ಕ್ಯಾಂಪಸ್: ನೆನಪಿರಲಿ, ನಿನ್ನ ಜೊತೆ ಇರುವವರೇ ನಿನ್ನ ಶತ್ರುವಾಗಬಹುದು..!

Upayuktha
0

 



ಕಾಲಾಯ ತಸ್ಮೈ ನಮಃ ಜೀವನವೊಂದು ಓಡುವ ಗಡಿಯಾರದಂತೆ. ಇಂದು ಇದ್ದವರು ನಾಳೆ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ನಂಬಿಕೆ ಎನ್ನುವ ಪದ ಕಾಲ್ತುಳಿತಕ್ಕೊಳಗಾದರೆ ಜೀವನ ಒಂದು ತಿರುಗುವ ಬುಗುರಿಯಿದ್ದಂತೆ.


ನಯನಗಳಲ್ಲಿ ಕಾರ್ಮೋಡ ಕರಗಿ, ಕಂಬನಿಯ ಜಾರಿದೆ. ಹೊರ ತೋರದೆ ಕಡೆಗಣಿಸಿದ ಜನರೆದುರು ತಲೆಬಾಗಿದೆ. ಸೋತಿದೆ ಹೃದಯ, ಇವರು ನನ್ನವರೇ! ಎಂದು. ತಿಳಿದಿದ್ದ ಸತ್ಯ ಸುಳ್ಳಿನ್ನೆದುರು ನುಚ್ಚುನೂರಾಗಿದೆ. ನನ್ನವರಿಂದಾದ ನಂಬಿಕೆದ್ರೋಹ ನನ್ನ ಮನಸ್ಸನ್ನೇ ಕಲುಕಿದೆ.


ನಿನ್ನ ಸಂತೋಷದಲ್ಲಿ ಪಾಲ್ಗೊಳ್ಳದವರು, ನೀನು ಅಳುವಾಗ ಕಣ್ಣೀರು ಒರೆಸದವರು, ನಿನ್ನ ಸ್ನೇಹಿತರಾಗಲು ಸಾಧ್ಯವಿಲ್ಲ. ಅವರು ನಿನ್ನೊಂದಿಗೆ ಇದ್ದರೆಷ್ಟು ಹೋದರೆಷ್ಟು. ಇನ್ನೊಬ್ಬರ ಏಳಿಗೆ ಕಂಡು ಅಸೂಯೆ, ಹೊಟ್ಟೆ ಕಿಚ್ಚು ಪಡುವ ಜನಗಳು ಯಾವತ್ತೂ ತಮ್ಮ ಜೀವನದಲ್ಲಿ ಏಳಿಗೆ ಆಗಲು ಸಾಧ್ಯವೇ ಇಲ್ಲ.


ಹೇ ಮನುಜ, ಒಬ್ಬರು ಎಡವಿದಾಗ ಹಲ್ಲು ಕಿರಿಯದಿರು. ನಿನಗೆ ಅರಿವಿರಲಿ, ತಪ್ಪು ಮಾಡದವರು ಈ ಜಗದಲ್ಲಿಯೇ ಇಲ್ಲ ಎಂಬುದು. ಜಗವೇ ಒಂದು ರಣರಂಗ ಮೆಟ್ಟಿ ನೀ ನಡೆ ನಿನ್ನದೇ ಮಾರ್ಗ. ಮೊದಲು ನಿನ್ನನ್ನು ನೀನು ನಂಬು, ಹೆದರದಿರು ಯಾರ ಮಾತಿಗೂ, ಮುನ್ನುಗ್ಗು ಒಳಿತಿನೆಡೆ ಆ ಭಗವಂತನಿದ್ದಾನೆ ಎಂದು.


ತುಳಿಯುವ ಜನರ ನಡುವೆ ಒಮ್ಮೆ ಧೈರ್ಯದಿ ನಿಂತು ಬಿಡು ನಾ ಎಲ್ಲದಕ್ಕೂ ಸಿದ್ಧವೆಂಬಂತೆ. ಅವಮಾನಕ್ಕೆ ಅಳದಿರು, ಸಂತೋಷದಿ ಸ್ವೀಕರಿಸು ನನ್ನದೊಂದು ಕಲ್ಲು ಹೃದಯವೆಂಬಂತೆ. ಮನವು ಕಲುಕಿದೆ ನನ್ನವರಿಂದಲೇ ನನಗೆ ದುಃಖವಾಗಿದೆ ಎಂದು. ಮರುಗುತ್ತಿದೆ ಮನ ಬೆನ್ನಿಗೆ ಚೂರಿ ಹಾಕುವ ಜನರ ನೆನೆದು. ಕಣ್ಣೀರಿಡುತ್ತಿದೆ ಹೃದಯ ಇವರು ನನ್ನವರೇ ಎಂದು?


ಸಂತೋಷ ಎಂದಾಗ ಜೊತೆಯಾಗುವರು, ಅದೇ ನೀನು ಸಂಕಷ್ಟದಲ್ಲಿರುವಾಗ ತಿಳಿದು ತಿಳಿಯದಂತೆ ಕಡೆಗಣಿಸುವರು . ಆಡುವ ಮಾತಿಗೆ ಬೀಗ ಹಾಕುವವರಾರು? ನಡೆ ಮುಂದೆ ನಿನ್ನ ಬಗ್ಗೆ ಮಾತಾಡುವವರೆಲ್ಲ ನಿನ್ನ ಬೆನ್ನ ಹಿಂದೆ. ನೆನಪಿರಲಿ ನಿನ್ನ ಹೀಯಾಳಿಸುವವರ ಅರಿತು  ಅಳದಿರು. ಮನದಲ್ಲಿ ದೃಢವಾಗಿರಲಿ "ನಾಯಿ ಬೊಗಳಿದರೆ ದೇವಲೋಕ ಹಾಳಾಯಿತೇ" ಎಂದು.


ಅನುಭವದ ಮಾತು ನುಡಿಯುತ್ತಿದೆ, ಲೇಖನದಲ್ಲಿ ಸಾಹಿತ್ಯ ಬರೆದಿದೆ. ನಂಬಲಾಗದ ಅಳುಕವೊಂದು ಕಣ್ಣೀರಿಡಿಸುತ್ತಿದೆ, ಮನುಜನ ನಂಬಿಕೆ ದ್ರೋಹ ನೆನೆದು. ಎಚ್ಚರವಿರಲಿ ನಿಮ್ಮ ನಡುವೆಯೇ ಇದ್ದು ನಿಮಗೆ ಹಳ್ಳ ತೊಡುವರು. ಅಂತಹ ಜನರಿಂದ ಆದಷ್ಟು ಅಂತರ ಕಾಪಾಡಿಕೊಳ್ಳಿ. ಹೊಟ್ಟೆಕಿಚ್ಚು ಮಾಡದಿರು, ಇತರರಿಗೆ ಕೆಡುಕು ಬಯಸದಿರು, ನಿನ್ನ ಕರ್ಮ ನಿನಗೆ ಹಿಂದಿರುಗುವುದು ಎಂಬುದನ್ನು ಮರೆಯದಿರು. ಇದು "ಸತ್ಯಮೇವ ಜಯತೆ" ಸತ್ಯಕ್ಕೆ ಎಂದು ಸೋಲಾಗದೆ ಎಂಬುದನ್ನು ಮರೆಯದಿರು.


-ಕೀರ್ತನ ಒಕ್ಕಲಿಗ ಬೆಂಬಳೂರು

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top