ಭಾರತೀಯ ಆಚರಣೆ, ಸಂಪ್ರದಾಯಗಳಲ್ಲಿ ವೈಜ್ಞಾನಿಕತೆಯಿದೆ : ಡಾ.ರಾಮಚಂದ್ರ ಗುರೂಜಿ

Upayuktha
0

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ದಶಾಂಬಿಕೋತ್ಸವ ಕಾರ್ಯಕ್ರಮ




ಪುತ್ತೂರು: ಪ್ರಪಂಚಕ್ಕೆ ನಮಸ್ಕಾರ ಮಾಡುವ ಕ್ರಮವನ್ನು ಕಲಿಸಿಕೊಟ್ಟವರು ಭಾರತೀಯರು. ಅಂತೆಯೇ ಚಪ್ಪಾಳೆಯನ್ನು ತಟ್ಟುವ ವಿಧಾನ ತೋರಿಕೊಟ್ಟವರೂ ನಾವೇ. ನಮ್ಮ ಪ್ರತಿಯೊಂದು ಆಚರಣೆ, ಸಂಪ್ರದಾಯಗಳಲ್ಲಿ ವೈಜ್ಞಾನಿಕತೆ ಅಡಗಿದೆ. ಹಾಗಾಗಿ ನಮ್ಮ ದೇಸೀಯವಾದ ಉತ್ಕೃಷ್ಟ ವಿಚಾರ ಧಾರೆಗಳನ್ನು ಅಳವಡಿಸಿಕೊಂಡು ಮುಂದುವರೆಯಬೇಕಾದ್ದು ನಮ್ಮ ಕರ್ತವ್ಯ ಎಂದು ಕುಂಡಲಿನಿ ಯೋಗ ಗುರು, ಸಂಮೋಹಿನಿ ತಜ್ಞ ಬೆಂಗಳೂರಿನ ಡಾ.ರಾಮಚಂದ್ರ ಗುರೂಜಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾ;ಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷ - ದಶಾಂಬಿಕೋತ್ಸವದ ನಿಮಿತ್ತ ‘ಅಂತರ್ಮನಸ್ಸಿನ ವಿಸ್ಮಯ ಶಕ್ತಿಗಳು’ ವಿಷಯದ ಬಗೆಗೆ ಆಯೋಜಿಸಲಾದ ವಿಶೇಷ ಕಾರ್ಯಕ್ರಮದ ಉದಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.


ನಾವು ಎಲ್ಲೇ ಇದ್ದರೂ ಮಾನಸಪೂಜೆಯಲ್ಲಿ ತೊಡಗಬಹುದು. ಮಾನಸ  ಪೂಜೆ ಎಂದರೆ ಮನಸ್ಸಿನಲ್ಲಿಯೇ ನಾವು ಆರಾಧಿಸಬೇಕಾದವರನ್ನು ಕಲ್ಪಿಸಿಕೊಂಡು ಅವರಿಗೆ ಸಲ್ಲಿಸುವ ಪೂಜೆ. ಮುಖ್ಯವಾಗಿ ಹೆತ್ತವರಿಗೆ, ಬದುಕಿನ ಮೇಲೆ ಪರಿಣಾಮ ಬೀರಿದ ಗುರುಗಳಿಗೆ ಹಾಗೂ ನಾವು ಇಷ್ಟಪಡುವ ದೇವರಿಗೆ ಈ ಪೂಜೆಯನ್ನು ಸಲ್ಲಿಸಬೇಕು. ಮನಸ್ಸನ್ನು ಪ್ರಶಾಂತ ಸ್ಥಿತಿಯಲ್ಲಿಟ್ಟು ಕಾಲ್ಪನಿಕ ಪುಷ್ಪಗಳ ಅರ್ಚನೆ, ಆಶೀರ್ವಾದ ಯಾಚನೆ ಹಾಗೂ ಬೆಳಕಿನೋಪಾದಿಯಲ್ಲಿ ಆಶೀರ್ವಾದವನ್ನು ಪಡೆಯುವ ಚಿತ್ರಣವನ್ನು ಮನಸ್ಸಿನಲ್ಲಿ ತಂದುಕೊಳ್ಳಬೇಕು. ಅದು ನಮ್ಮೊಳಗೆ ಹೊಸ ಶಕ್ತಿಯನ್ನು ರೂಪಿಸಿಕೊಡುತ್ತದೆ ಎಂದು ಪ್ರಾಯೋಗಿಕವಾಗಿ ಮಾಡಿಸಿ ತೋರಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರ್ಮಿಕ ಮುಖಂಡ, ಕಾಸರಗೋಡಿನ ರವೀಶ ತಂತ್ರಿ ಮಾತನಾಡಿ ಸಮಾಜದ ಸಂಪ್ರೀತಿ ಪಡೆಯಲು, ಬದುಕಿನ ಸವಾಲುಗಳನ್ನು ಎದುರಿಸಲು ವಿದ್ಯೆಯೊಂದೇ ಸಹಾಯ ಮಾಡದು. ಆದರೆ ವಿದ್ಯೆಯೊಂದಿಗೆ ಸಂಸ್ಕಾರವೂ ಅಡಕವಾದಾಗ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಹಾಗೂ ಹೊಸ ಶಕ್ತಿ ಒಡಮೂಡುತ್ತದೆ. ಭಗವಂತನಲ್ಲಿ ಸಂಪತ್ತಿಗಾಗಿ ಬೇಡುವ ಮೂಲಕ ಸ್ವಾರ್ಥಪರರಾಗಿ ಬದುಕುತ್ತಿದ್ದೇವೆ. ಮನುಷ್ಯತ್ವಕ್ಕಾಗಿ ಪ್ರಾರ್ಥನೆ ಮಾಡುವುದನ್ನು, ಮನುಕುಲಕ್ಕಾಗಿ ಹಂಬಲಿಸುವುದನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು.


