ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೨೯ನೇ ವರ್ಷದ ಆಳ್ವಾಸ್ ವಿರಾಸತ್‌ನ ಶ್ರೀಮತಿ ವಜನಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಭಾನುವಾರ ವಿಜಯ ಪ್ರಕಾಶ್ ಅವರ ಸ್ವರಮಾಧುರ್ಯ, ಮೈಸೂರು ಮಂಜುನಾಥ ಅವರ ವಯೋಲಿನ್ ವೈಭವ ಹಾಗೂ ಪ್ರವೀಣ್ ಗೋಡ್ಖಿಂಡಿ ಅವರ ಕೊಳಲಿನ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು.
ಆಳ್ವಾಸ್ ವಿರಾಸತ್ ಪ್ರಶಸ್ತಿ ಪುರಸ್ಕೃತ ಮೂವರ ಕಛೇರಿಯು ಅಭಿಮಾನಿಗಳನ್ನು ಸಂಗೀತ ಲೋಕಕ್ಕೆ ಕೊಂಡೊಯ್ದಿತು.
ಅದು ವಿರಾಸತ್ ವೇದಿಕೆಯಲ್ಲಿ ನಡೆದ 'ತಾಳ ವಾದ್ಯ ಸಂಗೀತದ' ಕಾರ್ಯಕ್ರಮದ ನಿನಾದ. ಹಾಲು ಬೆಳದಿಂಗಳು ಚೆಲ್ಲಿದ ವಿದ್ಯುದಾಲಂಕಾರದ, ತುಂಬಿ ತುಳುಕಿದ ಸಭಾಂಗಣದಲ್ಲಿ ಸೇರಿದ ಶ್ರೋತೃಗಳ ಮನಸೂರೆಗೊಂಡಿತು.
ಆರAಭದಲ್ಲಿ ಹಂಸಧ್ವನಿ ರಾಗದ ಆಲಾಪನೆ ಮೂಲಕ ಕಛೇರಿ ಆರಂಭಗೊAಡಿತು. ಗೋಡ್ಖಿಂಡಿ ಬಾನ್ಸುರಿಗೆ ಮೈಸೂರು ಮಂಜುನಾಥ್ ಜುಗಲ್ ಬಂಧಿಯಾದರು.
ಮುಸ್ಸAಜೆಯ ಗೋಧೋಳಿ ಲಗ್ನದಲ್ಲಿ ಮನೆ ಮನೆಗಳಲ್ಲಿ ದೀಪ ಬೆಳಗಿದಂತೆ, ಬೆಳಂದಿಗಳು ತುಂಬಿದ ವೇದಿಕೆಯಲ್ಲಿ ಗಣೇಶ ಸ್ತುತಿ ಮೂಲಕ ಹಂಸಧ್ವನಿ ರಾಗದ ' ವಾತಾಪಿ ಗಣಪತಿಂ ಭಜೇ..' ನಾದ ಹೊನಲಾಯಿತು.
ನಾದಸುಧೆಯ ಏರಿಳಿತವು ಸಭಾಂಗಣದಲ್ಲಿ ಸಂಭ್ರಮದ ಅಲೆಯನ್ನು ಸೃಷ್ಟಿಸಿತು. ಜುಗಲ್ ಬಂಧಿಯು ಉಚ್ಛ್ರಾಯ ಸ್ಥಿತಿಯನ್ನು ಸಿಂಗರಿಸಿದಾಗ, ಎಲ್ಲರಿಗೂ ರೋಮಾಂಚನ. ಆಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ.
ಬಳಿಕ ಅವರ ಜೊತೆಗೂಡಿದ ಕರ್ನಾಟಕ ಸಂಗೀತ ಖ್ಯಾತಿಯ ವಿಜಯ ಪ್ರಕಾಶ್, ಉಡುಪಿ ಶ್ರೀಕೃಷ್ಣ ಆರಾಧನೆಯ ' ಕೃಷ್ಣಾ ನೀ ಬೇಗನೇ ಬಾರೋ...' ಹಾಡಿದರು.
ಯಮನ ಕಲ್ಯಾಣಿ ಮಿಶ್ರಛಾಪು ರಾಗದಲ್ಲಿ ' ಕೃಷ್ಣಾ' ಎಂದು ಆಲಾಪನೆ ಆರಂಭಿಸಿದ ವಿಜಯ ಪ್ರಕಾಶ್ ನಾದ ಸುಧೆ ಹರಿಸಿದರು.
'ತಾಯಿಗೆ ಬಾಯಲ್ಲಿ ಜಗವನ್ನು ತೋರಿದ' ಎಂಬ ಸಾಲುಗಳು ಮೂಡುಬಿದಿರೆ ಯಲ್ಲಿ ವಿರಾಸತ್ ದರ್ಶನವನ್ನು ವಿಶ್ಲೇಷಿಸುವಂತೆ ಅಪ್ಯಾಯಮಾನವಾಯಿತು.
ಪ್ರವೀಣ್ ಗೋಡ್ಖಿಂಡಿ ಅವರ ರಾಗ ಸಂಯೋಜನೆಯ 'ಕೃಷ್ಣಾ' ಆಲ್ಬಮ್ ನ ಮೋಹನ ರಾಗದ ತುಣುಕೊಂದನ್ನು ಆರಿಸಿಕೊಂಡ ವಿದ್ವಾಂಸ ತ್ರಯರು ನಾದಲೋಕವನ್ನೇ ಸೃಷ್ಟಿಸಿದರು.
ನಿಮ್ಮ ಪ್ರೇರಣೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದು ವಿಜಯ ಪ್ರಕಾಶ್ ಧನ್ಯತೆ ವ್ಯಕ್ತಪಡಿಸಿದರು.
ಪಿಯಾನೋದಲ್ಲಿ (ಕೀ ಬೋರ್ಡ್) ನಲ್ಲಿ ಪ್ರವೀಣ್ ಡಿ.ರಾವ್, ಮೃದಂಗದಲ್ಲಿ ತುಮಕೂರು ಡಿ. ರವಿಶಂಕರ್, ತಬಲದಲ್ಲಿ ವೇಣುಗೋಪಾಲ ಹಾಗೂ ಡ್ರಮ್ಸ್ ನಲ್ಲಿ ಅರುಣ್ ಕುಮಾರ್ ಸಾಥ್ ನೀಡಿದರು.
ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿ ಪ್ರಖ್ಯಾತ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