ಮನ ಸೆಳೆಯುವ ಮಂದಾರ, ದೇವಲೋಕದ ಪುಷ್ಪ- ಪಾರಿಜಾತ

Upayuktha
0

ಅಡುಗೆ ಮನೆಯಲ್ಲಿ ರಾತ್ರಿಯ ಅಡುಗೆ ತಯಾರಿಯಲ್ಲಿ ತೊಡಗಿದ್ದಾಗ ಕಿಟಕಿಯಿಂದ ಗಾಳಿ ಬೀಸಿದಾಗೊಮ್ಮೆ ಘಮ್ಮನೆ ಕಂಪನ್ನು ಹೊತ್ತು ತರುತ್ತಿತ್ತು ಆ ಹೂವಿನ ಮರ.ಹಾಗೆ ಸುಗಂಧ ಸೂಸುತಿದ್ದ ಗಿಡವೇ ಪಾರಿಜಾತದ ಮರ. ಸಂಜೆಯ ನಂತರ ಅರಳುವ ಕೇಸರಿ ದಿಂಡನ್ನು ಹೊಂದಿರುವ, ಹಾಲಿನ ಕೆನೆಯ ಬಣ್ಣದ ದಳಗಳನ್ನು ಹೊಂದಿರುವ ಈ ಪುಷ್ಪವನ್ನು ಇಂಗ್ಲಿಷ್ನಲ್ಲಿ ನೈಟ್ ಜಾಸ್ಮಿನ್ ಎಂದು ಕರೆಯಲ್ಪಡುವ ಕನ್ನಡದಲ್ಲಿ ಹರಸಿಂಗಾರ, ಶಿವುಲಿ, ಮಂದಾರ, ಹಿಂದಿಯಲ್ಲಿ ಶೆಫಾಲಿ ಎಂದು ಕರೆಯಲ್ಪಡುವ ಈ ಹೂವಿನ ಕಂಪು ಬಾಲ್ಯದ ಹಲವಾರು ನೆನಪುಗಳನ್ನು ಹೊತ್ತು ತರುತ್ತದೆ.



ನಾವು 10ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ವಿಷಯದ ಟ್ಯೂಷನ್ ಗೆ ಹೋಗುತ್ತಿದ್ದ ಮೇಷ್ಟ್ರ ಮನೆಯಲ್ಲಿ ಕಟ್ಟೆಗೆ ತಾಗಿಕೊಂಡಂತೆ ಇರುವ ಪಾರಿಜಾತ ಮರದ ಹೂಗಳನ್ನು ಕಟ್ಟೆಯ ಮೇಲೆ ಪೇಪರ್ ಹಾಸಿ ಸಂಗ್ರಹಿಸಿ ಪೂಜೆಗೆ ಬಳಸುತ್ತಿದ್ದರು. ಸಂಜೆಯ ಸಮಯದಲ್ಲಿ, ಬೆಳಗಿನ ಜಾವದಲ್ಲಿ ಪಾರಿಜಾತದ ಘಮಲು  ಮನವನ್ನು ಆಹ್ಲಾದಗೊಳಿಸುತ್ತವೆ. ಜೊತೆಗೆ ನೆಲಕ್ಕೆ ಬಿದ್ದಿರುತ್ತಿದ್ದ ಪಾರಿಜಾತ ಹೂಗಳು ಅತ್ಯಂತ ಸುಂದರವಾಗಿ ಕಂಗೊಳಿಸುತ್ತವೆ. ಅಂತೆಯೇ ಪಾರಿಜಾತದ ಮರದ ಬಳಿ ದೇವಲೋಕದ ಅಪ್ಸರೆಯರು ತಮ್ಮ ಆಯಾಸ ಪರಿಹರಿಸಿಕೊಳ್ಳಲು ಬಂದು ಕುಳಿತುಕೊಳ್ಳುತ್ತಿದ್ದರಂತೆ ಎಂದು ನಮ್ಮ ಮೇಷ್ಟ್ರ ಪತ್ನಿ ಹೇಳುತ್ತಿದ್ದರು.



