ತ್ಯಾಗ, ಪವಿತ್ರ ಪ್ರೇಮದ ಯಶೋಗಾಥೆ ..ರಾಮಾಯಣ

Upayuktha
0



ದೊಂದು ದಿನ ರಾತ್ರಿ ಮಹಾರಾಣಿ ಕೌಸಲ್ಯ ತನ್ನ ಅಂತಃಪುರದಲ್ಲಿ ಮಗ್ಗಲು ಬದಲಾಯಿಸುತ್ತಾ ಮಲಗಿದ್ದಳು. ಆಕೆಗೆ ಅಂತಃಪುರದ ಮೇಲ್ಚಾವಣಿಯ ಮೇಲೆ ಯಾರೋ ಓಡಾಡುತ್ತಿರುವಂತೆ, ಗುಸು-ಗುಸು ಮಾತನಾಡಿದಂತೆ ಭಾಸವಾಯಿತು. ಇದೇನು ಇಷ್ಟು ಸರಿ ರಾತ್ರಿಯಲ್ಲಿ ಎಂದು ಆತಂಕಿತಳಾಗಿ ತನ್ನ ಆಪ್ತ ಸೇವಕಿಯೊಂದಿಗೆ ಭವನದ ಮೇಲ್ಭಾಗಕ್ಕೆ ಬಂದು ನೋಡಿದಳು. ಅಲ್ಲಿ ರಾಜಕುಮಾರ ಸುಮಿತ್ರಾ ನಂದನ ಶತ್ರುಘ್ನನ ಪತ್ನಿ ಶ್ರುತಕೀರ್ತಿ ಶತಪಥ ಓಡಾಡುತ್ತಿದ್ದಳು.




ಆಕೆಯನ್ನು ಕುರಿತು ರಾಜ ಮಾತೆ ಕೌಸಲ್ಯಾದೇವಿಯು "ಇದೇನು?... ಹೀಗೆ ಈ ಸರಿ ಹೊತ್ತಿನಲ್ಲಿ ಓಡಾಡುತ್ತಿರುವೆ, ಶತ್ರುಘ್ಣ ಎಲ್ಲಿ ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ ಶ್ರುತಕೀರ್ತಿಯು ನಿದ್ದೆ ಬರಲಿಲ್ಲ ಎಂದೂ, ಕಳೆದ 14 ವರ್ಷಗಳಿಂದ ತಾನು ತನ್ನ ಪತಿ ಶತ್ರುಘ್ನನನ್ನು ನೋಡಿಯೇ ಇಲ್ಲ, ಪ್ರಭು ಶ್ರೀರಾಮಚಂದ್ರ, ಸೋದರ ಲಕ್ಷ್ಮಣ ಮತ್ತು ಅತ್ತಿಗೆ ಸೀತಾಮಾತೆಯ ಬರುವಿಕೆಗಾಗಿ ಊರ ಹೊರ ವಲಯದಲ್ಲಿ ಕಾಯುತ್ತಿದ್ದಾರೆ" ಎಂದು ಸ್ಮಿತಮುಖಿಯಾಗಿ ಹೇಳಿದಳು.. ಇದನ್ನರಿತು ಸೋಜಿಗಗೊಂಡ ರಾಜಮಾತೆಯಾಗಿ ಕುಟುಂಬದ ಆಗು ಹೋಗುಗಳನ್ನು ಅರಿಯದ ತನ್ನ ಕರ್ತವ್ಯ ಮೂಢತೆಗೆ ನೊಂದುಕೊಂಡಳು. ಅದು ಹೇಗೆ ಇಷ್ಟು ವರ್ಷ ಈ ಯಾವ ವಿಷಯಗಳು ತನಗೆ ತಲುಪಲಿಲ್ಲ ಎಂಬ ಬೇಸರದ ಭಾವ ಆಕೆಯನ್ನು ಆವರಿಸಿತು.




ಕೂಡಲೇ ಭಟರನ್ನು ಕರೆಯಿಸಿ ಮೇನೆಯನ್ನು ತರಿಸಿದ ಆಕೆ ಅದರಲ್ಲಿ ಕುಳಿತು ಇಡೀ ಅಯೋಧ್ಯಾ ನಗರಿಯನ್ನು ಸುತ್ತು ಹಾಕಿದಳು. ಕೊನೆಗೆ ಅಯೋಧ್ಯೆಯ ಹೊರ ಭಾಗದಲ್ಲಿರುವ ನಂದಿ ಗ್ರಾಮದ ಒಂದು ಪರ್ಣಕುಟೀರದಲ್ಲಿ ಧ್ಯಾನಮಗ್ನನಾದ ಭರತನನ್ನು ಕಂಡಳು. ಮುಂದೆ ತುಸುದೂರ ಸಾಗಿದಾಗ ಬಂಡೆಗಲ್ಲೊಂದರ ಮೇಲೆ ಮಲಗಿದ್ದ ಶತ್ರುಘ್ನನನ್ನು ಕಂಡ ರಾಜಮಾತೆ ಮೆಲ್ಲನೆ ಕೈಯಿಂದ ಆತನನ್ನು ತಟ್ಟಿ ಎಬ್ಬಿಸಿದಳು. 




