ವಿಡಂಬನೆ: ಭಾರತ ಕ್ರಿಕೆಟ್ ತಂಡದಲ್ಲಿ ಮೀಸಲಾತಿ ತರಬೇಕು- ರಾಷ್ಟ್ರೀಯ ಅಹಿಂಸಾ ಕ್ರಿಕೆಟ್ ಅಭಿಮಾನಿಗಳ ಒತ್ತಾಯ!

Upayuktha
0

 



ಭಾರತ ದೇಶದಲ್ಲಿ ಅತಿ ಹೆಚ್ಚು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮತ್ತು ಭಾರತ ನಿವಾಸಿಯೂ ಆಗಿರುವ ಕೇತನ್ ಅಹಿಂಸಾರವರು ಪರೋಕ್ಷವಾಗಿ ಭಾರತದ ಈಗಿನ ಕ್ರಿಕೆಟ್ ತಂಡವನ್ನು ಸಂಪೂರ್ಣ ಮೀಸಲಾತಿ ಆಧಾರದ ಮೇಲೆ ಬದಲಿಸಲು ಸೂಚಿಸಿದ್ದಾರೆ! ಮೀಸಲಾತಿ ವ್ಯವಸ್ಥೆಯನ್ನು ಕ್ರಿಕೆಟ್ ತಂಡದ ಆಯ್ಕೆಯಲ್ಲಿ ತರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಮೀಸಲಾತಿ ಇದ್ದಿದ್ದರೆ ಕ್ರಿಕೆಟ್‌ನಲ್ಲಿ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು" ಎಂದು ಕೇತನ್ ಅಹಿಂಸಾರವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮಾತಿನ 'ಬ್ಯಾಟ್' ಬೀಸಿದ್ದಾರೆ!


ಕೇತನ್ ಅಹಿಂಸಾರ ದೂರದೃಷ್ಠಿಯ ಚಿಂತನೆಗೆ ಭಾರತೀಯರೆಲ್ಲ 'ಬೋಲ್ಡ್' ಆಗಿದ್ದಾರೆ!


ಭಾರತ ದೇಶದಲ್ಲಿ, ಭಾರತದ ಸಾಮಾಜಿಕ ಕಳಕಳಿಯ ಇರುವ ಏಕೈಕ ವ್ಯಕ್ತಿ ಅಹಿಂಸಾ ಕೇತನ್‌ರವರನ್ನು BCCI ಅಧ್ಯಕ್ಷ'ರನ್' ಆಗಿ ನೇಮಕ ಮಾಡಬೇಕು ಎಂದು ರಾಷ್ಟ್ರೀಯ ಅಹಿಂಸಾ ಕ್ರಿಕೆಟ್ ಅಭಿಮಾನಿಗಳು ಜಾಲ ತಾಣಗಳ 'ಸ್ಟೇಡಿಯಮ್‌'ನಲ್ಲಿ ಎದ್ದು ನಿಂತು ಒತ್ತಾಯಿಸುತ್ತಿದ್ದಾರೆ!


ರಾಷ್ಟ್ರೀಯ ಅಹಿಂಸಾ ಕ್ರಿಕೆಟ್ ಅಭಿಮಾನಿಗಳ ಪ್ರಕಾರ ಅಹಿಂಸಾ ಕೇತನ್‌ರವರ ಅಧ್ಯಕ್ಷತೆಯಲ್ಲಿ BCCI ಹೊಸ ಕ್ರಿಕೆಟ್ ತಂಡವನ್ನು ರಚನೆ ಮಾಡಬೇಕು.


ಹೊಸ ಕ್ರಿಕೆಟ್ ತಂಡ ರಚನೆಗೆ ಅಗತ್ಯವಾದ ಆಟಗಾರರನ್ನು ಆಯ್ಕೆ ಮಾಡಲು ದೇಶಾದ್ಯಂತ ಮರು ಜನ ಗಣತಿ ಆಗಬೇಕು. ಜನ ಗಣತಿ ಮಾಡುವಾಗ ಬರಿ ಜಾತಿಗಣತಿ ಮಾಡದೆ ಎಲ್ಲಾ ವರ್ಗ, ಧರ್ಮ, ವೃತ್ತಿ, ರಾಜಕೀಯ ಇತ್ಯಾದಿ ಮಾನ'ದಂಡ'ಗಳೊಂದಿಗೆ ಗಣತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.


