಿವಿಧ ಹೋಮ ಹವನಾದಿಗಳು, ಧಾರ್ಮಿಕ ವಿಧಿವಿಧಾನಗಳು ಶ್ರೀ ರಾಮ‌ವಿಠಲ ಮುಖ್ಯಪ್ರಾಣ ಶ್ರೀ ರುದ್ರ ದೇವರಿಗೆ ಅಭಿಷೇಕ ಸಹಿತ ವಿಶೇಷ ಪೂಜೆ, ಶ್ರೀ ವಿಜಯಧ್ವಜ ತೀರ್ಥರು ಶ್ರೀ ವಿಶ್ವಮಾನ್ಯ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಪೂಜೆ, ಸಾರ್ವಜನಿಕ ಅನ್ನಾರಾಧನೆ ಇತ್ಯಾದಿಗಳು ಶ್ರೀಗಳ ನೇತೃತ್ವದಲ್ಲಿ ನೆರವೇರಿದವು.  


ಸಮುದ್ರಪೂಜೆ, ಸಮುದ್ರ ಸ್ನಾನ 

ಇದೇ ಸಂದರ್ಭ ಶ್ರೀಗಳು ನೂರಾರು ಭಕ್ತರೊಂದಿಗೆ ಭಜನೆ, ಸ್ತೋತ್ರ ಪಾರಾಯಣ, ಚಂಡೆ ವಾದ್ಯ ಬಿರುದಾವಳಿಗಳೊಂದಿಗೆ ಸಮೀಪವಿರುವ ಸಮುದ್ರತೀರಕ್ಕೆ ತೆರಳಿ ಹಾಲೆರೆದು, ವಿಧ್ಯುಕ್ತವಾಗಿ ಸಮುದ್ರಪೂಜೆ ನೆರವೇರಿಸಿ ಶ್ರೇಯಃಪ್ರಾರ್ಥನೆಗೈದರು.‌ ಆ ಬಳಿಕ ಸಮುದ್ರದಲ್ಲಿ ಸ್ಥಳೀಯ ಭಕ್ತರೊಂದಿಗೆ ಕೆಲಹೊತ್ತು ಈಜಾಡಿ ಪುಳಕಿತಗೊಳಿಸಿದರು.


ಅಲ್ಲಿಂದ ಮರಳಿದ ಬಳಿಕ ಮಠದ ಆವರಣದಲ್ಲಿ ಶ್ರೀಗಳವರಿಗೆ ಅಭಿವಂದನ ಕಾರ್ಯಕ್ರಮವು ನೆರವೇರಿತು. ಅಭಿವಂದನೆ ಸ್ವೀಕರಿಸಿ ಸಂದೇಶ ನೀಡಿದ ಶ್ರೀಗಳು ರಾಮಮಂದಿರ ನಿರ್ಮಾಣದಿಂದ ಹಿಂದು ಸಮಾಜಕ್ಕೆ ಕರ್ತವ್ಯ ಮತ್ತು ಜವಾಬ್ದಾರಿಗಳು ಹೆಚ್ಚಿದ್ದು ಅದರ ಬಗ್ಗೆ ಪ್ರತೀ ಮನೆಗಳಲ್ಲಿ ಹೆಚ್ಚಿನ ಆಸ್ಥೆ ವಹಿಸಬೇಕೆಂದು ಸೂಚಿಸಿದರು.


ಸುತ್ತುಪೌಳಿ ನಿರ್ಮಾಣ ಕಾರ್ಯದ ಮತ್ತು ಸಮರ್ಪಣಾ ಕಾರ್ಯಗಳ  ಉಸ್ತುವಾರಿ ವಹಿಸಿದ್ದ ಇಂಜಿನಿಯರ್ ಗೋಪಾಲ ಶೆಟ್ಟಿ ದಂಪತಿ ಮತ್ತು ಪುತ್ರನನ್ನು ಹಾಗೂ  ಇತರೆ ದಾನಿಗಳು ಸ್ವಯಂಸೇವಕರನ್ನು ಶ್ರೀಗಳು ಸಂಮಾನಿಸಿದರು. 


ಕಣ್ವತೀರ್ಥ ಮಠದ ಅರ್ಚಕ ವರ್ಗ, ವ್ಯವಸ್ಥಾಪಕರು, ಪೇಜಾವರ ಮಠದ ದಿವಾನರು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top