ದೊಡ್ಡಮ್ಮ ಕೌಸಲ್ಯೆಯನ್ನು ಆ ಸರಿಹೊತ್ತಿನಲ್ಲಿ ನೋಡಿದ ಶತ್ರುಘ್ನ ರಾಜಮಾತೆಗೆ ನಮಸ್ಕರಿಸಿ "ಅಮ್ಮ ಹೇಳಿ ಕಳುಹಿಸಿದರೆ ನಾನೇ ಬರುತ್ತಿದ್ದೆ ಯಾಕೆ ನೀವೇ ಬರುವ ಕಷ್ಟ ತೆಗೆದುಕೊಂಡಿರಿ? "ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ರಾಜಮಾತೆಯು "ಕಳೆದ 14 ವರ್ಷಗಳಿಂದ ನಿನ್ನನ್ನು ನಿನ್ನ ಪತ್ನಿ ಶ್ರುತಕೀರ್ತಿ ನೋಡಿಯೇ ಇಲ್ಲ! ಎಂದಳು. ಹಾಗಾದರೆ ಇಷ್ಟು ವರ್ಷಗಳ ಕಾಲ ರಾಜಧಾನಿಯ ಹೊರಗಡೆಯೇ ಇದ್ದು ಏನು ಮಾಡುತ್ತಿರುವೆ?" ಎಂದು ಕೇಳಿದಳು. ಅದಕ್ಕೆ ಶತ್ರುಘ್ನನು "ಮಾತೆ, ತಂದೆಯವರು ಚಿಕ್ಕಮ್ಮನಿಗೆ ನೀಡಿದ ವಚನವನ್ನು ಪೂರೈಸಲು ಅಯೋಧ್ಯೆಯ ಅರಸನಾಗಬೇಕಿದ್ದ ಅಗ್ರಜ ಶ್ರೀರಾಮಚಂದ್ರನು ಪತ್ನಿ ಸಮೇತ ವನವಾಸಕ್ಕೆ ಹೊರಟು ಹೋದನು... ಆತನನ್ನು ಅಣ್ಣ ಲಕ್ಷ್ಮಣ ಹಿಂಬಾಲಿಸಿದನು. ಹಿರಿಯಣ್ಣನ ಆಜ್ಞೆಯ ಮೇರೆಗೆ ಅಯೋಧ್ಯೆಯ ಕಾರ್ಯಭಾರ ನೋಡಿಕೊಳ್ಳುತ್ತಿರುವ ಅಣ್ಣ ಭರತನು ನಂದಿಗ್ರಾಮದ ಪರ್ಣಕುಟಿಯಲ್ಲಿ ಸನ್ಯಾಸ ಜೀವನವನ್ನು ಸಾಗಿಸುತ್ತಿರುವಾಗ ನಾನು ಹೇಗೆ ಅರಮನೆಯ ಮೃಷ್ಟಾನ್ನ ಭೋಜನ ಉಂಡು ಹಂಸತೂಲಿಕಾ ತಲ್ಪದ ಮೇಲೆ ಮಲಗಿ ವಿಶ್ರಾಂತಿ ಪಡೆಯಲಿ?... ಕಳೆದ 14 ವರ್ಷಗಳಿಂದ ನಾನು ಅಣ್ಣ ಭರತನಿಗೆ ರಾಜ್ಯದ ಆಗುಹೋಗುಗಳನ್ನು ನೋಡಿಕೊಳ್ಳುವಲ್ಲಿ ಸಹಾಯ ಮಾಡುತ್ತಾ ಇಲ್ಲಿಯೇ ಹಿರಿಯಣ್ಣನ ಪ್ರತೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರಭು ಶ್ರೀರಾಮಚಂದ್ರನು ಅತ್ತಿಗೆ ಸೀತಾಮಾತೆ ಮತ್ತು ಅಣ್ಣ ಲಕ್ಷ್ಮಣರ ಸಹಿತರಾಗಿ ಅಯೋಧ್ಯೆಗೆ ಬರಬಹುದು ಅದಕ್ಕಾಗಿ ಇಲ್ಲಿಯೇ ಕಾಯುತ್ತಿದ್ದೇನೆ" ಎಂದು ಹೇಳಿದನು. ಅದನ್ನು ಕೇಳಿದ ರಾಜಮಾತೆ ಕೌಸಲ್ಯೆಯ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಿತು.




