ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ 11ನೇ ವರ್ಷದ ಪಾದಯಾತ್ರೆ: ಪೂರ್ವಭಾವಿ ಸಭೆ

Upayuktha
0



ಉಜಿರೆ: ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಡಿ.8ರಂದು ನಡೆಯಲಿರುವ 11 ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆಯು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ರಾಮಕೃಷ್ಣ ಸಭಾ ಮಂಟಪದಲ್ಲಿ ನ. 25ರಂದು ನಡೆಯಿತು.


 


ಸಭೆಯನ್ನುದ್ದೇಶಿಸಿ ಮಾತನಾಡಿದ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳದ ಲಕ್ಷ ದೀಪೋತ್ಸವದ ಪಾದಯಾತ್ರೆ ದೇವರ ನಿತ್ಯದ ಪೂಜೆ ಇದ್ದಂತೆ. ಕಳೆದ 10 ವರ್ಷಗಳಿಂದ ಒಂದು ಸಂಕಲ್ಪವನ್ನು ತೆಗೆದುಕೊಂಡು ಈ ಪಾದಯಾತ್ರೆಯನ್ನು ಆರಂಭಿಸಿದ್ದೇವೆ. ಈಗ ಅದು ಲಕ್ಷ ದೀಪೋತ್ಸವದ ಅವಿಭಾಜ್ಯ ಅಂಗ ಆಗಿದೆ. 11ನೆ ವರ್ಷದ ಈ ಪಾದಯಾತ್ರೆಯನ್ನು ನಾವು ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂದರು.


 


ಸಮಾಜದಲ್ಲಿ ಅನ್ಯಾಯ ವಿಜೃಂಭಿಸಿದಾಗ ಅದನ್ನು ಎದುರಿಸಲು ಸಾತ್ವಿಕ ಶಕ್ತಿಗಳು ಸಂಘಟಿತವಾಗಿ ಪ್ರಯತ್ನ ಮಾಡಿ ಗೆದ್ದ ಅನೇಕ ಉದಾಹರಣೆ ನಮ್ಮ ಮುಂದಿದೆ. ಒಂದು ಬಾರಿ ಶ್ರೀ ಸ್ವಾಮಿಯ ನಾಮಸ್ಮರಣೆ ಮಾಡಿಕೊಂದು ಪಾದಯಾತ್ರೆಯನ್ನು ಮಾಡಿದರೆ ಮುಂದಿನ ಒಂದು ವರ್ಷ ನಮ್ಮ ಬದುಕಿನಲ್ಲಿ ಒಳ್ಳೆಯ ಬೆಳವಣಿಗೆಗಳೇ ನಡೆಯುತ್ತವೆ ಅನ್ನುವುದು ಹಲವರ ಅನುಭವಕ್ಕೆ ಬಂದಿದೆ ಎಂದು ಅವರು ಹೇಳಿದರು.


 


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ಒಳ್ಳೆಯ ಕೆಲಸ ಮಾಡುವವರನ್ನು ಉತ್ತೇಜಿಸುವುದು ನಮ್ಮ ಕರ್ತವ್ಯ. ಹೆಗ್ಗಡೆಯವರ ಒಳ್ಳೆಯ ಕೆಲಸಗಳ ಫಲಾನುಭವಿಗಳು ಇಡೀ ತಾಲೂಕಿನಲ್ಲಿ ಹಲವು ಜನ ಇದ್ದಾರೆ. ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಾತ್ರ ಮಹತ್ವದ್ದು. ಕ್ಷೇತ್ರದ ಸಮಾಜಮುಖಿ ಕೆಲಸಗಳಿಂದ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ವ್ಯಾಪಾರ ಇವೆಲ್ಲಕ್ಕೂ ಉತ್ತೇಜನ ಸಿಕ್ಕಿದೆ. ಒಳ್ಳೆಯ ಕೆಲಸ ಮಾಡುವವರಿಗೆ ನಮ್ಮ ಒಗ್ಗಟ್ಟಿನ ಮೂಲಕ ಉತ್ತೇಜನ ನೀಡುವುದು ನಮ್ಮ ಕರ್ತವ್ಯ. ಪಾದಯಾತ್ರೆ ಜನರ ಕಾರ್ಯಕ್ರಮ. ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಪಾದಯಾತ್ರೆ ಒಂದು ಉತ್ತಮ ಅವಕಾಶ ಎಂದರು.


 


ಪಾದಯಾತ್ರೆಯ ಸಂಚಾಲಕ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಸಿ.ಇ.ಒ. ಪೂರನ್ ವರ್ಮ ಮಾತನಾಡಿ, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಪಾದಯಾತ್ರೆ ಸಾಗಲಿದೆ. ಜನಾರ್ದನ ಸ್ವಾಮಿ ದೇವಾಲಯದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ನೇತೃತ್ವದಲ್ಲಿ ಅಪರಾಹ್ನ 3 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದರು.


 


ನಾವು ದೇವರೆಡೆಗೆ ಒಂದು ಹೆಜ್ಜೆ ಇಟ್ಟರೆ, ಭಗವಂತ ನಮ್ಮ ಕಡೆ 10 ಹೆಜ್ಜೆ ಇಡುತ್ತಾನೆ ಅನ್ನುವುದು ನಮ್ಮ ನಂಬಿಕೆ. 10 ವರ್ಷಗಳಲ್ಲಿ ಪಾದಯಾತ್ರೆ ತಾಲೂಕಿನ ಜನರ ಭಕ್ತಿಯ ಸೇವೆಯಾಗಿ ದೇವರಿಗೆ ಸಮರ್ಪಣೆ ಆಗುತ್ತಿದೆ. ದೇವರ ಅನುಗ್ರಹ ಮತ್ತು ಪೂಜ್ಯರ ಆಶೀರ್ವಾದ ಇವೆರಡನ್ನೂ ಪಾದಯಾತ್ರೆ ನಮಗೆ ದೊರಕಿಸಿ ಕೊಡುತ್ತಿದೆ. ಆಚರಣೆ ಕಡಿಮೆ ಆದರೂ ನಂಬಿಕೆ ಕಡಿಮೆ ಆಗಬಾರದು. ಆ ದೃಷ್ಟಿಯಲ್ಲಿ ಪಾದಯಾತ್ರೆ ಒಳ್ಳೆಯ ಕಾರ್ಯ. ನಮ್ಮ ನಂಬಿಕೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸ ಇದರಿಂದ ಆಗುತ್ತಿದೆ ಎಂದರು.


 


ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಲ್ಲಿಗೆಮನೆ ಕಾಸಿಂ ಹಾಗೂ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಹಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡು, ಸಲಹೆ-ಸೂಚನೆ ನೀಡಿದರು. ಪಾದಯಾತ್ರೆಯ ಕರಪತ್ರ ಬಿಡುಗಡೆಗೊಳಿಸಲಾಯಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top