"ಮಹಿಳೆ ಎಂದು ಜರಿಯದಲೇ
ಜೀವನದಿ ಬೆಲೆ ನೀಡಿ
ಸಾಧನೆಯ ಮಾಡುವಳು
ಯಾವುದಕ್ಕೂ ಹೆದರದಲೇ
ಪ್ರೋತ್ಸಾಹ ನೀಡುತಲಿ
ನಡೆದರದು ಶಕ್ತಿಯಲ್ಲಿ
ಬೇಡುವೆನು ಜಗದಲ್ಲಿ
ಸಹಕಾರ ನೀಡೆಂದು "
ಮಹಿಳೆಯರ ಸಬಲೀಕರಣ ಧ್ಯೇಯದೊಂದಿಗೆ ಸೇವೆಯಲ್ಲಿ ಪ್ರಿಯದರ್ಶಿನಿ ಅವರ ಕಾರ್ಯ ಅಪಾರವಾದದ್ದು. ತನ್ನದೇ ಆದಂತಹ ಛಾಪನ್ನು ಎಲ್ಲೆಡೆಯೂ ಮೂಡಿಸುತ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಕರಾಗಿದ್ದಾರೆ.
ಹೆಣ್ಣೆಂದೆರೆ ಜಗದ ಕಣ್ಣು. ಅನಾದಿ ಕಾಲದಿಂದಲೂ ಸ್ತ್ರೀಯನ್ನು ದೇವರೆಂದು ಪೂಜಿಸುತ್ತೇವೆ. ಆದರೆ ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ವಲಯದಲ್ಲಿ ಬೆರೆತು ಸಮಾಜಮುಖಿ ಕೆಲಸ ಮಾಡುವಲ್ಲಿ ಹೆಣ್ಣುಮಕ್ಕಳು ಹಿಂಜರಿಯುತ್ತಾರೆ. ಅವರಲ್ಲಿ ಯಾವುದೇ ಪ್ರತಿಭೆ, ಆಶಯ ಇದ್ದರೂ ಕೂಡ ಕಮರಿ ಹೋಗುವುದೇ ಹೆಚ್ಚು. ಹಾಗಾಗಿ ಹಿಂಜರಿಕೆಯಿಂದ ದೂರವಿದ್ದು, ನಿರ್ಭಯವನ್ನು ನೀಡಲು ಗ್ರಾಮೀಣ ಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸವನ್ನು ಇಲ್ಲೊಂದು ಸಂಸ್ಥೆ ಮಾಡುತ್ತಿದೆ. ಅದುವೇ ಕೊಪ್ಪಳದ ‘ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ’.
ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯನ್ನು ಪ್ರಿಯದರ್ಶಿನಿ ಮುಂಡರಗಿಮಠ ಅವರು ಸ್ಥಾಪಿಸಿದ್ದಾರೆ. ಬಡತನದ ಬೇಗೆಯಿಂದ ನೋವುಂಡು ಬೆಂದಿರುವುದೇ ಅವರಿಗೆ ಸಂಸ್ಥೆ ಹುಟ್ಟು ಹಾಕಲು ಪ್ರೇರಣೆ. ಮಹಿಳೆಯರ ಅಪಾರ ಕಾಳಜಿಯಿಂದ ಮಾರ್ಗದರ್ಶಕರು, ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಕಾರದೊಂದಿಗೆ ಮಹಿಳಾ ಧ್ವನಿ ಸಂಸ್ಥೆಯನ್ನು ಸ್ಥಾಪಿಸಿ, ದುಡಿದ ಸ್ವಂತ ಹಣದಲ್ಲೇ ಹಲವಾರು ಕಾರ್ಯಕ್ರಮ ಆಯೋಜನೆ ಮಾಡುತ್ತಾ ನಿಸ್ವಾರ್ಥ ಸೇವೆ ಸಲ್ಲಿಸಿ ಗ್ರಾಮೀಣ ಜನರ ಪ್ರೀತಿ ಗೆದ್ದಿದ್ದಾರೆ.
ಗ್ರಾಮೀಣ ಭಾಗದ ಕಲೆ, ಕ್ರೀಡೆ, ಸಂಸ್ಕೃತಿ ಉಳಿವಿಗಾಗಿ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ. ‘ಜಾನಪದ ಸಂಭ್ರಮ, ಹೆಣ್ಮಕ್ಕಳೆ ಸೂಪರ್ ಸ್ಟಾರ್’ ಸೇರಿದಂತೆ ವಿನೂತನ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಒದಗಿಸಿ ಮಹಿಳೆಯಲ್ಲಿರುವ ಪ್ರತಿಭೆಯನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಮುಖ್ಯ ವಾಹಿನಿಗೆ ಪರಿಚಯಿಸುತ್ತಿದೆ ಮಹಿಳಾ ಧ್ವನಿ ಸಂಸ್ಥೆ.
