ಅಭಿಜಾತ ಕಲಾವಿದೆ ಸುನಿತಾ ಅವರು ಜೀವನದ ಹೊಸ ದಾಖಲೆ ನಿರ್ಮಾಣಕ್ಕಾಗಿ ಮೈಲಿಗಲ್ಲೊಂದನ್ನು ಸ್ಥಾಪಿಸಲು ಅಣಿಯಾಗುತ್ತಿದ್ದಾರೆ. ಅದುವೇ ರಂಗಾರೋಹಣ. ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ ವಿದುಷಿ ಮಿತ್ರಾ ನವೀನ್ ಶಿಷ್ಯೆ ಸುನಿತಾ ರತೀಶ್ ಭರತನಾಟ್ಯ ರಂಗಪ್ರವೇಶಕ್ಕೆ ಸಿದ್ಧವಾಗುವ ಮೂಲಕ ನರ್ತನ ಕಲೆಯನ್ನು ಪವಿತ್ರ ವೇದಿಕೆಯಲ್ಲಿ ಹೊರಹೊಮ್ಮಿಸಲು ಸಿದ್ಧರಾಗಿದ್ದಾರೆ. ಅಂತೆಯೇ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜ. 14ರ ಸಂಜೆ 5ಕ್ಕೆ ರಂಗಪ್ರವೇಶ ಕಾರ್ಯಕ್ರಮ ಆಯೋಜನೆಗೊಂಡಿದೆ.
ಸುನಿತಾ ರತೀಶ್ ಸದ್ಯಜಿ.ಡಬ್ಲುೃ. ಇನ್ನೋವೇಷನ್ಸ್ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಸಾಫ್ಟ್‌ವೇರ್ ಡವಲಪ್‌ಮೆಂಟ್ ಇಂಜಿನಿಯರ್ ಆಗಿ ಆನ್‌ಲೈನ್ ವೃತ್ತಿಯಲ್ಲಿದ್ದಾರೆ. ಇದರ ನಡುವೆಯೇ ನರ್ತನ ಅವರ ಅಚ್ಚು ಮೆಚ್ಚಿನ ಹವ್ಯಾಸ. ವೃತ್ತಿಪರತೆ ಮತ್ತು ಕಲಾ ನೈಪುಣ್ಯಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಬಂದಿರುವುದು ಸುನಿತಾ ಅವರ ಹೆಗ್ಗಳಿಕೆ. ಭರತನಾಟ್ಯ ಪ್ರೀ ವಿದ್ವತ್ ಪರೀಕ್ಷೆಗೆ ತಾಲೀಮು ನಡೆಸುತ್ತಿರುವ ಸಂದರ್ಭದಲ್ಲೇ ಈಕೆ ಮೈಸೂರಿನಲ್ಲಿ ರಂಗ ಪ್ರವೇಶಕ್ಕೂ ಸಿದ್ಧವಾಗುತ್ತಿರುವುದು ಸಾಹಸವೇ ಸರಿ.
ಪ್ರೇರಣೆ ನೀಡಿದ ಮಾತೆ:
ಕೇರಳ ಮೂಲದ, ಮೈಸೂರಿನಲ್ಲಿ ಸದ್ಯ ನೆಲೆಸಿರುವ ಅನಿತಾ ಮತ್ತು ಸುರೇಶ ಬಾಬು ಅವರ ಹೆಮ್ಮೆಯ ಪುತ್ರಿ ಸುನಿತಾಗೆ ಬಾಲ್ಯದಿಂದಲೂ ಕಲಾಸಕ್ತಿ ಹೆಚ್ಚು. ಮೈಸೂರಿನ ಆಳ್ವಾರ್ ಕಲಾಭವನದಲ್ಲಿ ಅಮ್ಮನೊಂದಿಗೆ ಎಳವೆಯಲ್ಲಿ ನೋಡಿದ ಭರತನಾಟ್ಯ ಪ್ರದರ್ಶನವೊಂದು ಕಲಿಕಾಸಕ್ತಿ ಹೊಮ್ಮಿಸಿತು ಎಂದು ನೆನಪಿಸಿಕೊಳ್ಳುತ್ತಾರೆ ಸುನಿತಾ. ಅಪ್ಪನಿಗೆ ಛಾಯಾಗ್ರಹಣದಲ್ಲಿ ಆಸಕ್ತಿ ಇದ್ದ ಕಾರಣ ಸುನಿತಾಗೆ ಫೋಟೋಗ್ರಾಫಿ ಕಲೆ ಒಲಿದು ಬಂತು ಎಂಬುದು ಮತ್ತೊಂದು ಹೆಗ್ಗಳಿಕೆ.
