ಸೃಜನಶೀಲ ಸಾಮರ್ಥ್ಯದೊಂದಿಗಿನ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪ್ರಯೋಜನಕಾರಿ: ಡಾ.ನಿರಂಜನ ವಾನಳ್ಳಿ

Upayuktha
0

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರರಾಷ್ಟ್ರೀಯ ವಿಚಾರ ಕಮ್ಮಟ



ಉಜಿರೆ: ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬಲ್ಲ ಯಾಂತ್ರಿಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಜೊತೆಗೆ ವೃತ್ತಿಪರರು ತಮ್ಮೊಳಗಿನ ಸೃಜನಶೀಲ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗವು ಆಯೋಜಿಸಿರುವ 'ದಿ ರೋಲ್ ಅಂಡ್ ಫ್ಯೂಚರ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಹ್ಯೂಮನ್ ಬಿಹೇವಿಯರ್' ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಯಾಂತ್ರಿಕ ಬುದ್ಧಿಮತ್ತೆ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಆದರೆ, ಇದನ್ನಷ್ಟೇ ಅವಲಂಬಿಸದೇ ವೃತ್ತಿಪರರು ತಮ್ಮ ಸೃಜನಶೀಲತೆಯನ್ನೂ ಒರೆಗೆ ಹಚ್ಚಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಡಾಟಾ ವಿಜ್ಞಾನವನ್ನು ಹೊರತುಪಡಿಸಿದರೆ, ಹೆಚ್ಚು ಬೇಡಿಕೆಯಲ್ಲಿರುವ ಮಗದೊಂದು ಕ್ಷೇತ್ರವೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಸ್ವಯಂ ಸೃಜನಶೀಲತೆಯೊಂದಿಗೆ ಯಾಂತ್ರಿಕ ಬುದ್ದಿಮತ್ತೆಯನ್ನು ಬಳಸಿಕೊಂಡಾಗ ವೃತ್ತಿಪರ ನಿರ್ವಹಣೆ ಅರ್ಥಪೂರ್ಣವಾಗುತ್ತದೆ ಎಂದರು.


ಮುಂಬರುವ ದಿನಗಳಲ್ಲಿ ಮನುಷ್ಯ ವಲಯದ ಕಾರ್ಯಗಳೆಲ್ಲವೂ ಕೃತಕ ಬುದ್ಧಿಮತ್ತೆಯ ಸಹಯೋಗದಲ್ಲಿ ನಡೆಯಲಿವೆ. ಕೃತಕ ಬುದ್ಧಿಮತ್ತೆ ಎಷ್ಟೇ ತಾಂತ್ರಿಕ ಪ್ರಗತಿಯನ್ನು ಹೊಂದಿದರೂ ಕೂಡ, ಸಾಮಾನ್ಯ ಮನುಷ್ಯನ ಸ್ವಾಭಾವಿಕ ಪ್ರಜ್ಞೆಯನ್ನು ಮೀರಿಸಲಾರದು. ಇತ್ತೀಚಿನ ದಿನಗಳಲ್ಲಿ ನಿಸರ್ಗದತ್ತವಾಗಿ ಒದಗಿ ಬಂದ ಸಹಜ ಪ್ರಜ್ಞೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಆಧುನಿಕ ಮನುಜ ಸೋಲುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು. 


ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಒಬ್ಬ ಮನುಜನ ವರ್ತನೆಯ ಮೂಲ ಮೆದುಳಿನಲ್ಲಿರುವ ವಿದ್ಯುತ್ಕಾಂತೀಯ ಅಲೆಗಳು. ಇವು ವ್ಯಕ್ತಿಯ ಭಾವನೆ ಮತ್ತು ಸಾಂದರ್ಭಿಕ ಅಗತ್ಯಗಳಿಗೆ ತಕ್ಕಂತೆ  ಕಾರ್ಯನಿರ್ವಹಿಸುತ್ತವೆ.  ಆಂತರಿಕ ಮತ್ತು ಬಾಹ್ಯ ಪ್ರೇರಣೆಗಳೇ ಆತನ ಪ್ರತಿಕ್ರಿಯೆಗಳ ಆಧಾರ. ಕೃತಕ ಬುದ್ದಿಮತ್ತೆಯು ಮುಂದಿನ ದಿನಮಾನಗಳಲ್ಲಿ ಸರ್ವ ಆಯಾಮಗಳಲ್ಲಿಯೂ ಪ್ರಗತಿ ಹೊಂದುವ ಸಾಧ್ಯತೆಯಿದೆ. ಸಮಗ್ರ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಅತಿ ದೊಡ್ಡ ಪಾತ್ರ ನಿರ್ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.


ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಮಾತನಾಡಿ, ಯಾಂತ್ರಿಕ ಬುದ್ಧಿಮತ್ತೆಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಲಿದೆ ಎಂದರು. ಇದರ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಯೋಜನದ ಮಾದರಿಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ನುಡಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಂದನಾ ಜೈನ್  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಚಾರ ಕಮ್ಮಟದ ಸಂಘಟನಾ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಹೆಚ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top