ಜಗತ್ತಿನಲ್ಲಿ ಪ್ರಜೆಯೇ ಪ್ರಭು ಎಂದು ಹೇಳುವ ಯಾವುದಾದರೂ ಒಂದು ವ್ಯವಸ್ಥೆ ಇದೆ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ. ಭಾರತ ಬೃಹತ್ ಭವ್ಯ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭುವಾಗಿರುತ್ತಾನೆ. ಇಲ್ಲಿ ಪ್ರಭು ಎಂದರೆ ಆಳ್ವಿಕೆ ಮಾಡುವ ರಾಜ ಎಂದರ್ಥವಲ್ಲ. ಬದಲಿಗೆ ರಾಷ್ಟ್ರ ಅಥವಾ ರಾಜ್ಯವನ್ನು ಮುನ್ನಡೆಸುವವರನ್ನು ಅಥವಾ ಆಳ್ವಿಕೆ ಮಾಡುವವರನ್ನು ಚುನಾವಣೆಯಲ್ಲಿ ಮತ ನೀಡುವ ಮೂಲಕ ಆಯ್ಕೆ ಮಾಡುವ ಸ್ವಾತಂತ್ರ್ಯವುಳ್ಳವರು. ಪ್ರಜಾಪ್ರಭುತ್ವವನ್ನು ಅಬ್ರಹಾಂ ಲಿಂಕನ್ ರವರು ಹೇಳಿರುವಂತೆ “ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರಚಿತವಾಗಿರುವ ಸರ್ಕಾರವೇ ಪ್ರಜಾಪ್ರಭುತ್ವ”. ಮತ ನೀಡುವ ವ್ಯಕ್ತಿಯನ್ನು ಮತದಾರ ಎನ್ನಬಹುದು. ಅಂದರೆ ಮತದಾನ ಮಾಡುವ ವ್ಯಕ್ತಿ ಮತದಾರನೆಂದೆನಿಸಿ ಕೊಳ್ಳುತ್ತಾನೆ. ಒಂದು ಮತ ಒಬ್ಬ ವ್ಯಕ್ತಿಯ ಪ್ರಾಣದಷ್ಟೇ ಮುಖ್ಯವಾಗಿರುತ್ತದೆ.
ಪ್ರಾಣದಂತಿರುವ ಒಂದು ಮತವನ್ನು ನ್ಯಾಯಯುತವಾಗಿ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಅರ್ಹ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯೂ ಮತವನ್ನು ಹಾಕಲು ಸ್ವತಂತ್ರನಿರುತ್ತಾನೆ. ಮತದಾನ ಮಾಡಬೇಕೆನ್ನುವ ಮನಸ್ಸು ಸ್ವತಃ ಆ ವ್ಯಕ್ತಿಯೇ ನಿರ್ಧರಿಸಬೇಕಿರುತ್ತದೆ. ಮತದಾನ ಮಾಡುವ ಪ್ರಕ್ರಿಯೆಯು ಚುನಾವಣಾ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ರಾಷ್ಟ್ರದ ರಾಜಕೀಯ ವ್ಯವಸ್ಥೆಯಲ್ಲಿ ಮೂಲ ಬಿಂದುವೆನಿಸಿದ ಮತದಾರರ ಪಾತ್ರ ಬಹಳಷ್ಟಿರುತ್ತದೆ ಎಂಬುದನ್ನು ಅರಿತು ಭಾರತ ಘನ ಸರ್ಕಾರ ಪ್ರತಿ ವರ್ಷ ಜನವರಿ 25 ರಂದು ಮತದಾರರ ದಿನವನ್ನು ಆಚರಿಸಬೇಕೆಂದು ಘೋಷಿಸಿತು. ಭಾರತದ ಚುನಾವಣಾ ಆಯೋಗವು ಜನವರಿ 25, 1950 ರಲ್ಲಿ ಸ್ಥಾಪನೆಯಾಯಿತು.
