ಮಂಗಳೂರು: ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

Upayuktha
0

ಮಂಗಳೂರು: ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.


ಮೊದಲು ಜೆಪ್ಪು ರೈಲ್ವೇ ಅಂಡರ್ ಪಾಸ್ ವೀಕ್ಷಿಸಿದ ಸಚಿವರು, ಬಳಿಕ ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ ಗೇಟ್ ವರೆಗಿನ ಚತುಷ್ಫಥ ರಸ್ತೆ ಕಾಮಗಾರಿ ಪರಿಶೀಲಿಸಿದರು. ಈ ರಸ್ತೆ ಅಭಿವೃದ್ಧಿಯಿಂದ ದಕ್ಷಿಣ ಭಾಗದಿಂದ ನಗರ ಪ್ರವೇಶಕ್ಕೆ ಸಂಚಾರ ಸುಗಮವಾಗಲಿದೆ ಎಂದು ಸಚಿವರು ತಿಳಿಸಿದರು.

 

ಬಳಿಕ ಜಲಾಭಿಮುಖ (Water front) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.  ವಾಟರ್ ಫ್ರಂಟ್ ರಸ್ತೆ ಕಾಮಗಾರಿಯನ್ನು ಮೋರ್ಗನ್ ಗೇಟ್, ಮುಳಿಹಿತ್ಲು ಮತ್ತು ಬೋಳಾರ ಲೀವೆಲ್ ಗೆ ಖುದ್ದು ತೆರಳಿ ವೀಕ್ಷಿಸಿದರು. ವಾಟರ್ ಫ್ರಂಟ್ ರಸ್ತೆ ನಿರ್ಮಾಣಗೊಳ್ಳಲಿರುವ ಪ್ರದೇಶದಲ್ಲಿ ಸುಮಾರು ಒಂದು ಕಿ.ಮೀ. ನಷ್ಟು ನಡೆದುಕೊಂಡು ಹೋದ ಸಚಿವರು, ಸ್ಥಳೀಯರೊಂದಿಗೂ ಮಾತನಾಡಿ, ಅಹವಾಲು ಆಲಿಸಿದರು. ನದಿ ತೀರದಲ್ಲಿ ವೀನುಗಾರಿಕೆ ಮಾಡುತ್ತಾ ನೆಲೆಸಿರುವ ಶಿಳ್ಳೆ ಖ್ಯಾತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಸಚಿವರು ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದರು.

 

ಸಚಿವರು ಮಾತನಾಡಿ, ಕೆಲವೆಡೆ ಈ ಕಾಮಗಾರಿಗೆ ಸಮಸ್ಯೆಗಳು ಉಂಟಾಗಿವೆ. ಕಾಮಗಾರಿ ಟೆಂಡರ್ ಅಂತಿಮಗೊಳ್ಳುವ ಮೊದಲೇ ಇದನ್ನು ಬಗೆಹರಿಸಬೇಕಿತ್ತು.  ಈ ಹಿನ್ನೆಲೆಯಲ್ಲಿ ಜಮೀನು ಬಳಕೆದಾರರೊಂದಿಗೆ ಮಾತುಕತೆ ನಡೆಸಿ, ಯೋಜನೆಗೆ ಸಹಕರಿಸಲು ಕೋರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಯೋಜನೆಗೆ ಸಂಪರ್ಕ ರಸ್ತೆ, ಪಾರ್ಕಿಂಗ್ ಮತ್ತಿತರ  ಕಾಮಗಾರಿಗಳಿಗೂ ಆದ್ಯತೆ ನೀಡಲು ದಿನೇಶ್ ಗುಂಡೂರಾವ್ ಸೂಚಿಸಿದರು.


ವಾಟರ್ ಫ್ರಂಟ್ ಕಾಮಗಾರಿಗೆ ಬಂದರು ಇಲಾಖೆ ಈಗಾಗಲೇ ನಿರಾಕ್ಷೇಪಣೆ ಪತ್ರ ನೀಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್  ಸಚಿವರಿಗೆ ಮಾಹಿತಿ ನೀಡಿದರು. 


ಈ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ ಭಂಢಾರಿ, ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಆನಂದ್, ಸ್ಮಾರ್ಟ್ ಸಿಟಿ ಎಂಡಿ ರಾಜು, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜ, ಮಹಾನಗರಪಾಲಿಕೆ ಸದಸ್ಯರಾದ ಪ್ರವೀಣ್ ಕುಮಾರ್ ಆಳ್ವ, ಎ.ಸಿ. ವಿನಯರಾಜ್ ಮತ್ತಿತರರು ಇದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top