SC, ST, OBC, ಹಿಂದುಳಿದವರು, ದಲಿತರು, ಲಿಂಗಾಯತರು, ಒಕ್ಕಲಿಗರು, ಸಾಮಾನ್ಯ, ಬ್ರಾಹ್ಮಣರು, ಅಲ್ಪಸಂಖ್ಯಾತರು, 

(ಅದರಲ್ಲಿ ಮತ್ತೆ ಪಂಗಡಗಳು, ಉಪ ಪಂಗಡಗಳು) ಬಹು ಸಂಖ್ಯಾತರು (ಅದರಲ್ಲಿನ ಕೆಟಗರಿಗಳು, ಸಬ್ ಕೆಟಗರಿಗಳು) ಆಂಗ್ಲೋ ಇಂಡಿಯನ್, ಬೇರೆ ದೇಶದಿಂದ ವಲಸೆ ಬಂದು, ಇಲ್ಲಿನ ಗ್ರೀನ್ ಕಾರ್ಡ್ ಪಡೆಯದೇ ಇರುವವರು, ನೆರೆ ರಾಷ್ಟ್ರದಿಂದ ನುಸುಳಿ ಬಂದವರು, ಹಳ್ಳಿಗರು, ಪಟ್ಟಣಿಗರು, ನಗರವಾಸಿಗಳು, ಎಡಪಂಥೀಯರು (ಅದರಲ್ಲಿ ಬುದ್ದಿ ಜೀವಿಗಳು, ನಗರ ನಕ್ಸಲೇಟ್, ಕಾಡು ನಕ್ಸಲೇಟ್ ಇತ್ಯಾದಿ), ಬಲ ಪಂಥೀಯರು, ಲೈಂಗಿಕ ಅಲ್ಪ ಸಂಖ್ಯಾತರು, BPL ಕಾರ್ಡ್‌ದಾರರು, APL ಕಾರ್ಡ್‌ದಾರರು, ಶೈಕ್ಷಣಿಕವಾಗಿ ಅವಿದ್ಯಾವಂತರು- LKG ಮಾತ್ರ ಓದಿದವರು- ಏಳನೇ ಕ್ಲಾಸ್ ಡ್ರಾಪೌಟು- ಡಿಗ್ರಿ-ಸ್ನಾತಕೋತ್ತರ ಇತ್ಯಾದಿ ಓದಿದವರು, ಸಾಮಾಜಿಕ ಸ್ಟೇಟಸ್-ವಿವಾಹಿತರು-ಅವಿವಾಹಿತರು- ವಿಚ್ಛೇದಿತರು-ವಿಧುರರು ಇತ್ಯಾದಿ.


ಜೊತೆಗೆ ವೃತ್ತಿ ಆಧಾರಲ್ಲಿ ವೈದ್ಯರು-ಎಂಜಿನಿಯರ್-ಕೃಷಿಕರು-ಉದ್ಯಮಿಗಳು- ಸರಕಾರಿ/ಖಾಸಗಿ ಉದ್ಯೋಗಿಗಳು ಇತ್ಯಾದಿ ಗಣತಿ ಆಗಬೇಕು. ರಾಜಕೀಯವಾಗಿ NDA (ಅದರಲ್ಲಿ ಒಳ ಮೀಸಲು BJP, ದಳ... ಇತ್ಯಾದಿ. ಮತ್ತೆ ಅದರಲ್ಲಿ ಮೂಲ ಬಿಜೆಪಿಗರು, ವಲಸೆ ಬಿಜೆಪಿಗರು, ಮೂಲ ದಳ, ವಲಸೆ ದಳ ಇತ್ಯಾದಿ), ಡಾಟೆಡ್ I.N.D.I.A (ಅದರಲ್ಲಿ ಒಳ ಮೀಸಲು ಕಾಂಗ್ರೆಸ್, ಆಪ್, ಕಮ್ಯುನಿಸ್ಟ್... ಇತ್ಯಾದಿ. ಮತ್ತೆ ಮೂಲ ಕಾಂಗ್ರೆಸ್ಸಿಗರು, ಮೂಲ ಕಮ್ಯುನಿಸ್ಟ್,.. ಇತ್ಯಾದಿ) ಗಣತಿ ಆಗಬೇಕು.


ಅಹಿಂಸಾ ಮಾನಸಿಕ ಅಸ್ವಸ್ಥರು, ಪೆಕರಗಳು, ಹುಚ್ಚರು, ಪರದೇಶಿಗಳು, ಹೀಗೆ ಎಲ್ಲಾ ವರ್ಗದಿಂದಲೂ ತಕ್ಷಣ ದೇಶಾದ್ಯಂತ ಗಣತಿ ನೆಡೆಯಬೇಕು.