ಈ ದಿನದ ನೆನಪಿಗಾಗಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2011 ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಕುರಿತು ಕಾನೂನು ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಭಾರತದ ಚುನಾವಣಾ ಆಯೋಗವು ಇಂದು 13 ನೇ ವರ್ಷದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದೆ. ದೇಶದ ಕೋಟ್ಯಂತರ ಮತದಾರರಿಗೆ ಈ ರಾಷ್ಟ್ರೀಯ ಮತದಾರರ ದಿನವನ್ನು ಅರ್ಪಿಸಲಾಗುತ್ತದೆ. ಜೊತೆಗೆ ಮತದಾರರ ದಿನದ ಮಹತ್ವವನ್ನು ತಿಳಿಸಲಾಗುತ್ತದೆ. ಮತ ಚಲಾವಣೆಯ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಯುವ ಮತದಾರರನ್ನು ಪ್ರೋತ್ಸಾಹಿಸುವ ಪ್ರಮುಖ ಉದ್ದೇಶವಾಗಿದೆ.
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ಹೊಂದಿದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತವಾಗಿದ್ದು, ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಯುವ ಮತದಾರರನ್ನು ಉತ್ತೇಜಿಸುವ ಸಲುವಾಗಿ, ಭಾರತ ಸರ್ಕಾರವು ಪ್ರತಿ ವರ್ಷ ಜನವರಿ 25 ಅನ್ನು "ರಾಷ್ಟ್ರೀಯ ಮತದಾರರ ದಿನ" ಎಂದು ಆಚರಿಸಲು ನಿರ್ಧರಿಸಿದೆ. ಈ ದಿನದಂದು ದೇಶದ ಎಲ್ಲಾ ಮತದಾರರೂ ಪ್ರತಿಜ್ಞಾ ವಿಧಿಯ ಮಾಡಬೇಕಾಗುತ್ತದೆ. ಆ ಪ್ರತಿಜ್ಞಾವಿಧಿಯ ಈ ಕೆಳಗಿನಂತಿರುತ್ತದೆ.
" ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ."
ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢವಾದ ವಿಶ್ವಾಸವನ್ನು ಹೊಂದಿದೆ. ಮತದಾರ ಪ್ರಭುವೆನಿಸಿದ ಪ್ರಜೆಯು ನ್ಯಾಯಸಮ್ಮತ ವಾದ , ಶಾಂತಿಯುತವಾಗಿ ತನ್ನ ಪಾತ್ರವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ವಹಿಸುವುದು. ಮತ ಚಲಾಯಿಸುವ ಮತದಾರನು ನಿರ್ಭೀತವಾಗಿ ಧರ್ಮ, ಜನಾಂಗ, ಜಾತಿ, ಮತ , ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳಿಗೆ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸುವಂತಾಗಬೇಕು. ಭಾರತ ಚುನಾವಣಾ ಆಯೋಗವು ಸಹ ಇದನ್ನೇ ಬಯಸುತ್ತದೆ. ಮತದಾರನು ಸರ್ವ ಸ್ವತಂತ್ರವಾಗಿ ತನ್ನ ಮತವನ್ನು ಚಲಾಯಿಸಬೇಕು. ಹದಿನೆಂಟು ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕಡಿಮೆ ಆಸಕ್ತಿ ತೋರಿಸುತ್ತಿರುವುದನ್ನು ಗಮನಿಸಿದಾಗ, ಕೆಲವು ಪ್ರಕರಣಗಳಲ್ಲಿ ಅವರ ನೋಂದಣಿಯ ಮಟ್ಟವು ಪ್ರತಿಶತ ಕಡಿಮೆಯಾಗಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ಮತದಾರರ ದಿನಾಚರಣೆಯನ್ನು ಪ್ರಾರಂಭಮಾಡಿತು.
ಸಂವಿಧಾನಬದ್ಧವಾಗಿ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮ ಅದೃಷ್ಟ. ನಾವು ಅದನ್ನು ನಿರ್ಲಕ್ಷ್ಯೆ ಮಾಡಬಾರದು. ಅದಲ್ಲದೇ ಭಾರತದ ಪ್ರಜಾಪ್ರಭುತ್ವದ ಆಧಾರವು ಚುನಾವಣಾ ಫಲಿತಾಂಶಗಳನ್ನು ಆಧರಿಸಿದೆ. ನಮ್ಮ ಶಾಸಕಾಂಗಗಳು ಮತ್ತು ಸಂಸತ್ತುಗಳು ಪ್ರಜೆಗಳಿಂದ ಮತ್ತು ಪ್ರಜೆಗಳಿಗಾಗಿ ಚುನಾಯಿತವಾಗಿವೆ. ನಮ್ಮ ಸಂವಿಧಾನವು ನಮಗೆ ಬೇಕಾದವರಿಗೆ ಮತ ಚಲಾಯಿಸುವ ಮತ್ತು ನಮ್ಮ ಮನಸ್ಸನ್ನು ಬದಲಾಯಿಸುವ ಹಕ್ಕನ್ನು ಖಾತರಿಪಡಿಸುತ್ತದೆ. ಅಂದರೆ ಮತದಾನ ಮಾಡುವಲ್ಲಿ ನಾವು ಸ್ವತಂತ್ರರಾಗಿರುತ್ತೇವೆ ಎಂದರ್ಥ.
