ಯುವ ಚಿಂತನೆ: ಸಂಸ್ಕೃತಿಯ ರಕ್ಷಣೆ- ನಮ್ಮ ಹೊಣೆ

Upayuktha
0

ಜಗತ್ತಿನ ಇನ್ನಾವುದೇ ರಾಷ್ಟ್ರಗಳು ಎದುರಿಸದಷ್ಟು ಪರಕೀಯರ ಆಕ್ರಮಣಗಳನ್ನು ಎದುರಿಸಿಯೂ ಭಾರತದ ಮಣ್ಣಿನಲ್ಲಿ ಸನಾತನ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದಾದರೆ ಅದಕ್ಕೆ ಈ ಸಂಸ್ಕೃತಿಯ ಉದಾತ್ತ ಚಿಂತನೆಗಳೇ ಕಾರಣ. ಬಹು ಭಾಷೆ, ಚಿತ್ರ ಕಲೆ, ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪ, ನೃತ್ಯ ಮತ್ತಿತರ ಕಲಾವೈವಿಧ್ಯದಿಂದ ಕೂಡಿದ ಭಾರತೀಯ ಸಂಸ್ಕೃತಿ ಶತಮಾನಗಳಷ್ಟು ಇತಿಹಾಸ ಹೊಂದಿರುವುದು ವಿಶೇಷ.



ಅನಾದಿ ಕಾಲದಲ್ಲಿ ಉದಯಿಸಿದ ಭಾರತೀಯ ಸಂಸ್ಕೃತಿಯು ವೈಜ್ಞಾನಿಕ ತಳಹದಿಯನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ಪರಿವರ್ತನೆಗಳನ್ನು ಸ್ವೀಕರಿಸಿ ಬೆಳೆದು ನಿಂತಿದೆ. ಬಹುತ್ವದ ವೈಶಿಷ್ಟ್ಯದ ಜೊತೆಗೆ ಪರಸ್ಪರ ಅವಲಂಬನೆ, ಸಹಕಾರ ಮತ್ತು ಸಹಿಷ್ಣುತೆ ಇತ್ಯಾದಿ ಮೌಲ್ಯಗಳ ಆಧಾರದಲ್ಲೇ ಇರುವ ಸಂಪದ್ಭರಿತ ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶ್ರೀಮಂತ ಸಂಸ್ಕೃತಿ ಎಂದರೆ ತಪ್ಪಾಗಲಾರದು.


ಬದಲಾಗುವ ಹವಾಮಾನಕ್ಕೆ ಅನುಗುಣವಾಗಿ ಹೊಂದಿಕೊಳ್ಳುವಂತಹ ಆಹಾರ ಶೈಲಿ, ಆರೋಗ್ಯದ ದೃಷ್ಟಿಯಿಂದ ಅನುಸರಿಸಿಸುವ ಪದ್ಧತಿ, ಹಬ್ಬ -ಹರಿದಿನಗಳಲ್ಲಿ ಮಾಡುವ ವ್ರತ ಉಪವಾಸಾದಿ ಆಚರಣೆಗಳು ವೈಜ್ಞಾನಿಕವಾಗಿ ಉಚಿತವೆಂದು ಅಧ್ಯಯನಗಳು ಹೇಳಿವೆ. 


ಭಾರತದ ಸಂಘರ್ಷಮಯವಾದ ಇತಿಹಾಸದಲ್ಲಿ ವಿಧರ್ಮೀಯರು ಪ್ರತ್ಯೇಕತೆಯ ಬೀಜವನ್ನು ಬಿತ್ತಿ, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಅಡಿಮೇಲು ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಯಾಕೆಂದರೆ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ ಮತ್ತು ಪದ್ಧತಿಗಳು ಪ್ರತಿಯೊಂದು ಭಾರತೀಯ ಕುಟುಂಬದ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಸಾಂಪ್ರದಾಯಿಕ ಆಚರಣೆಗಳಿಂದ

ಸಕಾರಾತ್ಮಕ ಮತ್ತು ಧನಾತ್ಮಕ ಪರಿಣಾಮಗಳನ್ನು ಅನುಭವಿಸಿದ ಭಾರತೀಯ ಕುಟುಂಬಗಳು ತಮ್ಮ  ಮೌಲ್ಯಾಧಾರಿತ ಸಂಸ್ಕೃತಿಯನ್ನು ದೂರ ಮಾಡಲಿಲ್ಲ.  ಮತಾಂಧ ಶಕ್ತಿಗಳು ವಿವಿಧ ಆಮಿಷಗಳೊಡ್ಡಿದಾಗ ಮತಾಂತರದ ಜಾಲದಲ್ಲಿ ಸಿಲುಕಿದರೂ, ಮೂಲ ಚಿಂತನೆಗಳನ್ನು ಬಿಡಲಿಲ್ಲ. 


