ಭಕ್ತಿಯಿಂದ ಶಿವನ ಸೇವೆ ಮಾಡಿದರೆ ಕಷ್ಟಗಳಿಂದ ಮುಕ್ತಿ
ಗೋಕರ್ಣ: ಮಲ್ಲಿಕಾರ್ಜುನನ ಸೇವೆಯನ್ನು ಭಕ್ತಿಯಿಂದ ಮಾಡಿದರೆ ಕರುಣಾಮಯಿಯಾದ ಶಿವ ಎಲ್ಲ ಕಷ್ಟಗಳಿಂದ ನಮಗೆ ಮುಕ್ತಿ ನೀಡುತ್ತಾನೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಅತಿರುದ್ರ ಅಭಿಷೇಕದ ನಾಲ್ಕನೇ ದಿನವಾದ ಮಂಗಳವಾರ ಪರಮಪೂಜ್ಯರು ಆಶೀರ್ವಚನ ನೀಡಿದರು. ಮುಳ್ಳೇರಿಯಾ ಮಂಡಲದಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ರುದ್ರಪಾಠಕರು ನಾಲ್ಕನೇ ದಿನ ರುದ್ರಪಠಣ ಸೇವೆ ಸಲ್ಲಿಸಿದರು.
ಮನಸ್ಸೆಂಬ ಯುದ್ಧಭೂಮಿಯಲ್ಲಿ ಅರಿಷಡ್ವರ್ಗಗಳು ನಮ್ಮ ವೈರಿಗಳು. ಅವರನ್ನು ಎದುರಿಸಿ ಜಯಶಾಲಿಯಾಗಬೇಕಾದರೆ ಶಿವನ ಅನುಗ್ರಹ ಬೇಕೇ ಬೇಕು. ಶಿವ ಕಿರಾತನ ರೂಪದಲ್ಲಿ ಬಂದು ಅರ್ಜುನನನ್ನು ಪರೀಕ್ಷಿಸಿದಂತೆ ಭಕ್ತರನ್ನು ಪರೀಕ್ಷಿಸುತ್ತಿರುತ್ತಾನೆ. ನಮ್ಮ ಜೀವನದಲ್ಲಿ ಕಷ್ಟ ಕೋಟಲೆಗಳು ಬಂದಾಗ ಅದನ್ನು ಎದುರಿಸುವ ಶಕ್ತಿಯೂ ನಮಗೆ ಬರುತ್ತದೆ ಎಂದು ವಿಶ್ಲೇಷಿಸಿದರು.
ಶಿವಭಕ್ತನಾದ ಅರ್ಜುನ ತಪಸ್ಸು ಮಾಡುತ್ತಿದ್ದಾಗ ಕಾಡಿಗೆ ಕಿರಾತನ ರೂಪದಲ್ಲಿ ಬಂದ ಶಿವನಿಗೂ ಅರ್ಜುನನಿಗೂ ಹಂದಿಯ ಬೇಟೆ ವಿಚಾರದಲ್ಲಿ ಜಗಳ ಏರ್ಪಡುತ್ತದೆ. ಘೋರ ಕದನದ ನಡುವೆಯೂ ಶಿವಲಿಂಗವನ್ನು ಪೂಜಿಸುತ್ತಿದ್ದ ಅರ್ಜುನ, ಶಿವಲಿಂಗಕ್ಕೆ ಹಾಕಿದ ಮಲ್ಲಿಗೆ ಮಾಲೆ ಕಿರಾತನ ಕೊರಳಲ್ಲಿ ಕಂಡುಬಂದಾಗ ಅರ್ಜುನನಿಗೆ ತಾನು ಹೋರಾಡುತ್ತಿರುವುದು ಶಿವನ ಜತೆಗೆ ಎಂಬ ವಾಸ್ತವ ಅರಿವಾಗುತ್ತದೆ. ಅರ್ಜುನ ಶರಣಾದಾಗ ಶಿವ ಆತನನ್ನು ಅನುಗ್ರಹಿಸುತ್ತಾನೆ. ಮಲ್ಲಿಗೆಯ ಮಾಲೆ ಧರಿಸಿದ ಶಿವ ಮಲ್ಲಿಕಾರ್ಜುನ ಎಂಬ ಖ್ಯಾತಿ ಪಡೆಯುತ್ತಾನೆ ಎಂದು ವಿವರಿಸಿದರು.
ಶಿವನ ಕೃಪೆಯಿಂದ ನಮ್ಮೆಲ್ಲರ ಬದುಕು ಮಲ್ಲಿಗೆಯಾಗಬೇಕು. ಅರ್ಜುನ ಎಂದರೆ ಶುಭ್ರ, ಬಿಳಿ ಎಂಬ ಅರ್ಥವೂ ಇದೆ. ನಮ್ಮ ಜೀವನದಲ್ಲಿ ನಾವು ಮಾಡಿದ ಪಾಪದ ಕಲೆಗಳು ಕಳೆದು ಎಲ್ಲರ ಬದುಕು ಮಲ್ಲಿಗೆಯಂತೆ ಶುಭ್ರವಾಗಲಿ ಎಂದು ಆಶಿಸಿದರು.
ಶ್ರೀಶಂಕರರು ನಮ್ಮ ಮೂಲಮಠವನ್ನು ಸ್ಥಾಪಿಸುವ ಮುನ್ನವೇ ಅಶೋಕೆಯ ಪುಣ್ಯ ಪರಿಸರದಲ್ಲಿ ನೆಲೆನಿಂತಿದ್ದ ಮಲ್ಲಿಕಾರ್ಜುನನಿಗೆ ಈ ಅತಿರುದ್ರಾಭಿಷೇಕದ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಶಿಷ್ಯರು ರುದ್ರಪಠಣ ಸೇವೆ ಮಾಡುತ್ತಿರುವುದು ನಿಜಕ್ಕೂ ಸುತ್ಯಾರ್ಹ. ಭಕ್ತರ ಇಂಥ ಸೇವೆಗೆ ಸಂಪ್ರೀತನಾಗಿ ನಮಗೆ ಎದುರಾಗುವ ಕಷ್ಟಕೋಟಲೆಗಳನ್ನು ಮಲ್ಲಿಕಾರ್ಜುನ ನಿವಾರಿಸಲಿ ಎಂದು ಆಶಿಸಿದರು.
ಖ್ಯಾತ ಚಿತ್ರಕಾರ ನೀರ್ನಳ್ಳಿ ಗಣಪತಿಯವರು ರಚಿಸಿದ ಕಿರಾತಾರ್ಜುನನ ವಿಶೇಷ ಚಿತ್ರರೂಪಕವನ್ನು ಅನಾವರಣಗೊಳಿಸಲಾಯಿತು. ಅತಿರುದ್ರ ಅಭಿಷೇಕದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ಪರಮೇಶ್ವರ ಮಾರ್ಕಂಡೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಉಪಾಧಿವಂತ ಮಂಡಳಿಯ ಕಾರ್ಯದರ್ಶಿ ಬಾಲಕೃಷ್ಣ ಭಟ್ ಜಂಬೆ, ಅತಿರುದ್ರ ಸೇವಾಕರ್ತರಾದ ರಮಣ ಭಟ್ ಮುಂಬೈ, ಮನೋರಂಜಿನಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ರಾಜಾರಾಂ ಭಟ್ ಮುರೂರು, ಜನಾರ್ದನ ಭಟ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