“ರಾಮಾಯಣ” ಹೆಸರು ಕಿವಿಗೆ ಬಿದ್ದೊಡನೆ ಭಕ್ತಿಭಾವ

Upayuktha
0


ಬಾಲ್ಯದಿಂದಲೂ ಕೇಳಿಕೊಂಡು ಬಂದ ಕತೆಯೇ ಆದರೂ, ಜೀವನದ ವಿವಿಧ ಸ್ತರಗಳಲ್ಲಿ ಅದರಿಂದ ಆದ ಪ್ರಭಾವ ಬೇರೆ ಬೇರೆಯೆ ನನ್ನ ತಾತ (ತಾಯಿಯವರ ತಂದೆ) ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿಗಳವರು ಮಾನ್ಯ ಮಹಾರಾಜರು  ಜಯಚಾಮರಾಜೇಂದ್ರ ಒಡೆಯರ್ ರವರ ಆಸ್ಥಾನ ವಿದ್ವಾಂಸರಾಗಿದ್ದವರು. ಕನ್ನಡದ ಸಾಹಿತ್ಯ ಶಿರೋಮಣಿ ಪರೀಕ್ಷೆ ಪಾಸು ಮಾಡಿ, ಅಧ್ಯಾಪಕರಾಗಿದ್ದವರು. ಅರಮನೆಯ ವತಿಯಿಂದ ರಾಮಾಯಣ, ಪದ್ಮಪುರಾಣ ಮುಂತಾದ ಸುಮಾರು 12 ಪುಸ್ತಕಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ ಮಾಡಿದವರು. (ಈ ಪುಸ್ತಕಗಳೆಲ್ಲ ಇಂದಿಗೂ ಮೈಸೂರಿನ ಅರಮನೆಯಲ್ಲಿ, ಮತ್ತು Oriiental library ಯಲ್ಲಿ ಲಭ್ಯವಿದೆ)




ನಮ್ಮ ತಾಯಿಯವರ ಬಳಿ ಶ್ರೀಮಧ್ಯಾತ್ಮ ರಾಮಾಯಣದ ಮೂರು ಪುಸ್ತಕಗಳಿದ್ದವು. ರಾಮನವಮಿಯಂದು , ನವರಾತ್ರಿಯಲ್ಲಿ ಅದನ್ನು ಪಾರಾಯಣ ಮಾಡುತ್ತಿದ್ದ ನೆನಪು. ನಮ್ಮ ತಂದೆಯವರಿಗೆ ಕಾರ್ಯನಿಮಿತ್ತ ಊರೂರಿಗೆ transfer ಆಗುತ್ತಿದ್ದುದರಿಂದ ನಾವೂ ತಾತನ ಮನೆ ಬೇಸಿಗೆ ರಜೆಯಲ್ಲಿ ಗ್ಯಾರಂಟಿ. ಎಲ್ಲಾ ಮೊಮ್ಮಕಳಿಗೂ ತಾತನ ಬಳಿ ಸಲಿಗೆ ಜಾಸ್ತಿ ಅಜ್ಜಿಯದು ಮಡಿ ಮೈಲಿಗೆ ಬಹಳ. ತಾತ ಬೆಳಗಿನ ಹೊತ್ತು ಗದ್ದೆ, ಕೃಷಿಕಾರ್ಯ ನಿಮಿತ್ತ ಬಹಳ busy.