ಇಂದು ಸಣ್ಣ ಪುಟ್ಟ ವಿಷಯಗಳಿಗೂ ಆತ್ಮಹತ್ಯೆಯಂತಹ ಪ್ರಕರಣಗಳು ಘಟಿಸುತ್ತಿವೆ. ಅಂಕ ಕಡಿಮೆಯಾಯಿತೆಂದು ವಿದ್ಯಾರ್ಥಿಗಳು, ಒತ್ತಡ ಜಾಸ್ತಿಯಾಯಿತೆಂದು ವಿದ್ಯಾವಂತರು ಬದುಕನ್ನು ಕೊನೆಗೊಳಿಸುತ್ತಿದ್ದಾರೆ. ಆದರೆ ನಮ್ಮ ಜೀವನ ವಿಶೇಷವಾದದ್ದು ಹಾಗೂ ನಾವೆಲ್ಲರೂ ಈ ಮಣ್ಣಿಗಾಗಿ ಸೇವೆ ಮಾಡುವ ಯೋಗ್ಯತೆ ಉಳ್ಳವರು ಎಂಬ ಪರಿಕಲ್ಪನೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ತಾನು ಈ ಜಗತ್ತಿನಲ್ಲಿ ಉಪಯುಕ್ತತೆ ಹೊಂದಿದ್ದೇನೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಇದು ಅರ್ಥವಾಗಲು ಆಧ್ಯಾತ್ಮಿಕ ಅನುಷ್ಠಾನದ ಅಗತ್ಯವಿದೆ ಎಂದು ನುಡಿದರು.


ಇಂದು ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳು ಆರ್ಥಿಕತೆಯ ಬೆಳವಣಿಗೆಯ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತಿವೆ. ಇದು ಅತ್ಯಂತ ಅಪಾಯಕಾರಿ ಸಂಗತಿ. ಹೀಗಿರುವಾಗ ಶಿಕ್ಷಣ ಸಂಸ್ಥೆಯಲ್ಲಿ ಪಾರಮಾರ್ಥಿಕ ವಿಚಾರಧಾರೆಗಳನ್ನು ಹರಿಸುವ ಕಾರ್ಯ ಆಗಬೇಕು. ಅಂಬಿಕಾ ಸಂಸ್ಥೆ ಆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರಲ್ಲದೆ ಇಂದು ಕೇರಳದಲ್ಲಿ ಭಾರತಮಾತೆಯನ್ನು ಆರಾಧಿಸುವುದಕ್ಕೂ ಮತಾಂಧ ಶಕ್ತಿಗಳು ತಡೆಯೊಡ್ಡಟುತ್ತಿವೆ. ಅಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯತೆಯನ್ನು ತಿಳಿಸಿಕೊಡುವುದಕ್ಕೆ ಅಡ್ಡಿ ಆತಂಕಗಳಿವೆ ಎಂದು ವಿಷಾದ ವ್ಯಕ್ತಪಡಿಸಿದರು.


ಪ್ರಸ್ತಾವನೆಗೈದ ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಮೊತ್ತಮೊದಲ ಬಾರಿಗೆ ಶಿಕ್ಷಣ ಸಂಸ್ಥೆಯೊಂದರ ಹತ್ತನೆಯ ವರ್ಷಾಚರಣೆ ಸಂದರ್ಭದಲ್ಲಿ ಆಧ್ಯಾತ್ಮಿಕ ಜ್ಞಾನ ಪಸರಿಸುವ ಪ್ರಯತ್ನವಾಗುತ್ತಿದೆ. ಅಂಬಿಕಾ ವಿದ್ಯಾಲಯದ ಹತ್ತನೆಯ ವರ್ಷಾಚರಣೆ ಪ್ರಯುಕ್ತ ಧಾರ್ಮಿಕ, ಕ್ರೀಡೆ, ಆರೋಗ್ಯ, ಸಾಮಾಜಿಕ, ಜ್ಞಾನಬೋಧಕವೇ ಮೊದಲಾದ ಹತ್ತು ಕ್ಷೇತ್ರಗಳನ್ನು ಗುರುತಿಸಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಕ್ಕಾಗಿ ಮಿಡಿಯುವ ತುಡಿಯುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಮೂಡಿಬರಬೇಕು. ಮನೆ-ಮನಗಳಲ್ಲಿ ರಾಷ್ಟಿçÃಯತೆ ಉಕ್ಕಿ ಕಾಣಬೇಕು. ದೇಶ ಕಟ್ಟುವ ಕಾರ್ಯಕ್ಕೆ ನಮ್ಮನ್ನು ನಾವು ಅರ್ಪಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ನುಡಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ, ನ್ಯಾಯವಾದಿ ಸೀಮಾ ನಾಗರಾಜ್, ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ವಿದ್ಯಾರ್ಥಿಗಳಾದ ಆತ್ರೇಯ, ಅವನೀಶ್ ಹಾಗೂ ಶೌರಿ ಉಪಾಧ್ಯಾಯ ವೇದಘೋಷ ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಶೃತಿ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ವಂದಿಸಿದರು. ಶಿಕ್ಷಕಿಯರಾದ ಮಲ್ಲಿಕಾ ಹಾಗೂ ರಮ್ಯಾ ಕಾರ್ಯಕ್ರಮ ನಿರ್ವಹಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top