ದಾನಿಗಳ ನೆರವಿನಿಂದ ಆರಂಭಗೊಂಡ ಉಚಿತ ಕಂಪ್ಯೂಟರ್ ತರಗತಿ ಉದ್ಘಾಟನೆ
ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಇಂದು ವಿಜ್ಞಾನ, ಆಡಳಿತ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ತಾವು ಕಲಿತ ಶಾಲಾಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಹೇಳಿದರು.
ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡದ ವಾರ್ಷಿಕೋತ್ಸವ, ದಾನಿಗಳ ನೆರವಿನಿಂದ ಆರಂಭಗೊಂಡ ಉಚಿತ ಕಂಪ್ಯೂಟರ್ ತರಗತಿ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಸೈನಿಕರು ಮತ್ತು ಶಿಕ್ಷಕರೊಂದಿಗೆ ಗೌರವಪೂರ್ವಕವಾಗಿ ಸಮಾಜ ನಡೆಸಿಕೊಳ್ಳಬೇಕು ಎಂದ ಅವರು, ಶಾಲೆಗಳನ್ನು ದೇವಾಲಯದ ರೂಪದಲ್ಲಿ ನಾವು ಕಾಣಬೇಕು. ಬಂಟ್ವಾಳ ತಾಲೂಕಿನಲ್ಲಿ ಶಾಲಾಭಿವೃದ್ಧಿಗೆ ಸಮಾಜದ ಕೊಡುಗೆ ಅಪಾರವಾಗಿದೆ. ಹಿರಿಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ, ಶಾಲೆಯನ್ನು ಸುಂದರವಾಗಿ ರೂಪಿಸಬಹುದು ಎಂದು ಬಂಟ್ವಾಳ ತಾಲೂಕಿನ ಹಲವು ಶಾಲೆಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಇಂಥ ಶಾಲಾಪ್ರೀತಿ ನಮ್ಮ ನಿಮ್ಮಲ್ಲಿರಲಿ, ಇದು ನಿಜವಾದ ಮಾನವೀಯ ಧರ್ಮ ಎಂದರು. ನಿಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸುವುದು ಒಳ್ಳೆಯದಲ್ಲ. ಪ್ರೀತಿಸುವುದರ ಜೊತೆಗೆ ಧೈರ್ಯವನ್ನು ತುಂಬಿ ಎಂದು ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಬಾಳಿಗಾ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ, ಶಿಕ್ಷಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಬೇಕು ರೋಟರಿ ಕ್ಲಬ್ ಬಂಟ್ವಾಳ ಸದಾ ಶಾಲೆಯೊಂದಿಗಿದೆ ಎಂದು ಹೇಳಿದರು.
ದಾನಿಗಳ ನೆರವಿನಿಂದ ಆರಂಭಗೊಂಡ ಉಚಿತ ಕಂಪ್ಯೂಟರ್ ತರಗತಿಯನ್ನು ಉದ್ಘಾಟಿಸಿದ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ ಟ್ರಸ್ಟ್ ವತಿಯಿಂದ ಹಲವು ನೆರವುಗಳನ್ನು ನೀಡಲಾಗುತ್ತಿದ್ದು, ಶಾಲೆಯ ವಿದ್ಯಾರ್ಥಿಗಳು ಸದುಪಯೋಗಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭಾ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್ ಶುಭ ಹಾರೈಸಿದರು. ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರೇಮಲತಾ, ಹಿರಿಯ ವಿದ್ಯಾರ್ಥಿ ಹಾಗೂ ದಸ್ತಾವೇಜು ಬರೆಹಗಾರ ಟಿ.ಗಣೇಶ್ ರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನವೀನ್ ಪಿ.ಎಸ್, ಬಿ.ಮೂಡ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಗೀತಾ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕುಶಲಾ ಎ, ನಿವೃತ್ತ ಶಿಕ್ಷಕರಾದ ಶೇಷಪ್ಪ ಮಾಸ್ಟರ್, ನಾರಾಯಣ, ಸುಮಿತ್ರಾ ಕೆ.ಆರ್, ಮೊಡಂಕಾಪು ದೀಪಿಕಾ ಪ್ರೌಢಶಾಲೆ ನಿವೃತ್ತ ಅಧ್ಯಾಪಕ ಎಚ್.ಎನ್.ಹೆಬ್ಬಾರ್, ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಮಮತಾ, ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ನವೀನ್ ಪಿ.ಎಸ್. ಅವರನ್ನು ಸನ್ಮಾನಿಸಲಾಯಿತು. ಕಲಿಕೆ, ಕ್ರೀಡೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ, ಹಿರಿಯ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಾರ್ಷಿಕ ವರದಿಯನ್ನು ಮುಖ್ಯೋಪಾಧ್ಯಾಯಿನಿ ಕೆ. ಲಕ್ಷ್ಮೀ ಮಂಡಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಹೇಮಾವತಿ ಬಹುಮಾನಿತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ತಾಹಿರಾ ಬಿ. ವಂದಿಸಿದರು. ಸಹಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕರಾದ ಪೂರ್ಣಿಮಾ, ನಿಶ್ಮಿತಾ, ಲಾವಣ್ಯ, ಶಿವಮೂರ್ತಿ, ಸಿಬಂದಿಗಳಾದ ಸುನೀತಾ, ಜ್ಯೋತಿ ಸವಿತಾ, ಹಿರಿಯ ವಿದ್ಯಾರ್ಥಿಗಳಾದ ಸಂದೀಪ್ ಸಾಲ್ಯಾನ್, ದೇವದಾಸ್ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