ವಿಶ್ವಸಂಸ್ಠೆಯು ವಿಶ್ವದಾದ್ಯಂತ ವಿಕಲಾಂಗ ವ್ಯಕ್ತಿಗಳ ಹಕ್ಕುಗಳು ಮತ್ತು ದೃಷ್ಟಿಕೋನಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ರೋತ್ಸಾಹಿಸಲು ಪ್ರತಿವರ್ಷ ಡಿಸೆಂಬರ್ 3ರಂದು “ವಿಶ್ವ ಅಂಗವಿಕಲರ ದಿನಾಚರಣೆ” ಎಂದು ಘೋಷಣೆ ಮಾಡಿದೆ. ವಿಶ್ವಸಂಸ್ಠೆಯ 2023ರ ಧ್ಯೇಯ ವಾಕ್ಯ: ಸಂಘಟಿತ ಕ್ರಮಗಳನ್ನು ತೆಗೆದುಕೊಂಡು ಅಂಗವಿಕಲ ವ್ಯಕ್ತಿಗಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು(SDGs) ರಕ್ಷಿಸುವುದು ಮತ್ತು ಸಾಧಿಸುವುದು ಆಗಿದೆ.
ಅಂಗವಿಕಲರ ಅಂತರಾಷ್ಟ್ರೀಯ ವರ್ಷವಾದ 1980ರಲ್ಲಿ ಮೈಸೂರಿನಲ್ಲಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ ಸಂಸ್ಥೆಯ ಅಧ್ಯಕರಾಗಿದ್ದ ಶ್ರೀ ಶ್ರೀನಿವಾಸನ್ ರವರು ಶ್ರವಣದೋಷ ಇರುವ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಲು ಒಂದು ವಿಶೇಷ ಶಾಲೆಯನ್ನು ತೆರೆದರು. ನಾಲ್ಕು ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯು ಇಂದು ಬೃಹತ್ ಸಂಸ್ಥೆಯಾಗಿ ಬೆಳೆದಿದೆ.
ಇಂದು ಶಾಲೆಯಲ್ಲಿ ಸುಮಾರು 75ಕ್ಕೂ ಹೆಚ್ಚು ಮಕ್ಕಳು ಹಾಗೂ ತಾಯಂದಿರು ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಶಾಲೆಯಲ್ಲಿ ತರಬೇತಿ ನೀಡುತ್ತಿರುವರು ಯಶಸ್ವಿ ಹಿರಿಯ ತಾಯಂದಿರು. ತಮ್ಮ ಮಗುವಿನ ಭವಿಷ್ಯ ಸುಗಮವಾಯಿತೆಂದು ತಾವು ಮನೆಯಲ್ಲಿ ಸುಮ್ಮನೆ ಕೂರದೆ ಹೊಸದಾಗಿ ಬಂದು ಸೇರುವ ಮಕ್ಕಳಿಗೆ ಹಾಗೂ ತಾಯಂದಿರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಇದೊಂದು ಯಶಸ್ವಿ ವ್ಯವಸ್ಥೆಯಾಗಿದೆ. ಈಗ ಶಾಲೆಯು ಸುಸಜ್ಜಿತ ಕಟ್ಟಡದಲ್ಲಿ ನಡೆಸಲಾಗುತ್ತಿದೆ. 26 ತಾಯಂದಿರಿಗೆ ವಸತಿಯ ವ್ಯವಸ್ಥೆ ಇದೆ.
ಕರ್ನಾಟಕ ಸರ್ಕಾರವು ವಿಕಲಚೇತನರ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್, ಮೈಸೂರು ಸಂಸ್ಥೆಗೆ ರಾಜ್ಯ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಅಂಗವಿಕಲರ ದಿನಾಚರಣೆಯ ದಿನವಾದ ಡಿಸೆಂಬರ್ 3 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು ಪ್ರದಾನ ಮಾಡಲಿದ್ದಾರೆ.
ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್, ಮೈಸೂರು ಸಂಸ್ಥೆಯು 42 ವರ್ಷಗಳಿಂದ ಶ್ರವಣದೋಷವುಳ್ಳ ಮಕ್ಕಳಿಗೆ ಪೂರ್ವ ಪ್ರಾಥಮಿಕ ತರಬೇತಿಯನ್ನು ನೀಡುತ್ತಾ ಬರುತ್ತಿದೆ. 1 ರಿಂದ 6 ವರ್ಷದವರೆಗಿನ ಮಕ್ಕಳಿಗೆ ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಈ ಶಾಲೆಯಲ್ಲಿ ಆರಲ್/ಓರಲ್ ಅಂದರೆ ಆಲಿಸುವುದು/ಮಾತನಾಡುವ ವಿಧಾನದಲ್ಲಿ ತರಬೇತಿ ನೀಡಲಾಗುತ್ತದೆ. ಮಕ್ಕಳಿಗೆ ಮಾತನಾಡುವುದನ್ನು ಕಲಿಸಲಾಗುತ್ತಿದೆ. ಈ ಸಂಸ್ಥೆಯ ವಿಶೇಷತೆ ಏನೆಂದರೆ ಮಕ್ಕಳೊಂದಿಗೆ ಮಕ್ಕಳ ತಾಯಂದಿರೂ ಸಹ ಶಾಲೆಗೆ ಹೋಗಬೇಕಾಗುತ್ತದೆ. ಮಕ್ಕಳೊಂದಿಗೆ ತಾಯಂದಿರಿಗೂ ಸಹ ತರಬೇತಿ ನೀಡಲಾಗುತ್ತದೆ.
ಇಲ್ಲಿ ಸುಮಾರು ಮೂರು ವರ್ಷಗಳ ತರಬೇತಿಯನ್ನು ಪಡೆದ ನಂತರ ಈ ಮಕ್ಕಳು ಸಾಮಾನ್ಯ ಶಾಲೆಗೆ ಸೇರಿ ಸಮನ್ವಯ ಶಿಕ್ಷಣವನ್ನು ಪಡೆಯುತ್ತಾರೆ. ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್, ಮೈಸೂರಿನಲ್ಲಿ ತರಬೇತಿ ಪಡೆದಿರುವ ಮಕ್ಕಳು ಡಾಕ್ಟರ್, ಪಶು ವೈದ್ಯಕೀಯದಲ್ಲಿ, ಕೃಷಿ, ಎಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳಲ್ಲಿ ಪದವಿಯನ್ನು ಮತ್ತು ವಿವಿಧ ವಿಭಾಗಗಳಲ್ಲಿ ಡಿಪ್ಲೋಮ ಅನ್ನು ಪೂರೈಸಿದ್ದಾರೆ. ಪ್ರಸ್ತುತ ಒಬ್ಬ ವಿದ್ಯಾರ್ಥಿ ಹುಬ್ಬಳ್ಳಿಯಲ್ಲಿ ಇರುವ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ.ಗೆ ದಾಖಲಾಗಿದ್ದಾನೆ. ಈ ಶಾಲೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಮತ್ತು ಹೊರ ರಾಜ್ಯಗಳಿಂದಲೂ ತಾಯಂದಿರು ಮಕ್ಕಳನ್ನು ಪೂರ್ವ ಪ್ರಾಥಮಿಕ ಶಾಲೆಯ ತರಬೇತಿಗಾಗಿ ಕರೆತರುತ್ತಾರೆ. ಭಾರತದಲ್ಲೆ ಶ್ರವಣದೋಷವುಳ್ಳ ಮಕ್ಕಳಿಗೆ ತರಬೇತಿ ನೀಡುವಲ್ಲಿ ಈ ಸಂಸ್ಥೆ ಬಹಳ ವಿಶಿಷ್ಟ ಸಂಸ್ಥೆ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9480344297, ಸ್ಥಿರ ದೂರವಾಣಿ ಸಂಖ್ಯೆ 08212544392 ಹಾಗೂ ಜಾಲತಾಣ padcmysuru.in ಅನ್ನು ನೋಡಬಹುದು ಹಾಗೂ ಖುದ್ದಾಗಿ ಶಾಲೆಗೆ ಭೇಟಿಯನ್ನು ನೀಡಬಹುದು.
-ಎಂ. ಮಲ್ಲಿಕಾರ್ಜುನ
ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