ಈ ದಿನದ ಆಚರಣೆಯ ಹಿನ್ನಲೆಯಲ್ಲಿ ಅರ್ಹ ಮತದಾರರನ್ನು ಸಮಯಕ್ಕೆ ಸರಿಯಾಗಿ ನೋಂದಾಯಿಸಲಾಗುತ್ತದೆ ಮತ್ತು ಪ್ರತಿ ವರ್ಷ ಜನವರಿ 25 ರಂದು ಅವರ ಚುನಾವಣಾ ಫೋಟೋ ಗುರುತಿನ ಚೀಟಿಯನ್ನು ಹಸ್ತಾಂತರಿಸಲಾಗುತ್ತದೆ. ಈ ಉಪಕ್ರಮವು ಯುವಜನರಿಗೆ ಸಬಲೀಕರಣ, ಹೆಮ್ಮೆಯ ಭಾವನೆಯನ್ನು ನೀಡುತ್ತದೆ ಮತ್ತು ಅವರ ಹಕ್ಕು ಚಲಾಯಿಸಲು ಅವರನ್ನು ಪ್ರೇರೇಪಿಸುತ್ತದೆ. ಈ ಮತದಾರರ ದಿನಾಚರಣೆಯ ಕಾರ್ಯಕ್ರಮವು ಕಟ್ಟಕಡೆಯ ಮತದಾರರನ್ನು ತಲುಪಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವಂತೆ ನೋಡಿಕೊಳ್ಳುವುದು ಮತ್ತು ತಿಳುವಳಿಕೆಯುಳ್ಳ ಮತ್ತು ನೈತಿಕ ಮತದಾನವನ್ನು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ರಾಷ್ಟ್ರದ ಯಾವುದೇ ಅರ್ಹ ಮತದಾರನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಈ ದೇಶದ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಅತ್ಯಂತ ಪ್ರಮುಖ ಕಾರ್ಯ ಇದಾಗಿದೆ. ಚುನಾವಣಾ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳಲ್ಲಿನ ಶ್ರೇಷ್ಠತೆ, ಪ್ರಾವೀಣ್ಯತೆ ಮತ್ತು ನಾವೀನ್ಯತೆಯನ್ನು ಶೋಧಿಸಿ ಹೊಸತನವನ್ನು ಕಂಡುಕೊಳ್ಳುವ ಪ್ರಕ್ರಿಯೆಯೂ ಇಲ್ಲಿ ನಡೆಯುತ್ತದೆ.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ್ದು ಇದರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತವು ಪ್ರಮುಖ ಕೊಡುಗೆಯನ್ನು ಹೊಂದಿದೆ. ಇದು ದೇಶದ ರಾಜಕೀಯ ಮತ್ತು ಆಡಳಿತದ ದಿಕ್ಕನ್ನು ನಿರ್ಧರಿಸುತ್ತದೆ. ಒಂದು ಕಡೆ ಮತದಾನವು ಒಂದು ಹಕ್ಕು, ಅದು ಜಾಗೃತ ನಾಗರಿಕನ ಕರ್ತವ್ಯವೂ ಆಗಿದೆ. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರತಿಯೋರ್ವ ಮತದಾರರ ಸಂವಿಧಾನಾತ್ಮಕ ಹಕ್ಕು. ಎಲ್ಲರೂ ಇದನ್ನು ಅರಿತು ನಡೆಯೋಣ. ಎಲ್ಲರಿಗೂ ರಾಷ್ಟೀಯ ಮತದಾರರ ದಿನಾಚರಣೆಯ ಶುಭಾಶಯಗಳು.
-ಕೆ. ಎನ್. ಚಿದಾನಂದ ,
ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