ಮಧ್ಯಾಹ್ನದ ಊಟದ ನಂತರ ಸ್ವಲ್ಪ ವಿರಾಮ. ನಾನೆಂದೂ ನನ್ನ ತಾತ ಮೂಗು ಹಿಡಿದುಕೊಂಡು ಗಂಟೆಗಟ್ಟಲೆ ದೇವರ ಪೂಜೆ ಮಾಡಿದುದನ್ನು ನೋಡೇಯಿಲ್ಲ. ಈಗ ನೆನೆದರೆ ಆಶ್ಚರ್ಯವಾಗುತ್ತದೆ. ಅಂತಹ ತಾತ ರಾಮಾಯಣ, ಪದ್ಮಪುರಾಣದಂತಹ ಕೃತಿಗಳನ್ನು ಹೇಗೆ ಭಾಷಾಂತರ ಮಾಡಿದರು ಎಂದು. ಮಧ್ಯಾಹ್ನದ ಬಿಡುವಿನಲ್ಲಿ ಮೊಮ್ಮಕ್ಕಳೊಡನೆ ಪ್ರೀತಿ, ಮಾತುಕತೆ ಎಲ್ಲ. ದೂರು ಕೇಳುವುದರಿಂದ ಹಿಡಿದು, ಸಂಧಾನ ಮಾಡಿಸುವವರೆಗೆ. ಅದಾದ ಮೇಲೆ ಯಾವುದಾದರೊಂದು ರಾಮಾಯಣದ ಯಾವುದಾದರೊಂದು ಪ್ರಸಂಗದ ಕಥೆ ಹೇಳುವುದು. ವಿಸ್ತರಣೆ ಮೊಮ್ಮಕ್ಕಳ ಪಾಲಿಗೆ.




ಹೀಗೇ ಬಾಲ್ಯದಿಂದಲೇ ನಮಗೆ ರಾಮಾಯಣದ ಪರಿಚಯ, ಒಡನಾಟ. ಆ ಪಾತ್ರಗಳೆಲ್ಲ ನಮ್ಮೊಡನೆ ಸಜೀವವಾಗಿ ಓಡನಾಡಿದ, ಓಡಾಡಿದ ಅನುಭವ.ಎಷ್ಟೇ ಆದರೂ ಮುಗ್ದ ಬಾಲ್ಯ. ಕಲ್ಪನಾ ಲೋಕ. ಕೈಕೇಯಿಯನ್ನು ಬೈದುದು ಎಷ್ಟೋ . ರಾಮಸೀತೆಗಾಗಿ ಮರುಗಿದುದು ಎಷ್ಟೋ. ಆದರೆ ಅಲ್ಲೆಲ್ಲೂ ಲಕ್ಷ್ಮಣನ ಬಗ್ಗೆಯಾಗಲೀ, ಭರತನ ಬಗ್ಗೆಯಾಗಲೀ ಬಹಳ ಕಾಳಜಿಯಿರಲಿಲ್ಲ ವೆಂಬುದು ಕಟುಸತ್ಯ. ಊರ್ಮಿಳೆಯಂತೂ ಲಕ್ಷ್ಮಣನ ಹೆಂಡತಿಯೆಂಬುದು ಬಿಟ್ಟರೆ ಇನ್ನಾವುದು ತಿಳಿಯದು.ಶ್ತುತಕೀರ್ತಿ, ಮಾಂಡವಿಯರು ಭರತ, ಶತ್ರುಘ್ನರ ಪತ್ನಿಯರೆಂಬುದಷ್ಟೇ ತಿಳಿವು.




ಭರತ ರಾಮನ ಪಾದುಕೆಯನ್ನು ಒಯ್ದಾಗ, ಅಯ್ಯೋ ಪಾಪ ರಾಮನ ಚಪ್ಪಲಿಯನ್ನೂ ಬಿಡದೇ ಕೊಂಡೊಯ್ದನಲ್ಲ ಎಂಬ ಕೋಪ. ನಮ್ಮೆಲ್ಲ ಬಾಲಿಶ ಅನುಮಾನಗಳಿಗೆ ಸಮಾಧಾನದಿಂದ ತಾತ ಹೇಳುತ್ತಿದ್ದ ಮಾತು “ನೀವೆಲ್ಲ ಇನ್ನೂ ಚಿಕ್ಕವರು. ಲೋಕಾನುಭವ ಕಡಿಮೆ. ಈಗ ಇದನ್ನು ಕತೆಯೆಂದು ಕೇಳಿ ಮನಸಿಟ್ಟು. ಮುಂದೆ ನಿಮ್ಮ ಜೀವನಾನುಭವ ಹೆಚ್ಚಿದಂತೆ ಈ ರಾಮಾಯಣದ ಪಾತ್ರಗಳು ನಿಮಗೆ ನೀತಿಪಾಠ ಹೇಳುವ ಗುರುಸಮಾನವಾಗುತ್ತವೆ. ಜಠಿಲ ಸಮಸ್ಯೆಗಳು ಎದುರಾದಾಗ ಸಂಯಮದಿಂದ ಪರಿಹರಿಸುವುದನ್ನು ಹೇಳಿಕೊಡುತ್ತವೆ. ಜೀವನಕ್ಕೆ ಮಾರ್ಗದರ್ಶಿಯಾಗುತ್ತವೆ”. ಎಂದು