ಸ್ನೇಹಿತರೆ, ರಾಮಾಯಣದ ಕಥೆ ಭೋಗವಲ್ಲ ತ್ಯಾಗದ ಕಥೆ. ಪ್ರೀತಿ ಮಮತೆಗಳ ಕಥೆ. ಕರ್ತವ್ಯನಿಷ್ಠೆ ಮತ್ತು ಪಾಲನೆಯ ಕಥೆ. ಹಿರಿಯಣ್ಣನಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ತಮ್ಮಂದಿರ ಕಥೆ. ರಾಮಾಯಣದ ಪ್ರತಿಯೊಂದು ಪಾತ್ರವು ನಮಗೆ ಒಂದೊಂದು ಪಾಠವನ್ನು ಕಲಿಸುತ್ತದೆ. ಇಲ್ಲಿ ಮತ್ಸರ,ಅಸೂಯೆಗಳು ಒಂದೆಡೆಯಾದರೆ ಅವುಗಳನ್ನು ಮೀರಿದ ಮಮತೆ ವಾತ್ಸಲ್ಯ ಭ್ರಾತೃ ಪ್ರೇಮ,ಶೌರ್ಯ-ಧೈರ್ಯ, ವಿವೇಚನೆಗಳು ಇವೆ. ಆದ್ದರಿಂದಲೇ ರಾಮಾಯಣ ನಮಗೆ ಎಲ್ಲಕ್ಕಿಂತ ಆಪ್ತವಾದ ಮಹಾಕಾವ್ಯ. ರಾಮನ ಸದ್ಗುಣಗಳನ್ನು ಹೆಣ್ಣು ಮಕ್ಕಳು ತಮ್ಮ ಪತಿಯಲ್ಲಿ ಕಾಣಬಯಸಿದರೆ, ಸೀತೆಯ ಸಹನೆಯನ್ನು ಸಹಜವಾಗಿಯೇ ಪುರುಷರು ತಮ್ಮ ಪತ್ನಿಯಲ್ಲಿ ಕಾಣಬಯಸುತ್ತಾರೆ.




ಕೆಲವೆಡೆ ರಾಮಾಯಣದ ಕಥೆಯನ್ನು  ಸೀತಾರಾಮರು ಮದುವೆಯಾಗಿ ಏನು ಸುಖಪಟ್ಟರು, ಹದಿನಾಲ್ಕು ವರ್ಷಗಳ ಅವರ ಜೀವಿತ ಕಾಲ ವ್ಯರ್ಥವಾಗಿ ಹೋಯಿತು ಎಂದು. ಆದರೆ ಡಿವಿಜಿಯವರು ಈ 14 ವರ್ಷಗಳ ವನವಾಸವನ್ನು 'ದ ಲಾಂಗೆಸ್ಟ್ ಪಿರಿಯಡ್ ಆಫ್ ಹನಿಮೂನ್' ಎಂದು ಕರೆದಿದ್ದಾರೆ. ಯಾವುದೇ ರೀತಿಯ ರಾಜ ಕಾರ್ಯಗಳ ಒತ್ತಡ, ಯುದ್ಧ, ಅಂತಃಕಲಹಗಳ ಕಿರಿಕಿರಿ ಇಲ್ಲದೆ 14 ವರ್ಷಗಳ ಕಾಲ ಪತ್ನಿಯೊಂದಿಗೆ ಪ್ರಭು ಶ್ರೀರಾಮನ ವಿಹಾರ, ರಕ್ಷಿಸಲು ಸಹೋದರ ಲಕ್ಷ್ಮಣನ ಸಾಂಗತ್ಯ, ಅರಣ್ಯದ ಏಕಾಂತ ವಾಸ ಮತ್ತಿನ್ನೇನು ಬೇಕು ಎಂದು ಅವರು ಕೇಳಿದ್ದಾರೆ. ಮುಂದೆ ನೂರಾರು ವರ್ಷಗಳ ಕಾಲ ರಾಮ ರಾಜ್ಯಭಾರ ಮಾಡಿದ. ರಾಮಾಯಣ ನಡೆದು ಹೋಗಿ ಸಹಸ್ರಾರು ವರ್ಷಗಳೇ ಕಳೆದು ಹೋದರೂ ಇಂದಿಗೂ ರಾಮನನ್ನು ನೆನೆಸದ ಜನರಿಲ್ಲ. ರಾಮ ರಾಜ್ಯವನ್ನು ಕನಸಿಸದ ಜಗವಿಲ್ಲ. ಅಂತೆಯೇ ರಾಮಾಯಣ ಸಾರ್ವಕಾಲಿಕ ಸತ್ಯವೊಂದರ ಅನಾವರಣದ ಯಶೋಗಾಥೆ.



-ವೀಣಾ ಹೇಮಂತ್ ಗೌಡ ಪಾಟೀಲ್ ,

ಮುಂಡರಗಿ ಗದಗ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top