ಇನ್ನು ಪಾರಿಜಾತ ಹೂವಿನ ಕುರಿತು ಹೇಳುವುದಾದರೆ, ಇದು ಸಮುದ್ರ ಮಂಥನದಲ್ಲಿ ದೊರೆತ ವೃಕ್ಷವಾಗಿದೆ. ಇಂದ್ರ ದೇವನು ಸ್ವರ್ಗಕ್ಕೆ ತೆಗೆದುಕೊಂಡು ಹೋಗಿ ನೆಟ್ಟನು. ಇಂದ್ರನ ಬಳಿ ಇದ್ದ ಈ ಗಿಡದ ಹೂಗಳನ್ನು ಮಾಲೆ ಮಾಡಿ ಮಹರ್ಷಿ ನಾರದರು ಶ್ರೀಕೃಷ್ಣನಿಗೆ ತಂದು ಕೊಟ್ಟರಂತೆ. ಆಗ ಶ್ರೀಕೃಷ್ಣನು ಆ ಮಾಲೆಯನ್ನು ಅಲ್ಲಿಯೇ ತನ್ನ ಪಕ್ಕದಲ್ಲಿ ಕುಳಿತಿದ್ದ ರುಕ್ಮಿಣಿಯ ಕೊರಳಿಗೆ ಹಾಕಿದನು. ಆಗ ತಾನೇ ಅಲ್ಲಿಗೆ ಬಂದ ಸತ್ಯಭಾಮೆಯು ಇದನ್ನು ನೋಡಿ ನನಗೂ ಕೂಡ ಆ ಪಾರಿಜಾತದ ಮರ ಬೇಕೆಂದು ಆಶಿಸಿದಳು. ಆಗ ಶ್ರೀ ಕೃಷ್ಣನು ಆ ಪಾರಿಜಾತದ ಗಿಡವನ್ನು ಇಂದ್ರನಿಂದ ಪಡೆದು ಭೂಲೋಕದಲ್ಲಿ ನೆಡಿಸಿದನೆಂದು ಹೇಳುತ್ತಾರೆ. ಕೃಷ್ಣನು ಕೇಳಿದಾಗ ಆತನಿಗೆ ಎದುರು ಹೇಳಲು ಹಿಂಜರಿದು ಪಾರಿಜಾತದ ಗಿಡವನ್ನು ಕೊಟ್ಟ ಇಂದ್ರ ಕೃಷ್ಣನಿಗೆ ಏನು ಹೇಳಲಾಗದಿದ್ದರೂ ಪಾರಿಜಾತದ ಹೂಗಳು ರಾತ್ರಿಯ ಸಮಯದಲ್ಲಿ ಮಾತ್ರ ಅರಳಿ ಮುಂಜಾನೆ ಸೂರ್ಯೋದಯದ ಸಮಯಕ್ಕೆ ನೆಲಕ್ಕೆ ಬಿದ್ದು ಬೀಳುವಂತಾಗಲಿ ಎಂದು ಶಪಿಸಿದನು. ಆದರೆ ಕೃಷ್ಣ ಮತ್ತು ರುಕ್ಮಿಣಿಯರಿಗೆ ಅತ್ಯಂತ ಪ್ರಿಯವಾದ ಈ ಹೂವಿನ ಗಿಡವನ್ನು ಶ್ರೀಕೃಷ್ಣನು ಸತ್ಯಭಾಮೆ ಮತ್ತು ರುಕ್ಮಿಣಿಯರಿಬ್ಬರಿಗೂ ದೊರೆಯುವಂತೆ ನೆಟ್ಟನು. ಸಾಮಾನ್ಯವಾಗಿ ನೆಲಕ್ಕೆ ಬಿದ್ದ ಹೂವುಗಳನ್ನು ದೇವರ ಪೂಜೆಗೆ ಆದರೆ ಶ್ರೀ ಕೃಷ್ಣ ಮತ್ತು ರುಕ್ಮಿಣಿಗೆ ಅತ್ಯಂತ ಪ್ರಿಯವಾದ ಈ ಮಂದಾರ ಕುಸುಮವನ್ನು ನೆಲಕ್ಕೆ ಬಿದ್ದರೂ ಪೂಜೆಗೆ ಉಪಯೋಗಿಸುತ್ತಾರೆ.


ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀದೇವಿಯರಿಗೆ ಅತ್ಯಂತ ಪ್ರೀತಿಯ ಕುಸುಮವಾದ ಈ ಮಂದಾರ ಕುಸುಮವನ್ನು ಶೃಂಗಾರ ಹಾರವೆಂದು ಕರೆದು ಇವುಗಳನ್ನು ದೇವರಿಗೆ ಪೂಜಿಸಿ ಅರ್ಪಿಸುವುದರಿಂದ ಮನೆಯಲ್ಲಿ ಧನ, ಧಾನ್ಯ, ಸಂಪತ್ತು ಸಮೃದ್ಧಿಯಾಗುವುದು ಎಂಬ ನಂಬಿಕೆಯು ನಮ್ಮ ಜನರಲ್ಲಿದೆ. ಅಂತೆಯೇ ಹಲವಾರು ಪೌರಾಣಿಕ ಐತಿಹ್ಯಗಳನ್ನು ಹೊಂದಿರುವ ಈ ಪಾರಿಜಾತದ ಮರವನ್ನು ಅಯೋಧ್ಯೆಯ ರಾಮ ಮಂದಿರದ ನಿರ್ಮಾಣ ಕಾರ್ಯದ ನಿಮಿತ್ತದ ಭೂಮಿ ಪೂಜೆಯ ಸಮಯದಲ್ಲಿ 2020 ಅಗಸ್ಟ್ 5 ರಂದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಿಗದಿತ ಸ್ಥಳದಲ್ಲಿ ಪಾರಿಜಾತ ಮರವನ್ನು ನೆಟ್ಟರು.


ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರ ಸಹಿತವಾಗಿ ವನವಾಸದಲ್ಲಿದ್ದಾಗ, ಸೀತಾಮಾತೆಯು ಹತ್ತಿರದಲ್ಲಿಯೇ ಇದ್ದ ಪಾರಿಜಾತ ಮರದ ಹೂವುಗಳನ್ನು ಆರಿಸಿ ತಂದು ಅವುಗಳ ಮಾಲೆಯನ್ನು ಮಾಡಿ ತಲೆಯಲ್ಲಿ ಧರಿಸುತ್ತಿದ್ದಳು ಅಂತೆಯೇ ಇದು ಪವಿತ್ರ ಪುಷ್ಪವಾಯಿತು. ಇಂದಿಗೂ ಕೂಡ ಸೀತೆಯ ಮೂಲ ಅವತಾರವಾದ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಮತ್ತು ಶ್ರೀರಾಮ ಮತ್ತು ಸೀತಾಮಾತೆಯನ್ನು ಪೂಜಿಸುವಾಗ ವಿಶೇಷವಾಗಿ ಪಾರಿಜಾತದ ಹೂವನ್ನು ಬಳಸುತ್ತಾರೆ.