ತಾತ ರಾಮಾಯಣದ ಬರವಣಿಗೆಯಲ್ಲಿದ್ದಾಗ, ದಶರಥನ ಸಾವಿನ ಪ್ರಸಂಗದಲ್ಲಿ ಮೂರು ನಾಲ್ಕು ಬಾರಿ ಅಡ್ಡಿಯೊದಗಿತ್ತಂತೆ. ಅದಕ್ಕೆ ಆ ಒಂದು ಪ್ರಸಂಗವನ್ನು ಮನೆಯೊಳಗೆ ಹೇಳದೇ, ಮನೆಯ ಹೊರಗಿನ ಪಡಸಾಲೆಯಲ್ಲಿ ಚುಟುಕಾಗಿ ಹೇಳಿದುದು ಇನ್ನೂ ನೆನಪಿದೆ. ಸಾವಿನ ಪ್ರಸಂಗಗಳನ್ನು ವಿನಾಕಾರಣ ಎಳೆದಾಡಬಾರದು, ಎಳೆಯಬಾರದು. ಅದರಿಂದ ಮನೆಯಲ್ಲಿ ಶಾಂತಿ ಸಮಾಧಾನಗಳು ಇಲ್ಲವಾಗುತ್ತವೆ. ವಿಪರೀತ ಸಂದರ್ಭಗಳಲ್ಲಿ ಸಾವೂ ಸಂಭವಿಸಬಹುದು ಎಂಬ ನಂಬಿಕೆ ,ಶ್ರದ್ದೆ. ಆಗ ಕಲಿತ ರಾಮಾಯಣದ ಕನ್ನಡದ ಬಾಯಿಪಾಠ ಇಂದಿಗೂ. 




ಹರನು ಒಲಿದು ರಾವಣಾಗೆ ಏನು ಫಲವನಿತ್ತನಯ್ಯ, ಪಾರ್ವತಾದೇವಿ ಸಹಿತ ದೇವ ಕಹಳೆ ಹಿಡಿಯಲು. ಜಗದ ಗುರು ವಿಶ್ವಕರ್ಮ ಅಗ್ನಿಯೊಳು ಸಹಾಯವಾಗಿ, ಅನುದಿನಾ ರಾವಣಾಗೆ ಸೇವೆಯನ್ನು ಮಾಡಲು ರಾವಣನ ಮನೆಗೆ ಬ್ರಹ್ಮ ಶಾನುಭೋಗನಾಗಲು ಜಡೆಯ ಶಂಕರ ತಾನು ಹೂವ ತಾರತಮ್ಮಡಿ ಸೂರ್ಯರೂ ಚಂದ್ರರೂ ಕನ್ನಡಿಯ ಪಿಡಿಯಲಾಗಿ ಸಪ್ತಕಾಳಿಂಗ ಬಂದು ದೀವಟೀಗೆ ಹಿಡಿಯಲು ವಾಯುದೇವ ರಾವಣನಾ ಅಂಗಳಾವ ಬಳಿಯಲು ವರುಣದೇವ ರಾವಣನ ಅಂಗಳಾವ ತೊಳೆಯಲು ಮಂಗಳಾಗೌರಿ ಬಂದು ರಂಗವಲ್ಲಿಯಿಕ್ಕಲು ಅಗ್ನಿದೇವ ರಾವಣಾಗೆ ಅಡಿಗೆಯನ್ನು ಮಾಡಲು ಸ್ವಾಹದೇವಿ ರಾವಣಾಗೆ ತಣಿಗೆ ಬಟ್ಟಲಿರಿಸಲು ಹರಿಯ ಮಡದಿ ಲಕ್ಷ್ಮಿದೇವಿ ಭಂಡಾರ ಕಾವಲ ಕಂಚಿನಾಕೋಟೆಗೆ ಮಿಂಚುಮುಗುಳುಕಾವಲು ನಾಕುದಿಕ್ಕಿನ ಬಾಗಿಲೀಗೇ ಭೈರವನೇ ಕಾವಲು ವನದುರ್ಗಿದೇವಿ ತಾನು ಬಾಗಿಲಲ್ಲಿ ಕಾವಲು ಯಾವತೆರದಲ್ಲೂ ರಾವಣಾಗೆ ಸಾವುಬಾರದೆಂದರು.





