ಅಯೋಧ್ಯೆಯಲ್ಲಿ ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತನೆಯ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ: ರಾಮಜನ್ಮಭೂಮಿ ಟ್ರಸ್ಟ್‌ ಪ್ರಕಟ

Upayuktha
0

 



ಬೆಂಗಳೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮುಂದಿನ ಭಾನುವಾರ ಪ್ರತಿಷ್ಠಾಪನೆಯಾಲಿರುವ ಬಾಲರಾಮನ ಮೂರ್ತಿ ಕರ್ನಾಟಕದಲ್ಲಿ ಕೆತ್ತನೆಯಾಗಿದೆ. ಮೈಸೂರಿನ ಕಲಾವಿದ ಅರುಣ್‌ ಯೋಗಿರಾಜ್‌ ಅವರು ವಿಶೇಷವಾಗಿ ರೂಪಿಸಿರುವ ಬಾಲರಾಮನ ಪ್ರತಿಮೆಯನ್ನು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂತಿಮಗೊಳಿಸಿದೆ.


ರಾಮಜನ್ಮಭೂಮಿ ಟ್ರಸ್ಟ್‌ನ ಪ್ರಮುಖರು ಸೋಮವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಐತಿಹಾಸಿಕ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕರ್ನಾಟಕದ ಕಲಾವಿದರೊಬ್ಬರು ರೂಪಿಸಿದ ವಿಗ್ರಹ ಅಂತಿಮಗೊಂಡಿರುವುದು ಕನ್ನಡನಾಡಿಗೆ ಬಹಳ ಹೆಮ್ಮೆಯೆನಿಸಿದೆ.



ಅರುಣ್‌ ಯೋಗಿರಾಜ್‌ ಅವರು ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿಯೇ ಇದ್ದುಕೊಂಡು ಈ ವಿಗ್ರಹವನ್ನು ರೂಪಿಸಿದ್ದಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನಿಂದ ಆಯ್ಕೆ ಮಾಡಿಕೊಳ್ಳಲಾಗಿದ್ದ ಕೃಷ್ಣ ಶಿಲೆಯನ್ನು ಬಳಸಿಕೊಂಡುಈ ಮೂರ್ತಿ ರಚನೆ ಆರಂಭಿಸಿದ್ದರು. ಬಾಲರಾಮಮೂರ್ತಿ ರಚನೆ ಕಾರ್ಯ ಪೂರ್ಣಗೊಂಡಿದ್ದರೂ ಹದಿನೈದು ದಿನದ ಹಿಂದೆಯೇ ಟ್ರಸ್ಟ್‌ ಸೂಚನೆ ಮೇರೆಗೆ ಕಲಾವಿದರು ಅಲ್ಲಿಯೇ ಇದ್ದರು. ಮೊದಲು ಏಳು ಮಂದಿ ದೇಶದ ಶ್ರೇಷ್ಟ ಕಲಾವಿದರ ಪಟ್ಟಿಯನ್ನು ಆಯ್ಕೆ ಮಾಡಿ ಆನಂತರ ಮೂವರಿಗೆ ಬಾಲರಾಮನ ಪ್ರತಿಮೆ ಸ್ಥಾಪನೆ ಜವಾಬ್ದಾರಿ ನೀಡಲಾಗಿತ್ತು. ಇದರಲ್ಲಿ ಅರುಣ್‌ ಯೋಗಿರಾಜ್‌, ಕುಮಟಾದ ಜಿ.ಎಸ್‌.ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಬಾಲರಾಮಮೂರ್ತಿ ರೂಪಿಸಿದ್ದರು. ಮೂವರಲ್ಲಿ ಅರುಣ್‌ ಯೋಗಿರಾಜ್‌ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ.


ಸುಮಾರು ಐದು ಅಡಿಯಷ್ಟು ಎತ್ತರವಿರುವ ಈ ಬಾಲ ರಾಮನ ವಿಗ್ರಹ ವಿಶೇಷವಾಗಿದೆ. ರಾಮನೊಂದಿಗೆ ಸೀತಾ, ಲಕ್ಷ್ಮಣನೊಂದಿಗೆ ರಾಮನ ಬಂಟ ಹನುಮಂತನೂ ಕುಳಿತಿರುವ ವಿಗ್ರಹದಲ್ಲಿ ರಾಮನ ಮುಖಭಾವ ಮುಗ್ದವಾಗಿದೆ. ಗಂಭೀರತೆಯನ್ನು ಒಳಗೊಂಡಿದೆ. ಕಲ್ಲಿನ ಬಳಕೆ, ರಾಮನ ಮುಖಭಾವಗಳನ್ನು ಆಧರಿಸಿಯೇ ಅರುಣ್‌ ಯೋಗಿರಾಜ್‌ ರೂಪಿಸಿರುವ ವಿಗ್ರಹ ಅಂತಿಮಗೊಳಿಸಲಾಗಿದೆ ಎಂದು ಟ್ರಸ್ಟ್‌ ವಿವರಣೆ ನೀಡಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top