ಎಸ್.ಡಿ.ಎಂ. ಕಾಲೇಜಿನಲ್ಲಿ ಉದ್ಯಮಿ ಮೋಹನ್ ಕುಮಾರ್ ಅಭಿಮತ
ಉಜಿರೆ: ಹಸಿವು ಬಲ್ಲವನಿಗೆ ಮಾತ್ರ ಸೇವೆಯ ಮನೋಭಾವ ಮೂಡುತ್ತದೆ. ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಉಜಿರೆಯ ಲಕ್ಷ್ಮೀ ಗ್ರೂಪ್ಸ್ ಮುಖ್ಯಸ್ಥ ಹಾಗೂ ಬದುಕು ಕಟ್ಟೋಣ ಬನ್ನಿ ಸಂಘದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಕಲಾ ವಿಭಾಗ ಆಯೋಜಿಸಿದ್ದ ಕಲಾ ದೀಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂಬಿಕೆಯ ಜಗತ್ತಿನಲ್ಲಿ ನಾವು ಬಾಳುತ್ತಾ, ಸಕಾರಾತ್ಮಕವಾಗಿ ಚಿಂತಿಸೋಣ. ಗಳಿಕೆಯನ್ನು ಸಾಧ್ಯವಾದಷ್ಟು ಸಮಾಜದ ಏಳಿಗೆಗೆ ಬಳಸೋಣ. ನಿರಂತರ ಪ್ರಯತ್ನ ಮತ್ತು ಕನಸುಗಳ ಬೆನ್ನತ್ತಿ ಸಾಗಿದಾಗ ಸಂಕಲ್ಪಗಳ ಸಾಕಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಯಾಂತ್ರಿಕವಾಗಿ ಬದಲಾಗಿರುವ ಈ ಕಾಲಘಟ್ಟದಲ್ಲಿ ನಾಡಿನ ಕಲೆ, ಸಂಸ್ಕೃತಿ, ಹಬ್ಬಗಳನ್ನು ಆಚರಿಸುವ ಅಗತ್ಯವಿದೆ. ದೀಪ ಬೆಳಗುವ ಬೆಳಕಿನ ಹಬ್ಬದಲ್ಲಿ ನಾವೆಲ್ಲ ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಸಾಗೋಣ ಎಂದರು.
ಕಲಾ ದೀಪ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಾನಪದೀಯ ಗಾಯನ, ನೃತ್ಯ, ರಂಗೋಲಿ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಕುಲಸಚಿವೆ ಡಾ. ಶಲೀಪ್ ಎ.ಪಿ. ಹಾಗೂ ಕಲಾ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿ ಪ್ರತೀಕ್ಷಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಾನಸ ಮತ್ತು ಸಿಂಚನ ನಿರೂಪಿಸಿ, ವಿದ್ಯಾಶ್ರೀ ವಂದಿಸಿದರು.
ಮೋಹನ್ ಕುಮಾರ್ ಗೆ ಸನ್ಮಾನ :
ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಲಕ್ಷ್ಮೀ ಗ್ರೂಪ್ಸ್ ಮುಖ್ಯಸ್ಥ ಹಾಗೂ ಬದುಕು ಕಟ್ಟೋಣ ಬನ್ನಿ ಸಂಘದ ಸಂಸ್ಥಾಪಕ ಮೋಹನ್ ಕುಮಾರ್ ಅವರನ್ನು ಕಾಲೇಜಿನ ಕಲಾ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