ಸೀತೆಶ್ರೀರಾಮರು ಲೆತ್ತವನ್ನೆ ಆಡುತಿರಲು ಮಾಯಮಾರೀಚ ಬಂದು ಮೃಗವನಾಗೆ ಸುಳಿಯಲು ಮೃಗವ ಕಂಡು ಸೀತೆ ತಾ ಲೆತ್ತವನ್ನೆ ಒಲ್ಲಳಾಗಿ ಧನುವತಾರೆ ಸೀತೆ ಮೃಗದ ಬೇಟೆಗೆ ಹೋಗುವೆ ಧನುವನೆತ್ತಿ ಶ್ರೀರಾಮ ಮೃಗವನಟ್ಟಿ ಪೋಗಲು ಚಿಟಿಕಿ ತಪ್ಪಿ ಆ ಮೃಗವು ಶೀಡನಾಗಿ ಹಾರಿತು. ಹತ್ತು ತಲೆ ರಾವಣ ತಾ ಮಾಯದಿಂದ ಜೋಗಿಯಾಗಿ ಭಿಕ್ಷಾಂದೇಹಿ ಎನುತ ಬಂದು ಬೇಡಿದಾನೆ ಭಿಕ್ಷವ ಒಂದು ಗೆರೆಯ ದಾಟಿದರೆ ಒಂದು ಕೋಟಿ ಫಲವಿದೆ. ಎರಡುಗೆರೆಯ ದಾಟಿದಾರೆ ಎರಡು ಕೋಟಿ ಫಲವಿದೆ. ಮೂರುಗೆರೆಯ ದಾಟಿದರೆ ಮುತ್ತೈದೆ ಭಾಗ್ಯವು, ನಾಕುಗೆರೆಯ ದಾಟಿದರೆ ನಾಗಲೋಕವಾಳುವೆ ಐದುಗೆರೆಯ ದಾಟಿದರೆ ಅಯೋಧ್ಯೆ ಆಳುವೆ ಆರುಗೆರೆಯ ದಾಟಿದರೆ ಬಾಲಕರ ಹಡೆಯುವೆ ಏಳುಗೆರೆಯ ದಾಟಿದರೆ ಎತ್ತುವೆ ನೀ ಕಂದನ ಪುಣ್ಯಲಕ್ಷ್ಮಿ ನಡೆದು ಬಂದು ನೀಡಿದಾಳೆ ಭಿಕ್ಷವ.