ವಿವಿಧ ಸೇವಾಕಾರ್ಯ:
ಕೊಪ್ಪಳ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಶ್ರಮದಾನ, ಯುವಕ ಯುವತಿಯರಿಗೆ ಸಂಘ ಸಂಸ್ಥೆಗಳ ರಚನಾ ಕಾರ್ಯ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಯುವ ಸಮೂಹವನ್ನು ಸಮಾಜದೊಡನೆ ಬೆರೆಸುತ್ತಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾ ಪುರಸ್ಕಾರ, ಪ್ರಬಂಧ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸದಂತ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮೂಹವನ್ನು ಒಗ್ಗೂಡಿಸುತ್ತಿದೆ.
ನೊಂದವರಿಗೆ ಆಸರೆಯಾಗಿ ಮಹಿಳಾ ಧ್ವನಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು ಬರೀ ಅಡುಗೆ ಮನೆಗೆ ಸೀಮಿತವಾಗಬಾರದು. ಸಮಾಜದೊಡನೆ ಅರಿತು ಬೆರೆತು ಮುಖ್ಯ ವೇದಿಕೆಯಲ್ಲಿ ಪರಿಚಯವಾಗಬೇಕೆಂಬ ತುಡಿತದಿಂದ ಮಹಿಳೆಯರಿಗೆ ತರಬೇತಿ ಶಿಬಿರ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಆರ್ಥಿಕ ಉಳಿತಾಯದ ಹಲವು ಕಾರ್ಯಕ್ರಮ ಆಯೋಜಿಸಿದೆ. ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡಿ ಗೌರವಿಸುತ್ತಿದೆ. ಸರಕಾರಿಯ ಅದೆಷ್ಟೋ ಯೋಜನೆಗಳು ಗ್ರಾಮೀಣ ಭಾಗದ ಜನತೆಗೆ ಇನ್ನೂ ತಲುಪಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳು ಹಾಗೂ ಶಿಕ್ಷಣದಿಂದ ವಂಚಿತರಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಕ್ಷರತೆಯ ಅರಿವು ಮೂಡಿಸುತ್ತಿದೆ. ಅಲೆಮಾರಿ, ಬುಡಕಟ್ಟು ಹಾಗೂ ವಲಸೆ ಕಾರ್ಮಿಕರರಿಗೆ ಮತ್ತು ಮಕ್ಕಳಿಗೆ ಸ್ವಚ್ಚತೆ, ಶಿಕ್ಷಣಕ್ಕೆ ಪೂರಕವಾದ ಅನೇಕ ಕಾರ್ಯಕ್ರಮವನ್ನು ಕೊಪ್ಪಳ ಭಾಗದಲ್ಲಿ ಆಯೋಜಿಸಲಾಗಿದೆ. ಮಹಿಳೆಯರಿಗೆ ಇರುವ ಆರೋಗ್ಯ ತೊಂದರೆಯನ್ನು ವಿಚಾರಿಸಿ ಸ್ಯಾನಿಟರಿ ಪ್ಯಾಡ್ ಮತ್ತು ಬಟ್ಟೆಗಳನ್ನು ವಿತರಿಸಿದ್ದಾರೆ. ಮಕ್ಕಳಿಗೆ ಪೆನ್ನು, ಪಾಠಿ, ಪೆನ್ಸಿಲ್, ನೋಟ್‌ಬುಕ್ ನೀಡಿ ಅಕ್ಷರ ಜ್ಞಾನಕ್ಕೆ ಒತ್ತು ನೀಡುತ್ತಿದೆ ಈ ಸಂಸ್ಥೆ. ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ಮಹಿಳೆಯರು ಸಣ್ಣ ಉಳಿತಾಯದ ಮೂಲಕ ಜೀವನ ಭದ್ರತೆ ಹಾಗೂ ಮಕ್ಕಳ ಭವಿಷ್ಯಕ್ಕೆ ಯೋಜನೆಯನ್ನು ರೂಪಿಸುತ್ತಿದೆ.
ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಲ್ಲಿನ ಕೌಶಲ್ಯಗಳನ್ನು ಹುಡುಕಿ ‘ವಿಕಲಚೇತನ ರತ್ನ’. ಮಹಿಳಾ ಧ್ವನಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ಉಪನ್ಯಾಸ ಕಾರ್ಯಕ್ರಮ ಕಾನೂನು ಅರಿವು, ವ್ಯವಹಾರ ಜ್ಞಾನ ತಿಳಿಸಲು ಮಕ್ಕಳ ಸಂತೆಗಳನ್ನು ನಡೆಸಲಾಗುತ್ತಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯ ಕುರಿತಂತೆ ಮನೆಮದ್ದು ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯ ಕಡೆ ಗಮನ ಹರಿಸುವಂತೆ ಮಾಡಿದೆ.
ಮಹಿಳೆಯರಿಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ, ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಧಾನಿಯವರ ಕನಸಿನಂತೆ ಸ್ವಚ್ಛ ಭಾರತ ನಿರ್ಮಾಣ ಮಾಡುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅನೇಕ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು ಯುವಕರಿಗೆ ಶ್ರಮದಾನದ ಮಹತ್ವ ಸಾರುತ್ತಾ, ಪ್ಲಾಸ್ಟಿಕ್ ಬಳಕೆ ಹಾಗೂ ಮರು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಭಾಗದ ದೇವಾಲಯ, ಸ್ಮಾರಕಗಳ ಸ್ವಚ್ಚತಾ ಕಾರ್ಯ ಮಾಡಿ ಸೈ ಎನಿಸಿಕೊಂಡಿದೆ ಮಹಿಳಾ ಧ್ವನಿ ಸಂಸ್ಥೆ.
ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ನಿಟ್ಟಿನಲ್ಲಿ ಈಚೆಗೆ ದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ಆಯೋಜಿಸಿ ಅನೇಕ ಸಾಧಕರ ಯಶೋಗಾಥೆಯನ್ನು ತಿಳಿಸುವ ಪ್ರಯತ್ನ ಮಾಡಿದೆ. ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಗುರಿಯನ್ನು ಹೊಂದಿದ್ದು, ರಾಷ್ಟ್ರ ಮಟ್ಟದಲ್ಲೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ‘ಮಹಿಳೆಯರು ಅಬಲೆಯರಲ್ಲ ಸಬಲೆಯರು’ ಎನ್ನುವ ಸಂದೇಶವನ್ನು ಸಾರಿದೆ.
ನಾಡು, ನುಡಿ, ನೆಲ, ಜಲದ ರಕ್ಷಣೆಯಲ್ಲೂ ಕೂಡ ಸಂಸ್ಥೆ ಅನೇಕ ಅಭಿಯಾನ, ಕಾರ್ಯಕ್ರಮ ಆಯೋಜಿಸಿದೆ. ಕನ್ನಡ ರಾಜ್ಯೋತ್ಸವ, ನೀರು ನೈರ್ಮಲ್ಯ, ನೈಸರ್ಗಿಕ ಸದ್ಬಳಕೆ ಜತೆ ನಾನಾ ವಿಚಾರಗಳನ್ನು ಜನರಿಗೆ ತಲುಪಿಸುತ್ತಿದೆ. ನಾಡು ನುಡಿಗಾಗಿ ದುಡಿದವರನ್ನು ಸ್ಮರಿಸಿ ಗೌರವಿಸಿದೆ. ಯೋಧರು, ರೈತರು, ಸ್ವಾತಂತ್ರ‍್ಯ ಹೋರಾಟಗಾರರನ್ನು ಗೌರವಿಸಿ ಅವರ ದೇಶಾಭಿಮಾನದ ಪ್ರೀತಿಯನ್ನು ಯುವ ಸಮೂಹಕ್ಕೆ ಪರಿಚಯಿಸುತ್ತಿದೆ.
2023 ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2 ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಯನ್ನು ಸಂಸ್ಥೆಯು ಮುಡಿಗೇರಿಸಿಕೊಂಡಿದೆ.
ಸಮಾಜದಲ್ಲಿ ತುಳಿತಕ್ಕೊಳಗಾದ ಮಂಗಳಮುಖಿ ಸಮುದಾಯದ ನೋವನ್ನಾಲಿಸಿ ಅವರಿಗೂ ಸಮಾಜ ಗೌರವಿಸಬೇಕೆಂಬ ಉದ್ದೇಶದಿಂದ ಉಡಿ ತುಂಬಿ ಗೌರವಿಸಿದೆ. ಬಟ್ಟೆಗಳನ್ನು ನೀಡಿ ಪ್ರೋತ್ಸಾಹ ನೀಡಿದೆ. ಅವರಲ್ಲಿರುವ ಕಲೆಗೆ ವೇದಿಕೆಯನ್ನು ಒದಗಿಸಿದೆ. ಒಟ್ಟಾರೆಯಾಗಿ ಸರಕಾರದ ಅದೆಷ್ಟೋ ಯೋಜನೆಗಳು ಅರ್ಹರ ಕೈಸೇರದೆ ದಾರಿತಪ್ಪಿವೆ. ಇಂತಹ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಸಮಾಜ ಮತ್ತಷ್ಟು ಸುಧಾರಣೆಯಾಗುತ್ತದೆ ಎಂಬುದು ‘ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ’ಯ ಆಶಯ.
ಮಹಿಳೆ ಸಹ ಪುರಷರಷ್ಟೆ ಸಮಾನರು. ಅವರು ಕೂಡ ಮುಖ್ಯ ವಾಹಿನಿಗೆ ಪರಿಚಯವಾಗಿ ಸಮಾಜದೊಟ್ಟಿಗೆ ಬೆರೆತು ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಬೇಕೆಂಬುದೆ ನಮ್ಮ ಆಶಯ.
ಪ್ರಿಯದರ್ಶಿನಿ ಮುಂಡರಗಿ ಮಠ. ಸಂಸ್ಥಾಪಕರು. ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ಕೊಪ್ಪಳ ಇವರಿಗೆ ಶುಭವಾಗಲಿ ಎಂದು ಹಾರೈಸುವೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.
- ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