ಗೋಸೇವೆಗೆ ಸಹಕಾರ: ಕಲ್ಯಾಣ ಮಂಟಪದ ಮಾದರಿ ಹೆಜ್ಜೆ

Upayuktha
0


ಉಡುಪಿ: ನಮ್ಮಲ್ಲಿ ಅನೇಕ ದೇವಸ್ಥಾನಗಳಲ್ಲಿ ಗೋಗ್ರಾಸ ಹುಂಡಿಯಿರುವುದು ಕಂಡಿದ್ದೇವೆ. ಭಕ್ತರು ಗೋಸೇವೆಗೆ ಯಥಾಶಕ್ತಿ ಕಾಣಿಕೆ ನೀಡಲು ಅವಕಾಶವಾಗುವಂತೆ ಈ ವ್ಯವಸ್ಥೆ ಇರುತ್ತದೆ.


ಆದರೆ ಉಡುಪಿಯಲ್ಲೊಂದು ಕಲ್ಯಾಣ ಮಂಟಪದಲ್ಲೂ ಗೋಸೇವಾ ಹುಂಡಿಯನ್ನು ಅಳವಡಿಸಿ ಮಾದರಿಯಾಗಿದ್ದಾರೆ. ಉಡುಪಿ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿರುವ ಅತ್ಯಂತ ವಿಶಾಲವೂ ಪ್ರಾಕೃತಿಕ ಸೌಂದರ್ಯವನ್ನೂ ಹೊಂದಿರುವ ಸುಸಜ್ಜಿತವೂ ಆಗಿದ್ದು ಇತ್ತೀಚಿನ ದಿನಗಳಲ್ಲಿ ಜನರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀದೇವಿ ಸಭಾಭವನದಲ್ಲಿ ಗೋಸೇವಾ ಹುಂಡಿಯನ್ನು ಅಳವಡಿಸಲಾಗಿದೆ.


ಉಡುಪಿಯಲ್ಲಿ ದಶಕಗಳಿಂದ ಸಿವಿಲ್ ಇಂಜಿನಿಯರ್ ಆಗಿ ಮತ್ತು ಅದಕ್ಕಿಂತ ಹೆಚ್ಚಾಗಿ ಅನೇಕ ಧಾರ್ಮಿಕ ಸಾಮಾಜಿಕ ಕೈಂಕರ್ಯಗಳಲ್ಲಿ ಮುನ್ನೆಲೆಯಲ್ಲಿ ತೊಡಗಿಸಿಕೊಂಡು ಪ್ರಸಿದ್ಧರಾಗಿರುವವರು ಶ್ರೀ ರಮೇಶ್ ರಾವ್ ಬೀಡು ಈ ಕಲ್ಯಾಣಮಂಟಪದ ಸ್ಥಾಪಕರು. ಉಡುಪಿ ಶ್ರೀಕೃಷ್ಣ ಮಠ ಅಷ್ಟಮಠಗಳ ಯಾವತ್ತೂ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡ ರಮೇಶ ರಾಯರು ಪೇಜಾವರ ಶ್ರೀಗಳ ನೇತೃತ್ವದ ನೀಲಾವರ ಗೋಶಾಲೆಯ ವಿಶ್ವಸ್ಥರಲ್ಲಿ ಒಬ್ಬರೂ ಆಗಿದ್ದಾರೆ. ತಮ್ಮ ಮನೆಯಲ್ಲೂ ಅನೇಕ ಗೋವುಗಳನ್ನು ಪೋಷಿಸುತ್ತಿದ್ದಾರೆ. ಹಾಗಾಗಿ ಸ್ವಾಭಾವಿಕವಾಗಿಯೇ ಗೋಶಾಲೆಯ ನಿರ್ವಹಣೆಯ ಸವಾಲು ಸಂಕಷ್ಟಗಳ ಅರಿವು ರಾಯರಿಗಿದೆ. ಆ ಹಿನ್ನೆಲೆಯಲ್ಲಿ ತಾನು ಈಗಾಗಲೇ ಗೋಶಾಲೆಗೆ ನೆರವು ನೀಡಿ ಸಹಕರಿಸುತ್ತಿರುವುದರ ಜೊತೆಗೆ ತನ್ನ ಕಲ್ಯಾಣಮಂಟಪಕ್ಕೆ ಸಮಾರಂಭಗಳನ್ನು ನಡೆಸುವರಿಗೂ ಹಾಗೂ ಅದರಲ್ಲಿ ಭಾಗವಹಿಸಲು ಬರುವ ಜನರಿಂದಲೂ ಒಂದಷ್ಟು ನೆರವು ದೊರೆತರೆ ಅನುಕೂಲವಾದೀತೆಂದು ಯೋಚಿಸಿ ಈ ವ್ಯವಸ್ಥೆ ಮಾಡಿದ್ದಾರೆ.


ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಈ ಗೋಸೇವಾ ಹುಂಡಿಯನ್ನು ಕಳೆದ ವಾರ ಉದ್ಘಾಟಿಸಿ ಈ ಮಾದರಿ ನಡೆಯನ್ನು ಪ್ರಶಂಸಿದ್ದಾರೆ. ಈ ಕಲ್ಯಾಣ ಮಂಟಪದಲ್ಲಿ ಮದುವೆ ಉಪನಯನ ಇತ್ಯಾದಿ ಶುಭ ಸಮಾರಂಭ ಮಾತ್ರವಲ್ಲದೇ ಅನೇಕ ಸಭೆ ಸಮಾರಂಭಗಳೂ ನಡೆಯುತ್ತವೆ.‌ ಸಹಜವಾಗಿಯೇ ನೂರಾರು ಜನ ಬಂದೇ ಬರುತ್ತಾರೆ. ಅವರೆಲ್ಲ ಈ ಹುಂಡಿಯನ್ನು ಕಂಡು ಯಥಾಶಕ್ತಿ ಕಾಣಿಕೆಯನ್ನು ಹುಂಡಿಗೆ ಹಾಕಲು ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೇ ಇಲ್ಲಿ ನಡೆಯುವ ಸಮಾರಂಭಗಳಲ್ಲಿ ಹೂವಿನ ಅಲಂಕಾರ ಮಾಡುವವರು ಕೂಡಾ ರಮೇಶರಾಯರ ಪ್ರೇರಣೆಯಿಂದ ತಮ್ಮ ವ್ಯವಹಾರದ ಒಂದಷ್ಟು ಮೊತ್ತವನ್ನು ಗೋಸೇವೆಗೆ ತೆಗೆದಿಡುತ್ತಾರೆ. ಹಾಗೆ ಒಟ್ಟಾದ ಸುಮಾರು ಒಂದು ಲಕ್ಷ ರೂಗಳನ್ನು ಶ್ರೀಗಳ ಮೂಲಕ ಗೋಶಾಲೆಗೆ ಹಸ್ತಾಂತರಿಸಿರುವುದು ಮತ್ತೊಂದು ವಿಶೇಷ.


ಇನ್ನು ಬ್ರಾಹ್ಮಣರ ಯಾವುದೇ ಸಮಾರಂಭಗಳ ಭೋಜನ ಕೂಟದಲ್ಲಿ ದಕ್ಷಿಣೆ ಕೊಡುವ ಸಂಪ್ರದಾಯವಿದೆ.‌ ಇದರ ಹಿಂದೆ ಉದಾತ್ತ ಆಶಯವಿದ್ದರೂ ಇತ್ತೀಚಿನ ದಿನಗಳಲ್ಲಿ ದಕ್ಷಿಣೆಯನ್ನು ನಿರಾಕರಿಸುವ ಪ್ರವೃತ್ತಿ ಬೆಳೆಯುತ್ತಿದೆ. ಅಂಥ ಸಂದರ್ಭದಲ್ಲಿ ಈ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭಗಳಲ್ಲಿ ಬ್ರಾಹ್ಮಣರು ದಕ್ಷಿಣೆಯನ್ನು ಸ್ವೀಕರಿಸಿ ಅದು ತಮಗೆ ಅವಶ್ಯವಿಲ್ಲವೆಂದೆನಿಸಿದರೆ ಈ ಗೋಸೇವಾ ಹುಂಡಿಗೆ ಹಾಕಬಹುದಾಗಿದೆ. ಹೀಗೆ ಮಾಡುವುದರಿಂದ ಬಂಧುವಿಗೆ  ದಕ್ಷಿಣೆ ಕೊಟ್ಟ ಯಜಮಾನನಿಗೆ ಡಬಲ್ ಪುಣ್ಯ !!! ತಗೊಂಡ ಬಂಧುವಿಗೂ ಅದನ್ನು ಗೋಸೇವೆಗೆ ನೀಡಿದ ಒಂದು ಪುಣ್ಯ ಸಿಕ್ಕಂತಾಯಿತು. ಒಟ್ಟಿನಲ್ಲಿ ಗೋಸೇವಾ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿದ ಸಾರ್ಥಕತೆ ಕಲ್ಯಾಣ ಮಂಟಪದ ಯಜಮಾನ ರಮೇಶ ರಾಯರಿಗೆ.

ಎಲ್ಲ ಕಲ್ಯಾಣಮಂಟಪಗಳಲ್ಲೂ ಇದೊಂದು ಮಾದರಿ ಹೆಜ್ಜೆಯಾಗಬಲ್ಲುದು.


ವಂದೇ ಗೋಮಾತರಮ್


-ಜಿ ವಾಸುದೇವ ಭಟ್ ಪೆರಂಪಳ್ಳಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top