ಕಲಾರಂಗದಲ್ಲಿ ನಿರಂತರ ಪಯಣ:
ವಿದುಷಿ ನಯನಾ ಶಿವರಾಂ ಬಳಿ ಎಳವೆಯಲ್ಲೇ ನೃತ್ಯಾಭ್ಯಾಸ ಆರಂಭಿಸಿ ಜ್ಯೂನಿಯರ್ ಪರೀಕ್ಷೆ ಉತ್ತೀರ್ಣರಾದ ಸುನಿತಾ ಹಿಂದಿರುಗಿ ನೋಡಿದ್ದೇ ಇಲ್ಲ. ಸಮಯ ಮತ್ತು ಶ್ರಮ ಎರಡನ್ನೂ ಕಲೆಗೆ ಮೀಸಲಿಟ್ಟ ಸುನಿತಾ, ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನಲ್ಲಿ ಬಿಎಸ್ಸಿ ಪೂರ್ಣಗೊಳಿಸಿ, ಮೈಸೂರಿನ ವಿಟಿಯು ಕಾಲೇಜಿನಲ್ಲಿ ಎಂಸಿಎ ಸ್ನಾತಕೋತ್ತರ ಪದವಿ ವಿಭೂಷಿತರಾದರು. ವಿದುಷಿ ಮಿತ್ರಾ ನವೀನ್ ಅವರಲ್ಲಿ ನರ್ತನ ಪಾಠ ಮುಂದುವರಿಸಿ, ಸೀನಿಯರ್ ಪರೀಕ್ಷೆ, ತದನಂತರ ಪ್ರೀ ವಿದ್ವತ್ ವರೆಗೆ ಅಭ್ಯಾಸ ಮುನ್ನಡೆಸಿದ್ದಾರೆ. ಗಾಯನದಲ್ಲೂ ಆಸಕ್ತಿ ಹೊಂದಿದ್ದ ಈಕೆ ವಿದುಷಿ ಮೇಘಮಾಲಾ ಸ್ವಾಮಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು, ಜೂನಿಯರ್ ಪರೀಕ್ಷೆಯಲ್ಲೂ ಪಾರಮ್ಯ ಮೆರೆದಿದ್ದಾರೆ. ಸದ್ಯ ಪೃಥ್ವಿ ಭಾರದ್ವಾಜ್ ಬಳಿ ಸೀನಿಯರ್ ಹಂತದ ಗಾಯನಾಭ್ಯಾಸ ನಡೆಸುತ್ತಿದ್ದಾರೆ. ಆಕಾಶವಾಣಿ ಮೈಸೂರು ಸೇರಿದಂತೆ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನ ಪ್ರಸ್ತುತ ಪಡಿಸಿದ್ದಾರೆ.
ಅರಸಿ ಬಂದವು ಬಹುಮಾನ:
ವಿದ್ಯಾರ್ಜನೆ ಹಂತದಲ್ಲಿ (ನಿರ್ಮಲಾ ಶಾಲೆ, ಸದ್ವಿದ್ಯಾ ಮತ್ತು ಮಹಾಜನ್ಸ್ ಶಿಕ್ಷಣ ಸಂಸ್ಥೆ) ಸುನಿತಾ ಅವರ ನೃತ್ಯಾಭಿನಯಕ್ಕೆ ಹಲವು ವೇದಿಕೆ ದೊರೆತು, ಬಹುಮಾನ ಮತ್ತು ಪುರಸ್ಕಾರ ಒಲಿದು ಬಂದಿವೆ. ರೋಟರಿ, ಸಿಎಫ್‌ಟಿಆರ್‌ಐ, ರೈಲ್ವೆ ವಿಭಾಗೀಯ ಸಮ್ಮೇಳನ, ಟಿ.ನರಸೀಪುರದ ಕುಂಭಮೇಳ, ಮಲೆ ಮಹದೇಶ್ವರ ಬೆಟ್ಟದ ಉತ್ಸವ, ಮೈಸೂರು ಯುವ ದಸರಾ, ಹನುಮ ಜಯಂತಿ, ಜನ್ಮಾಷ್ಟಮಿ ವಿಶೇಷ ಸಂದರ್ಭದ ಕಾರ್ಯಕ್ರಮದಲ್ಲಿ ಸುನಿತಾ ಅವರ ನೃತ್ಯಾಭಿನಯ ಧನ್ಯತೆ ಮೆರೆದಿದೆ.
