ಮಂಗಳೂರು: ಪ್ರಕೃತಿ ಬಹಳ ಸೂಕ್ಷ್ಮವಾಗಿದ್ದು, ಅದು ನಮಗಾಗಿ ಕಾಯುವುದಿಲ್ಲ. ಅದನ್ನು ನಾವು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಎಚ್ಚರಿಸಿದರು.
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ 38ನೇ ಎಕ್ಸ್‌ಪರ್ಟ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿಯಿಂದ ಹಲವಾರು ಲಾಭಗಳಿವೆ. ಅದರಿಂದಲೇ ಮಾನವ ತೊಂದರೆ ಅನುಭವಿಸುತ್ತಾನೆ. ನಾವು ಏನು ಪ್ರಕೃತಿಗೆ ನೀಡುತ್ತೇವೆಯೋ ಅದನ್ನೇ ಪ್ರಕೃತಿ ನಮಗೆ ಹಿಂದಿರುಗಿಸುತ್ತದೆ. ಕಳೆದ 4-5 ತಲೆಮಾರುಗಳಿಂದ ಭೂಮಿಯನ್ನು ಮನುಷ್ಯರು ಹಾಳು ಮಾಡಿದ್ದಾರೆ ಎಂದವರು ವಿಷಾದಿಸಿದರು.
ಕೃತಕ ಬುದ್ಧಿಮತ್ತೆ ಭವಿಷ್ಯಕ್ಕೆ ಸಂಚಕಾರ:
ಮಾನವ ಬುದ್ಧಿಶಕ್ತಿಯಿಂದ ಯಂತ್ರ, ಕೃತಕ ಬುದ್ಧಿಮತ್ತೆ (ಎಐ) ಆವಿಷ್ಕಾರವಾಗಿದೆ. ಇದು ಮಾನವನ ಅಸ್ತಿತ್ವ, ಸಹಜ ಬುದ್ಧಿಶಕ್ತಿಯನ್ನೇ ಪ್ರಶ್ನಿಸಲಿದ್ದು, ಭವಿಷ್ಯದಲ್ಲಿ ಸಂಚಕಾರ ಸೃಷ್ಟಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಯತ್ನದಿಂದ ಯಶಸ್ಸು:
ಜೀವನದಲ್ಲಿ ಏನಾದರೂ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಸಿಗುತ್ತದೆ. ಕೆಲವು ಬಾರಿ ನಮಗೆ ಹಿನ್ನಡೆಯಾದಾಗ ಆತಂಕಗೊಳ್ಳುವ ಅಗತ್ಯವಿಲ್ಲ; ಅದೊಂದು ಅದ್ಭುತ ಅನುಭವವಾಗಿದ್ದು, ಮುಂದಿನ ಗೆಲುವಿಗೆ ಕಾರಣವಾಗುತ್ತದೆ. ಯಾವಾಗಲೂ ಹಣ ಮಾಡುವುದೇ ಜೀವನದ ಉದ್ದೇಶವಾಗಬಾರದು, ಶಿಕ್ಷಣವೇ ನಮ್ಮ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದೆ ಎಂದವರು ಶ್ಲಾಘಿಸಿದರು.
ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಇರಲಿ:
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವು ಏನೇ ಕಲಿಯುತ್ತಿದ್ದರೂ ಅದನ್ನು ಚೆನ್ನಾಗಿ ನಿರ್ವಹಿಸಬೇಕು. ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿ ಇರಬೇಕು. ಆದರೆ ಯಾವುದನ್ನು ಸಾಧಿಸಿದರೂ ನಿಮ್ಮ ತಾಯಿ-ತಂದೆಯನ್ನು ಮರೆಯಬೇಡಿ. ಅವರನ್ನು ಖುಷಿ ಪಡಿಸಿ. ಒಳ್ಳೆಯ ವೈದ್ಯ, ಎಂಜಿನಿಯರ್, ನಟನಾದರೂ ವಿಶ್ವಮಾನವ ಚಿಂತನೆಯಿರಬೇಕು ಎಂದರು.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಮಾತನಾಡಿ, ಕ್ಲಿಷ್ಟಕರ ಪರಿಸ್ಥಿತಿ ಎದುರಾದಾಗ ವಿಚಲಿತರಾಗದೆ ನಾವು ಬಲಿಷ್ಠರಾಗಬೇಕು. ಸಂಕಷ್ಟದಿAದ ನಾವು ಕಲಿತ ಪಾಠ ಜೀವನ ಪಾಠವಾಗಬೇಕು ಎಂದರು.