ಈ ಎಲ್ಲ ಗಣತಿಯ ಆಧಾರದ ಮೇಲೆ, ಪ್ರತೀ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲಿ ಪ್ಲೇಯರ್‌ಗಳ ಆಯ್ಕೆ ಇರಬೇಕು" ಎಂದು ರಾಷ್ಟ್ರೀಯ ಅಹಿಂಸಾ ಕ್ರಿಕೆಟ್ ಅಭಿಮಾನಿಗಳ ಒಕ್ಕೂಟ, ಕೇತನ್ ಅಹಿಂಸಾರ ಮಾತನ್ನು ಕ್ರಿಕೆಟ್ ಬ್ಯಾಟಿನಂತೆ ಎತ್ತಿ ಹಿಡಿದು ಒತ್ತಾಯಿಸಿದೆ!


ಅದೇ ರೀತಿ ಕ್ರಿಕೆಟ್ ತಂಡದ ನಾಯಕ, ಉಪನಾಯಕ, ಅಂಪೇರ್ (ಫಸ್ಟ್, ಸೆಕೆಂಡ್, ಥರ್ಡ್!) ಗಳ ಆಯ್ಕೆಯಲ್ಲೂ ಸಾಮಾಜಿಕ ನ್ಯಾಯ ದೃಷ್ಟಿಯಿಂದ ಗಣತಿ ಆಧಾರದ ಮೇಲೆ ಮೀಸಲಾತಿ ತರಬೇಕು.


ವೀಕ್ಷಕ ವಿವರಣೆಗಾರರಿಗೂ, ಆಟ ನೋಡಲು ಬರುವವರಿಗೂ ಎಂಟ್ರಿ ಮೀಸಲಾತಿ ಆಧಾರದ ಮೇಲೆ ಇರಬೇಕು. ಮೀಸಲಾತಿ ಆಧಾರದ ಮೇಲೆ, ಕೆಲವು ಕೆಟಗರಿಯವರಿಗೆ ಟಿಕೇಟ್ ದರದಲ್ಲಿ ಉಚಿತ, ಸಬ್ಸಿಡಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಮೇಲ್ವರ್ಗದವರಿಗೆ, ಆರ್ಯರಿಗೆ, ಕೇತನ್ ಅಹಿಂಸಾ ಸೂಚಿಸುವ ಬ್ರಾಹ್ಮಣರಿಗೆ, ಬ್ರಾಹ್ಮಣ್ಯದವರಿಗೆ ಪೂರ್ಣ ಟಿಕೇಟ್ ದರ + GST ವಿಧಿಸಬೇಕು! 


ಸ್ಟೇಡಿಯಂ ಸೆಲೆಕ್ಟ್ ಮಾಡುವಾಗಲೂ ಮೀಸಲಾತಿಯನ್ನು ಪರಿಗಣಿಸಬೇಕು!


ಇನ್ನು ಕ್ರಿಕೆಟ್ ತಂಡದ ಆಟಗಾರರ ಬಟ್ಟೆಯಲ್ಲಿನ ನೀಲಿ ಬಣ್ಣವನ್ನು ಬದಲಿಸಬೇಕು! ಅಲ್ಪಸಂಖ್ಯಾತರು, ವೃತ್ತಿ, ಜಾತಿ, ಧರ್ಮಗಳ ಆಧಾರದಲ್ಲಿ ಮೀಸಲಾತಿಯಲ್ಲಿ ಆಯ್ಕೆಯಾದ ಪ್ರತೀ ಆಟಗಾರನಿಗೂ ಅವರವರ ವರ್ಗಕ್ಕೆ ಅನುಗುಣವಾಗಿ, ಬೇರೆ ಬೇರೆ ಬಣ್ಣದ ಬಟ್ಟೆಯನ್ನು ಯೂನಿಫಾರಮ್ ಆಗಿ ನಿಗದಿಪಡಿಸಬೇಕು.


