ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರು ಗ್ರಾಮ ಸಂಗ್ಯಾ ಬಾಳ್ಯ' ದಪ್ಪಿನಾಟ (ಸಣ್ಣಾಟ) ಕಲೆಯ ಮೂಲಕ ಪ್ರಸಿದ್ದಿ ಪಡೆದ ಗ್ರಾಮ.
ದಪ್ಪಿನಾಟ ಕಲೆಗಾಗಿ ಜೀವ ಸವಿದ ನಾಗಪ್ಪ ತಳವಾರ ಈ ಗ್ರಾಮದ ಪ್ರಮುಖ ಕಲಾವಿದ. ಅಜಾನುಬಾಹು ವ್ಯಕ್ತಿ, ನಾಟಕಾಭಿನಯ, ಸಣ್ಣಾಟ, ಬಯಲಾಟ, ಹಂತಿಪದ ,ದಪ್ಪು, ಹಲಗೆ ನುಡಿಸುವುದರಲ್ಲಿ ಎತ್ತಿದ ಕೈ, ಪ್ರಸಂಗ ಬಂದರೆ ಪಾತ್ರ ಅಭಿನಯಕ್ಕೂ ಸಿದ್ದ ಇದ್ದ ಕಲೆಯೇ ಉಸಿರಾಗಿಸಿಕೊಂಡಿದ್ದ ವ್ಯಕ್ತಿತ್ವ.
ಐದಾರು ದಶಕಗಳ ಕಾಲ ದಪ್ಪಿನಾಟ, ಕೀಲು ಕುಣಿತ ಕಲೆಗಾಗಿ ಜೀವಮಾನವಿಡಿ ಶ್ರಮಿಸಿದ ಮಹಾನ ಕಲಾವಿದ ಕಲೆ ತನ್ನ ಉಸಿರಾಗಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ದಪ್ಪಿನಾಟ ಆಡುವ, ಆಡಿಸುವ ಕಾರ್ಯ ಮಾಡಿದ್ದರು.
ಈ ಕಲೆಯ ಉಳಿವಿಗಾಗಿ ಗ್ರಾಮದ ದೊಡ್ಡಪ್ಪ ಮಹೇದ್ರಕರ್, ಮನೋಹರ ಹುದ್ದಾರ, ರಮೇಶ್ ಗಡ್ಡಿ,ಹನಮಂತ ಹಾದಿಕರ, ಹುಸೇನಾಸಬ್ ಮುರಾಲ್, ಮುತ್ತಪ್ಪ ಅಮೃಗೋಲ್, ತೆವರಪ್ಪ ವಾಲಿಕಾರ, ಹನಮಂತ ಹಾದಿಕರ ಮುಂತಾದವರ ಸಮಾನ ಮನಸ್ಕರರ ತಂಡ ಕಟ್ಟಿಕೊಂಡು,ಸ್ವತಃ ತನ್ನ ಮಕ್ಕಳಿಗೆ ಈ ಕಲೆ ಉಳಿಸಲು ಅವರಿಗೆ ಬಣ್ಣ ಹಚ್ಚಿಸಿ ದಪ್ಪಿನಾಟ ಆಡಿಸಿದರು.
ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು ಸುತ್ತ ಈ ಕಲೆ ಪ್ರಸಾರ ಮಾಡಿದ ನಾಗಪ್ಪಣ್ಣ ಅನೇಕರಿಗೆ ತರಬೇತಿ ನೀಡಿದ್ದಾರೆ.
ಇಂದಿಗೂ ಹೊಳೆಸಾಲಿನ ಹಳ್ಳಿಗಳಲ್ಲಿ ದಪ್ಪಿನಾಟ ಅಂದರೆ ನಾಗಪ್ಪಣ್ಣ. ನಾಗಪ್ಪಣ್ಣ ತಳವಾರ ಅಂದರೆ ದಪ್ಪಿನಾಟ ಎಂಬ ಮಾತಿದೆ. ಜೀವಿತನದ ಕೊನೆಯವರೆಗೂ ಈ ಕಲೆಗಾಗಿ ಶ್ರಮಿಸಿದ ಜೀವವದು. ನಾಗಪ್ಪಣ್ಣ ನಂತರವು ಈ ಕಲೆ ಜೀವಂತವಾಗಿ ಇಟ್ಟಿರುವ ಧನ್ನೂರ ಗ್ರಾಮಸ್ಥರನ್ನು ದಪ್ಪಿನಾಟದ ತಂಡದ ಎಲ್ಲಾ ಕಲಾವಿದರನ್ನು ಇಂದು ನೆನಪಿಸಿಕೊಳ್ಳಬೇಕು.
ತಮ್ಮ ಗ್ರಾಮದ ಕಲೆ ಪರಂಪರೆಯ ಉಳಿವಿಗಾಗಿ ಜೀವಂತಿಕೆಗಾಗಿ ಗ್ರಾಮೀಣ ಜನಪದ ಪ್ರಕಾರವನ್ನು ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಮೂಲಕ ಉತ್ತರ ಕರ್ನಾಟಕದ ಕಲೆಯನ್ನು ರಾಜಧಾನಿ ವರೆಗೆ ತಲುಪಿಸಿದ ಸ್ವದೇಶ ಮಹಾಂತೇಶ ಅಂಗಡಿ ಕುಟುಂಬಕ್ಕೆ, ಹಾಗೂ ಈ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ಸ್ವದೇಶನ ಅಜ್ಜ ದಪ್ಪಿನಾಟದ ತಂಡದ ಪ್ರಮುಖ ಕಲಾವಿದ ಮನೋಹರ ಹುದ್ದಾರ ರವರಿಗೆ ವಿಶೇಷ ಅಭಿನಂದನೆಗಳು.
ದಪ್ಪಿನಾಟ ಕಲೆಗಾಗಿ ಶ್ರಮಿಸಿದ್ದ ನಾಗಪ್ಪ ತಳವಾರ ಇಂದು ಬದುಕಿದ್ದರೆ ಅವರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ವೇದಿಕೆ ಮೇಲೆ ದಪ್ಪು ಬಾರಿಸಿ, ಹೇ ..ಹೇ.. ಎಂದು ಘರ್ಜಿಸಿದ್ದರೆ, ಡ್ರಾಮಾ ಜೂನಿಯರ್ಸ್ ವೇದಿಕೆ ನಡುಗುತ್ತಿತ್ತು.!
- ಮಲ್ಲಿಕಾರ್ಜುನ ಸಜ್ಜನ.
ಅಧ್ಯಕ್ಷರು ಕ.ಸಾ.ಪ ಹುನಗುಂದ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