ಹೆಗಲೇರಿದ್ದ ನೆನಪು ದೂರದಲ್ಲಿದೆ. ಗದರಿದ ಮಾತುಗಳು ಮಸುಕಾಗಿದೆ. ನೀನಿಲ್ಲ ನಮ್ಮ ಜೊತೆ ಎಂಬ ದುಃಖ ಮನದಲ್ಲಿದೆ. ಎಲ್ಲಾ ಹೆಣ್ಣು ಮಕ್ಕಳ ಜೀವನದಲ್ಲೂ ಫಸ್ಟ್ ಹೀರೋ ಅಂದ್ರೆ ಅದು ಅಪ್ಪ. ಆ ಹೀರೋ ಮಾತ್ರ ನಮ್ಮ ಜೊತೆ ಈಗಿಲ್ಲ.
ವಿಧಿಯಾಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ನಿನ್ನ ಕಳೆದುಕೊಂಡಾಗ ಏನೂ ಅರ್ಥವಾಗಲಿಲ್ಲ. ದಿನ ಕಳೆದು ದೊಡ್ಡವರಾಗುತ್ತಿದ್ದಂತೆ ನಿನ್ನ ನೆನಪು ಹೆಚ್ಚಾಗಿ ಕಾಡತೊಡಗಿದೆ. ಪ್ರತಿ ಮಕ್ಕಳ ಸಂತೋಷದ ಕ್ಷಣಗಳಲ್ಲೂ ತಂದೆಯ ಪಾತ್ರ ಬಹಳ, ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಆಕೆಯ ಪ್ರತಿ ಖುಷಿ, ದುಃಖದ ಸಮಯದಲ್ಲೂ ತಂದೆ ಜೊತೆಗಿರಬೇಕು ಎಂಬ ಹಂಬಲವಿರುತ್ತದೆ. ಹೀಗೆ ತಂದೆ- ಮಗಳ ಬಾಂಧವ್ಯ ನನ್ನ ಕಣ್ಣ ಮುಂದೆ ಬಂದಾಗ ನೀನಿಲ್ಲ ನಮ್ಮ ಜೊತೆ ಎಂಬ ನೋವು ಕಾಡುತ್ತದೆ.
ಇದ್ದಾಗ ತೋರಿದ ಪ್ರೀತಿ, ಗದರಿದ ಆ ಮಾತುಗಳು ಈಗ ಅಷ್ಟೊಂದು ನೆನಪಿಸಿಕೊಂಡರು ಬಾರದು ಆ ನೆನಪು. ನಿನ್ನ ಪ್ರತಿರೂಪವೇ ನಾ ಎಂಬ ಸಂಬಂಧಿಕರ ಮಾತಿನಲ್ಲಿ ಏನೋ ಖುಷಿ. ನೀ ಇರುತ್ತಿದ್ದರೆ ಅದೆಷ್ಟು ಕೃಷಿ ಕೆಲಸಗಳು ತೋಟದಲ್ಲಿ ನಡೆಯುತ್ತಿದ್ದವೋ, ಅದೇಷ್ಟು ಜೇನಿನ ಸಿಹಿಯನ್ನು ಸವಿಯುತ್ತಿದ್ದೆಯೋ ಎಂಬ ಯೋಚನೆಗಳು ಆಗಾಗ ಮೂಡುತ್ತಿರುತ್ತದೆ. ನೀನು ಎತ್ತಿಕೊಂಡು ಹೋಗಿ ತೋರಿಸಿದ ಆ ಸ್ಕೂಲ್ ಡೇ ಡ್ಯಾನ್ಸ್‌ಗಳು, ನನಗಾಗಿ ನೀನು ಅಂಗನವಾಡಿಯ ಹತ್ತಿರ ಬಂದು ಕಾಯುತ್ತಿದ್ದ ಆ ಸಂಜೆಗಳು, ಮೊದಲನೇ ತರಗತಿಗೆ ಸೇರಿಸಿದ ಆ ಕ್ಷಣ, ಸಂಜೆ ವೇಳೆ ಮಳೆ ಬರುತ್ತದೆ ಎಂದಾಗ ನನ್ನ ಶಾಲೆಯಿಂದ ಕರೆದುಕೊಂಡ ಹೋದ ನೆನಪುಗಳು ಮಾತ್ರ ಎಲ್ಲೋ ದೂರದಲ್ಲಿ ಕಾಣಸಿಗುತ್ತದೆ. ನಿನ್ನ ಹೆಗಲೇರಿ ಆಟ ಆಡಿದ ಕ್ಷಣಗಳು ಮಾತ್ರ ಈಗಲೂ ಹೃದಯದಲ್ಲಿ ಅಚ್ಚೊತ್ತಿದೆ.
ಏನೂ ಅರಿಯದ ಸಮಯದಲ್ಲಿ ನಮ್ಮನ್ನಗಲಿದ ನೀನು, ಏನು, ಎಂಥ ಎಂದು ಅರಿವಾಗದ ಆ ಪುಟ್ಟ ಮನಸ್ಸಿಗೆ ಈಗ ಎಲ್ಲದಕ್ಕೂ ನೀ ನನ್ನ ಜೊತೆಗಿರಬೇಕಿತ್ತು ಎಂದು ಮನಸ್ಸು ಹಾತೊರೆಯುತ್ತದೆ. ಪ್ರತಿ ಖುಷಿಯಲ್ಲೂ ನೀನಿರಬೇಕಿತ್ತು ಎಂಬ ನೋವು, ಪ್ರತಿ ನೋವಲ್ಲೂ ನೀ ಜೊತೆಗಿರುತ್ತಿದ್ದರೆ ಎಂಬ ಹಂಬಲ ಈ ಮನಸ್ಸಿಗೆ. ಹೀಗೆ, ನಿನ್ನ ಜೊತೆ ಕಳೆದ ನೆನಪುಗಳು ಎಲ್ಲೋ ದೂರದ ಅಂಚಿನಲ್ಲಿದೆ..
- ಭಾಗ್ಯಶ್ರೀ.ಕೆ.
ಗೋಳಿತ್ತಟ್ಟು
ಪುತ್ತೂರು, ವಿವೇಕಾನಂದ ಕಾಲೇಜು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