ಇನ್ನೊಂದು ಕಥೆಯ ಪ್ರಕಾರ ರಾಜಕುಮಾರಿಯೋರ್ವಳು ಭಗವಾನ್ ಸೂರ್ಯನನ್ನು ಪ್ರೀತಿಸಿದ್ದಳು. ಆದರೆ ಪ್ರತಿದಿನವೂ ಆತನು ಲೋಕವನ್ನು ಬೆಳಗುವ ತನ್ನ ಕಾರ್ಯನಿಮಿತ್ತ ಆಕೆಯನ್ನು ನಿರಾಕರಿಸಿದನು. ಸೂರ್ಯನು ತನ್ನಿಂದ ದೂರಾಗುವುದನ್ನು ಸಹಿಸದ ಆ ರಾಜಕುಮಾರಿಯು ಮನನೊಂದು ಪ್ರಾಣ ತ್ಯಾಗ ಮಾಡಿದಳು. ಹಾಗೆ ಪ್ರಾಣ ಬಿಡುವ ಮುನ್ನ ಆಕೆ ಇನ್ನೆಂದೂ ಸೂರ್ಯನ ಮುಖ ನೋಡುವುದಿಲ್ಲ ಎಂದು ಶಪಥ ಮಾಡಿದ್ದಳು. ಆಕೆಯನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಪಾರಿಜಾತ ಹೂವಿನ ಗಿಡ  ಚಿಗುರೊಡೆಯಿತು. ಅದರೆ ತನ್ನ ಶಪಥದಂತೆ ಪಾರಿಜಾತ ಹೂವು ಸೂರ್ಯಾಸ್ತವಾದೊಡನೆ ಅರಳಿ ಸೂರ್ಯೋದಯಕ್ಕೆ ಮುನ್ನವೇ ನೆಲಕ್ಕೆ ಬಿದ್ದು ಹೋಗುತ್ತವೆ ಎಂದು ಕೂಡ ಹೇಳುತ್ತಾರೆ.


ಪಾರಿಜಾತ ಹೂವುಗಳು ಆಯಾಸವನ್ನು ಪರಿಹರಿಸುವ ಶಕ್ತಿಯನ್ನು ಹೊಂದಿವೆ, ಪಾರಿಜಾತ ಹೂವಿನ ಗಿಡದ ತೊಗಟೆಯನ್ನು ಕಷಾಯದಂತೆ ಸೇವಿಸಿದರೆ ಶೀತ ಸಂಬಂಧಿ ಬಾಧೆಗಳಿಂದ ದೂರವಾಗಬಹುದು. ಜೊತೆಗೆ ಹೃದಯದ ಕಾಯಿಲೆ ಇರುವವರು ಕೂಡ ಪಾರಿಜಾತ ಹೂವಿನ ಗಿಡದ ಕಷಾಯ ಸೇವಿಸುವುದರಿಂದ ರೋಗವನ್ನು ಹತೋಟಿಗೆ ತಂದುಕೊಳ್ಳಬಹುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ವೈದ್ಯರ ಸಲಹೆ ಮೇರೆಗೆ ಈ ಔಷಧಿಗಳನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸಬಹುದು.


ಪ್ರತಿದಿನ ಮುಂಜಾನೆ ನಮ್ಮ ಮನೆಯ ಪಾರಿಜಾತ ಗಿಡದಲ್ಲಿರುವ ಹೂಗಳನ್ನು ಸಂಗ್ರಹಿಸಿ ತಂದು ಸುಂದರವಾದ ಪಾತ್ರೆಯಲ್ಲಿ ನೀರನ್ನು ಹಾಕಿ ಅವುಗಳಲ್ಲಿ ಈ ಹೂಗಳನ್ನು ಇಟ್ಟು ಊಟದ ಮೇಜಿನ ಮೇಲೆ ಇಟ್ಟರೆ ಮನೆಯಲ್ಲ ಪಾರಿಜಾತ ಹೂಗಳ  ಸುವಾಸನೆಯಿಂದ ತುಂಬುತ್ತದೆ.ಮನ ಮತ್ತೆ ಬಾಲ್ಯದ ಸುಮಧುರ ನೆನಪುಗಳನ್ನು ಕೆದಕುತ್ತದೆ. ಹೂವಿನಂತ ನೆನಪುಗಳು ಪಾರಿಜಾತ ಹೂವಿನೊಂದಿಗೆ.


ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ. ಗದಗ್


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top