ಬನದ ಹುಣ್ಣಿಮೆಗೆ ಹೊಳೆನರಸೀಪುರ ಬನಶಂಕರಿ ದೇವಾಲಯ ದರ್ಶನ

Upayuktha
0

ಭಾರತೀಯ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾದುದು.  ಸಂಸ್ಕೃತಿ ಎನ್ನುವುದು ಸಮೂಹ ಸಮ್ಮತ ಜೀವನ ಪದ್ಧತಿ.  ಸಂಸ್ಕೃತಿ ಎಂದರೆ ಮಾನವನನ್ನು ಸಂಸ್ಕøರಿಸುವುದು ಎಂದು ಆರ್ಕಿನಿಗಸ್ ಹೇಳಿದ್ದಾನೆ.  ಸಂಸ್ಕೃತಿಯು ಜನರ ವಿವಿಧ ಚಟುವಟಿಕೆಗಳ ಮೊತ್ತ ಮಾತ್ರವಾಗಿರದೆ ಜೀವನ ವಿಧಾನವೇ ಆಗಿದೆ ಎಂದು ಟಿ.ಎಸ್.ಎಲಿಯೆಟ್ ಹೇಳಿದ್ದಾನೆ. 



“ ರೀ ಇವತ್ತು ಬನದ ಹುಣ್ಣಿಮೆ. ನಮ್ಮ ಮನೆ ದೇವರು ಬನಶಂಕರಿ ಅಮ್ಮನ ದೇವಾಲಯಕ್ಕೆ ಹೊಳೆನರಸೀಪುರಕ್ಕೆ ಹೋಗಿ ಬರೋಣ ಹೊರಡಿ” ಎಂದಳು ಶಕುಂತಲೆ. ಮಡದಿಯ ಮಾತನ್ನು  ಮೀರಲುಂಟೆ. ಹೊರಟೆವು. ಹೊಳೆನರಸೀಪುರದ ಬನಶಂಕರಿ ನಮಗೆ ಮನೆ ದೇವರು. ನಮ್ಮ ತಂದೆ ಬಸವರಾಜು ತಾತ ಅಪ್ಪಯ್ಯಶೆಟ್ಟರ ಕಾಲದಿಂದಲೂ ನಾವು ಈ ದೇವಸ್ಥಾನಕ್ಕೆ ಹೋಗಿಬರುವ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ನಮ್ಮ ಮಕ್ಕಳು ಮೊಮ್ಮಕ್ಕಳ ಮೊದಲ ಮುಡಿಯು ಇಲ್ಲಿಗೆ  ಸಮರ್ಪಿತ.  ವರ್ಷಕ್ಕೊಮ್ಮೆ ಜನವರಿ ಮಾಹೆಯಲ್ಲಿ ಬರುವ ಬನದ ಹುಣ್ಣಿಮೆ ಈ ವರ್ಷ 25ಕ್ಕೆ ಬಂದಿದೆ.  ಈ ವರ್ಷ ಇಲ್ಲಿಯ ದೇವತೆಗೆ ವಿಶೇಷ ಅಲಂಕಾರ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ಊಟದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿತ್ತು. ತಾಳೆ ಹೂವಿನ ಅಲಂಕಾರದಲ್ಲಿ ಮಾತೆ ಬನಶಂಕರಿ ವೈಭವದಿಂದ ಕಣ್ಮನ ಸೆಳೆಯುತ್ತಿತ್ತು. ಬೆಳಿಗ್ಗೆ ಪವಿತ್ರ ಹೇಮಾವತಿ ನದಿಯಿಂದ ಗಂಗಾ ಕಳಸವನ್ನು ವೀರಭದ್ರಸ್ವಾಮಿಯ ಹಲಗೆಯೊಂದಿಗೆ ಮೆರವಣಿಗೆಯಲ್ಲಿ ತರಲಾಗಿತು. 



