ಪಣಜಿ: ಕನ್ನಡ ಶಾಲೆಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ನಾವು ಸಿದ್ಧರಿದ್ದೇವೆ. ಇಷ್ಟೇ ಅಲ್ಲದೆಯೇ ಎಲ್ಲ ಕನ್ನಡ ಸಂಘಟನೆಗಳೂ ಒಂದಾಗಿ ಗೋವಾದಲ್ಲಿರುವ ಎಲ್ಲ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಗೋವಾದಲ್ಲಿ ಕನ್ನಡಿಗರ ಮಕ್ಕಳು ಪ್ರಾಥಮಿಕ ಕನ್ನಡ ಶಿಕ್ಷಣದಿಂದ ಎಂದಿಗೂ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕೂಡ ನಮ್ಮೆಲ್ಲರ ಪ್ರಯತ್ನ ಮುಂದುವರೆಯಬೇಕು ಎಂದು ಗೋವಾ ಬಿಜೆಪಿ ಕರ್ನಾಟಕ ಸೆಲ್‍ನ ದಕ್ಷಿಣ ಗೋವಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಕರೆ ನೀಡಿದರು.
ಗೋವಾದ ಸಾಸ್ಮೋಲಿಂ ಬೈನಾದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮೋಹನ್ ಶೆಟ್ಟಿ ರವರು ಕೊಡುಗೆಯಾಗಿ ನೀಡಿದ ಎರಡು ಶೌಚಾಲಯ ಕಟ್ಟಡವನ್ನು ರಾಜೇಶ್ ಶೆಟ್ಟಿ ಉಧ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಈ ಕನ್ನಡ ಶಾಲೆಗೆ ತುರ್ತಾಗಿ ಎರಡು ಶೌಚಾಲಯಗಳ ಅವಶ್ಯಕತೆಯಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೋವಾ ಕರ್ನಾಟಕ ಸೆಲ್ ಕನ್ವೀನರ್ ಮೋಹನ್ ಶೆಟ್ಟಿ ರವರು ಕೂಡಲೇ ಕನ್ನಡ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಗೋವಾದಲ್ಲಿ ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದ ಹಲವು ವಿದ್ಯಾರ್ಥಿಗಳು ಇಂದು ನ್ಯಾಯಾಧೀಶರಾಗಿ ಹಾಗೂ ವಿವಿಧ ಸರ್ಕಾರಿ ಉನ್ನತ ಹುದ್ಧೆಯಲ್ಲಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ರಾಜೇಶ್ ಶೆಟ್ಟಿ ನುಡಿದರು.
ಈ ಸಂದರ್ಭದಲ್ಲಿ ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜು ನಾಟೀಕರ್, ಕರವೇ ಕಾರ್ಯದರ್ಶಿ ಶಿವಾನಂದ ಮಸಬಿನಾಳ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಸಿದ್ಧು ಹಗೇದಾಳ, ಕರವೇ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡರ್, ಸಂಗಮೇಶ ರಮೇಶ ಮತ್ತಿತರರು ಉಪಸ್ಥಿತರಿದ್ದರು. ನವೆಂಬರ್ 14 ರಂದು ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಚಿತ್ರಕಲಾ ಸ್ಫರ್ಧೆ ಹಾಗೂ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಎಸ್‍ಎಸ್ ಬಿಂಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಆರ್ ಎಸ್ ಗೌಡರ್ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕರಾದ ವನಜಾ ರೋಸಲಿಂ ವಂದನಾರ್ಪಣೆಗೈದರು. ಶಾಲೆ ಅಗತ್ಯ ಸಹಾಯ ಸಹಕಾರ ನೀಡಿದ ದಾನಿಗಳಿಗೆ ಶಾಲೆಯ ಪರವಾಗಿ ಹಾಗೂ ಆಡಳಿತ ಮಂಡಳಿಯ ಪರವಾಗಿ ಶಾಲೆಯ ಮುಖ್ಯಗುರುಗಳಾದ ಪಿವಿ.ಪಾಟೀಲ್ ಧನ್ಯವಾದ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