ನೆಲನಕಿತ್ತು ರಥದ ಮೇಲೆ ಹಾಕಿಕೊಂಡು ಸೀತೆಯನ್ನು ರಾಘವರ ಮಡದಿಯನ್ನು ಎತ್ತಿಕೊಂಡು ಹೋಗುವಾಗ ಅಂಬರದಲ್ಲಾಡೋ ಜಟಾಯು ಕಂಡು ಕೂಗಿತು. ಸೀತೆ ಹೋದಳೆಂಬ ಸುದ್ದಿ ಶ್ರೀರಾಮರು ಕೇಳಿದರು ಶೋಕದಿಂದ ಜಂಬೂದ್ವೀಪದಲ್ಲಿ ನಿಂದರು. ರತ್ನಕುಂಡಲ ಕೆತ್ತಿದ ರನ್ನಧಾಮಖಂಡವನ್ನು ಫಲವನಿತ್ತು. ಕರವ ಮುಗಿದು ಹನುಮಕಂಡ ರಾಮರ ಸಪ್ತಏಳುಸಾಗರ ದಾಟಿಹೋಗಿ ಹನುಮ ನೀನು ಸೀತೆಗೆ ಉಂಗುರವನ್ನಿತ್ತು ಮಾತನಾಡಿ ಬಾರೆಂದ ಅಶೋಕದವನದಲ್ಲಿ ಸೀತೆ ಶೋಕ ಮಾಡುತಿರಲು ಉಂಗುರವ ಕಂಡು ಕರವ ಮುಗಿದು ನಿಂತಳು ಇಲ್ಲಿಗ್ಯಾಕೆ ಬಂದೆ ಹನುಮ ರಕ್ಕಸಾರ ಒಡಲಿಗೆ ರಾವಣ ಕಂಡರೆ. ಖಂಡತುಂಡ ಮಾಡುವ ಮುನ್ನ ಕೇಳೆ ಪುಣ್ಯಲಕ್ಷ್ಮಿ ಭಂಟನಾಗಿ ರಾಜ್ಯವನ್ನು ಲಂಕೆಯನ್ನು ಸುಟ್ಟು ಹನುಮ ಧಾಮಧೂಮಮಾಡಲು ಲಂಕೆಯನ್ನು ಸುಟ್ಟು ಹನುಮ ಬೂದಿಯಾಗಿ ತೂರುತಿರಲು ವಿಶ್ವಕರ್ಮ ಕಂಡು ನೀನಾರ ಭಂಟನೆನ್ನಲು ಅಹಲ್ಯೆಯ ಶಾಪ ಕಳೆದ ಜಾನಕಿಯ ವಲ್ಲಭ ಶೂರ್ಪನಖ ಮೂಗಕೊಯ್ದ ರಾಮಸ್ವಾಮಿ ಬಂಟನು ದಿಲ್ಲಿ ಮೇಲೆ ದಿಡಿಂಬಾದಿ ಸರ್ವ ವಾದ್ಯಗಳಿಂದ ರಾವಣಗೆ ಗಂಡವೆಂದು ಧವಳಶಂಖ ನುಡಿಯಿತು.




ಚಿತ್ತದಿಂದ ಧನುವನೆತ್ತಿ ಎದುರೇ ಶ್ರೀರಾಮರು ಹತ್ತುತಲೆಗೆ ರಾವಣಗೆ ಹತ್ತುಬಾಣವನ್ನೇ ಹಾಕಲು ಬಾಣದಿಂದ ಬಿದ್ದ ಅಸುರ ಹಾಯೆಕೋಟಿ ದನಿಗಳು ರಾವಣನ ರಕ್ತನೇತ್ರ ಭೂಮಿಗಾಗ ಹಾರಿತು. ಪಟ್ಟಣವನ್ನು ವಿಭೀಷಣಗೆ ಪಟ್ಟವನ್ನೆ ಕಟ್ಟಲಾಗಿ ರಾಮರಾಜ್ಯವಾಯಿತೆಂದು ಲಕ್ಷ್ಮಣನ ಬಿನ್ನಪ ಇಂತು ಸೀತೆ ಸೆರೆ ಬಿಡಿಸಿ ಶ್ರೀರಾಮರು ಸೀತೆಯೊಡನೆ ಅಯೋಧ್ಯೆಗೆ ಹೊರಟರು. 



- ಮೀನಾಕ್ಷಿ ಮನೋಹರ, 

ಬೆಂಗಳೂರು




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top