ಗ್ರಂಥಸ್ಥವಲ್ಲದ ಗ್ರಾಮೀಣ ಬದುಕಿನ ನೈಜ ಸಂಸ್ಕೃತಿಯ ರೂಪವೇ ಜನಪದ. ಗ್ರಾಮೀಣ ಜನತೆಯ ದೈನಂದಿನ ಬದುಕೆ ಜನಪದಕ್ಕೆ ಅಡಿಗಲ್ಲು. ನಮ್ಮ ಜನಪದರು ಪ್ರಕೃತಿಯನ್ನು ಬಿಟ್ಟು ಬದುಕಿದ್ದೇ ಇಲ್ಲ. ಪ್ರಕೃತಿಯೇ ಅವರಿಗೆ ದೇವರಾಗಿತ್ತು. ದೇವರು ಎಂದರೆ ನಮ್ಮ ಜನ ಭಯಗೊಂಡು ತಪ್ಪು ಮಾಡಿದರೆ ಕೇಡುಂಟು ಮಾಡಬಹುದೆಂದು ಹೆದರಿಕೊಳ್ಳುವ ಮನಸ್ಥಿತಿ ಇರುವುದು ಸಹಜವೇ! ನಾವು ಮರಗಿಡಗಳನ್ನು ಬೆಳೆಸಬೇಕು ಉಳಿಸಿಕೊಂಡು ಬರಬೇಕು. ಇದನ್ನು ಬಾಯಿ ಮಾತಿನಲ್ಲಿ ಹೇಳಿದರೆ ಸಾಕೆ? ಇಂದಿನ ದಿನಗಳಲ್ಲಿ ಕಾನೂನು ಮಾಡಿದ್ದರೂ ಕದ್ದುಮುಚ್ಚಿ ಮರಗಿಡ ಕಡಿದು ಅರಣ್ಯ ನಾಶ ಮಾಡುತ್ತಿರುವುದು ಸರಿಯಷ್ಟೇ! ಅದಕ್ಕೆ ನಮ್ಮ ಜನಪದರು ಊರ ಪಕ್ಕದಲ್ಲಿ ಮರಗಿಡಗಳನ್ನು ಬೆಳೆಸಿ ದೇವರ ಬನಗಳೆಂದು ಕರೆದರು. ಈ ಬನವನ್ನು ಸರ್ಪ ಕಾಯುತ್ತದೆ. ಯಾರಾದರೂ ಬನದಲ್ಲಿಯ ಗಿಡಮರಗಳನ್ನು ಕಡಿದರೆ ಕೇಡುಂಟಾಗುತ್ತದೆ ಎಂದು ಹೆದರಿಸಿದ್ದರು. 



ನಾಗರೀಕತೆಯ ಪ್ರಾರಂಭದ ದಿನಗಳಲ್ಲಿ ಜೀವನಾಧಾರಗಳಾದ ತಿನ್ನಲು ಆಹಾರ ಕೊಡುವ ಮರಗಿಡಗಳು, ನೀರು, ಬೆಳಕು ಇವುಗಳನ್ನು ಕೃತಜ್ಞತಾ ಭಾವದಿಂದ ನಮಿಸತೊಡಗಿದರು. ಮುಂದೆ ಇದೆ ಪೂಜಾ ವಿಧಾನಗಳಾಗಿ ಮಾರ್ಪಟಿತು. ಆ ಪ್ರಕೃತಿಯ ಆಕೃತಿಯೇ ಬನದೇವಿ. ಬನದೇವಿಯೇ ಮುಂದೆ ಬನಶಂಕರಿಯಾದಳು. ಬನಶಂಕರಿಯನ್ನು ವರ್ಷಕ್ಕೊಮ್ಮೆ ಬನದ ಹುಣ್ಣಿಮೆಯಂದು ವಿಶೇಷವಾಗಿ ಆರಾಧಿಸುವ ಜಾತ್ರೆ ಉತ್ಸವ ಏರ್ಪಡಿಸುವುದು ನಡೆದು ಬಂತು.  ಸೌಮ್ಯ ಬನಶಂಕರಿಯು ಬೇಡಿದವರಿಗೆ ರಕ್ಷಣೆ ನೀಡುವ ಚೌಡೇಶ್ವರಿಯಾದಳು. ಸೃಷ್ಟಿಯ ರಹಸ್ಯ ಅರಿಯಲೆತ್ನಿಸಿ ಪ್ರಕೃತಿ ಪುರುಷ ಕಲ್ಪನೆ ಮೂಡಿತು. ಲಿಂಗಪೂಜೆಗೆ ಒಳಪಟ್ಟಿತು. ಲಿಂಗ ಶಿವನಾಗಿ ಶಿವ ಪುರುಷನಾಗಿ, ಪಾರ್ವತಿ ಪೃಕೃತಿಯಾದಳು. ಆದಿಶಕ್ತಿ ಎನಿಸಿದ ಚೌಡೇಶ್ವರಿ ಬನಶಂಕರಿ ಮುಂತಾದ ಹೆಸರಿನ ಶಕ್ತಿದೇವತೆಗಳು ಪಾರ್ವತಿಯ ಅವತಾರಗಳಾದವು.



