ನಿಟ್ಟೆ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯು ಇತ್ತೀಚೆಗೆ ಡಾ| ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿನ ಆಶ್ರಯದಲ್ಲಿ ಜರುಗಿತು. ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದಲ್ಲಿ ಅತಿಥೇಯ ನಿಟ್ಟೆ ಕಾಲೇಜಿನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪುರುಷರ ವಿಭಾಗದಲ್ಲಿ ಅತಿಥೇಯ ತಂಡ ಚಾಂಪಿಯನ್ ಆದರೆ ಎಸ್. ಡಿ. ಎಮ್ ಉಜಿರೆ ಕಾಲೇಜಿನ ತಂಡ ದ್ವಿತೀಯ, ಸಂತ ಅಲೋಶಿಯಸ್ ತೃತೀಯ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು. ಪುರುಷರ ವಿಭಾಗದಲ್ಲಿ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಸಲ್ಮಾನ್ ಬೆಸ್ಟ್ ಶೂಟರ್, ಬೆಸ್ಟ್ ಡಿಫೆಂಡರ್ ಆಗಿ ಎಸ್.ಡಿ.ಎಂ ಕಾಲೇಜಿನ ಸುಗುನ್ ಹಾಗೂ ಮೊಸ್ಟ್ ವ್ಯಾಲ್ಯೂಯೆಬಲ್ ಕ್ರೀಡಾಪಟು ಆಗಿ ನಿಟ್ಟೆ ಕಾಲೇಜಿನ ಸಾಗರ್ ಎಸ್ ಕೆ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ಅತಿಥೇಯ ಕಾಲೇಜಿನ ರಹಿಯಾನ್ ಹಾಗೂ ಅನ್ಸನ್ ಇವರ ಆಟ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಮಹಿಳಾ ವಿಭಾಗದಲ್ಲಿ ಅತಿಥೇಯ ನಿಟ್ಟೆ ಕಾಲೇಜಿನ ತಂಡ ಚಾಂಪಿಯನ್ ಆದರೆ ಎಸ್.ಡಿ.ಎಂ ಉಜಿರೆ ದ್ವಿತೀಯ, ಆಳ್ವಾಸ್ ಕಾಲೇಜು ತೃತೀಯ ಹಾಗೂ ಡಾ| ಜಿ ಶಂಕರ ಮಹಿಳಾ ಕಾಲೇಜು ಚತುರ್ಥ ಬಹುಮಾನ ಪಡೆಯಿತು. ಅತಿಥೇಯ ನಿಟ್ಟೆ ಕಾಲೇಜಿನ ಹರಿಣಿ ಎಂ ಎಸ್ ಬೆಸ್ಟ್ ಶೂಟರ್, ಬೆಸ್ಟ್ ಡಿಫೆಂಡರ್ ಆಗಿ ಎಸ್.ಡಿ.ಎಂ ಉಜಿರೆಯ ನೀಕ್ಷಿತಾ ಹಾಗೂ ಮೊಸ್ಟ್ ವ್ಯಾಲ್ಯೂಯೆಬಲ್ ಕ್ರೀಡಾಪಟು ಪ್ರಶಸ್ತಿಯನ್ನು ನಿಟ್ಟೆ ಕಾಲೇಜಿನ ದಿವ್ಯಾ ಬಿ ಎಸ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.
ಈ ಪ್ರತಿಷ್ಠಿತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲೂಣ್ಕರ್ ಉದ್ಘಾಟಿಸಿದರೆ, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕ್ಯಾಂಪಸ್ ಅಭಿವೃದ್ಧಿ ನಿರ್ದೇಶಕ ಯೋಗೀಶ್ ಹೆಗ್ಡೆ ಭಾಗವಹಿಸಿ ಪಂದ್ಯಾವಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ವೀಣಾ ಕುಮಾರಿ ಬಿ ಕೆ ವಹಿಸಿದ್ದು, ಸಂಸ್ಥೆಯ ಕ್ರೀಡಾ ಆಡಳಿತಾಧಿಕಾರಿ ಶ್ಯಾಂ ಸುಂದರ್, ಬಾಸ್ಕೆಟ್ ಬಾಲ್ ತರಬೇತುದಾರ ರವಿಪ್ರಕಾಶ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ| ನಿತಿನ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಡಾ| ಜಾನ್ ಪಿಂಟೊ, ವಿಶ್ವವಿದ್ಯಾಲಯ ಪ್ರತಿನಿಧಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಸಹ ನಿರ್ದೇಶಕರು ಡಾ| ಹರಿದಾಸ್ ಕೂಳೂರು ಉಪಸ್ಥಿತರಿದ್ದು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿ ಶುಭ ಹಾರೈಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