ಸಿಂಗಾರ ಸಿರಿಗೆ ಪ್ರೇಕ್ಷಕರ ಕೊಂಗಾಟ, ಗೊಂಬೆ ಗಾಯನದಲ್ಲಿ ಮೋಹನ ಆಳ್ವ ಬಣ್ಣನೆ

Upayuktha
0

ವಿಜಯ್ ಪ್ರಕಾಶ್ ಗಾನಕ್ಕೆ ವಿರಾಸತ್ `ಜೈ ಹೋ...'



ವಿದ್ಯಾಗಿರಿ (ಮೂಡುಬಿದಿರೆ): ಸಂಗೀತ ಸಿರಿಯ ಕೆನ್ನೆಯ ಮೇಲೆ ಪ್ರೀತಿಯ ಕೆಂಬಣ್ಣದAತೆ `ವಿರಾಸತ್'  ವೇದಿಕೆಯು ಭಾನುವಾರ ಸಂಜೆ ವಿಜಯ್ ಪ್ರಕಾಶ್ ಹಾಗೂ ಸಂಗಡಿಗರ ರಸಸಂಜೆಗೆ ಸಾಕ್ಷಿಯಾಯಿತು. ಶ್ರೋತೃಗಳ `ಜೈ ಹೋ...'


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 29ನೇ ವರ್ಷದ ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ ಭಾನುವಾರ ರಾಗಗಳದ್ದೇ ನರ್ತನ. ಕನ್ನಡ ಹಾಡುಗಳ ರೋಮಾಂಚನ.


`ಭಜರAಗಿ' ಸಿನಿಮಾದ `ನಂದ ನಂದ ಶ್ರೀ ಕೃಷ್ಣ ನನ್ನ ಬಂಧುವೇ ನೀ ಶ್ರೀ ಕೃಷ್ಣ' ಹಾಡಿನ ಮೂಲಕ ಕಾಮನಬಿಲ್ಲಿನ ಬೆಳಕಿನ ವೇದಿಕೆಗೆ ಬಂದ ನೇರಳೆ ಧಿರಿಸಿನ ಮುದ್ದು ಮೊಗದ ಅಪ್ಪನ ಪ್ರೀತಿಯ ಹುಡುಗಿ ಅನುರಾಧ ಭಟ್, ಸಂಗೀತ ರಸಸಂಜೆಗೆ ಮುನ್ನುಡಿ ಬರೆದರು.


ತಂದೆಯ ಬೆವರ ಹನಿಗೆ ಮಕ್ಕಳ ಪ್ರೀತಿಯ ಮುತ್ತುಗಳನ್ನು ತೊಡಿಸಿದ, ತಾನೇ `ಚೌಕ' ಸಿನಿಮಾಕ್ಕೆ ಹಾಡಿದ `ನಾನು ನೋಡಿದ ಮೊದಲ ವೀರ ... ಅಪ್ಪಾ ಐ ಲವ್ ಯೂ ಪಾ' .. ಹಾಡಿದಾಗ ಪ್ರೇಕ್ಷಕ ವರ್ಗದಲ್ಲಿನ ತಂದೆ- ಮಗಳು- ಮಗ ಮಾತ್ರವಲ್ಲ ತಾಯಿಯಂದಿರೂ ಭಾವುಕರಾದರು.


ವರನಟ ರಾಜ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದ `ಜೀವನ ಚೈತ್ರ' ಸಿನಿಮಾದ `ನಾದಮಯ.. ಈ ಲೋಕವೆಲ್ಲ ಆ ಆ ಆ’ ಹಾಡನ್ನು ಶ್ರೀ ಹರ್ಷ ಸುಧೆಯಾಗಿಸಿದರು. ಸೇರಿದ ಪ್ರೇಕ್ಷಕರಿಗೆ ಕಾಶಿ ಹರಿದ್ವಾರದ ದರ್ಶನವನ್ನು ವಿರಾಸತ್ ಸಭಾಂಗಣದಲ್ಲಿ ನೀಡಿದರು.