ಗುರು ಮಿತ್ರಾ ಅವರ ಸಮರ್ಥ ಮಾರ್ಗದರ್ಶನ:
ಗುರು ಮಿತ್ರಾ ಅವರ ಮಾರ್ಗದರ್ಶನದಲ್ಲಿ ಇವರು ಹತ್ತಾರು ನೃತ್ಯ ನಾಟಕದಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಆದಿಪೂಜ್ಯದ್ಲಿ ಕುಬೇರನಾಗಿ, ಸಪ್ತ ತಾಂಡವದಲ್ಲಿ ಮೋಹಿನಿಯಾಗಿ, ವಿಲಾಸದಲ್ಲಿ ಕೃಷ್ಣನಾಗಿ ದಶಾವತಾರದಲ್ಲಿ ರಾಮನಾಗಿ, ಶಬ್ದಂ ಮತ್ತು ವಸುದೈವ ಕುಟುಂಬಕಂ ದಲ್ಲಿ ಮಲಯಾಧ್ವಜ ಪಾಂಡ್ಯನಾಗಿ ಅಮೋಘ ಅಭಿನಯ ತೋರಿದ್ದು ಉಲ್ಲೇಖನೀಯ. ಇವೆಲ್ಲವೂ ಗುರು ಮಿತ್ರಾ ಅವರ ಸಮರ್ಥ ಮಾರ್ಗದರ್ಶನ ಮತು ಶಿಷ್ಯ ವಾತ್ಸಲ್ಯದಿಂದಲೇ ಆಗಿವೆ.
ಬಹುಮುಖೀ ‘ಸಖೀ’:
ಚಿತ್ರಕಲೆ, ಗಿಟಾರ್ ಮತ್ತು ವಯೋಲಿನ್ ವಾದನ, ಯೋಗ, ನಿರೂಪಣೆ ಮತ್ತು ಫೋಟೋಗ್ರಾಫಿ- ಇತ್ಯಾದಿ ಸುನಿತಾ ಅವರ ಬಿಡುವಿನ ವೇಳೆಯ ಹವ್ಯಾಸಗಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಪೂಜಾ ಕುಣಿತ, ಜಾನಪದ ನೃತ್ಯ ಪ್ರಸ್ತುತಿ ಪ್ಯಾಷನ್ ಆಗಿವೆ. ಜೀವನದ ಒಂದು ಘಳಿಗೆಯನ್ನೂ ಇವರು ವ್ಯರ್ಥ ಮಾಡಲೇ ಜೇನ್ನೊಣದಂತೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ‘ಮಧು’ ಸಂಗ್ರಹಿಸಿ, ಆತ್ಮಾನಂದ ಹೊಂದುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಇದರ ಕೀರ್ತಿ ಹೆತ್ತವರಿಗೆ ಮತ್ತು ಗುರುಗಳಿಗೆ ಸಮರ್ಪಣೆ ಮಾಗಬೇಕು ಎಂದು ಹೃದಯ ಪೂರ್ವಕವಾಗಿ ವಿವರಿಸುತ್ತಾರೆ.
