ಧರ್ಮಸ್ಥಳ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ

Upayuktha
0



ಧರ್ಮಸ್ಥಳ : ಕಾರ್ತಿಕ ಮಾಸದ ಮಂಗಳ ಪರ್ವದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ  ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವದೊಂದಿಗೆ ವೈಭವೋಪೇತವಾಗಿ ನೆರವೇರುವ ಮೂಲಕ ಲಕ್ಷದೀಪೋತ್ಸವದ ಧಾರ್ಮಿಕ ಪೂಜಾ ಕಾರ್ಯಗಳು ಶುಕ್ರವಾರ ರಾತ್ರಿಯಿಂದ ಪ್ರಾರಂಭಗೊಂಡವು. ಲಕ್ಷದೀಪೋತ್ಸವದ ಎರಡನೇ ದಿನ ಶನಿವಾರ ರಾತ್ರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ  ಶ್ರೀ ಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ ನೆರವೇರಿತು. 




ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ವೈದಿಕರಿಂದ ಪೂಜೆ ನಡೆದು ಸಂಪ್ರದಾಯದಂತೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಸೇರಿ ಸರ್ವವಾದ್ಯಗಳೊಂದಿಗೆ 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಲಾಲಕ್ಕಿಯಲ್ಲಿ ಕೂರಿಸಲಾಯಿತು. ತದನಂತರ ಎದುರಿನ ಕೆರೆಯಲ್ಲಿ ಜರುಗಿದ ಪ್ರದಕ್ಷಿಣೆಯಲ್ಲಿ ಒಂದೊಂದು ದಿಕ್ಕಿಗೂ ಒಮ್ಮೊಮ್ಮೆ  ಬಲಿಯನ್ನು ನೀಡಲಾಯಿತು.




ತಮಟೆ ವಾದ್ಯ, ಜಾಗಟೆ,  ಪಂಜು, ಗೊಂಬೆಗಳ ಮೆರವಣಿಗೆಯ ಜೊತೆಗೆ ಹೊರಟ ಉತ್ಸವ ಮೂರ್ತಿಯ  ಪ್ರದಕ್ಷಿಣೆ ಖಾವಂದರೊಂದಿಗೆ ನೆರೆದಿದ್ದ ಭಕ್ತಗಣದ ಸಮ್ಮುಖದಲ್ಲಿ ನೆರವೇರಿತು. ದೇವರಿಗೆ ಅಷ್ಟಸೇವೆಯನ್ನು ಒಳಗೊಂಡ ಚತುರ್ವೇದಗಳ ಪಠಣೆ, ಸಂಗೀತ, ಮೌರಿ, ನೃತ್ಯ ಮತ್ತು ಸರ್ವವಾದ್ಯಗಳನ್ನು ಮುಗಿಸಿದಾಗ ಪೂಜೆ ಸಂಪನ್ನವಾಯಿತು.  




ಬಳಿಕ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ, ಮಂಗಳಾರತಿ ಬೆಳಗಿ ದೇಗುಲಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು. ವೈಭವೋಪೇತವಾದ ಉತ್ಸವವನ್ನು ಕಣ್ತುಂಬಿಕೊಂಡ ಪುಟಾಣಿ ಮಕ್ಕಳ ಕಂಗಳು ಮತ್ತು ಹಿರಿಯರ ಮನಗಳು ಸಾರ್ಥಕವಾಗಿದ್ದವು.   ಉತ್ಸವದ ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ವರ್ಗದ ಪ್ರಮುಖರು, ವೈದಿಕ ಸಮಿತಿಯವರು, ಪೊಲೀಸ್  ಇಲಾಖೆಯ ಸಿಬ್ಬಂದಿಗಳು  ಮತ್ತು ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top