`ಈ ರೀತಿಯ ನಾದ ಕೇಳಲು ಮೂಡುಬಿದಿರೆಗೇ ಬರಬೇಕು. ಪ್ರತಿ ಹಾಡೂ ಮತ್ತೆ ಮತ್ತೆ ಹಾಡುವಾಗ ನನಗೆ ಹೊಸತು. ಅದಕ್ಕೆ ಕೇಳುಗರೇ ಕಾರಣ' ಎಂದ ವಿಜಯ್ ಪ್ರಕಾಶ್  ಅವರು, `ಡಾ.ಮೋಹನ ಆಳ್ವ ಅವರಿಗೆ ನಾವೆಲ್ಲ ಸೇರಿ ಗೌರವಿಸುವ' ಎನ್ನುತ್ತಲೇ, `ಗೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ...' ಎಂದು ತಮ್ಮ ನಿಷ್ಕಲ್ಮಶ ಮುಗ್ಧ ಭಾವಲಹರಿಯಲ್ಲೇ ಮುದ್ದಾಡಿದರು. 


ಪಿಯಾನೋ ನಾದಕ್ಕೆ ಪ್ರೇಕ್ಷಕರೆಲ್ಲ `ಗೊಂಬೆ ಹೇಳುತ್ತೈತೆ... ಭಾರತ ಹೇಳುತ್ತೈತೆ ನೀನೇ ರಾಜಕುಮಾರ..' ಎಂದು ಹಾಡಿ ಡಾ.ಎಂ.ಮೋಹನ ಆಳ್ವ ಅವರನ್ನು ತೋರಿಸಿದರು.

`ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ' ಎಂಬ `ಕಿರಕ್ ಪಾರ್ಟಿ' ಹಾಡಿಗೆ ಪ್ರೇಕ್ಷರದ್ದೇ ಕೋರಸ್... `ಅರ್ರರೇ ಅರ್ರರೇ... ಅಯ್ಯಯ್ಯೋ' ಎಂಬ ಝೇಂಕಾರ. ಕೈ ಬೀಸುತ್ತಾ ಸಾಗರದ ಅಲೆಯನ್ನೇ ಪ್ರೇಕ್ಷಕರು ಸೃಷ್ಟಿಸಿದರು.  ವಿಜಯ್ ಪ್ರಕಾಶ್ ಹಾಡಿನ ವೇಗ ಹೆಚ್ಚಿಸಿದಾಗ ವಿದ್ಯಾರ್ಥಿಗಳೆಲ್ಲ  ಜೊತೆ ಹಾಡಿದರು. ಆಗ ತಮ್ಮ ಮೊಬೈಲ್ ಲೈಟ್ ತೆಗೆದ ಜನರು `ಮಿಂಚುಳ್ಳಿ ಲೋಕ'ವನ್ನೇ ಸೃಷ್ಟಿಸಿದರು.


ಬಳಿಕ `ಕಾಂತಾರಾ'ದ `ಸಿಂಗಾರ ಸಿರಿ...' ಪ್ರೇಮ ಪರ್ವ. ವಿಜಯ್ ಪ್ರಕಾಶ್ ಜೊತೆ ಅನುರಾಧ ಭಟ್ ಯುಗಳ ಗೀತೆ ಹಾಡಿದರು. `...ಮನದ ಮಗು ಹಠ ಮಾಡಿದೆ..' ಎಂದಾಗ ವಿದ್ಯಾರ್ಥಿಗಳ `ಕೊಂಗಾಟ'. ಸಂಜೆಯ ಕೆನ್ನೆಯ ಮೇಲೆ ... ಎಂದು ವಿಜಯ್ ಪ್ರಕಾಶ್ ಹಾಡುವಾಗ ಪ್ರೀತಿಯ ಕೆಂಬಣ್ಣದAತೆ ವಿರಾಸತ್ ವೇದಿಕೆ ಕಂಗೊಳಿಸಿತು.


ಗಾಯಕಿ ಐಶ್ವರ್ಯ ರಂಗರಾಜನ್ ಅವರು, `ಅಯಿಗಿರಿ ನಂದಿನಿ' ಹಾಡಿನ ಮೂಲಕ ಭಕ್ತಿ ಲಯ ಹೊಮ್ಮಿಸಿದರು. `ಎಲ್ಲಿ ಕಾಣಿ... ಎಲ್ಲಿ ಕಾಣಿರಾ... ಎಲ್ಲವ್ವ ನಿಮ್ಮ...' ಸಾಲಿನಲ್ಲಿ ಸವದತ್ತಿ ಎಲ್ಲಮ್ಮನ ಸ್ತುತಿಸಿದರು. ಆಗ ಹೊಮ್ಮಿದ್ದು `ಉಧೋ ಉಧೋ' ಎಂಬ ಜೈಕಾರ.