ಪ್ರಕಾಶ್ ಬೆಳವಾಡಿ ಅವರನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ರ‍್ಯಾಂಕ್ ವಿಜೇತರಾದ ವಿದ್ಯಾರ್ಥಿಗಳನ್ನು ಬೆಳವಾಡಿ ಅವರು ಸನ್ಮಾನಿಸಿದರು.
ವಿಶೇಷ ಸಾಧನಾ ಪ್ರಶಸ್ತಿ:
ಪ್ರಸಕ್ತ ಶೈಕ್ಷಣಿಕ ಸಾಲಿನ ಎಕ್ಸ್‌ಪರ್ಟ್ ಸೂಪರ್ ಸ್ಟಾರ್ ಪ್ರಶಸ್ತಿಯನ್ನು ಸುರವಿ ಸುಧೀರ್, ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಸಂಜನಾ ಸಂತೋಷ್ ಕಟ್ಟಿ, ಪಠ್ಯೇತರ ಸಾಧನೆಗಾಗಿ ಪುಷ್ಯಂತ್ ನಿಂಹ ಪ್ರಶಸ್ತಿ ಪಡೆದರು.
ಉಪಪ್ರಾಂಶುಪಾಲ (ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್, ಟ್ರಸ್ಟಿಗಳಾದ ಉಸ್ತಾದ್ ರಫೀಕ್ ಖಾನ್, ಸುರೇಶ್ ಪೈ, ಎಸ್.ಎಸ್.ನಾಯಕ್, ಕೊಡಿಯಾಲ್‌ಬೈಲ್ ಕ್ಯಾಂಪಸ್‌ನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿಜು ಅಭಿನಂದ್, ಪ್ರಧಾನ ಕಾರ್ಯದರ್ಶಿ ಸುರವಿ ಸುಧೀರ್ ಉಪಸ್ಥಿತರಿದ್ದರು.
23 ಬಗೆಯ ನೃತ್ಯ ವೈವಿಧ್ಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿ ಪ್ರೇಕ್ಷಕರ ಮನರಂಜಿಸಿದರು.
ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ. ಹೆಗ್ಡೆ ವಂದಿಸಿದರು.
ಬೆಳಿಗ್ಗೆ ಇನ್ಫೋಸಿಸ್ ಅಸೋಸಿಯೇಟ್ ಉಪಾಧ್ಯಕ್ಷ ಬಿ.ಪ್ರಶಾಂತ್ ಕಾಮತ್ ಧ್ವಜಾರೋಹಣ ನೆರವೇರಿಸಿದರು. ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅವರು ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿಜೇತರಿಗೆ ಟ್ರಸ್ಟಿ ಜಗನ್ನಾಥ್ ಕಾಮತ್ ಅವರು ಬಹುಮಾನ ವಿತರಿಸಿದರು.
ಚಿತ್ರ ಮಾಹಿತಿ:
1. ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ 38ನೇ ಎಕ್ಸ್‌ಪರ್ಟ್ ದಿನಾಚರಣೆಯನ್ನು ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
2. ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ 38ನೇ ಎಕ್ಸ್‌ಪರ್ಟ್ ದಿನಾಚರಣೆಯನ್ನು ಉದ್ಘಾಟಿಸಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ಮಾತನಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