ನಮ್ಮೊಳಗಿನ ಪ್ರತಿಭೆಗಳು ಹೊರಜಗತ್ತಿಗೆ ತೆರೆದುಕೊಳ್ಳಬೇಕು : ಗುಣಾಜೆ ರಾಮಚಂದ್ರ ಭಟ್

Upayuktha
0


ನೆಕ್ಲಾಜೆಯಲ್ಲಿ ಸುಧಾರ್ಣವ ಸಾಂಸ್ಕೃತಿಕ ಸಂಘ ಉದ್ಘಾಟನೆ, ಕವಿಗೋಷ್ಟಿ


ವಿಟ್ಲ: ಕಾವ್ಯ ಪ್ರಾಸಬದ್ಧವಾಗಿದ್ದರಷ್ಟೇ ಶ್ರೇಷ್ಟ, ನವ್ಯದ ಹಾದಿಯಲ್ಲಿದ್ದರೆ ಕನಿಷ್ಟ ಎಂಬುದು ಒಪ್ಪತಕ್ಕ ವಿಚಾರವಲ್ಲ. ಬರೆದದ್ದರಲ್ಲಿ ಕಾವ್ಯ ಇದೆಯೇ ಎಂಬುದಷ್ಟೇ ಮುಖ್ಯ. ಕವನಿಸುವಿಕೆ, ಸಂಗೀತದಂತಹ ಹಲವಾರು ಪ್ರತಿಭೆಗಳು ನಮ್ಮೊಳಗಿನಿಂದ ಹೊರಜಗತ್ತಿಗೆ ಅನಾವರಣಗೊಂಡಾಗ ಅದಕ್ಕೊಂದು ಅರ್ಥಪ್ರಾಪ್ತಿಯಾಗುತ್ತದೆ ಎಂದು ವಿಶ್ರಾಂತ ಶಿಕ್ಷಕ, ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಹೇಳಿದರು.



ಅವರು ಕನ್ಯಾನದ ನೆಕ್ಲಾಜೆ ನಿವಾಸದಲ್ಲಿ ಆರಂಭಿಸಲಾದ ಸುಧಾರ್ಣವ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ, ಕವಿಗೋಷ್ಟಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಬರೆಯಬೇಕೆಂಬ ತುಡಿತ ನಮ್ಮನ್ನು ಬರೆಸುತ್ತದೆ. ವಿಷಯವೊಂದು ಗಾಢವಾಗಿ ನಮ್ಮನ್ನು ತಟ್ಟಿದಾಗ ಕವಿಮನಸ್ಸು ಕಾವ್ಯದ ರೂಪದಲ್ಲಿ ಆ ವಿಷಯಕ್ಕೆ ಸ್ಪಂದಿಸುತ್ತದೆ. ಸಂಭ್ರಮ, ದುಃಖದ ವಿಷಯಗಳೆರಡೂ ಕಾವ್ಯಕ್ಕೆ ನಾಂದಿ ಹಾಡುತ್ತವೆ. ಕಾವ್ಯಕ್ಕೆ ಕಿವಿಯಾದಾಗ ಮನಸ್ಸು ಹಗುರವಾಗುತ್ತದೆ ಎಂದರಲ್ಲದೆ ಯಾವುದೇ ಒಂದು ಸಂಘಟನೆ ಆರಂಭಿಕ ಹಂತದಲ್ಲಿ ಕೆಲವೇ ಕೆಲವು ವ್ಯಕ್ತಿಗಳನ್ನು ಹೊಂದಿದ್ದರೂ ಕ್ರಮೇಣ ಅದು ಬೃಹದಾಕಾರವಾಗಿ ಬೆಳೆಯುತ್ತದೆ. ಸುಧಾರ್ಣವ ಸಾಂಸ್ಕೃತಿಕ ಸಂಘವೂ ಅಂತಹ ಉತ್ಕರ್ಷವನ್ನು ಕಾಣಲಿದೆ ಎಂದು ನುಡಿದಲ್ಲದೆ ತಾವು ಬರೆದ ಕವನಗಳನ್ನು ವಾಚಿಸಿದರು.




