ವೆಂಕಪ್ಪ ಕುಳಮರ್ವ ಗಡಿನಾಡ ರೂವಾರಿ
ಕೊಂಕಿರದ ಸ್ಫುಟವಾಕ್ಕು ಸಾಹಿತ್ಯ ಶಿಖರ
ತೆಂಕಣದ ತಂಬೆಲರ ತಂಪೀವ ಮೃದುಮಾತು
ಶಂಕೆಯೇತಕೆ ನಿಮಗೆ- ಲಕುಮಿರಮಣ||
ಸಿರಿಗನ್ನಡದ ಚಾದರವ ಹಾಸಿ ಹೊದೆಸುತ್ತ
ಬರೆಹಕ್ಕೆ ನಾಂದಿಯನು ಹಾಡಿರುವ ಮಹಿಮ
ಬರೆವಣಿಗೆ ಸಾಗಿಹುದು ಮೆರವಣಿಗೆಯೋಪಾದಿ
ಸಿರಿಗಣ್ಗೆ ಹಬ್ಬವೇ- ಲಕುಮಿರಮಣ||
ನಮಿಸುವೆನು ಪದತಲಕೆ ಚೈತನ್ಯ ಮೂರುತಿಗೆ
ತಮವನ್ನು ಕಳೆದೊಗೆದ ಸಾಹಿತ್ಯ ಸೂರ್ಯ
ಮಮಕಾರ ತೋರುತ್ತ ಛಂದವನು ಮೊಗೆದುಣಿಸಿ
ಸಮತೆಯಲಿ ಕಾಣುವರು- ಲಕುಮಿರಮಣ||
ಎಪ್ಪತ್ತರಾ ಹರೆಯ ಕುಳಮರ್ವ ಅಣ್ಣಂಗೆ
ದುಪ್ಪಟ್ಟು ಆಯುಷ್ಯ ಆರೋಗ್ಯವಿರಲಿ
ಕೊಪ್ಪರಿಗೆ ಹೊನ್ನಿನಾ ಸಂತಸದ ಸಂಪದವು
ಚಪ್ಪರಿಸುವಂತಿರಲಿ- ಲಕುಮಿರಮಣ||
ಮುಪ್ಪನ್ನು ಅಪ್ಪದೆಯೆ ಸಾಗುತಿರು ಮುಂದಕ್ಕೆ
ತೆಪ್ಪದಾ ಪಯಣದಲಿ ತಪ್ಪು ಹುಡುಕದೆಯೆ
ಬಪ್ಪ ದುರಿತಗಳನ್ನು ನಾಶಿಸುವ ಶ್ರೀಹರಿಯು
ಒಪ್ಪವಾಗಿರೆ ಬಾಳು- ಲಕುಮಿರಮಣ||
-ಲಕ್ಷ್ಮೀ ವಿ ಭಟ್, ಮಂಜೇಶ್ವರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