ಇನ್ನು ಆಟದ ನಿಯಮಗಳನ್ನು ಮೀಸಲಾತಿಯ ಆಧಾರದ ಮೇಲೆ ಮರು ಪರಿಶೀಲನೆ ಮಾಡಿ ಆಮೂಲಾಗ್ರವಾಗಿ ಬದಲಿಸಬೇಕು. ಬೌಲಿಂಗ್‌ನಲ್ಲಿ ಕೆಲವು ಕೆಟಗರಿಯವರಿಗೆ ಓವರ್‌ಗೆ ಹನ್ನೆರಡು ಬಾಲು ಕೊಡಬೇಕು. ಬ್ಯಾಟಿಂಗ್‌ನಲ್ಲಿ ಕೆಲವು ಕೆಟಗರಿಯವರು 35-40 ರನ್ ಮಾಡಿದರೂ, ಅದನ್ನು ಸೆಂಚುರಿ ಅಂತ ಡಿಕ್ಲೇರ್ ಮಾಡುವಂತೆ ನಿಯಮಗಳನ್ನು ಸಡಿಲಿಸಬೇಕು!!! 


ಮೀಸಲಾತಿ ಆಧಾರದ ಮೇಲೆ ಬ್ಯಾಟಿನ ತೂಕ, ಬ್ಯಾಟಿನ ಅಗಲ, ಬಾಲಿನ ಸೈಜ್‌ಗಳಲ್ಲೂ ಬದಲಾವಣೆಗಳನ್ನು ಮಾಡಬೇಕು. ಫೀಲ್ಡ್ ಡೈಮೆನ್ಷನ್‌ಲ್ಲಿ ಕೂಡ!


ಮೀಸಲಾತಿಗಳ ವ್ಯವಸ್ಥೆಯಿಂದ ಆಸ್ಟ್ರೇಲಿಯದವರು ಕಪ್ ಗೆದ್ದಿರುವ ಸಾಧ್ಯತೆ ಇರುವುದರಿಂದ ಕೇತನ್ ಅಹಿಂಸಾ ಅಧ್ಯಕ್ಷತೆಯ ನೇತೃತ್ವದಲ್ಲಿ BCCI ಮಂಡಳಿಯನ್ನು ಪುನರ್ ರಚನೆ ಮಾಡಬೇಕು. (BCCI ಮಂಡಳಿಯಲ್ಲೂ ಮೀಸಲಾತಿ ಕಡ್ಡಾಯವಾಗಿರುವುದು ಕಡ್ಡಾಯ!!) ಮತ್ತು ಕೇತನ್ ಅಹಿಂಸಾ ಅಧ್ಯಕ್ಷತೆಯ ನೇತ್ರತ್ವದಲ್ಲಿ BCCI ಮಂಡಳಿ ತಕ್ಷಣ ಆಸ್ಟ್ರೇಲಿಯಕ್ಕೆ ಅಧ್ಯಯನಕ್ಕೆ ತೆರಳಿ, ಕ್ರಿಕೆಟ್ ತಂಡಕ್ಕೆ ಮೀಸಲಾತಿ ಹೇಗೆ ಪರಿಣಾಮಕಾರಿ ಎಂದು ಸಮಗ್ರ ವರದಿ ತಯಾರಿಸಲಿ. ಆಸ್ಟ್ರೇಲಿಯ ಅಲ್ಲದೆ, ಇದುವರೆಗೆ ಕ್ರಿಕೆಟ್‌ನಲ್ಲಿ ಮೀಸಲಾತಿಯಿಂದ ವರ್ಲ್ಡ್‌ ಕಪ್ ಗೆದ್ದ ಎಲ್ಲ ದೇಶಗಳಿಗೂ ಅಗತ್ಯಬಿದ್ದರೆ ಅಹಿಂಸಾ BCCI ತಂಡ ಅಧ್ಯಯನ ಕೈಗೊಳ್ಳಲಿ ಎಂದು ಅಹಿಂಸಾ ಕ್ರಿಕೆಟ್ ಅಭಿಮಾನಿಗಳ ಒಕ್ಕೂಟ ಒತ್ತಾಯಿಸಿದೆ.


ಮುಂದಿನ ಸಲ ಕಪ್ ನಮ್ದೆ!

ಮೀಸಲಾತಿಗಳ ವ್ಯವಸ್ಥೆಯಿಂದ ಕಪ್ ಗೆದ್ದಿರುವ ಆಸ್ಟ್ರೇಲಿಯ, ಗೆಲುವಿನ ರಹಸ್ಯ ಬೇಧಿಸಿದ ಭಾರತೀಯ ನಿವಾಸಿಯ ಇನ್ಸ್ಟಾಗ್ರಾಮ್ ಹೇಳಿಕೆಗೆ ಬೆಚ್ಚಿಬಿದ್ದಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಟೈಮ್ಸ್ ವರದಿ ಮಾಡಿದೆ!


- ಅರವಿಂದ ಸಿಗದಾಳ್, ಮೇಲುಕೊಪ್ಪ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top