ಅತಿಥಿಯಾಗಿ ಭಾಗವಹಿಸಿದ್ದ ಗೃಹಿಣಿ ಸರ್ವೇಶ್ವರಿ ವಿ ಮಾತನಾಡಿ ಕಲೆ, ಸಾಹಿತ್ಯಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಅವುಗಳಲ್ಲಿ ತೊಡಗಿಕೊಂಡಾಗ ಬದುಕು ಆಹ್ಲಾದಕರವೆನಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೃಷಿಕ ನೆಕ್ಲಾಜೆ ಸುಬ್ರಾಯ ಭಟ್ ಮಾತನಾಡಿ ಯುವ ಮನಸ್ಸುಗಳು ವಿನೂತನ ಆಲೋಚನೆಗಳೊಂದಿಗೆ ಬಂದಾಗ ಅಂತಹವುಗಳನ್ನು ಪ್ರೋತ್ಸಾಹಿಸಬೇಕಾದದ್ದು ಹಿರಿಯರ ಧರ್ಮ. ಹಿರಿಯರ ಬೆಂಬಲ ಕಿರಿಯರಿಗೆ ಅತಿದೊಡ್ಡ ಪ್ರೇರಣೆಯನ್ನು ಒದಗಿಸುತ್ತದೆ ಎಂದು ನುಡಿದರು.



ಸ್ವಾಗತಗೈದು ಪ್ರಸ್ತಾವಿವಿಸಿದ ಸುಧಾರ್ಣವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ ಕಮ್ಮಜೆ ಮಾತನಾಡಿ ಎಲೆಮರೆಯ ಕಾಯಿಗಳಂತಿರುವ ಪ್ರತಿಭೆಗಳಿಗೆ ಒಂದು ವೇದಿಕೆ ಬೇಕು. ಆರಂಭಿಕ ಹಂತದಲ್ಲಿ ಸರಿಯಾದ ಅವಕಾಶಗಳು ದೊರೆಯುವಂತಾದರೆ ಮುಂದಿನ ದಿನಗಳಲ್ಲಿ ಅನೇಕ ಪ್ರತಿಭೆಗಳು ಮಹತ್ಸಾಧನೆ ಮಾಡುವುದಕ್ಕೆ ಸಾಧ್ಯ. ಒಮ್ಮಿಂದೊಮ್ಮೆಗೆ ಯಾರಿಗೂ ದೊಡ್ಡ ದೊಡ್ಡ ಅವಕಾಶಗಳು ಪ್ರಾಪ್ತವಾಗುವುದಿಲ್ಲ. ಹಾಗಾಗಿ ನಮ್ಮ ನಡುವಣ ಪ್ರತಿಭೆಗಳಿಗೊಂದು ವೇದಿಕೆಯಾಗಿ ಸುಧಾರ್ಣವ ಸಾಂಸ್ಕøತಿಕ ಸಂಘ ಕಾರ್ಯನಿರ್ವಹಿಸಲಿದೆ ಎಂದು ನುಡಿದು ತಮ್ಮ ಕವನಗಳನ್ನು ಪ್ರಸ್ತುತಪಡಿಸಿದರು.



ಕಾರ್ಯಕ್ರಮದಲ್ಲಿ ಗೃಹಿಣಿಯರಾದ ಪಾರ್ವತಿ ಭಟ್, ಜ್ಯೋತಿಲಕ್ಷ್ಮೀ ಭಟ್, ಅನನ್ಯಾ ವಿ ಕನ್ಯಾನದ ಸರ್ಕಾರಿ ಸಮುದಾಯ ಆಸ್ಪತ್ರೆಯ ಉದ್ಯೋಗಿ ಮಂಜುಳಾ ಉಪಸ್ಥಿತರಿದ್ದರು. ಕನ್ಯಾನದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿ ಅದ್ವೈತ್ ಹಾಗೂ ನೀರ್ಪಾಜೆ ಶಾಲೆಯ ವಿದ್ಯಾರ್ಥಿನಿ ಮೋನಿಕಾ ಪ್ರಾರ್ಥನೆಗೈದರು. ವಿಟ್ಲ ಸರಕಾರಿ ಮಾದರಿ ಶಾಲೆಯ ಎರಡನೆಯ ತರಗತಿ ವಿದ್ಯಾರ್ಥಿ ಋತುಪರ್ಣ ಆರ್.ಸಿ. ಗಾಯನ ಪ್ರಸ್ತುತಪಡಿಸಿದರು. ಸುಧಾರ್ಣವ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ರಾಕೇಶ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿ, ತಮ್ಮ ಕವನವನ್ನು ವಾಚಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top