ಮಲೈ ಮಹದೇಶ್ವರನನ್ನು (ಶಿವ) ಆರಾಧಿಸುವ `ಸೋಜುಗಾದ ಸೂಜಿ ಮಲ್ಲಿಗೆ .. ಮಹಾದೇವ ಮಂಡೆ ಮೇಲೆ ದುಂಡು ಮಲ್ಲಿಗೆ' ಎಂದು ಗಾಯಕಿ ಶಾಶ್ವತಿ ಕಶ್ಯಪ್   ಹಾಡಿದಾಗ `ಮಹಾದೇವ... ಮಹಾದೇವ...' ಅನುರಣನ.

ಸರಿಗಮಪ ಖ್ಯಾತಿಯ ಶ್ರೀ ಹರ್ಷ ಅವರು  `ಬೆಂಕಿಯಲ್ಲಿ ಅರಳಿದ ಹೂ' ಚಿತ್ರದ `ತಾಳಿ ಕಟ್ಟುವ ಶುಭ ವೇಳೆ..' ಮಿಮಿಕ್ರಿ ಮಿಶ್ರಿತ ಗಾನ ಹರಿಸಿದರು. ಮೊಲ, ನರಿ, ಜಿಂಕೆ, ಗಿಳಿ, ಆನೆ, ಕೋಗಿಲೆ ಸೇರಿದಂತೆ ಪ್ರಾಣಿ ಪಕ್ಷಿಗಳ ಸ್ವರ ಹೊಮ್ಮಿಸಿದರು.

`ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ' ಹಾಡುವ ಮೂಲಕ ಗಾಯಕ ನಿಖಿಲ್ ಪಾರ್ಥಸಾರಥಿ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ನೆನಪಿಸಿದರು. ಆಗ ಎಲ್ಲೆಡ 'ತನನಾನ ತನನಾನ ತನಾನನ...' ನಿನಾದದ ಕಂಪನ.

ಯುಗಳ ಗೀತೆಯನ್ನು ಗಾಯಕಿ- ಗಾಯಕ ಹಾಡುತ್ತಾರೆ. `ಕೋಟಿಗೊಬ್ಬ' ಸಿನಿಮಾಕ್ಕೆ ವಿಜಯ್ ಪ್ರಕಾಶ್ ಹಾಗೂ ಶ್ರೇಯಾ ಘೋಷಾಲ್, `ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ' ಹಾಡಿದ್ದರು. ವಿರಾಸತ್ ವೇದಿಕೆಯಲ್ಲಿ ಶನಿವಾರ ಖುದ್ದು ಶ್ರೇಯಾ ಘೋಷಾಲ್ ಇದನ್ನು ಹಾಡಿದ್ದರೆ, ಭಾನುವಾರ ವಿಜಯ್ ಪ್ರಕಾಶ್ ಹಾಡಿದರು. ವಿಜಯ್ ಗೆ ಅವರಿಗೆ ಐಶ್ವರ್ಯ ರಂಗರಾಜನ್ ಸಾಥ್ ನೀಡಿದರು.

ಅನಂತರ ತುಳುನಾಡಿನ ಪುಳಕ ನೀಡಿದ ವಿಜಯ್ ಪ್ರಕಾಶ್ ಅವರು `ಗಟ್ಟದಾ ಅಂಚಿದಾಯೆ ತೆಂಕಾಯಿ ಬತ್ತ್ ದ್ ತೂಯೇ... ಆಲೆನಾ ಪೊರ್ಲುಗು ಅಯ್ಯಯ್ಯೋ' ಎಂದು ರಕ್ಷಿತ್ ಶೆಟ್ಟಿ ಅನನ್ಯ ಸಿನಿ ಪ್ರಯೋಗದ `ಉಳಿದವರು ಕಂಡAತೆ'ಯ ದೃಶ್ಯ ಕಾವ್ಯದ ರಾಗ ಹರಿಸಿದರು.

`ಇದು ಚರಿತ್ರೆ ಸೃಷ್ಟಿಸೋ ಅವತಾರ.' ಎಂದು `ಅವನೇ  ಶ್ರೀಮನ್ ನಾರಾಯಣ' ಸಿನಿಮಾದ ಹಾಡು ಹಾಡಿದರು. 

