ಬೆಂಗಳೂರು: ಈ ವರ್ಷ ಅಭೂತಪೂರ್ವ ಬರಗಾಲ. ಬಹುತೇಕ ಹೊಲದ ಬೆಳೆಗಳು ಬತ್ತಿ ಹೋಗಿವೆ. ಮುಂದಿನ ಸರದಿ ಊರತುಂಬ ನಾಟಿಯಾಗಿರುವ ಅಡಿಕೆಯದು. ಗ್ರಾಮೀಣ ಉಪ ಉದ್ಯೋಗ– ಆದಾಯದ ಮೂಲಗಳ ಸೃಷ್ಟಿ ಇಂದಿನ ಅನಿವಾರ್ಯತೆ. ಈ ನಿಟ್ಟಿನಲ್ಲಿ ಫಾರ್ಮ್ ಟಿವಿ ನಾಟಿ ಕೋಳಿ ಸಾಕಣೆ ಅಭಿಯಾನ ಆರಂಭಿಸಿದೆ. ಸಮಾಜದ ಗಣ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸಹಕಾರ ಇದಕ್ಕಿದೆ. ಕೋಕೋ, ಕಾಳುಮೆಣಸು, ಕಾಫಿ, ಜಾಯಿಕಾಯಿ ಮುಂತಾದ ಹೆಚ್ಚು ಆದಾಯದ ಬೆಳೆಗಳನ್ನು ರಾಜ್ಯದ ತುಂಬೆಲ್ಲ ಪಸರಿಸಿ, ಅಡಿಕೆಯ ವ್ಯಾಮೋಹವನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡುವಲ್ಲಿ ಫಾರ್ಮ್ ಟಿವಿ ಯಶಸ್ಸು ಕಂಡಿದೆ. ಈಗಷ್ಟೇ ಆರಂಭವಾದ ನಾಟಿ ಕೋಳಿ ಅಭಿಯಾನಕ್ಕೂ ವೀಕ್ಷಕ ರೈತರಿಂದ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಗ್ರಾಮೀಣ ಕೋಳಿಗಳ ಕುರಿತಂತೆ ಈಗಾಗಲೇ ಫಾರ್ಮ ಟಿವಿಯಲ್ಲಿ ಹಲವಾರು ಮಾಹಿತಿಪೂರ್ಣ ಕಾರ್ಯಕ್ರಮಗಳು ಮತ್ತು ಶ್ರಮಜೀವಿ ಕೃಷಿ ಮಾಸ ಪತ್ರಿಕೆಯಲ್ಲಿ ವಿವರ ಲೇಖನ ಪ್ರಕಟಿಸಲಾಗಿದೆ.
ಗ್ರಾಮೀಣ ಕೋಳಿಗಳ ಸಾಕಣೆ ಈಗಾಗಲೇ ತಮಿಳು ನಾಡು ಮತ್ತು ಆಂಧ್ರಗಳಲ್ಲಿ ಒಂದು ಜನಪ್ರಿಯ ಮಿಲಿಯನ್ ಡಾಲರ್ ಉದ್ಯಮ. ತಮಿಳುನಾಡಿನ ಕೋಳಿ ಮರಿ ಉತ್ಪಾದಕರು ಕರ್ನಾಟಕದ ಮೂಲೆಮೂಲೆ ತಲುಪಿ ಮರಿ ಮತ್ತು ದೊಡ್ಡ ಕೋಳಿಗಳನ್ನು ಮಾರುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಈ ಕೋಳಿಗಳಿಗೆ ದೊಡ್ಡ ಸಂಖ್ಯೆಯ ಗ್ರಾಹಕರಿದ್ದಾರೆ. ಒಂದು ನಾಟಿ ಕೋಳಿ 1000 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ನಮ್ಮ ರೈತರು ಸಾಕಣೆಯಲ್ಲಿ ತೊಡಗಿಕೊಳ್ಳದಿರುವುದರಿಂದ ದೊಡ್ಡ ಪ್ರಮಾಣದ ಆದಾಯ ತಮಿಳು ರೈತರ ಪಾಲಾಗುತ್ತಿದೆ. ನಮ್ಮ ರೈತರಿಗೆ ಅಗತ್ಯ ತಾಂತ್ರಿಕ ಮಾಹಿತಿ, ತರಬೇತಿ, ಸೂಕ್ತ ತಳಿಯ ಮರಿ ಸಿಗುವಂತೆ ಮಾಡಿ, ನಮ್ಮದೇ ರೈತರ ಆದಾಯ ವೃದ್ಧಿಸುವುದು ಫಾರ್ಮ್ ಟಿವಿಯ ಈ ಅಭಿಯಾನದ ಉದ್ದೇಶ. ರಾಜ್ಯದ ಪಶುಪಾಲನಾ ಇಲಾಖೆ ಮತ್ತು ಸರ್ಕಾರ ಪ್ರಾಯೋಜಿತ ಪೌಲ್ಟ್ರಿ ಫೆಡರೇಶನ್ ಗಳಿದ್ದರೂ ಎಲ್ಲರಿಗೂ ಗೊತ್ತಿರುವ ಕಾರಣಗಳಿಂದ ನಾಟಿ ಕೋಳಿ ಸಾಕಣೆ ಇತರೆ ರಾಜ್ಯಗಳಂತೆ ನಮ್ಮಲ್ಲಿ ಜನಪ್ರಿಯವಾಗಿಲ್ಲ.