ಉತ್ತರ ಕರ್ನಾಟಕದ ಅತಿದೊಡ್ಡ ರಥೋತ್ಸವಗಳಲ್ಲಿ ಬಾದಾಮಿ ಬನಶಂಕರಿ ಉತ್ಸವ ಪ್ರಮುಖವಾದುದು.  ಈ ವರ್ಷ ಗುರುವಾರ ಸಂಜೆ ನಡೆದ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರಿದ್ದು ಇಲ್ಲಿ ಮುಂದಿನ ಒಂದು ತಿಂಗಳ ಕಾಲ ಜಾತ್ರೆ ಇರಲ್ಲಿದೆ. ಈ ವೇಳೆ ಇಲ್ಲಿ ಕಂಪನಿ ನಾಟಕಗಳು ಕ್ಯಾಂಪ್ ಮಾಡಿ ಜನರನ್ನು ರಂಜಿಸುತ್ತವೆ.  ಬಾದಾಮಿ ಬನಶಂಕರಿ ಜಾತ್ರೆಗೂ ಮುನ್ನ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಗ್ಗವನ್ನು ತರಲಾಗುತ್ತದೆ. ಈ ಹಗ್ಗವನ್ನು ಬನಶಂಕರಿ ರಥಕ್ಕೆ ಕಟ್ಟಿ ರಥ ಎಳೆಯುತ್ತಾರೆ. ಹಾಗೆಯೇ ನೆಟ್‍ನಲ್ಲಿ ಇದನ್ನು ನೋಡಿದೆ. ಅಬ್ಬಾ ಎಷ್ಟೊಂದು ಜನ ಜಾತ್ರೆ!  ಹಿಂದೊಮ್ಮೆ ಶೈಕ್ಷಣಿಕ ಪ್ರವಾಸವಾಗಿ ಉತ್ತರ ಕರ್ನಾಟಕ ಕಡೆ ಹೊರಟು ಈ ಬನಶಂಕರಿ ದೇವಾಲಯಕ್ಕೆ ಹೋದರೂ  ರಷ್ ಕಾರಣ ಗರ್ಭಗುಡಿಗೆ ಹೋಗಿ ದೇವಿ ದರ್ಶನ ಮಾಡಲಾಗದೆ ಹಿಂತಿರುಗಿದ್ದೆ ಮುಂದೆ ಯಾವಾಗಲಾದರೂ ಒಮ್ಮೆ ಹೋಗಿಬರಬೇಕಿದೆ.   



ಇತ್ತ ನಾವು ಮದ್ಯಾಹ್ನ ಹೊಳೆನರಸೀಪುರ ತಲುಪಿದಾಗ ಊಟದ ಸಮಯ. ಇಲ್ಲಿಯೂ ದೇವಸ್ಥಾನ ತುಂಬಾ ರಷ್. ಹೊರಭಾಗದಲ್ಲಿ ಹಾಕಲಾಗಿದ್ದ ವಿಶಾಲ ಪೆಂಡಾಲ್‍ನಲ್ಲಿ ಊಟದ  ವ್ಯವಸ್ಥೆ ವ್ಯವಸ್ಥಿತವಾಗಿ ನಡೆದಿತ್ತು. ಊಟ ಮುಗಿಸಿ ಭಕ್ತರು ದೇವಿ ದರ್ಶನಕ್ಕೆ ಬರುತ್ತಿರುವಂತೆ ದೇಗುಲದ ಒಳಭಾಗದಲ್ಲಿದ್ದ ಭಕ್ತಾದಿಗಳನ್ನು ಹೊರಗೆ ಬಿಡುತ್ತಿದ್ದರು.  ತಾಳೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಬನಶಂಕರಿಯನ್ನು ಕಣ್ತುಂಬ ನೋಡಿ ಕೆಲವರು ಪೋಟೋ ತೆಗೆದುಕೊಳ್ಳುತ್ತಿದ್ದರು. ನಾನು ಒಂದು ಕ್ಲಿಕ್ಕಿಸಿದೆ. ಈ ದೇಗುಲ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿದೆ. 1969ರಲ್ಲಿ ಸ್ಥಾಪನೆಗೊಂಡು  ದೇವಾಂಗ ಬೀದಿಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನಕ್ಕೆ 18 ಅಡಿ ಎತ್ತರದ ಗೋಪುರ ನಿರ್ಮಿಸಿ ದೇಗುಲ ಅಂದಗೊಳಿಸಲಾಗಿದೆ. ಗೋಪುರದ ದೇವಲ ಮಹರ್ಷಿ ಮೂರ್ತಿಯು  ಆಕರ್ಷಣೀಯವಾಗಿ ದೇಗುಲಕ್ಕೆ ಕಿರೀಟ ಪ್ರಾಯವಾಗಿದೆ.  ದೇವಾಲಯದ ಒಳಾಂಗಣದಲ್ಲಿ ಶ್ರೀ ಸತ್ಯನಾರಾಯಣಸ್ವಾಮಿ ದೇವರ ಮೂರ್ತಿ ಇದೆ. ಇಲ್ಲಿ ಭಕ್ತಾದಿಗಳು ಸತ್ಯನಾರಾಯಣಸ್ವಾಮಿ ಕಥೆ ಪೂಜೆ ನಡೆಸಬಹುದಾಗಿದೆ. ದೇಗುಲದ ಹೊರಾಂಗಣದಲ್ಲಿ ನವಗ್ರಹ ಗುಡಿಯಿದೆ. ನವರಾತ್ರಿ  ಸಂದರ್ಭ  ದೇವಾಲಯದಲ್ಲಿ 9 ದಿನಗಳು 9 ಅಲಂಕಾರಗಳಿಂದ ಬನಶಂಕರಿಯನ್ನು ಅಲಂಕರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ. ಕಡೆಯ ವಿಜಯದಶಮಿ ದಿನ ಸಾವಿರಾರು ಭಕ್ರರಿಗೆ  ಅನ್ನಸಂತರ್ಪಣೆ ಇರುತ್ತದೆ.  




- ಗೊರೂರು ಅನಂತರಾಜು, ಹಾಸನ. 

ಮೊ: 9449462879

 ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 

ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




 

Post a Comment

0 Comments
Post a Comment (0)
To Top