ಭಾರತೀಯ ಸಂಸ್ಕೃತಿಯು ಇತರ ಸಂಸ್ಕೃತಿಗಳನ್ನು ತುಳಿದು ಬೆಳೆದ ಸಂಸ್ಕೃತಿ ಅಲ್ಲ. ಶತಕಗಳ ಕಾಲ ವಸಾಹತುಶಾಹಿ ಆಳ್ವಿಕೆಯ ಪಾಶದಲ್ಲಿದ್ದೂ, ಆಕ್ರಮಣಕಾರಿ ನೀತಿಯನ್ನು ಅನುಸರಿಸದೆ, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಹಬ್ಬಿಕೊಂಡಿರುವುದು ಭಾರತೀಯ ಸಂಸ್ಕೃತಿಯ ವಿಶೇಷತೆ. 



ನದಿಯ ದಡದಲ್ಲಿ ಬೆಳೆದ ನಾಗರಿಕತೆ:

ನದಿಯ ದಡದಲ್ಲಿ ಬೆಳೆದು ಬಂದ ಸಿಂಧೂ ನಾಗರಿಕತೆಯು ಶಿಲ್ಪ ಮತ್ತು ಪ್ರತಿಮೆಗಳು, ಆಭರಣ ಮತ್ತು ಲೋಹದ ಕೆಲಸ, ಮುದ್ರೆಗಳು, ಕುಂಬಾರಿಕೆ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಯಾಧಾರಿತ ಕಲೆಗಳ ಮೂಲಕ ಇತಿಹಾಸದ ಪುಟಗಳಲ್ಲಿ ಭಾರತೀಯತೆಯನ್ನು ಎತ್ತಿ ಹಿಡಿದಿದೆ. 


ಸಿಂಧೂ ನಾಗರಿಕತೆಯು ಹಲವು ಶತಮಾನಗಳಷ್ಟು ಪ್ರಾಚೀನವಾದರೂ ನಿರ್ದಿಷ್ಟ ರೀತಿಯ ನಗರ ಯೋಜನೆ, ವ್ಯಾಪಾರ ಮತ್ತು ವಾಣಿಜ್ಯ, ತಂತ್ರಜ್ಞಾನಗಳಿಂದ ಕೂಡಿದ್ದು ಆಧುನಿಕತೆಯ ಸ್ಪರ್ಶವಿದೆ ಎಂಬುದು ವಾಸ್ತವ.



ಭಾರತೀಯ ಬುಡಕಟ್ಟು ಕಲೆ: 

ಭಾರತೀಯ ಬುಡಕಟ್ಟು ಕಲೆಯು ಗ್ರಾಮೀಣ ಭಾರತದ ಧ್ವನಿಯನ್ನು ಮುಂದಿಡುತ್ತದೆ. ತಮ್ಮ ತಮ್ಮ ಬುಡಕಟ್ಟು ಪಂಗಡಗಳಲ್ಲಿ ವ್ಯತ್ಯಸ್ತವಾದ ಆಚರಣೆಗಳನ್ನು, ನೃತ್ಯ ಪ್ರಾಕಾರಗಳನ್ನು, ಚಿತ್ರಕಲೆಗಳನ್ನು ಹೊಂದಿರುವುದು ಗ್ರಾಮೀಣ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ.



ಬುಡಕಟ್ಟು ಕಲೆಯು ಈ ಸಮುದಾಯಗಳ ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕೇವಲ ಕಲಾತ್ಮಕ ಅಭಿವ್ಯಕ್ತಿಯ ರೂಪವಲ್ಲ, ಆದರೆ ಕಥೆ ಹೇಳುವ ವಿಧಾನವೂ ಆಗಿದೆ. ಈ ಕಲಾಕೃತಿಗಳಲ್ಲಿ ಬಳಸಲಾದ ಲಕ್ಷಣಗಳು, ಚಿಹ್ನೆಗಳು ಮತ್ತು ಮಾದರಿಗಳು ಅವರ ಪುರಾಣಗಳು, ದಂತಕಥೆಗಳು ಮತ್ತು ಜಾನಪದವನ್ನು ಪ್ರತಿನಿಧಿಸುತ್ತವೆ. ಅವರು ಪ್ರಕೃತಿ ಮತ್ತು ಪರಿಸರದೊಂದಿಗೆ ತಮ್ಮ ಸಂಬಂಧವನ್ನು ಸಹ ಚಿತ್ರಿಸುತ್ತಾರೆ.



ಬುಡಕಟ್ಟು ಕಲೆಯ ಪ್ರಾಮುಖ್ಯತೆಯು ಅದರ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಮೀರಿ ವಿಸ್ತರಿಸಿದೆ. ಇದು ಅನೇಕ ಬುಡಕಟ್ಟು ಸಮುದಾಯಗಳಿಗೆ ಜೀವನಾಧಾರವಾಗಿದೆ. ಅನೇಕ ಬುಡಕಟ್ಟು ಕುಶಲಕರ್ಮಿಗಳು ಜೀವನೋಪಾಯಕ್ಕಾಗಿ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ತಮ್ಮ ಕೌಶಲ್ಯಗಳನ್ನು ಅವಲಂಬಿಸಿದ್ದಾರೆ. 



