ಉಜಿರೆ: ವಿಜ್ಞಾನದ ಎಲ್ಲ ರೀತಿಯ ಆವಿಷ್ಕಾರಗಳಿಗೆ ನಿಸರ್ಗದಲ್ಲಿರುವ ಅನೂಹ್ಯ ಶಕ್ತಿಯು ಪ್ರೇರಣೆಯನ್ನು ನೀಡಿದೆ ಎಂದು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಸ್.ಎನ್.ಕಾಕತ್ಕರ್ ಅಭಿಪ್ರಾಯ ಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗದ ಎಲೆಕ್ಟ್ರೋ ಹಬ್ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜ್ಞಾನದ ವಿದ್ಯಾರ್ಥಿಗಳು ಅಭಿವೃದ್ಧಿ, ಭಾಗವಹಿಸುವಿಕೆ ಮತ್ತು ನಿರಂತರ ಕಲಿಕೆಯ ಮುಖಾಂತರ ಜ್ಞಾನ ವಿಕಸನವನ್ನು ಹೊಂದಲು ಯತ್ನಿಸಬೇಕು. ಎಂದಿಗೂ ನಾವು ಮಾಡುವ ಕಾರ್ಯಗಳು ಮಾತನಾಡಬೇಕೇ ಹೊರತು ನಮ್ಮ ಶಬ್ದಗಳ ಅಬ್ಬರವಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿಜ್ಞಾನದ ವಿದ್ಯಾರ್ಥಿಯೂ ಕೂಡ ಕಾರ್ಯಪ್ರವೃತ್ತನಾಗಬೇಕು ಎಂದು ಹೇಳಿದರು.
ಹವ್ಯಾಸ ಮತ್ತು ಚಟದ ನಡುವೆ ವ್ಯತ್ಯಾಸ ಅಜಗಜಾಂತರ. ಕಿರುವಯಸ್ಸಿನಲ್ಲೇ ಅದರ ತಿರುಳನ್ನರಿಯಬೇಕು. ಹವ್ಯಾಸ, ವ್ಯಕ್ತಿಯ ಪ್ರಗತಿಗೆ ಪೂರಕವಾದರೆ, ಚಟ ಆತನ ಪ್ರಗತಿಗೆ ಅಡ್ಡಗಾಲಾಗಿ ನಿಲ್ಲುತ್ತದೆ. ವ್ಯಕ್ತಿಯಾದವನು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತನ್ನ ಶ್ರೇಯೋಭಿವೃದ್ಧಿಗೆ ತಾನೇ ಹೊಣೆಗಾರನಾಗಬೇಕು ಎಂದರು.
ಎಸ್.ಡಿ.ಎಂ ಐ.ಟಿ ಉಜಿರೆಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನೀಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಹೇಶ್ ಡಿ.ಎಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. 'ಆವಿಷ್ಕಾರವು ಮಿತಿಯುಳ್ಳ ಪರಿಸರದಲ್ಲಿ ಜನಿಸಲು ಸಾಧ್ಯವೇ ಇಲ್ಲ'. ಅತ್ಯಂತ ವಿಶಾಲ ದೃಷ್ಟಿಕೋನದಲ್ಲಿ ವಿಶ್ವವನ್ನು ಗಮನಿಸುವ, ಗಮನಿಸಿದ್ದನ್ನು ದಾಖಲಿಸುವ ಪ್ರವೃತ್ತಿ ಬೆಳೆದಾಗ ಮಾತ್ರವೇ ಆವಿಷ್ಕಾರಕ್ಕೆ ನಾಂದಿ ಹಾಡಲು ಸಾಧ್ಯ.'ನಿಮ್ಮ ಅಮೂಲ್ಯ ಸಮಯವನ್ನು ಪ್ರಯೋಗಾಲಯಗಳಲ್ಲಿ ಕಳೆಯುವಾಗ ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಳ್ಳಿ. ಅಂದಾಗ ಮಾತ್ರ ಕಲಿಕೆಯ ಪ್ರತೀ ಕ್ಷಣವೂ ಫಲಪ್ರದಾಯಕವಾಗಿರಲಿದೆ' ಎಂದು ಸಲಹೆ ನೀಡಿದರು.
ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಎಸ್, ಡಾ. ಸಹನಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರೀಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಅನು ಅಡಿಗ ಸ್ವಾಗತಿಸಿದರು. ಸೌಜನ್ಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