ಫಾರ್ಮ್ ಟಿವಿಯ ಈ ಅಭಿಯಾನದ ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೊಂದರಂತೆ ಯುವ ಉದ್ಯಮಿಗಳನ್ನು ಉತ್ತೇಜಿಸಿ ಚಿಕ್ಕ ಪ್ರಮಾಣದ ಹ್ಯಾಚರಿ ಸ್ಥಾಪಿಸಲಾಗುತ್ತದೆ. ಅವರಿಗೆಲ್ಲ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಸಂಸ್ಥೆ ಸಿ.ಪಿ.ಡಿ.ಒ. ಸೂಕ್ತ ತಳಿಯ ಮರಿಯಾಗಬಲ್ಲ ಮೊಟ್ಟೆ ಒದಗಿಸುತ್ತದೆ. ಈ ಹ್ಯಾಚರಿಗಳಲ್ಲಿ ತಯಾರಾದ ಮರಿಗಳು ಆಸಕ್ತ ರೈತರ ಅಂಗಳದಲ್ಲಿ ಬೆಳೆದು ಸ್ಥಳೀಯ ನಾಟಿ ಕೋಳಿ ಪ್ರಿಯರ ಹೊಟ್ಟೆ ಸೇರುತ್ತದೆ. ಮೂರ್ನಾಲ್ಕು ಗ್ರಾಮೀಣ ಕೋಳಿ-ಮೊಟ್ಟೆ ಇಂಟಿಗ್ರೇಶನ್ ಕಂಪನಿಗಳೂ ರೈತರಿಂದ ಒಪ್ಪಂದದ ಮೇಲೆ ನಾಟಿ ಕೋಳಿ-ಮೊಟ್ಟೆ ಖರೀದಿಸಲು ಮುಂದೆ ಬಂದಿವೆ. ಈ ಎಲ್ಲ ಹ್ಯಾಚರಿಗಳು ಮತ್ತು ಸಾಕಣೆದಾರರನ್ನು ಸೇರಿಸಿ ರಾಜ್ಯ ಮಟ್ಟದಲ್ಲಿ ಒಂದು ನಾಟಿ ಕೋಳಿ ಕಂಪನಿ ಸ್ಥಾಪನೆಯ ಗುರಿ ಹೊಂದಲಾಗಿದೆ. ಈ ಗ್ರಾಮೀಣ ಕೋಳಿ ಉದ್ದಿಮೆದಾರರಿಗೆ ಸಾಲ ಸೌಲಭ್ಯ ಒದಗಿಸಲು ಶ್ರೀ ಮನೋಹರ ಮಸ್ಕಿಯವರ ಸುಕೋ ಬ್ಯಾಂಕ್ ಮುಂದೆಬಂದಿದೆ. ಅಂದಹಾಗೆ ಇದರಲ್ಲಿ ಫಾರ್ಮ್ ಟಿವಿಯ ಯಾವುದೇ ವ್ಯಾವಹಾರಿಕ ಪಾಲುದಾರಿಕೆ ಇರುವುದಿಲ್ಲ. ಬದಲಿಗೆ ಎಲ್ಲರನ್ನೂ ಒಂದು ವೇದಿಕೆಯಲ್ಲಿ ತರುವ ನೋಡಲ್ ಏಜನ್ಸಿಯ ಪಾತ್ರ ಮಾತ್ರ ಫಾರ್ಮ್ ಟಿವಿಯದು. ಮತ್ತೆ ಇದೂ ಬೆಂಗಳೂರು ಕೇಂದ್ರಿತವಾಗದಂತೆ ಆರಂಭದಿಂದಲೇ ಎಚ್ಚರಿಕೆ ವಹಿಸಲಾಗಿದೆ. ಅಂದಹಾಗೆ ಇದು ಪೂರ್ತಿ ಖಾಸಗೀ ನೆಲೆಯಲ್ಲಿ ನಡೆಯುವ, ಆದರೆ ರಾಜ್ಯದ ಎಲ್ಲ ಭಾಗದ ಎಲ್ಲ ಆಸಕ್ತ ರೈತರನ್ನು ಒಳಗೊಳ್ಳುವ, ಉದ್ಯೋಗಾವಕಾಶ – ಆದಾಯ ಸೃಷ್ಟಿಸುವ ಅಭಿಯಾನ. ಇದರಲ್ಲಿ ನೇರವಾಗಿ ಸರ್ಕಾರದ ಇಲಾಖೆಗಳ ಪಾತ್ರ ಇರುವುದಿಲ್ಲ.
ನಾಟಿ ಕೋಳಿ ಹ್ಯಾಚರಿ ಮಾಡಲು, ಸಾಕಣೆ ಕೈಗೊಳ್ಳಲು ಆಸಕ್ತಿಯಿರುವವರು ಫಾರ್ಮ್ ಟಿವಿ ಸಂಪರ್ಕಿಸಬಹುದು. 9980534320, 8073652196
ವರದಿ: ಡಾ. ವೆಂಕಟ್ರಮಣ ಹೆಗಡೆ, ಪ್ರಧಾನ ಸಂಪಾದಕ, ಫಾರ್ಮ್ ಟಿವಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