ಭಾರತೀಯ ಸಂಸ್ಕೃತಿಯ ಮೇಲೆ ವಿದೇಶಿ ಪ್ರಭಾವ:

ಅರಬ್ಬರಿಂದ ಪ್ರಾರಂಭವಾದ ಆಕ್ರಮಣದ ಚರಿತ್ರೆಯ ಅಧ್ಯಯನವನ್ನು ಆಂಗ್ಲರ ವಸಾಹತುಶಾಹಿ ಆಳ್ವಿಕೆಯವರೆಗೆ ವಿಸ್ತರಿಸಿದಾಗ ಭಾರತೀಯ ಸಂಸ್ಕೃತಿಯ ಮೇಲೆ ವಿದೇಶಿ ಆಕ್ರಮಣಗಳು ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂದು ತಿಳಿದು ಬರುತ್ತದೆ. 

ಬಲವಂತದ ಹೇರಿಕೆ ಮತ್ತು ಆಮಿಷಗಳ ಮೂಲಕ ಸನಾತನ ಸಂಸ್ಕೃತಿಯನ್ನು ನಾಶಗೊಳಿಸಲು ವಿದೇಶಿ ಶಕ್ತಿಗಳು ಅದೆಷ್ಟೇ ಪ್ರಯತ್ನ ಪಟ್ಟರೂ ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ, ಯಾಕೆಂದರೆ ನಮ್ಮ ಸಂಸ್ಕೃತಿಯು ಮಾನವೀಯ ಮೌಲ್ಯಗಳ ಚೌಕಟ್ಟಿನಲ್ಲಿ ಮತ್ತು ವೈಜ್ಞಾನಿಕ ವಿಸ್ಮಯಗಳ ಆಧಾರದಲ್ಲಿ ಬೆಳೆದು ನಿಂತಿದೆ. ವೈಚಾರಿಕ ವೈವಿಧ್ಯವೇ ಭಾರತೀಯ ಸಂಸ್ಕೃತಿಯ ವಿಶೇಷತೆ.



ವಾಸ್ತವದ ಒರೆಗಲ್ಲಿಗೆ ಹಚ್ಚಿ ನೋಡಿದಾಗ ಭಾರತದ ಸಂಸ್ಕೃತಿಯ ಜೊತೆಗೆ ವಿದೇಶಿ ಸಂಸ್ಕೃತಿಗಳ ಅಂಶಗಳು ಸಂಯೋಜನೆಗೊಂಡು ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.



ಸಂಸ್ಕೃತಿಯ ರಕ್ಷಣೆ- ನಮ್ಮ ಹೊಣೆ:

ಈ ಮಣ್ಣಿನ ಆಳಕ್ಕೆ ಇಳಿದು  ಗಟ್ಟಿಯಾಗಿ ನಿಂತಿರುವ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸಲು ಅಸಾಧ್ಯ ಎಂಬುದನ್ನು ಸಾಬೀತು ಪಡಿಸುವ ದೃಷ್ಟಾಂತಗಳು ನಮ್ಮ ಇತಿಹಾಸದಲ್ಲೇ ಕಾಣ ಸಿಗುತ್ತದೆ.



ಇಂದು ಅನೇಕರು ನಮ್ಮ ಪದ್ಧತಿಗಳ ಬಗ್ಗೆ ಕೀಳರಿಮೆ ಹೊಂದಿದ್ದು, ಅವುಗಳ ಹಿಂದೆ ಇರುವ ವೈಚಾರಿಕ ತಳಪಾಯದ ಅರಿವಿಲ್ಲದೇ ವಿರೋಧಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣ ನಮ್ಮ ಸಂಸ್ಕೃತಿಯ ಬಗೆಗಿನ ಅರಿವಿನ ಕೊರತೆ ಮತ್ತು ವಿಧರ್ಮೀಯರು ಮಾಡುವ ಸುಳ್ಳು ನಿರೂಪಣೆಗಳು ಎಂಬುದು ವಾಸ್ತವ. ಅನುಸರಿಸುವ ಆಹಾರ ಶೈಲಿ, ಧರಿಸುವ ಉಡುಗೆ ತೊಡುಗೆ, ಆಚರಿಸುವಹಬ್ಬ ಹರಿದಿನಗಳ ಹಿಂದಿನ ಕಾರಣಗಳನ್ನು ಅಧ್ಯಯನ ಮಾಡಿ ತಿಳಿದುಕ್ಕೊಳ್ಳುವ ಆವಶ್ಯಕತೆ ಖಂಡಿತ ಇದೆ. ಮಿಥ್ಯಾ ಆಖ್ಯಾನಗಳಿಗೆ ಬಲಿಯಾಗದೆ ನಮ್ಮ ಸಾಂಸ್ಕೃತಿಕ ವೈವಿಧ್ಯವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಾಗ ಪ್ರತಿಯೊಂದು ಭಾರತೀಯ ಆಚರಣೆಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ತಿಳಿದುಕೊಂಡು, ಅವುಗಳನ್ನು ತಿಳಿಸುವ ದೊಡ್ಡ ಹೊಣೆ ಇಂದು ನಮ್ಮ ಮೇಲಿದೆ.


- ಸುಲಕ್ಷಣಾ ಶರ್ಮಾ

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top