ಗೃಹಿಣಿಯಾದರೂ ಸಾಧನೆ ಬಿಡಲಿಲ್ಲ:
ಇಂದಿನ ಕಾಲಘಟ್ಟದಲ್ಲಿ ಹಿಂದೂ ಕೂಡು ಕುಟುಂಬ (ಜಾಯಿಂಟ್ ಫ್ಯಾಮಿಲಿ) ಎಂಬುದು ಬಹು ಅಪರೂಪವೇ ಆಗಿದೆ. ಆದರೆ ಸುನಿತಾ ಬಾಲ್ಯದಿಂದಲೂ ಒಟ್ಟು ಕುಟುಂಬದ ಜೀವನ ಪದ್ಧತಿಯಲ್ಲಿ ಬೆಳೆದ ಬಾಲೆ. ಫಾರ್ಮಸಿ ಉದ್ಯಮಿ ರತೀಶ್ ಅವರನ್ನು ವಿವಾಹವಾದ ನಂತರವೂ ಅವರು ತುಂಬು ಕುಟುಂಬದಲ್ಲೇ ಜೀವನ ಮಾಡುತ್ತಿದ್ದಾರೆ. ನಮ್ಮ ಪರಂಪರೆಯ ದ್ಯೋತಕವಾದ ಇಂಥ ತುಂಬು ಕುಟುಂಬಗಳನ್ನು ಇಂದು ಕಾಣುವುದೇ ಅಪರೂಪ ಆಗಿರುವಾಗ ಅತ್ತೆ, ಮಾವ, ಮೈದುನ, ನಾದಿನಿಯವರೊಂದಿಗೆ ಸಹಬಾಳ್ವೆ ನಡೆಸುತ್ತಲೇ ಸೈ ಎನಿಸಿಕೊಂಡು ಕಲಾಸಾಧನೆ ಮಾಡುತ್ತಿರುವುದು ಸುನಿತಾ ಅವರ ಕ್ರಿಯಾಶೀಲತೆಗೆ ಸಾಕ್ಷಿ.
ನರ್ತನ ಕಲೆ ಕಲಿಸುವ ಆಸೆ:
ಮೈಸೂರಿನ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿಯೂ ಸುನಿತಾ ಈ ಹಿಂದೆ ಕೆಲಸ ಮಾಡಿದ್ದರು. ಸದ್ಯ ಇರುವ ಸಾಫ್ಟ್ ವೇರ್ ಡವಲಪ್‌ಮೆಂಟ್ ಇಂಜಿನಿಯರ್ ವೃತ್ತಿಯಲ್ಲಿ ವಾರಕ್ಕೆ ಎರಡು ದಿನ ರಜೆ ಇರುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ನೃತ್ಯ ವಿದ್ಯಾಲಯ ಆರಂಭಿಸಿ ಮಕ್ಕಳಿಗೆ ನರ್ತನ ಕಲೆ ಕಲಿಸಬೇಕು ಎಂಬುದು ಸುನಿತಾರ ಹೆಬ್ಬಯಕೆಯಾಗಿದೆ.
ಅತಿಥಿಗಳು ಮತ್ತು ಹಿಮ್ಮೇಳ:
ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್ ಗೌಡ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಕೆ. ಪೋತರಾಜ್, ಮೈಸೂರು ಮೆಡಿಕಲ್ ಕಾಲೇಜು ನಿರ್ದೇಶಕಿ ಡಾ. ಕೆ.ಆರ್. ದಾಕ್ಷಾಯಿಣಿ, ನೂಪುರ ಟ್ರಸ್ಟ್ ನಿರ್ದೇಶಕ ಮತ್ತು ನಾಟ್ಯಾಚಾರ್ಯ ಪ್ರ. ಕೆ. ರಾಮಮೂರ್ತಿ ರಾವ್ ಮತ್ತು ಉದ್ಯಮಿ ರತೀಶ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಲಾವಿದೆ ಸುನಿತಾ ರತೀಶ್ ಭರತನಾಟ್ಯ ರಂಗಪ್ರವೇಶಕ್ಕೆ ಗುರು ಮಿತ್ರಾ ನವೀನ್ ನಟುವಾಂಗ, ವಿದ್ವಾನ್ ಎಂ. ಎಸ್. ನವೀನ್ ಅಂದಗಾರ್ ಗಾಯನ, ವಿದ್ವಾನ್ ಜಿ.ಎಸ್. ನಾಗರಾಜ್ ಮೃದಂಗ ಮತ್ತು ವಿದ್ವಾನ್ ವಿವೇಕ ಕೃಷ್ಣ ಕೊಳಲು ಪಕ್ಕವಾದ್ಯ ಸಹಕಾರವಿದೆ.
- ಜೈಶ್ರೀ ರಾಮ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