ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿದ್ಯಾರ್ಥಿ ಸಂಘ ಅಗತ್ಯ: ಪ್ರೊ.ಜಯರಾಜ್ ಅಮೀನ್

Upayuktha
0

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ




ಮಂಗಳೂರು: “ವಿದ್ಯಾರ್ಥಿಗಳು ದೃಢ ಮನಸ್ಸು ಹೊಂದಿ ಕಠಿಣ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತಾ ಸಾಧ್ಯ. ವಿವಿ ಸಂಧ್ಯಾ ಕಾಲೇಜು ದುಡಿಯುವ ಯುವ ಮನಸ್ಸುಗಳಿಗೆ ಉನ್ನತ ಶಿಕ್ಷಣದ ಅಪೂರ್ವ ಅವಕಾಶ ಒದಗಿಸಿದೆ. ವಿದ್ಯಾರ್ಥಿ ಸಂಘ ಕೇವಲ ವಿದ್ಯಾರ್ಥಿಗಳ ಆಶೋತ್ತರಗಳನ್ನು ಪೂರೈಸುವುದಷ್ಟೆ ಅಲ್ಲ. ವಿವಿಧ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ, ತೊಂದರೆಗಳು ಆದಾಗ ಅದರ ವಿರುದ್ಧ ಧ್ವನಿ ಎತ್ತಬೇಕು. ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಲು ಇದು ಸಹಕಾರಿ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್ ಹೇಳಿದರು.



ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.



“ಐತಿಹಾಸಿಕ ಮಹತ್ವ ಹೊಂದಿದ ವಿವಿ ಕಾಲೇಜಿನಲ್ಲಿ ಕಲಿಯುವುದು ಹೆಮ್ಮೆಯ ವಿಷಯ. ಹಲವಾರು ಕಾರಣಗಳಿಗಾಗಿ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಲಿಕೆಗೆ ಪೂರಕ ವಾತವರಣ ಇಲ್ಲದೆ ಇರಬಹುದು ಆದರೆ ಕಲಿಯುವ ವಿದ್ಯಾಸಂಸ್ಥೆಗಳಲ್ಲಿಅದ್ಯಾಪಕರ ಬೆಂಬಲದಿಂದ ಉತ್ತಮ ವೇದಿಕೆಗಳು ಸಿಗುತ್ತದೆ. ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಡುವುದರ ಜೊತೆಗೆ ತಮ್ಮ ವ್ಯಕ್ತಿಗತ ಏಳಿಗೆಗೂ ಶ್ರಮಿಸಬೇಕು ಎಂದರು. ಯುವ ವಿದ್ಯಾರ್ಥಿ ಸಮುದಾಯ ಸಮಾಜದ ಪರವಾಗಿಯೂ ಕಾಳಜಿ ಹೊಂದಿ, ಸಮಾಜಕ್ಕಾಗಿ ದುಡಿಯಬೇಕು. ಅಶಕ್ತರಿಗೆ ನೆರವಾಗಬೇಕು ಎಂದರು.



ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ, ಡಾ. ವೈ. ಸಂಗಪ್ಪ ಮಾತನಾಡಿ,” ವಿವಿ ಸಂಧ್ಯಾ ಕಾಲೇಜು ದುಡಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲ್ಪಿಸಿರುವುದು ಅನೇಕರಿಗೆ ವರದಾನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಸಿಕೊಂಡರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ” ಎಂದರು.



ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಎಂ.ಕಾಂ. ಮತ್ತು ಎಂ.ಬಿ.ಎ. (ಐ.ಬಿ) ವಿಭಾಗದ ಸಂಯೋಜಕರಾದ ಪ್ರೊ. ಯತೀಶ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.



ಕಾಲೇಜಿನ ಪ್ರಾಂಶುಪಾಲೆ ಡಾ. ಲಕ್ಷ್ಮೀದೇವಿ ಎಲ್. ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಸಂಚಾಲಕರು ಹಾಗೂ ಎಂ.ಎ. ತುಳು ವಿಭಾಗದ ಸಂಯೋಜಕರಾದ  ಡಾ.ಮಾಧವ ಎಂ.ಕೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಎಂ.ಕಾಂ. ಮತ್ತು ಎಂ.ಬಿ.ಎ. (ಐ.ಬಿ) ವಿಭಾಗದ ಸಂಯೋಜಕರಾದ ಪ್ರೊ. ಯತೀಶ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶಾಂತ್, ಕಾರ್ಯದರ್ಶಿ ನಂದಿತ ಎನ್., ಸಹ ಕಾರ್ಯದರ್ಶಿ ಕೆ,ಆರ್. ಆದಿತ್ಯ, ಲಲಿತ ಕಲಾ ಸಂಘದ ಕಾರ್ಯದರ್ಶಿ ಚೇತನ್ ಕುಮಾರ್  ವಿ., ಸಹಕಾರ್ಯದರ್ಶಿ ಜೀತೇಶ್ ಉಪಸ್ಥಿತರಿದ್ದರು.



ಇತಿಹಾಸ ಉಪನ್ಯಾಸಕಿ ಮಧುಶ್ರೀ ಜೆ. ಶ್ರಿಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಂಚಾಲಕರು ಹಾಗೂ ಎಂ.ಎ. ತುಳು ವಿಭಾಗದ ಸಂಯೋಜಕರಾದ  ಡಾ.ಮಾಧವ ಎಂ.ಕೆ. ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಕನ್ನಡ ಉಪನ್ಯಾಸಕಿಯರಾದ ದುರ್ಗಾ ಮೆನನ್ ಹಾಗೂ ಆಶಾಲತ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶಾಂತ್ ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರತಿಭಾ ಪ್ರದರ್ಶನ ಗಮನ ಸೆಳೆಯಿತು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top