ರಾಬರ್ಟ್ ಸಿನಿಮಾದ ಗೆಳೆತನ ಸಾರುವ `ದೋಸ್ತಾ ಕಣೋ...' ಹಾಡನ್ನು ನಿಖಿಲ್ ಪಾರ್ಥಸಾರಥಿ ಜೊತೆ ವಿಜಯ್ ಪ್ರಕಾಶ್ ಹಾಡಿದರು. `ಸಿಸ್ಟರ್ ಫ್ರಂ ಅನದರ್ ಮದರ್ ..'. ಎಂದು ಹೆಣ್ಣುಮಕ್ಕಳಿಗೆ ಗೌರವ ಸಲ್ಲಿಸಿದರು. ಅಲ್ಲದೇ, `ಇಲ್ಲಿರುವ ಎಲ್ಲರೂ ನನ್ನ ಸಹೋದರಿಯರು. ನನ್ನ ಹೆಂಡತಿ ಒಬ್ಬಳನ್ನು ಬಿಟ್ಟು' ಎಂದು ವಿಜಯ್ ಪ್ರಕಾಶ್ ಹೇಳಿದಾಗ ನಗೆಗಡಲಲ್ಲಿ ಸಭಾಂಗಣ ಮಿಂದೆದ್ದಿತು.

ಬಳಿಕ ಅನುರಾಧಾ ಭಟ್ ಅವರು ಹಿಂದಿಯ `ಮೇರೆ ಡೋಲುನಾ' ಹಾಡಿದರು.


ರಸಸಂಜೆಯ ಕೊನೆ ಘಟ್ಟದಲ್ಲಿ ಹೊಮ್ಮಿದ್ದು ಶಿವನ ರುದ್ರ ನರ್ತನದ ಅಬ್ಬರದ ಸಂಗೀತ. ಶಿವನನ್ನು ಪಂಚಭೂತ ಕಲ್ಪನೆಯಲ್ಲಿ ಕರ್ನಾಟಕ, ಹಿಂದೂಸ್ತಾನಿ, ಜನಪದ, ಪಾಶ್ಚಾತ್ಯ ಪ್ರಕಾರಗಳ ಫ್ಯೂಷನ್ ನಲ್ಲಿ ಪ್ರಸ್ತುತ ಪಡಿಸಿದ  `ಓಂಕಾರ ನಾದವು ಪ್ರವೀಣ್ ಡಿ. ರಾವ್ ಸಂಯೋಜನೆಯಲ್ಲಿ ಮೂಡಿಬಂತು. `ಓಂ ನಮೋ ಶಿವಾಯಾ' ನಾದವು ಮೇರೆ ಏರಿತು.

 ಅಂತ್ಯದಲ್ಲಿ `ಜೈ ಹೋ' ಝೇಂಕಾರವು ಮುಗಿಲು ಮುಟ್ಟಿತು. 2008ರಲ್ಲಿ ಆಸ್ಕರ್ ಗೆದ್ದ `ಜೈ ಹೋ’, ಹಾಡಿಗೆ ಮನ್ನಣೆ ಪಡೆದ ನಾಲ್ಕು ಕಲಾವಿದರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು. ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಹಾಡು ಗ್ರ‍್ಯಾಮಿ ಪ್ರಶಸ್ತಿಯನ್ನು ಸಹ ಗೆದ್ದಿದೆ. ಹೀಗಾಗಿ ವಿಜಯ್ ಪ್ರಕಾಶ್ ಬದುಕಿಗೆ `ಜೈ ಹೋ' ಅನನ್ಯ


ಅರುಣ್ ಕುಮಾರ್ ( ಡ್ರಮ್ಸ್ ), ವೇಣುಗೋಪಾಲ್ ರಾಜು ( ತಬಲ ), ಪ್ರದ್ಯುಮ್ನ ( ತಬಲ ),  ಪ್ರವೀಣ್ ಷಣ್ಮುಗಮ್ (ರಿಧಮ್ ಪ್ಯಾಡ್ಸ್ ), ಸುಮುಖ್ (ಪಾರ್ಕ್ಟ್ಯೂಷನ್ ), ಗೆರ್ರಿ ಅರ್ನೆಸ್ಟ್ (ಲೀಡ್ ಗಿಟಾರ್ ), ಬೃತ್ವ ಕಾಲೆಬ್ (ಬಸ್ಸ್ ಗಿಟಾರ್), ಹರ್ಷವರ್ಧನ್ ರಾಜ್ ( ಕೀ ಬೋರ್ಡ್ ), ಆಕಾಶ್ ಪರ್ವ ( ಕೀ ಬೋರ್ಡ್ ), ಬಿ. ರವಿಶಂಕರ್ (ಮೃದಂಗ), ಪ್ರವೀಣ್ ಡಿ ರಾವ್ (ಸಂಯೋಜನೆ ) ಸಹಕರಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top